ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Kogilu Encroachment: ಕೋಗಿಲು ಸರ್ಕಾರಿ ಜಾಗ ಒತ್ತುವರಿ; ನಾಲ್ವರ ವಿರುದ್ಧ ಎಫ್‌ಐಆರ್‌ ದಾಖಲು

ಬೆಂಗಳೂರಿನ ಹೊರವಲಯದ ಯಲಹಂಕದ ಕೋಗಿಲು ಗ್ರಾಮದ ಸರ್ವೆ ನಂಬರ್ 99ರಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ 14 ಎಕರೆ 36 ಗುಂಟೆ ಜಮೀನನ್ನು ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆಗೆ ಹಸ್ತಾಂತರಿಸಲಾಗಿತ್ತು. ಆದರೆ, ಅಲ್ಲಿ ಸರ್ಕಾರಿ ಜಾಗ ಒತ್ತುವರಿ ಮಾಡಿ 160ಕ್ಕೂ ಹೆಚ್ಚು ಮನೆಗಳನ್ನು ಅಕ್ರಮವಾಗಿ ನಿರ್ಮಿಸಲಾಗಿತ್ತು. ಈ ಮನೆಗಳನ್ನು ಇತ್ತೀಚೆಗೆ ತೆರವು ಮಾಡಲಾಗಿತ್ತು.

ಕೋಗಿಲು ಸರ್ಕಾರಿ ಜಾಗ ಒತ್ತುವರಿ; ನಾಲ್ವರ ವಿರುದ್ಧ ಎಫ್‌ಐಆರ್‌ ದಾಖಲು

ಕೋಗಿಲು ಲೇಔಟ್‌ನಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮನೆಗಳ ತೆರವು ಮಾಡಿರುವುದು. -

Prabhakara R
Prabhakara R Jan 7, 2026 2:30 PM

ಬೆಂಗಳೂರು, ಜ.7: ಯಲಹಂಕದ ಕೋಗಿಲು ಲೇಔಟ್‌ನಲ್ಲಿ ಸರ್ಕಾರಿ ಜಾಗ ಒತ್ತುವರಿ (Kogilu Encroachment) ಮಾಡಿ, ಅನಧಿಕೃತ ಮನೆಗಳ ನಿರ್ಮಾಣಕ್ಕೆ ಪ್ರಚೋದನೆ ನೀಡಿ, ಹಣ ವಸೂಲಿ ಮಾಡಿದ ಆರೋಪದ ಮೇಲೆ ನಾಲ್ವರ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ ಎಂಜಿನಿಯರ್ ಸಂತೋಷ್ ಕುಮಾರ್ ಅವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಲಾಗಿದೆ.

ಕೋಗಿಲು ಗ್ರಾಮದ ಸರ್ವೆ ನಂಬರ್ 99ರಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಆದೇಶದಂತೆ 14 ಎಕರೆ 36 ಗುಂಟೆ ಜಮೀನನ್ನು ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆಗೆ ಹಸ್ತಾಂತರಿಸಲಾಗಿತ್ತು. ಈ ಜಾಗದಲ್ಲಿ ಬಯೋ ಮೆಥನೈಸೆಷನ್ ಘಟಕ, ಎಳನೀರು ಬುರುಡೆ ಸಂಸ್ಕರಣೆ ಹಾಗೂ ಪ್ರಾಣಿ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ನಿರ್ಮಿಸಲು 2023ರಲ್ಲಿಯೇ ಟೆಂಡರ್ ಪ್ರಕ್ರಿಯೆ ಮುಗಿದು ಕಾರ್ಯಾದೇಶ ನೀಡಲಾಗಿತ್ತು. ಆದರೆ, ಈ ಸರ್ಕಾರಿ ಜಾಗದ ಸುಮಾರು 4 ಎಕರೆ ಪ್ರದೇಶವನ್ನು ಅಕ್ರಮವಾಗಿ ಒತ್ತುವರಿ ಮಾಡಿ 160ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿತ್ತು. ಡಿಸೆಂಬರ್ 20, 2025 ರಂದು ಜಿಲ್ಲಾಡಳಿತ ಮತ್ತು ಬಿಎಸ್‌ಡಬ್ಲ್ಯೂಎಂಎಲ್ ಜಂಟಿ ಕಾರ್ಯಾಚರಣೆ ನಡೆಸಿ ಈ ಎಲ್ಲಾ ಒತ್ತುವರಿಗಳನ್ನು ತೆರವುಗೊಳಿಸಿತ್ತು.

ಕೋಗಿಲು ಲೇಔಟ್‌ನಲ್ಲಿ ಅಕ್ರಮ ವಸತಿಗಳ ನಿರ್ಮಾಣದ ಹಿಂದೆ ದೊಡ್ಡ ಜಾಲವಿರುವುದು ಬೆಳಕಿಗೆ ಬಂದಿದೆ. ಎ1 ವಿಜಯ್, ಎ2 ವಾಸಿಂ ಉಲ್ಲಾ ಬೇಗ್, ಎ3 ಮುನಿ ಆಂಜಿನಪ್ಪ ಹಾಗೂ ಎ4 ರಾಬಿನ್ ಎಂಬುವವರು ಸ್ಥಳೀಯರಿಂದ ಹಣ ಪಡೆದು ಸರ್ಕಾರಿ ಜಾಗದಲ್ಲಿ ಅನಧಿಕೃತ ಮನೆಗಳನ್ನು ನಿರ್ಮಿಸಲು ಮತ್ತು ಅವುಗಳನ್ನು ನಿರ್ವಹಿಸಲು ಸಹಕಾರ ನೀಡುತ್ತಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹೀಗಾಗಿ ಇವರ ವಿರುದ್ಧ ಯಲಹಂಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Vinayak V Bhat Column: ಕೋಗಿಲು ಘಟನೆಯಿಂದ ರಾಜ್ಯ ಎಚ್ಚೆತ್ತುಕೊಳ್ಳಬೇಕಿದೆ !

