ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fire Accident: ಗೋವಾ ಅಗ್ನಿ ದುರಂತದಲ್ಲಿ ಬೆಂಗಳೂರು ಮೂಲದ ಯುವಕನೂ ಸಾವು

Goa Night Club Fire: ಗೋವಾದಲ್ಲಿ ನಡೆದಿರುವ ಭೀಕರ ಅಗ್ನಿ ದುರಂತದಲ್ಲಿ 25 ಮಂದಿ ಸಜೀವ ದಹನವಾಗಿದ್ದು, ಈ ಪೈಕಿ ಕರ್ನಾಟಕದ ಓರ್ವ ವ್ಯಕ್ತಿ ಕೂಡ ಸೇರಿದ್ದಾರೆ. ಬೆಂಗಳೂರಿನ ಥಣಿಸಂದ್ರದ ಹೆಗಡೆನಗರದ ನಿವಾಸಿ ಇಶಾಕ್ (25) ಮೃತ ದುರ್ದೈವಿ. ನಾಲ್ವರು ಸ್ನೇಹಿತರ ಜತೆ ಇಸಾಕ್‌ ಭಾನುವಾರ ಮಧ್ಯಾಹ್ನ ಗೋವಾ ಟ್ರಿಪ್‌ಗೆ ಹೋಗಿದ್ದರು.

ಗೋವಾ ಅಗ್ನಿ ದುರಂತ: ಕನ್ನಡಿಗನೂ ಸಾವು

ಗೋವಾದಲ್ಲಿ ನಡೆದ ಅಗ್ನಿ ದುರಂತ -

Ramesh B
Ramesh B Dec 7, 2025 11:14 PM

ಬೆಂಗಳೂರು, ಡಿ.​ 7: ಗೋವಾದಲ್ಲಿ ನಡೆದಿರುವ ಭೀಕರ ಅಗ್ನಿ ದುರಂತದಲ್ಲಿ (Fire Accident) 25 ಮಂದಿ ಸಜೀವ ದಹನವಾಗಿದ್ದಾರೆ (Goa Night Club Fire). ಮೃತರ ಪೈಕಿ ಕರ್ನಾಟಕದ ಓರ್ವ ವ್ಯಕ್ತಿ ಕೂಡ ಸೇರಿದ್ದಾರೆ. ಬೆಂಗಳೂರಿನ ಥಣಿಸಂದ್ರದ ಹೆಗಡೆನಗರದ ನಿವಾಸಿ ಇಶಾಕ್ (25) ಮೃತ ದುರ್ದೈವಿ. ಅವರ ಮೃತದೇಹವನ್ನು ಡಿಸೆಂಬರ್‌ 7ರ ರಾತ್ರಿಯೇ ಬೆಂಗಳೂರಿಗೆ ಕರೆ ತರಲಾಗುತ್ತದೆ. ನಾಲ್ವರು ಸ್ನೇಹಿತರ ಜತೆ ಇಸಾಕ್‌ ಭಾನುವಾರ ಮಧ್ಯಾಹ್ನ ಗೋವಾ ಟ್ರಿಪ್‌ಗೆ ಹೋಗಿದ್ದರು. ಈ ವೇಳೆ ಬೆಂಕಿಗೆ ಆಹುತಿಯಾಗಿದ್ದಾರೆ.

