Om Prakash Murder: ಮಾಜಿ ಡಿಜಿ-ಐಜಿಪಿ ಓಂ ಪ್ರಕಾಶ್ ಪತ್ನಿ ಅರೆಸ್ಟ್; ಕೊಲೆ ಬಳಿಕ Monsterನ ಮುಗಿಸಿದೆ ಎಂದು ವಿಡಿಯೋ ಕಾಲ್!
Om Prakash Murder : ಓಂ ಪ್ರಕಾಶ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಸದ್ಯ ಅವರು ತಮ್ಮ ಪತ್ನಿ ಪಲ್ಲವಿ ಜತೆ ವಾಸಿಸುತ್ತಿದ್ದರು. ಕೆಲವು ದಿನಗಳಿಂದ ಗಂಡ ಹೆಂಡತಿಯ ನಡುವೆ ಮನಸ್ತಾಪವಿತ್ತು ಎನ್ನಲಾಗಿದೆ. ಹೀಗಾಗಿಯೇ ಪತ್ನಿ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.


ಬೆಂಗಳೂರು: ಮಾಜಿ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್ ಕೊಲೆ ಪ್ರಕರಣದಲ್ಲಿ (Om Prakash Murder ) ಪತ್ನಿ ಪಲ್ಲವಿಯನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿದುಬಂದಿದೆ. ಓಂ ಪ್ರಕಾಶ್ ಅವರನ್ನು 8 ರಿಂದ 10 ಬಾರಿ ಚಾಕುವಿನಿಂದ ಇರಿದು ಪತ್ನಿ ಹತ್ಯೆಗೈದಿದ್ದರು ಎನ್ನಲಾಗಿದೆ. ಇನ್ನು ಕೊಲೆ ಬಳಿಕ I Have Finished Monster ಎಂದು ಮತ್ತೊಬ್ಬ ಮಾಜಿ ಡಿಜಿ ಮತ್ತು ಐಜಿಪಿ ಪತ್ನಿಗೆ ಪಲ್ಲವಿ ವಿಡಿಯೊ ಕಾಲ್ ಮಾಡಿ ಹೇಳಿದ್ದಾರೆ ಎನ್ನಲಾಗಿದೆ.
ಓಂ ಪ್ರಕಾಶ್ ಅವರ ಎದೆ, ಹೊಟ್ಟೆ, ಕೈಗೆ ಚಾಕುವಿನಿಂದ ಇರಿದು ಪತ್ನಿ ಪಲ್ಲವಿ ಹತ್ಯೆಗೈದಿದ್ದಾರೆ. ಚಾಕು ಇರಿದಿದ್ದರಿಂದ ನೆಲ ಮಹಡಿಯಲ್ಲಿ ರಕ್ತದ ಮಡುವಿನಲ್ಲಿ ಒದ್ದಾಡಿ ಮಾಜಿ ಡಿಜಿ ಮತ್ತು ಐಜಿಪಿ ಪ್ರಾಣ ಬಿಟ್ಟಿದ್ದಾರೆ. ಕೊಲೆ ಬಳಿಕ ನಾನು ರಾಕ್ಷಸನನ್ನು ಮುಗಿಸಿದೆ ಎಂದು ವಿಡಿಯೊ ಕಾಲ್‌ನಲ್ಲಿ ಪತ್ನಿ ಪಲ್ಲವಿ ಹೇಳಿರುವುದಾಗಿ ತಿಳಿದುಬಂದಿದೆ.
ಕೊಲೆಯಾಗಿರುವ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರಿಗೆ 68 ವರ್ಷ ವಯಸ್ಸಾಗಿತ್ತು. 1981ನೇ ಬ್ಯಾಚ್ನ ಐಪಿಎಸ್ ಅಧಿಕಾರಿ ಓಂ ಪ್ರಕಾಶ್ ಅವರು ರಾಜ್ಯದ 38ನೇ ಡಿಜಿ ಮತ್ತು ಐಜಿಪಿಯಾಗಿದ್ದರು. 2015ರ ಅವಧಿಯಲ್ಲಿ ಡಿಜಿ ಮತ್ತು ಐಜಿಪಿಯಾಗಿದ್ದ ಓಂ ಪ್ರಕಾಶ್ ಅವರು ಬೆಂಗಳೂರಿನ ಎಚ್ಎಸ್ಆರ್ ಲೇಔಟ್ನಲ್ಲಿ ವಾಸವಿದ್ದರು.
