ಬೆಂಗಳೂರು: ಕೊಡಗು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ದುಬಾರೆ ಸಾಕಾನೆ ಶಿಬಿರಕ್ಕೆ (Dubare Elephant Camp) ಭೇಟಿ ನೀಡಿದ್ದ ಮಹಿಳೆಯೊಬ್ಬರು ಎರಡು ಸಾಕಾನೆಗಳ ನಡುವೆ ನಡೆದ ದಿಢೀರ್ ಕಾಳಗಕ್ಕೆ ಸಿಲುಕಿ ದಾರುಣವಾಗಿ ಮೃತಪಟ್ಟಿದ್ದಾರೆ. ಘಟನೆ ಬೆನ್ನಲ್ಲೇ ಎಚ್ಚೆತ್ತುಕೊಂಡು ಅರಣ್ಯ ಇಲಾಖೆ, ಇನ್ಮುಂದೆ ವನ್ಯಜೀವಿಗಳಿಂದ ನಿರ್ದಿಷ್ಟ ಅಂತರ ಕಾಯ್ದುಕೊಳ್ಳುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಎಲ್ಲ ಸಾಕಾನೆ ಶಿಬಿರಗಳಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಪ್ರಮಾಣಿತ ಕಾರ್ಯಾಚರಣೆ ವಿಧಾನ ರೂಪಿಸುವಂತೆ ಮತ್ತು 100 ಅಡಿ ದೂರದಲ್ಲಿ ನಿಂತು ಆನೆಗಳ ಸ್ನಾನ ವೀಕ್ಷಿಸಲು ಅವಕಾಶ ನೀಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಆದೇಶಿಸಿದ್ದಾರೆ.
ಪರಿಸರ ಪ್ರವಾಸೋದ್ಯಮದ ಚಾರಣಪಥಗಳಲ್ಲಿ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಪ್ರಮಾಣಿತ ಕಾರ್ಯಾಚರಣೆ ವಿಧಾನ ರೂಪಿಸಲಾಗಿದ್ದು, ಈ ಎಸ್‌ಒಪಿ ಜಾರಿ ಖಚಿತಪಡಿಸಿಕೊಳ್ಳುವವರೆಗೆ ಚಾರಣಪಥಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಈಗಾಗಲೇ ಸೂಚಿಸಲಾಗಿದೆ. ಅದೇ ಪ್ರಕಾರವಾಗಿ ಸಾಕಾನೆ ಶಿಬಿರಗಳಿಗೆ ಬರುವ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಎಸ್‌ಒಪಿ ರೂಪಿಸಲು ನಿರ್ದೇಶನ ನೀಡಿದ್ದಾರೆ.
ಅಷ್ಟೇ ಅಲ್ಲದೇ ಪ್ರವಾಸಿಗರು ಆನೆಯ ಬಳಿ ಹೋಗದಂತೆ, ಕನಿಷ್ಠ 100 ಅಡಿ ದೂರದಲ್ಲಿ ನಿಂತು ಆನೆ ಮೈತೊಳೆಯುವುದನ್ನು ವೀಕ್ಷಿಸುವಂತೆ ಮತ್ತು ಯಾವುದೇ ಕಾರಣಕ್ಕೂ ಆನೆಗಳ ಬಳಿ ಹೋಗಿ ಸೆಲ್ಫಿ, ಫೋಟೋ ತೆಗೆಸಿಕೊಳ್ಳಲು, ಮೈತೊಳೆಯಲು ಅವಕಾಶ ನೀಡದಂತೆ ಮತ್ತು ಬಾಳೆಹಣ್ಣು, ಬೆಲ್ಲ, ಕಬ್ಬು ಇತ್ಯಾದಿ ಯಾವುದೇ ಆಹಾರವನ್ನು ಪ್ರವಾಸಿಗರ ಕೈಯಿಂದ ತಿನ್ನಸದಂತೆ ಆದೇಶ ಹೊರಡಿಸಲು ಸೂಚಿಸಿದ್ದಾರೆ.
ದುಬಾರೆಯಲ್ಲಿ ನಡೆದಿದ್ದೇನು?
ಮೇ 18, 2026 ರಂದು ಮಧ್ಯಾಹ್ನ ಸುಮಾರು 12:00 ಗಂಟೆಗೆ ಕೊಡಗು ಜಿಲ್ಲೆಯ ದುಬಾರೆ ಆನೆ ಶಿಬಿರದಲ್ಲಿ ಭಾರೀ ದುರಂತವೊಂದು ನಡೆದಿದೆ. ಎಂದಿನಂತೆ ಆನೆಗಳಿಗೆ ನದಿಯಲ್ಲಿ ಸ್ನಾನ ಮಾಡಿಸಲಾಗುತ್ತಿತ್ತು. ಮಾವುತರು ಮಾರ್ತಾಂಡ ಮತ್ತು ಕಂಜನ್ ಎಂಬ ಎರಡು ಸಾಕಾನೆಗಳನ್ನು ನೀರಿಗೆ ಕರೆತಂದಿದ್ದರು. ಮಾವುತ ಗೌಸ್ ಅವರು ಮಾರ್ತಾಂಡ ಆನೆಯನ್ನು ನೀರಿಗೆ ಇಳಿಸುವಲ್ಲಿ, ಆನೆಯು ಸ್ವಲ್ಪ ವೇಗವಾಗಿ ಸಾಗಿ ಪಕ್ಕದಲ್ಲೇ ಇದ್ದ ಕಂಜನ್ ಆನೆಗೆ ತಾಗಿತು. ತನ್ನ ಮೈಗೆ ತಾಗುತ್ತಿದ್ದಂತೆಯೇ ಕೆರಳಿದ ಕಂಜನ್ ಆನೆ ತೀವ್ರ ಆಕ್ರೋಶಗೊಂಡು ಎದುರಾಳಿ ಮಾರ್ತಾಂಡ ಮೇಲೆ ಮುಗಿಬಿದ್ದಿತು.
ದಿಢೀರ್ ಶುರುವಾದ ಕಾಳಗವನ್ನು ಕಂಡು ಅಲ್ಲಿದ್ದ ಪ್ರವಾಸಿಗರು ಪ್ರಾಣಭಯದಿಂದ ದಿಕ್ಕಾಪಾಲಾಗಿ ಓಡಲು ಆರಂಭಿಸಿದರು. ಗದ್ದಲದ ನಡುವೆ ಸಿಲುಕಿದ ಪ್ರವಾಸಿ ಮಹಿಳೆ ಜಿನ್ನು ಅವರಿಗೆ ಕೆರಳಿದ ಆನೆಗಳು ಬಲವಾಗಿ ಡಿಕ್ಕಿ ಹೊಡೆದಿವೆ. ಆನೆಯ ಕಾಲಿಗೆ ಸಿಲುಕಿದ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು.