Gruha Arogya scheme: ಮಾರ್ಚ್‌ನಿಂದ ರಾಜ್ಯಾದ್ಯಂತ ʼಗೃಹ ಆರೋಗ್ಯ ಯೋಜನೆʼ ಜಾರಿ
Gruha Arogya scheme: ಈ ಯೋಜನೆಯಡಿ ಮನೆಗಳಿಗೆ ವೈದ್ಯರು, ಆರೋಗ್ಯ ಕಾರ್ಯಕರ್ತರು ಭೇಟಿ ನೀಡಿ 30 ವರ್ಷ ದಾಟಿದವರನ್ನು ತಪಾಸಣೆಗೆ ಒಳಪಡಿಸಿ ಅವರಿಗೆ ಏನಾದರೂ ಸಮಸ್ಯೆ ಇದ್ದರೆ ಉಚಿತವಾಗಿ ಚಿಕಿತ್ಸೆ, ಔಷಧ ನೀಡುತ್ತಾರೆ.


ಬೆಂಗಳೂರು: ರಾಜ್ಯದ ಎಲ್ಲಾ ಆರೋಗ್ಯ ಸೇವೆಗಳನ್ನು ಉತ್ತಮ ಮಟ್ಟಕ್ಕೆ ತೆಗೆದುಕೊಂಡು ಹೋಗುವತ್ತ ನಮ್ಮ ಸರ್ಕಾರ ಆದ್ಯತೆ ನೀಡಿದೆ. ಸಾಮಾನ್ಯ, ಬಡ, ದುರ್ಬಲ ವರ್ಗಗಳಿಗೆ, ಗ್ರಾಮೀಣ ಭಾಗಗಳಿಗೆ ಆರೋಗ್ಯ ಸೇವೆಯನ್ನು ಮನೆ ಬಾಗಿಲಿಗೆ ತಲುಪಿಸಲು ಸರ್ವ ಪ್ರಯತ್ನ ನಡೆಯುತ್ತಿದೆ. ಇದೇ ನಿಟ್ಟಿನಲ್ಲಿ ಕೋಲಾರದಲ್ಲಿ ಯಶಸ್ವಿಯಾಗಿರುವ ಗೃಹ ಆರೋಗ್ಯ ಯೋಜನೆಯನ್ನು ಮಾರ್ಚ್‌ನಿಂದ ರಾಜ್ಯಾದ್ಯಂತ ಜಾರಿಗೊಳಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಚಿವರು, ಮಾಹಿತಿ ಹಂಚಿಕೊಂಡಿದ್ದಾರೆ.
ಏನಿದು ಗೃಹ ಆರೋಗ್ಯ ಯೋಜನೆ?
ಗೃಹ ಆರೋಗ್ಯ' ಎನ್ನುವುದು ಜನ ಸಾಮಾನ್ಯರ ಮನೆ ಬಾಗಿಲಿಗೆ ಆರೋಗ್ಯ ಭಾಗ್ಯವನ್ನು ಕೊಂಡೊಯ್ಯುವ ಪ್ರಮುಖವಾದ ಯೋಜನೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅಸಾಂಕ್ರಾಮಿಕ ರೋಗಗಳನ್ನು ಗುರುತಿಸಿ ಮತ್ತು ನಿರಂತರ ಚಿಕಿತ್ಸೆಯಿಂದ ಮರಣದ ಪ್ರಮಾಣವನ್ನು ಕಡಿಮೆ ಮಾಡುವ ಗುರಿ ಹೊಂದಿರುವ ಯೋಜನೆ ಇದಾಗಿದೆ.
