ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದ್ವೇಷ ರಾಜಕಾರಣ ಬಿಜೆಪಿ ಆಸ್ತಿ, ಅವರ ಸುಳ್ಳು ಕೇಸ್‌ಗಳಿಗೆ ಆಯುಷ್ಯವಿಲ್ಲ: ಡಿ.ಕೆ. ಶಿವಕುಮಾರ್ ಟೀಕೆ

National Herald Case: ಬಿಜೆಪಿ ಎಷ್ಟೇ ಪಿತೂರಿ ಮಾಡಿದರೂ ನಮಗೆ ನ್ಯಾಯ ಸಿಕ್ಕಿದೆ. ಬಿಜೆಪಿ ಎಂದರೆ ಬುರುಡೆ ಜನತಾ ಪಕ್ಷವಾಗಿದೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಜೈಲಿಗೆ ಹಾಕಲು ಪಿತೂರಿ ಮಾಡಲಾಗಿದೆ. ಈ ದ್ವೇಷ ರಾಜಕಾರಣ ಇಲ್ಲಿಗೆ ಕೊನೆಯಾಗಬೇಕು. ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಈ ಪ್ರತಿಭಟನೆ ಮುಂದುವರಿಯಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ದ್ವೇಷ ರಾಜಕಾರಣ ಬಿಜೆಪಿ ಆಸ್ತಿ ಎಂದ ಡಿ.ಕೆ. ಶಿವಕುಮಾರ್

ಡಿಸಿಎಂ ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ) -

Profile
Siddalinga Swamy Dec 17, 2025 5:43 PM

ಬೆಳಗಾವಿ, ಡಿ.17: ನ್ಯಾಷನಲ್ ಹೆರಾಲ್ಡ್ ಈ ದೇಶದ ಆಸ್ತಿ. ದ್ವೇಷ ರಾಜಕಾರಣ ಬಿಜೆಪಿ ಆಸ್ತಿ. ಸತ್ಯಕ್ಕೆ ಸಾವಿಲ್ಲ, ಸುಳ್ಳು ಕೇಸ್‌ಗಳಿಗೆ ಆಯುಷ್ಯವಿಲ್ಲ ಎಂಬುದಕ್ಕೆ ಮಂಗಳವಾರ ಬಂದ ನ್ಯಾಯಾಲಯದ ಆದೇಶವೇ ಸಾಕ್ಷಿ. ಸತ್ಯ ಮೇವ ಜಯತೆ, ಬಿಜೆಪಿಗಿಲ್ಲ ಘನತೆ. ನಮ್ಮನ್ನು ಪಿತೂರಿಯಿಂದ ಸೋಲಿಸಲು ಸಾಧ್ಯವಿಲ್ಲ, ದ್ವೇಷದಿಂದ ಕುಗ್ಗಿಸಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಆಕ್ರೋಶ ವ್ಯಕ್ತಪಡಿಸಿದರು. ಬೆಳಗಾವಿ ಸುವರ್ಣ ವಿಧಾನಸೌಧದ ಆವರಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಧರಣಿಯಲ್ಲಿ ಹಾಗೂ ನಂತರ ಮಾಧ್ಯಮಗಳ ಜತೆ ಅವರು ಮಾತನಾಡಿದರು.

Justice for Congress, Face loss for BJP. End of BJP Conspiracy, Victory for Democracy. ಬಿಜೆಪಿ ಎಷ್ಟೇ ಪಿತೂರಿ ಮಾಡಿದರೂ ನಮಗೆ ನ್ಯಾಯ ಸಿಕ್ಕಿದೆ. ಬಿಜೆಪಿ ಎಂದರೆ ಬುರುಡೆ ಜನತಾ ಪಕ್ಷವಾಗಿದೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಜೈಲಿಗೆ ಹಾಕಲು ಪಿತೂರಿ ಮಾಡಲಾಗಿದೆ. ಈ ದ್ವೇಷ ರಾಜಕಾರಣ ಇಲ್ಲಿಗೆ ಕೊನೆಯಾಗಬೇಕು. ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಈ ಪ್ರತಿಭಟನೆ ಮುಂದುವರಿಯಲಿದೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಜತೆ ನಿಂತು ಅವರ ಕೈ ಬಲಪಡಿಸೋಣ ಎಂದು ಕರೆ ನೀಡಿದರು.

ನ್ಯಾಷನಲ್ ಹೆರಾಲ್ಡ್ ಕಾಂಗ್ರೆಸ್ ಪಕ್ಷ ಹಾಗೂ ದೇಶದ ಆಸ್ತಿ

ಇಂದು ಸತ್ಯಕ್ಕೆ ಜಯ ಸಿಕ್ಕಿದೆ. 1937ರಲ್ಲಿ ನಮ್ಮ ನಾಯಕರಾಗಿದ್ದ ಜವಹಾರ್ ಲಾಲ್ ನೆಹರು ಅವರು ಜನರ ಧ್ವನಿಯಾಗಬೇಕು ಎಂದು ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಆರಂಭಿಸಿದರು. ಆ ಮೂಲಕ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ನೆರವಾಗಲು ಈ ಸಂಸ್ಥೆ ಆರಂಭಿಸಿದರು. ಈ ಸಂಸ್ಥೆ ಮಹಾತ್ಮಾ ಗಾಂಧಿ ಅಥವಾ ನೆಹರು ಅವರ ಆಸ್ತಿಯಲ್ಲ. ಇದು ಕಾಂಗ್ರೆಸ್ ಪಕ್ಷದ ಆಸ್ತಿ. ಕಾಂಗ್ರೆಸ್ ಪಕ್ಷದಲ್ಲಿ ಯಾರೇ ಅಧ್ಯಕ್ಷರಾದರೂ ಈ ಸಂಸ್ಥೆಯ ಷೇರುದಾರರಾಗುತ್ತಾರೆ. ಇದರ ಜವಾಬ್ದಾರಿ ಹೊರುತ್ತಾರೆ. ಆದರೆ ಬಿಜೆಪಿಯವರು ಯಂಗ್ ಇಂಡಿಯಾ ಸಂಸ್ಥೆ ಹಾಗೂ ನ್ಯಾಷನಲ್ ಹೆರಾಲ್ಡ್ ಸಂಸ್ಥೆಯ ಆಸ್ತಿಯನ್ನು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ತಮ್ಮ ಆಸ್ತಿಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಿ ನೀಡದ ದೂರಿನ ಮೇಲೆ ನಮ್ಮ ನಾಯಕ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿ ಇ.ಡಿ ತನಿಖಾ ಸಂಸ್ಥೆ ಮೂಲಕ ತನಿಖೆ ಮಾಡಿಸುತ್ತಿದ್ದಾರೆ ಎಂದು ಹೇಳಿದರು.

ಜಾಲಹಳ್ಳಿ ಅಂಡರ್‌ ಪಾಸ್ ಕಾಮಗಾರಿ; ವಿಪಕ್ಷ ನಾಯಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸುತ್ತೇವೆ ಎಂದ ಡಿ.ಕೆ. ಶಿವಕುಮಾರ್