ಓಂ ಪ್ರಕಾಶ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಸದ್ಯ ಅವರು ತಮ್ಮ ಪತ್ನಿ ಪಲ್ಲವಿ ಜತೆ ವಾಸಿಸುತ್ತಿದ್ದರು. ಕೆಲವು ದಿನಗಳಿಂದ ಗಂಡ ಹೆಂಡತಿಯ ನಡುವೆ ಮನಸ್ತಾಪವಿತ್ತು ಎನ್ನಲಾಗಿದೆ. ವೈಯಕ್ತಿಕ ವಿಚಾರಗಳಲ್ಲಿ ಇಬ್ಬರ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಇದೇ ಕಾರಣಕ್ಕೆ ಚಾಕುವಿನಿಂದ ಇರಿದು ಪತ್ನಿಯೇ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಆಸ್ತಿ ವಿಚಾರಕ್ಕೆ ನಡೆಯಿತಾ ಕೊಲೆ?
ಓಂ ಪ್ರಕಾಶ್ ಕುಟುಂಬಕ್ಕೆ ಹಣಕಾಸಿನ ಸಮಸ್ಯೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಮಾಜಿ ಡಿಜಿ ಮತ್ತು ಐಜಿಪಿ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಇದಕ್ಕೆ ಸಂಬಂಧಿಸಿ ಆಗಾಗ್ಗೆ ಮನೆಯಲ್ಲಿ ಜಗಳ ಕೂಡ ನಡೆಯುತ್ತಿತ್ತು. ಇದೇ ಜಗಳ ಕೊಲೆಗೆ ಕಾರಣವಾಗಿರಬಹುದು ಎಂದು ಅನುಮಾನ ವ್ಯಕ್ತವಾಗಿದೆ. ಮತ್ತೊಂದೆಡೆ, ಓಂ ಪ್ರಕಾಶ್ ಅವರು ಸಂಪಾದನೆ ಮಾಡಿದ್ದ ಆಸ್ತಿಯನ್ನು ಹೆಂಡತಿಗೆ ಕೊಡದೇ ನೇರವಾಗಿ ಮಗನ ಹೆಸರಿಗೆ ಬರೆದಿದ್ದರು. ಇದೇ ಕಾರಣಕ್ಕೆ ಹೆಂಡತಿ ಕೋಪಗೊಂಡು ಕೊಲೆ ಮಾಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ತನಿಖೆಯ ನಂತರವೇ ಸತ್ಯಾಂಶ ಹೊರಬರಬೇಕಿದೆ.
ಈ ಸುದ್ದಿಯನ್ನೂ ಓದಿ | Self Harming: 8 ವರ್ಷದಿಂದ ಪ್ರೀತಿಸಿ, ಕೈಕೊಟ್ಟ ವಿವಾಹಿತ ಶಿಕ್ಷಕಿ; ಮನನೊಂದು ಶಿಕ್ಷಕ ಆತ್ಮಹತ್ಯೆ
ಇನ್ನು ಓಂ ಪ್ರಕಾಶ್ ಬಿಹಾರ ಮೂಲದವರು. ಬಿಹಾರ ರಾಜ್ಯದ ಚಂಪಾರಣ್ ಜಿಲ್ಲೆಯ ಓಂ ಪ್ರಕಾಶ್ ಅವರು ಐಪಿಎಸ್ ಅಧಿಕಾರಿಯಾದ ನಂತರ ಮೊದಲ ಬಾರಿಗೆ ಅಂದಿನ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ಎಎಸ್‌ಪಿ ಆಗಿ ರಾಜ್ಯದಲ್ಲಿ ವೃತ್ತಿ ಆರಂಭಿಸಿದ್ದರು. ಇದಾದ ನಂತರ ಶಿವಮೊಗ್ಗ, ಉತ್ತರಕನ್ನಡ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ರಾಜ್ಯ ವಿಜಿಲೆನ್ಸ್ ಸೆಲ್‌ನ ಎಸ್‌ಪಿಯಾಗಿ, ಕರ್ನಾಟಕ ಲೋಕಾಯುಕ್ತದಲ್ಲಿ, ಅಗ್ನಿಶಾಮಕ ದಳದ ಡಿಐಜಿ, ಸಿಐಡಿ ಐಜಿಪಿಯಾಗಿ ಕರ್ತವ್ಯ ನಿರ್ವಹಣೆ ಮಾಡಿದ್ದರು. 2015 ಮಾರ್ಚ್‌ನಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕವಾಗಿದ್ದ ಓಂ ಪ್ರಕಾಶ್ ಅವರು 2017ರಲ್ಲಿ ನಿವೃತ್ತಿ ಹೊಂದಿದ್ದರು.