- ಮಧುಸೂಧನ್, ಬೆಂಗಳೂರು
ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುತ್ತಿದ್ದ ವೇಳೆಯಲ್ಲಿಯೇ, ಶಿಕ್ಷಣ ಸಚಿವ ಮಧು ಬಂಗಾರಪ್ಪನವರು 2026ರ ಮಾರ್ಚ್ 27ರಂದು ದಿಢೀರ್ ಘೋಷಣೆಯೊಂದನ್ನು ಮಾಡಿದ್ದರು. ತೃತೀಯ ಭಾಷೆಯ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ (ಹಿಂದಿ ಮತ್ತು ಇತರ 8 ಭಾಷೆ) ಅಂಕಗಳ ಬದಲಿಗೆ "ಎʼ ಯಿಂದ ʼಡಿʼ ತನಕ ಗ್ರೇಡ್‌ಗಳನ್ನು ನೀಡಲಾಗುವುದು ಹಾಗೂ ಎಸ್‌ಎಸ್‌ಎಲ್‌ಸಿ ಅಂತಿಮ ಶೇಕಡಾವಾರು ಅಂಕದಲ್ಲಿಈ ಗ್ರೇಡ್ ಪರಿಗಣನೆಯಾಗುವುದಿಲ್ಲ ಎಂದು ತಿಳಿಸಿದ್ದರು. 2026ರ ಮಾರ್ಚ್ 18-ಏಪ್ರಿಲ್ 2 ರ ಪರೀಕ್ಷೆಗಳು ನಡೆಯುತ್ತಿದ್ದಾಗಲೇ ಮಧ್ಯದಲ್ಲಿ ಈ ಘೋಷಣೆಯಾಗಿತ್ತು. ಇದರಿಂದಾಗಿ ಒಟ್ಟು ಎಸ್ ಎಸ್ ಎಲ್ ಸಿ ಅಂಕಗಳು 625ರಿಂದ 525ಕ್ಕೆ ಇಳಿಯುತ್ತಿದ್ದವು. ಅಂತಿಮ ಅಂಕಗಳ ಲೆಕ್ಕಾಚಾರದಲ್ಲಿ ಈ ತೃತೀಯ ಭಾಷೆ ಸಂಪೂರ್ಣವಾಗಿ ರದ್ದಾಗುತ್ತಿತ್ತು.
ಈ ಬದಲಾವಣೆಗೆ ಸರಕಾರ ಕೊಟ್ಟ ಸಮರ್ಥನೆ ಏನು?
ಈ ಹಿಂದಿನ ವರ್ಷದಲ್ಲಿ ತೃತೀಯ ಭಾಷೆಯಲ್ಲಿ 1.65 ಲಕ್ಷ ವಿದ್ಯಾರ್ಥಿಗಳು ಫೇಲಾಗಿದ್ದರು. ಒತ್ತಡಕ್ಕೆ ಗುರಿಯಾಗುತ್ತಿದ್ದರು. ಇದನ್ನು ತಪ್ಪಿಸಲು ಅಂಕಗಳ ಬದಲು ಗ್ರೇಡ್ ನೀಡಲಾಗುವುದು ಎಂದಿತ್ತು. ಇದರಿಂದ ದ್ವಿಭಾಷಾ ವ್ಯವಸ್ಥೆಗೆ ಹೋದಂತಾಗುತ್ತಿತ್ತು. ವಿದ್ಯಾರ್ಥಿಗಳ ಮೇಲೆ ಹಿಂದಿಯನ್ನು ಹೇರಲಾಗುತ್ತಿದೆ ಎಂದು ದೂರುತ್ತಿದ್ದ ಕನ್ನಡಪರ ಸಂಘಟನೆಗಳಿಗೆ ಇದು ಸ್ಪಂದನೆಯಂತಿತ್ತು. 2026ರ ಏಪ್ರಿಲ್ 10ರಂದು, ಪರೀಕ್ಷೆ ಮುಗಿದು 8 ದಿನಗಳ ಬಳಿಕ ಸರಕಾರ ಗ್ರೇಡಿಂಗ್ ನೀತಿಯ ಕರಡನ್ನು ಮಂಡಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು " ಇದು ಹಿಂದಿಯ ವಿರುದ್ಧ ಅಲ್ಲ, ಆದರೆ ಎಸ್ಸೆಸ್ಸೆಲ್ಸಿ ಅಂಕಗಳಲ್ಲಿ ದ್ವಿ ಭಾಷಾ ಪದ್ಧತಿಯನ್ನು ಜಾರಿಗೊಳಿಸುವ ಯೋಜನೆಯ ಭಾಗʼʼ ಎಂದಿದ್ದರು.
ಕಾಂಗ್ರೆಸ್ ಇದನ್ನು ವಿದ್ಯಾರ್ಥಿ ಸ್ನೇಹಿ ನೀತಿ ಎಂದು ಕರೆದಿತ್ತು. ತೃತೀಯ ಭಾಷೆಯಲ್ಲಿ ಸಾಕಷ್ಟು ವಿದ್ಯಾರ್ಥಿಗಳು ನಪಾಸಾಗುತ್ತಿರುವುದನ್ನು ಬಿಂಬಿಸಿತ್ತು. ಬಿಜೆಪಿ ಇದನ್ನು ವಿದ್ಯಾರ್ಥಿಗಳ ಹಿತಾಸಕ್ತಿಗೆ ವಿರುದ್ಧವಾದ ನಿರ್ಧಾರ ಎಂದಿತ್ತು. ಪರೀಕ್ಷೆಯ ಮಧ್ಯದಲ್ಲೇ ಘೋಷಿಸಬಾರದಿತ್ತು ಎಂದಿತ್ತು. ಮಾಜಿ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು, ಪರೀಕ್ಷೆಯ ಮಧ್ಯೆ ಈ ನಿರ್ಧಾರ ತೆಗೆದುಕೊಂಡಿರುವುದರಿಂದ ಪೋಷಕರು ರಾಜ್ಯ ಮಂಡಳಿಯ ಬಗ್ಗೆ ವಿಶ್ವಾಸ ಕಳೆದುಕೊಂಡು ಸಿಬಿಎಸ್ ಇ ಅಥವಾ ಐಸಿಎಸ್‌ಇ ಬಗ್ಗೆ ಗಮನ ಹರಿಸುವ ಸಾಧ್ಯತೆ ಇದೆ ಎಂದಿದ್ದರು. ಜೆಡಿಎಸ್ ಕೂಡ ಸರಕಾರದ ನಿಲುವನ್ನು ಪ್ರಶ್ನಿಸಿತ್ತು. ಸಂಪುಟವನ್ನು ಸಂಪರ್ಕಿಸದೆ, ತಜ್ಞರ ಜತೆಗೆ ಪರಾಮರ್ಶಿಸದೆ ನಿರ್ಣಯ ಕೈಗೊಂಡಿರುವುದು ಸರಿಯಲ್ಲ ಎಂದಿತ್ತು.
ಕೊನೆಯ ಕ್ಷಣದಲ್ಲಿ ಈ ರೀತಿಯ ಬದಲಾವಣೆಯ ಆದೇಶ ಪ್ರಕಟಿಸಿದ್ದಕ್ಕೆ ಖಾಸಗಿ ಶಾಲೆಗಳು ಆಕ್ಷೇಪಿಸಿದ್ದವು. ವರ್ಷಪೂರ್ತಿ ಕಷ್ಟಪಟ್ಟು ಓದಿದ್ದ ವಿದ್ಯಾರ್ಥಿಗಳಿಗೆ ತೀವ್ರ ಬೇಸರವಾಗಿತ್ತು. ಪೋಷಕರೂ ಚಿಂತೆಗೀಡಾಗಿದ್ದರು. ಮಕ್ಕಳು ಹಿಂದಿ ಕಲಿಕೆಗೆ ನಿರುತ್ಸಾಹಗೊಳ್ಳುವ ಆತಂಕವಿತ್ತು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅನಾನುಕೂಲವಾಗುವ ಭೀತಿ ಉಂಟಾಗಿತ್ತು. ಮಂಡಳಿ ಬದಲಿಸುವಾಗಲೂ ಸಮಸ್ಯೆಯಾಗುವ ಸವಾಲಿತ್ತು. ಹಿಂದಿ ಶಿಕ್ಷಕರೂ, ಹಿಂದಿ ಭಾಷೆಯ ಕಲಿಕೆಗೆ ಸಮಯ ಕುಂಠಿತವಾಗುವ ಸಾಧ್ಯತೆ ಬಗ್ಗೆ ಎಚ್ಚರಿಸಿದ್ದರು. ಕನ್ನಡಪರ ಸಂಘಟನೆಗಳು ಈ ಬದಲಾವಣೆಯನ್ನು ಸ್ವಾಗತಿಸಿದ್ದವು. ಇದು ಕನ್ನಡ ರಕ್ಷಣೆಯ ಕೆಲಸ ಎಂದಿದ್ದವು. ಹಿಂದಿ ಹೇರಿಕೆಯ ಅಂತ್ಯ ಎಂದು ಕರೆದಿದ್ದವು. ಕೆಲವರು ಇದನ್ನು ಕಾಂಗ್ರೆಸ್‌ನ ರಾಜಕೀಯ ಪ್ರೇರಿತ ನಡೆ ಎಂದಿದ್ದರು.