ಈ ಪ್ರಕರಣದಲ್ಲಿ ಇ.ಡಿ ಸಂಸ್ಥೆ ನನಗೆ, ನನ್ನ ಸಹೋದರನಿಗೆ, ದಿವಂಗತ ಶಾಮನೂರು ಶಿವಶಂಕರಪ್ಪ ಹಾಗೂ ಅವರ ಕುಟುಂಬದವರಿಗೆ ನೋಟೀಸ್ ನೀಡಿತ್ತು. ಈ ಸಂಸ್ಥೆಗೆ ನಮ್ಮ ಅನೇಕ ಕಾರ್ಯಕರ್ತರು ದೇಣಿಗೆ ನೀಡಿದ್ದಾರೆ. ಆಸ್ಕರ್ ಫರ್ನಾಂಡೀಸ್ ಅವರು ಈ ಸಂಸ್ಥೆಯ ಮಂಡಳಿಯ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ನಮ್ಮ ಜತೆಯಲ್ಲಿ ಸಿಎಂ ಇದ್ದಾರೆ. ನನ್ನ ನೀರಾವರಿ ಇಲಾಖೆಯ ಅನೇಕ ನಿಗಮಗಳಿಗೆ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿದ್ದಾರೆ. ನಮ್ಮ ಅನೇಕ ಶಾಸಕರು, ಕಾರ್ಯಕರ್ತರು ವಿವಿಧ ನಿಗಮ ಮಂಡಳಿ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಇವರುಗಳು ಅಧ್ಯಕ್ಷರಾಗಿರುವ ಕಾರಣ ಅವರ ಹೆಸರಿಗೆ ಒಂದೆರಡು ಷೇರುಗಳನ್ನು ನೀಡಲಾಗುತ್ತದೆ. ನಮ್ಮ ಅಧಿಕಾರ ಹೋದ ಬಳಿಕ ಈ ಅಧಿಕಾರ ವರ್ಗಾವಣೆಯಾಗುತ್ತದೆ ಎಂದು ವಿವರಿಸಿದರು.

ಇದೇ ರೀತಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಸಮಯದಲ್ಲಿ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರು ಈ ಸಂಸ್ಥೆಯ ಜವಾಬ್ದಾರಿ ಹೊಂದಿದ್ದರು. ಈ ಸಂಸ್ಥೆಯ ಅಡಿಯಲ್ಲಿ ಅನೇಕ ಆಸ್ತಿಗಳಿವೆ. ಕಾಂಗ್ರೆಸ್ ಭವನ ಟ್ರಸ್ಟ್ ಎಂದು ಬೆಂಗಳೂರಿನಲ್ಲಿ ಇದೆ. ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರು ಟ್ರಸ್ಟಿಯಾಗಿದ್ದರು. ಕೆಪಿಸಿಸಿ ಅಧ್ಯಕ್ಷನಾಗಿರುವ ನಾನು ಈಗ ಆ ಟ್ರಸ್ಟ್‌ಗೆ ಅಧ್ಯಕ್ಷನಾಗಿದ್ದೇನೆ. ಸಿಎಲ್‌ಪಿ ನಾಯಕರಾಗಿ ಸಿಎಂ ಅವರು ಟ್ರಸ್ಟಿಯಾಗಿದ್ದಾರೆ. ಹೀಗಾಗಿ ಈ ಕಾಂಗ್ರೆಸ್ ಭವನ ಟ್ರಸ್ಟ್ ಆಸ್ತಿ ನಮ್ಮ ಆಸ್ತಿಯಾಗುತ್ತದೆಯೇ? ನೂರಾರು ಕಾಂಗ್ರೆಸ್ ಕಟ್ಟಡಗಳು ಈ ಟ್ರಸ್ಟ್ ಅಡಿಯಲ್ಲಿವೆ. ನಾನು ಕೆಪಿಸಿಸಿ ಅಧ್ಯಕ್ಷನಾಗಿರುವವರೆಗೂ ನಾನು ಅದರ ಅಧ್ಯಕ್ಷನಾಗಿರುತ್ತೇನೆ, ನಾನು ಹೋದ ಬಳಿಕ ಯಾರು ಬರುತ್ತಾರೋ, ಅವರು ಇದರ ಜವಾಬ್ದಾರಿ ಹೊರುತ್ತಾರೆ ಎಂದರು.