37 ಕುಟುಂಬಗಳು ಮಾತ್ರ ಬೆಂಗಳೂರು ನಿವಾಸಿಗಳು

ಒತ್ತವರಿ ತೆರವಿನಿಂದ ನಿರಾಶ್ರಿತರಾಗಿದ್ದ ಸಂತ್ರಸ್ತರಿಗೆ ಮನೆ ನೀಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಈ ವಿಚಾರ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿತ್ತು. ಯಾವುದೇ ಕಾರಣಕ್ಕೂ ಅಕ್ರಮ ವಲಸಿಗರಿಗೆ ಮನೆ ಕೊಡಬಾರದು ಎಂದು ಬಿಜೆಪಿ ಹೇಳಿತ್ತು. ಇದೀಗ ಪರ-ವಿರೋಧ ಚರ್ಚೆ ನಡುವೆಯೇ ನಿರಾಶ್ರಿತರಿಗೆ ಮನೆ ಕೊಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.

ನೆನ್ನೆ ಕಂದಾಯ ಸಚಿವ ಹಾಗೂ ಸ್ಥಳೀಯ ಶಾಸಕ ಕೃಷ್ಣಬೈರೇಗೌಡ ಸಭೆ ನಡೆಸಿದ್ದು, ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ಕೆಲಸ ಚುರುಕುಗೊಂಡಿದೆ. ಅರ್ಹತೆ ಹೊಂದಿರುವವರಿಗೆ ಮಾತ್ರವೇ ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ಮನೆ ಕೊಡಲು ಸರ್ಕಾರ ಮುಂದಾಗಿದೆ. ಫಕೀರ್ ಲೇಔಟ್ ಪಕ್ಕದಲ್ಲೇ ಇರುವ ಸರ್ಕಾರಿ ಶಾಲೆಯಲ್ಲಿ ಕಂದಾಯ ಅಧಿಕಾರಿಗಳು, ಜಿಬಿಎ, ಬೆಸ್ಕಾಂ ಮತ್ತು ರಾಜೀವ್ ಗಾಂಧಿ ವಸತಿ ಇಲಾಖೆಯ ಅಧಿಕಾರಿಗಳು ಅರ್ಹತೆ ಹೊಂದಿರುವ ಅರ್ಜಿಗಳನ್ನು ಮರುಪರಿಶೀಲನೆ ಮಾಡಿದ್ದಾರೆ.

ಪ್ರಾಥಮಿಕ ಹಂತದಲ್ಲಿ ಅಂದಾಜು 37 ಅರ್ಜಿಗಳು ಮಾತ್ರ ಅರ್ಹತೆ ಹೊಂದಿವೆ. ಕಳೆದ 5 ವರ್ಷಗಳಿಗಿಂತ ಹಳೆಯ ದಾಖಲೆಗಳಿದ್ದು, ಇವರು ಅಲ್ಲೇ ನೆಲೆಸಿದ್ದರು ಎಂಬುವುದು ದೃಢಪಡಿಸಿಕೊಂಡಿದ್ದಾರೆ.

ಕೋಗಿಲು ಲೇಔಟ್‌ ನಿರಾಶ್ರಿತರಿಗೆ ಬೈಯ್ಯಪ್ಪನಹಳ್ಳಿಯಲ್ಲಿ ಪರ್ಯಾಯ ಮನೆ ಹಂಚಿಕೆ: ಸಿಎಂ

ಅಧಿಕಾರಿಗಳು 119 ಮನೆಗಳನ್ನು ಸಮೀಕ್ಷೆ ಮಾಡಲಾಗಿದ್ದು 118 ಕುಟುಂಬಗಳಿಗೆ ಆಧಾರ್‌ ಕಾರ್ಡ್‌ ಇದೆ. 102 ಕುಟುಂಬಗಳಿಗೆ ವೋಟರ್‌ ಕಾರ್ಡ್‌ ಇದ್ದರೆ, 77 ಕುಟುಂಬಗಳಿಗೆ ರೇಷನ್ ಕಾರ್ಡ್ ಇದೆ. 63 ಕುಟುಂಬಗಳಿಗೆ ಆದಾಯ ಪ್ರಮಾಣ ಪತ್ರ, 56 ಕುಟುಂಬಗಳಿಗೆ ಜಾತಿ ಪ್ರಮಾಣಪತ್ರ ನೀಡಲಾಗಿದೆ. 37 ಕುಟುಂಬಗಳು ಮೂಲ ಬೆಂಗಳೂರಿನವರು ಎನ್ನಲಾಗಿದೆ. ಈ ಮಾಹಿತಿ ಆಧರಿಸಿ ಅರ್ಹ ಫಲಾನುಭವಿಗಳಿಗೆ ಮನೆ ಮಂಜೂರು ಮಾಡಲು ಸರ್ಕಾರ ಮುಂದಾಗಿದೆ.