ಗೃಹ ಆರೋಗ್ಯ ಯೋಜನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಕೂಸು. ಈ ಯೋಜನೆಯನ್ನು ಮೊದಲಿಗೆ ಕೋಲಾರ ಜಿಲ್ಲೆಯಲ್ಲಿ ಆರಂಭಿಸಲಾಗಿತ್ತು. ಇಲ್ಲಿ ಯೋಜನೆ ಯಶಸ್ವಿಯಾಗಿದ್ದು, ಮಾರ್ಚ್ ತಿಂಗಳಿನಿಂದ ರಾಜ್ಯಾದ್ಯಂತ ಜಾರಿ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ರಾಜ್ಯದ ಎಲ್ಲಾ ಆರೋಗ್ಯ ಸೇವೆಗಳನ್ನು ಉತ್ತಮ ಮಟ್ಟಕ್ಕೆ ತೆಗೆದುಕೊಂಡು ಹೋಗುವತ್ತ ನಮ್ಮ ಸರ್ಕಾರ ಆದ್ಯತೆ ನೀಡಿದೆ. ಸಾಮಾನ್ಯ, ಬಡ, ದುರ್ಬಲ ವರ್ಗಗಳಿಗೆ, ಗ್ರಾಮೀಣ ಭಾಗಗಳಿಗೆ ಆರೋಗ್ಯ ಸೇವೆಯನ್ನು ಮನೆ ಬಾಗಿಲಿಗೆ ತಲುಪಿಸಲು ಸರ್ವ ಪ್ರಯತ್ನ ನಡೆಯುತ್ತಿದೆ. ಇದೇ ನಿಟ್ಟಿನಲ್ಲಿ ಕೋಲಾರದಲ್ಲಿ ಯಶಸ್ವಿಯಾಗಿರುವ ಗೃಹ ಆರೋಗ್ಯ ಯೋಜನೆಯನ್ನು ಮಾರ್ಚ್… pic.twitter.com/5XxOIZSRix
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) February 1, 2025
ಈ ಯೋಜನೆಯಡಿ ಮನೆಗಳಿಗೆ ವೈದ್ಯರು, ಆರೋಗ್ಯ ಕಾರ್ಯಕರ್ತರು ಭೇಟಿ ನೀಡಿ 30 ವರ್ಷ ದಾಟಿದವರನ್ನು ತಪಾಸಣೆಗೆ ಒಳಪಡಿಸಿ ಅವರಿಗೆ ಏನಾದರೂ ಸಮಸ್ಯೆ ಇದ್ದರೆ ಉಚಿತವಾಗಿ ಚಿಕಿತ್ಸೆ, ಔಷಧ ನೀಡುತ್ತಾರೆ. ಪ್ರಮುಖ 6 ಅಸಾಂಕ್ರಾಮಿಕ ಕಾಯಿಲೆಗಳಿಗೆ ಪ್ರಾಥಮಿಕ ಹಂತದ ತಪಾಸಣೆ ನಡೆಸಲಿದ್ದು, ಬಾಯಿ, ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಹಾಗೂ ಮಾನಸಿಕ ರೋಗ ಗಳಿಗೆ ಪ್ರಾಥಮಿಕ ಹಂತದ ತಪಾಸಣೆ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡ (BP)ಗೆ ಉಚಿತ ಔಷಧ ವಿತರಣೆ ಮಾಡಲಾಗುತ್ತದೆ.
ನಿದ್ರೆಯಲ್ಲಿ ಉಸಿರುಕಟ್ಟುವಿಕೆ (sleep apnea), BMI ಅಸಮತೋಲನ, ಧೂಮಪಾನ ಮತ್ತು ಮದ್ಯಪಾನದಂತಹ ಅಪಾಯಕಾರಿ ಲಕ್ಷಣಗಳ ಕುರಿತು ಆರೋಗ್ಯ ಶಿಕ್ಷಣ ಮತ್ತು ಆಪ್ತ ಸಮಾಲೋಚನೆ ನಡೆಸಲಾಗುತ್ತದೆ.
ಈ ಸುದ್ದಿಯನ್ನೂ ಓದಿ | CM Siddaramaiah: ಅಂಬೇಡ್ಕರ್ ಮನುಸ್ಮೃತಿ ಸುಟ್ಟು ದೇಶಕ್ಕೆ ಸಂವಿಧಾನ ಕೊಟ್ಟರು: ಸಿದ್ದರಾಮಯ್ಯ
ಗ್ರಾಮೀಣ ಪ್ರದೇಶದ ಜನರು ಆರೋಗ್ಯ ತಪಾಸಣೆಗಾಗಿ ತಾಲೂಕು ಆಸ್ಪತ್ರೆಗೆ ಅಲೆಯಬೇಕಿದೆ. ಬಿಪಿ, ಶುಗರ್ ಕಾಯಿಲೆ ಇದ್ದರೂ ತಪಾಸಣೆ ಮಾಡಸದೆ ನಿರ್ಲಕ್ಷ್ಯ ಮಾಡುತ್ತಿದ್ದರು. ಇದನ್ನು ಮನಗಂಡು, ಆರಂಭದಲ್ಲಿಯೇ ಇಂತಹ ಕಾಯಿಲೆಗಳನ್ನು ತಡೆಯುವುದು ಗೃಹ ಆರೋಗ್ಯ ಯೋಜನೆಯ ಪ್ರಮುಖ ಉದ್ದೇಶವಾಗಿದೆ.