ಉತ್ತರ ಗೋವಾದ ಅರ್‌ಪೋರಾದಲ್ಲಿರುವ ನೈಟ್​​ ಕ್ಲಬ್‌ನಲ್ಲಿ ಭಾನುವಾರ ಮುಂಜಾನೆ ಭೀಕರ ಅಗ್ನಿ ದುರಂತ ನಡೆದಿತ್ತು. ಮೃತಪಟ್ಟವರಲ್ಲಿ ಹೆಚ್ಚಿನವರು ಕ್ಲಬ್‌ನ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದವರಾಗಿದ್ದು, ಆ ಪೈಕಿ ಮೂವರು ಮಹಿಳೆಯರು ಸೇರಿದ್ದಾರೆ ಎನ್ನಲಾಗಿದೆ. ಮೃತರಲ್ಲಿ ಮೂರರಿಂದ ನಾಲ್ಕು ಮಂದಿ ಪ್ರವಾಸಿಗರು ಕೂಡ ಇದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ನೈಟ್‌ಕ್ಲಬ್​​ನಲ್ಲಿ ಅಗ್ನಿ ಸುರಕ್ಷತಾ ನಿಯಮಗಳನ್ನು ಪಾಲಿಸದಿರುವುದೇ ಹೆಚ್ಚಿನ ಅವಘಡಕ್ಕೆ ಕಾರಣ. ಅದಾಗ್ಯೂ ದುರಂತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಗೋವಾ ರಾಜಧಾನಿ ಪಣಜಿಯಿಂದ ಸುಮಾರು 25 ಕಿ.ಮೀ. ದೂರದಲ್ಲಿರುವ ಅರ್‌ಪೋರಾ ಗ್ರಾಮದಲ್ಲಿರುವ ಈ ಜನಪ್ರಿಯ ನೈಟ್​​ಕ್ಲಬ್​​​ ಕಳೆದ ವರ್ಷ ಆರಂಭವಾಗಿತ್ತು ಎಂದು ಮೂಲಗಳು ತಿಳಿಸಿವೆ.

ಗೋವಾ ಅಗ್ನಿ ದುರಂತದ ದೃಶ್ಯ:



ಪಿಎಂ, ಸಿಎಂ ಸಂತಾಪ

ಗೋವಾ ಅಗ್ನಿ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಆಘಾತ ವ್ಯಕ್ತಪಡಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಪ್ರಧಾನಿ ಮೋದಿ, ʼʼಗೋವಾದ ಅರ್‌ಪೋರಾದಲ್ಲಿ ಸಂಭವಿಸಿದ ಅಗ್ನಿ ಅವಘಡದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲರೊಂದಿಗೆ ನನ್ನ ಆಲೋಚನೆಗಳು ಇವೆ. ಗಾಯಾಳುಗಳು ಆದಷ್ಟು ಬೇಗ ಗುಣಮುಖರಾಗಲಿ. ಪರಿಸ್ಥಿತಿಯ ಬಗ್ಗೆ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರೊಂದಿಗೆ ಮಾತನಾಡಿದ್ದೇನೆ. ರಾಜ್ಯ ಸರ್ಕಾರವು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದೆ” ಎಂದು ಹೇಳಿದ್ದಾರೆ.

ಗೋವಾ ನೈಟ್ ಕ್ಲಬ್‌ನಲ್ಲಿ ಭೀಕರ ಅಗ್ನಿ ದುರಂತ: ಸಾವು-ನೋವು ಹೆಚ್ಚಾಗಲು ಕಾರಣ ಬಹಿರಂಗ

ಅಗ್ನಿ ದುರಂತದ ವಿಚಾರ ತಿಳಿದು ತುಂಬಾ ನೋವಾಗಿದೆ ಎಂದು ಹೇಳಿರುವ ಪ್ರಮೋದ್ ಸಾವಂತ್, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ ನೈಟ್​​ಕ್ಲಬ್ ಅಗ್ನಿ ದುರಂತದ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.

ಮೃತರಲ್ಲಿ 4 ಮಂದಿ ಪ್ರವಾಸಿಗರು, 14 ಮಂದಿ ಸಿಬ್ಬಂದಿ ಸೇರಿದ್ದಾರೆ. ಇನ್ನುಳಿದ 7 ಮಂದಿಯ ಗುರುತು ಪತ್ತೆಯಾಗಿಲ್ಲ. ಪೊಲೀಸರು ಪ್ರಕಾರ ಮಧ್ಯ ರಾತ್ರಿ 1 ಗಂಟೆಗೆ ನೈಟ್‌ ಕ್ಲಬ್‌ನ ಅಡುಗೆ ಕೋಣೆಯಲ್ಲಿ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಬೆಂಕಿ ಎಲ್ಲಡೆ ಹರಡಿತು. ಸುರಕ್ಷತಾ ಮಾನದಂಡ ಅಳವಡಿಸದೇ ಇರುವುದು ದುರಂತ ಹೆಚ್ಚಳಕ್ಕೆ ಕಾರಣ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.