ಈ ನಡುವೆ ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಸಚಿವರ ನಿರ್ಧಾರವನ್ನು ಪ್ರಶ್ನಿಸಲಾಯಿತು. ಪರೀಕ್ಷೆಗಳು ನಡೆಯುತ್ತಿದ್ದ ಅವಧಿಯಲ್ಲಿಯೇ ಸರಕಾರವು ತೃತೀಯ ಭಾಷೆಯ ಪರೀಕ್ಷೆಯಲ್ಲಿ ಅಂಕಗಳ ಬದಲು ಗ್ರೇಡ್ ಕೊಡುವ ಮಹತ್ವದ ನೀತಿ ಬದಲಾವಣೆ ಮಾಡಬಹುದೇ ಎಂದು ಪ್ರಶ್ನಿಸಲಾಯಿತು. ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಮೂತಿ ಐ.ಎಸ್ ಇಂದಿರೇಶ್ ನೇತೃತ್ವದ ಪೀಠವು ಸರಕಾರಕ್ಕೆ ನೀಡಿದ ಆದೇಶದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗೆ ಅಂಕಗಳನ್ನೇ ನೀಡಿ, ಗ್ರೇಡ್ ಅಲ್ಲ ಎಂದು ಸೂಚಿಸಿತು.
ಪರೀಕ್ಷೆಗಳು ನಡೆಯುವ ವೇಳೆಯಲ್ಲಿ ಮಧ್ಯೆ ನಿಯಮಾವಳಿಗಳಲ್ಲಿ ಬದಲಾವಣೆ ಮಾಡುವುದು ಸರಿಯಾದ ಕ್ರಮವಲ್ಲ. ಇದು ಮೆರಿಟ್ ಲಿಸ್ಟ್ ಮತ್ತು ಕಾಲೇಜುಗಳಿಗೆ ಪ್ರವೇಶಾತಿಯ ಮೇಲೆ ಪರಿಣಾಮ ಬೀರಲಿದೆ. ಅಂಕಗಳು ಪಾರದರ್ಶಕವಾಗಿ ಮತ್ತು ನ್ಯಾಯಬದ್ಧವಾಗಿ ಕೊಡಬೇಕು. ಮಾರ್ಚ್ 18ಮತ್ತು ಏಪ್ರಿಲ್ 2 ರ ನಡುವೆ ಪರೀಕ್ಷೆ ನಡೆದಿತ್ತು. ಆದರೆ ನಿಯಮ ಬದಲಾವಣೆಗೆ ಸಂಬಂಧಿಸಿ ಏಪ್ರಿಲ್ 10ರಂದು ಲಿಖಿತ ಆದೇಶವನ್ನು ಸರಕಾರ ಪ್ರಕಟಿಸಿತ್ತು. ಪರೀಕ್ಷೆ ಮುಗಿದ ಬಳಿಕ ನಿಯಮ ಬದಲಾವಣೆ ಸೂಕ್ತವಲ್ಲ ಎಂದು ಕೋರ್ಟ್ ಹೇಳಿತ್ತು.
ಕೋರ್ಟ್ ಆದೇಶದ ಫಲಶ್ರುತಿಯಾಗಿ 2025-26ರ ಸಾಲಿ ವಿದ್ಯಾರ್ಥಿಗಳಿಗೆ 625 ಅಂಕಗಳ ಲೆಕ್ಕಾಚಾರದಲ್ಲಿ ಮೌಲ್ಯ ಮಾಪನವಾಗಿದೆ. ಕೋರ್ಟ್ ಆದೇಶದಿಂದಾಗಿ ಸರಕಾರಗಳು ಶೈಕ್ಷಣಿಕ ವರ್ಷದ ನಡುವೆ ಅಥವಾ ಪರೀಕ್ಷೆಗಳು ಮುಗಿದ ಬಳಿಕ ನಿಯಮಗಳಲ್ಲಿ ಬದಲಾವನೆ ತರಲು ಸಾಧ್ಯವಿಲ್ಲ ಎಂಬುದು ಸಾಬೀತಾಗಿದೆ. ಹಿಂದಿಯಲ್ಲಿ ಉತ್ತಮ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಅವರ ಶ್ರಮ ವ್ಯರ್ಥವಾಗದಂತೆ ನೋಡಿಕೊಂಡಂತಾಗಿದೆ. ಜನರು ರಾಜ್ಯ ಪರೀಕ್ಷಾ ಮಂಡಳಿಯಲ್ಲಿ ವಿಶ್ವಾಸ ಕಳೆದುಕೊಳ್ಳದಂತೆ ತಡೆಯಲು ಸಾಧ್ಯವಾಗಿದೆ. ಈಗಲೂ ಸರಕಾರ ದ್ವಿಭಾಷಾ ವ್ಯವಸ್ಥೆಗೆ ಹೋಗಲು ಬಯಸುತ್ತಿರುವುದರಿಂದ ಭವಿಷ್ಯದಲ್ಲಿ ಏನಾಗಬಹುದು ಎಂಬ ಗೊಂದಲ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರ ವಲಯದಲ್ಲಿದೆ. ಕೋರ್ಟ್ ಈ ವರ್ಷ ಬದಲಾವಣೆ ಮಾಡದಿರಲು ಸೂಚಿಸಿದೆಯೇ ಹೊರತು ಮುಂಬರುವ ವರ್ಷದಲ್ಲಿ ಸರಕಾರ ಬದಲಾವಣೆ ಮಾಡಬಹುದೇ ಎಂಬುದರ ಬಗ್ಗೆ ಅಲ್ಲ.