ನ್ಯಾಷನಲ್ ಹೆರಾಲ್ಡ್ ಸಂಸ್ಥೆ 2 ಸಾವಿರ ಕೋಟಿ ಮೌಲ್ಯದ ಆಸ್ತಿ ಹೊಂದಿದ್ದು, ಅದನ್ನು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ನನಗೆ ಹಾಗೂ ನನ್ನ ತಮ್ಮನಿಗೆ ದೆಹಲಿ ಪೊಲೀಸರಿಂದ ನೋಟೀಸ್ ಬಂದಿತ್ತು. ನಾವು ಅವರ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ನಮಗೆ ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದು, ತಕ್ಷಣಕ್ಕೆ ವಿಚಾರಣೆಗೆ ಹಾಜರಾಗಲು ಆಗುವುದಿಲ್ಲ, ನಮಗೆ ಸಮಯಾವಕಾಶ ಬೇಕು. ನೀವು ಎಫ್ಐಆರ್ ದಾಖಲಿಸಿದ್ದು, ಅದರ ಪ್ರತಿಯನ್ನು ನೀಡಿ ಎಂದು ಅವರಿಗೆ ಕೇಳಿದ್ದೆ. ನಾನು ಯಾವ ದಾಖಲೆ ಆಧಾರದ ಮೇಲೆ ಅವರಿಗೆ ಉತ್ತರ ನೀಡಲಿ? ಎಂದು ಪ್ರಶ್ನಿಸಿದರು.

ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಕ್ಕಿದೆ

ನಾನು ಸಂಪಾದನೆ ಮಾಡಿರುವ ಹಣವನ್ನು ನಾನು ಯಾರಿಗೆ ಬೇಕಾದರೂ ನೀಡಬಹುದು. ಕಾಂಗ್ರೆಸ್ ಪಕ್ಷಕ್ಕೆ ನೀಡುತ್ತೇನೆ. ನಮ್ಮ ಶಾಸಕರು ತಮ್ಮ ವೇತನದಲ್ಲಿ 25 ಸಾವಿರ ಹಣವನ್ನು ಕಾಂಗ್ರೆಸ್ ಕಚೇರಿ ನಿರ್ಮಾಣದ ನಿಧಿಗೆ ದೇಣಿಗೆ ನೀಡಿದ್ದಾರೆ. ಇವರು ದೇಣಿಗೆ ನೀಡಿದರು ಎಂಬ ಕಾರಣಕ್ಕೆ ನಾಳೆ ಇವರಿಗೆ ನೋಟೀಸ್ ನೀಡಲು ಆಗುತ್ತದೆಯೇ? ಇದೇ ರೀತಿ ನಾನು ನ್ಯಾಷನಲ್ ಹೆರಾಲ್ಡ್ ಸಂಸ್ಧೆಗೆ ದೇಣಿಗೆ ನೀಡಿದ್ದೆ. ಈಗ ಅವರು ಲೆಕ್ಕ ಕೇಳುತ್ತಿದ್ದಾರೆ. ಇ.ಡಿ ಸಂಸ್ಥೆ ನನ್ನ ವಿರುದ್ಧ ಪಿಎಂಎಲ್ಎ ಪ್ರಕರಣ ದಾಖಲಿಸಿತ್ತು. ನಂತರ ಸುಪ್ರೀಂ ಕೋರ್ಟ್ ಶಿವಕುಮಾರ್ ಮೇಲೆ ದಾಖಲಿಸಿರುವ ಈ ಪ್ರಕರಣ ಸರಿಯಿಲ್ಲ ಎಂದು ವಜಾ ಮಾಡಿದರು. ಅ ರೀತಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಮೇಲೆ ಸುಳ್ಳು ಕೇಸ್‌ ದಾಖಲಿಸಿದ್ದಾರೆ. ಈ ಪ್ರಕರಣ ಸರಿಯಿಲ್ಲ ಎಂದು ನ್ಯಾಯಾಲಯ ತಿಳಿಸಿದೆ ಎಂದರು.

ರಾಹುಲ್ ಗಾಂಧಿ ಅವರು ಕೋಲಾರದಲ್ಲಿ ಭಾಷಣ ಮಾಡಿದ್ದಕ್ಕೆ ಅವರ ಸಂಸತ್ ಸದಸ್ಯ ಸ್ಥಾನದಿಂದ ಅವರನ್ನು ವಜಾ ಮಾಡಿದರಲ್ಲಾ ಈ ದೇಶದ ಸಂವಿಧಾನ, ನ್ಯಾಯಾಂಗ ವ್ಯವಸ್ಥೆಯನ್ನು ಈ ರೀತಿ ದುರುಪಯೋಗ ಮಾಡಿದ್ದು ಎಲ್ಲಾದರೂ ಉಂಟೆ? ನಂತರ ಆ ಪ್ರಕರಣಕ್ಕೆ ತಡೆಯಾಜ್ಞೆ ತಂದು ಮತ್ತೆ ಸಂಸತ್ ಸದಸ್ಯರಾಗಿ ಆಯ್ಕೆಯಾಗಿ ಲೋಕಸಭೆ ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ಹಾಗೂ ಕಾರ್ಯಕರ್ತರು ಗಾಂಧೀಜಿ ಅವರು ಕೊಟ್ಟ ಆದರ್ಶ, ಮಾರ್ಗದರ್ಶನ ಪಾಲನೆ ಮಾಡಿಕೊಂಡು ಬರುತ್ತಿದ್ದೇವೆ. ಕಾಂಗ್ರೆಸ ಪಕ್ಷ ಈ ದೇಶಕ್ಕೆ ರಾಷ್ಟ್ರಗೀತೆ, ರಾಷ್ಟ್ರಧ್ವಜ ನೀಡಿದೆ ಎಂದು ಹೇಳಿದರು.

ರಾಜಕೀಯ ಪ್ರೇರಿತ ಪ್ರಕರಣಗಳನ್ನು ಪರಿಗಣಿಸದೇ ನ್ಯಾಯಾಲಯದಿಂದ ಬಿಜೆಪಿ, ಇಡಿಗೆ ದೊಡ್ಡ ಸಂದೇಶ

ನ್ಯಾಷನಲ್ ಹೆರಾಲ್ಡ್ ಪ್ರಕರಣದ ಬಗ್ಗೆ ನ್ಯಾಯಾಲಯದ ತೀರ್ಪಿನ ಬಗ್ಗೆ ಕೇಳಿದಾಗ, ʼರಾಜಕೀಯ ಪ್ರೇರಿತ ಪ್ರಕರಣಗಳನ್ನು ನ್ಯಾಯಾಲಯ ಪರಿಗಣಿಸದೇ ಇರುವುದು ಬಿಜೆಪಿ ಮತ್ತು ಇ.ಡಿಗೆ ನೀಡಿರುವ ದೊಡ್ಡ ಸಂದೇಶ. ನ್ಯಾಯಾಲಯದ ತೀರ್ಪಿನಿಂದ ನನಗೆ ಸಂತೋಷವಾಗಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇ.ಡಿಯ ಚಾರ್ಜ್‌ಶೀಟ್ ಅನ್ನು ಪರಿಗಣನೆಗೆ ತೆಗೆದುಕೊಳ್ಳಲು ನ್ಯಾಯಾಲಯ ನಿರಾಕರಿಸಿದೆ. ಇದು ನನಗೆ ಸಂತೋಷ ಉಂಟುಮಾಡಿದೆ. ಇ.ಡಿ ತನ್ನ ಅಧಿಕಾರ ದುರ್ಬಳಕೆ ಮಾಡಿಕೊಂಡು ತನ್ನ ವರ್ಚಸ್ಸನ್ನು ಕಳೆದುಕೊಂಡಿದೆ. ಇ.ಡಿ ವಿವಿಧ ಪಕ್ಷಗಳ ನಾಯಕರ ಮೇಲೆ ಅನೇಕ ಪ್ರಕರಣಗಳನ್ನು ದಾಖಲಿಸಿದೆ. ಅವರು ಆಡಳಿತರೂಡ ಬಿಜೆಪಿ ವಿರುದ್ಧ ಏಕೆ ಪ್ರಕರಣ‌ ದಾಖಲಿಸಿಲ್ಲ? ಅಂತಿಮವಾಗಿ ನ್ಯಾಯ ಗೆದ್ದಿದೆ. ಸತ್ಯವನ್ನು ಎತ್ತಿ ಹಿಡಿದಿದ್ದಕ್ಕೆ ನ್ಯಾಯಸ್ಥಾನದಲ್ಲಿ ಕುಳಿತಿರುವವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಉತ್ತರಿಸಿದರು.

ನೀವು ಗಾಂಧಿ ಕುಟುಂಬದ ಬೆನ್ನಿಗೆ ನಿಂತಿರುವ ಕಾರಣ ನಿಮ್ಮನ್ನು ಗುರಿಯಾಗಿಸಲಾಗುತ್ತಿದೆಯೇ ಎಂದು ಕೇಳಿದಾಗ, ʼಅವರು ದ್ವೇಷದ ರಾಜಕಾರಣ ಮಾಡುತ್ತಿದ್ದು, ನಮ್ಮನ್ನು ಬೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮನ್ನು ಜೈಲಿಗೆ ಹಾಕಲು ನೋಡುತ್ತಿದ್ದಾರೆ. ನಾವು ಜೈಲು ನೋಡಿದ್ದೇವೆ. ಗಾಂಧಿ ಕುಟುಂಬ ಎಲ್ಲವನ್ನು ಅನುಭವಿಸಿದೆ. ಇಡೀ ದೇಶ ನಮ್ಮ ಪರ ನಿಲ್ಲಲಿದೆ. ಬಿಜೆಪಿ ಅದರಿಂದ ಪಾಠ ಕಲಿತು, ದ್ವೇಷ ರಾಜಕಾರಣ ನಿಲ್ಲಿಸಲಿ. ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ನಿಲ್ಲಿಸಲಿ. ಪ್ರಜಾಪ್ರಭುತ್ವದಲ್ಲಿ ಯಾವುದೂ ಶಾಶ್ವತವಲ್ಲʼ ಎಂದು ತಿಳಿಸಿದರು.

ಮಹಾತ್ಮಾ ಗಾಂಧಿ ಅವರ ಹೆಸರು ತೆಗೆಯಲು ಸಾಧ್ಯವಿಲ್ಲ

ನರೇಗಾ ಯೋಜನೆಯಲ್ಲಿ ಗಾಂಧಿ ಅವರ ಹೆಸರು ತೆಗೆದಿರುವ ಬಗ್ಗೆ ಕೇಳಿದಾಗ, ʼಮಹಾತ್ಮ ಗಾಂಧಿ ಅವರ ಹೆಸರು ತೆಗೆಯಲು ಸಾಧ್ಯವಿಲ್ಲ. ಅವರಿಗೆ ಧೈರ್ಯವಿದ್ದರೆ ನೋಟಿನಲ್ಲಿರುವ ಗಾಂಧಿ ಭಾವಚಿತ್ರ ತೆಗೆದುಹಾಕಲಿ. ಇವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ದೇಶದ ಸ್ವಾತಂತ್ರ್ಯದ ಹೋರಾಟವನ್ನು ಮುನ್ನಡೆಸಿದರು. ಮಹಾತ್ಮ ಗಾಂಧಿ ಅವರ ಹೆಸರನ್ನು ಅಳಿಸಿಹಾಕಲು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ. ಅದು ಸಾಧ್ಯವಿಲ್ಲ. ಇದು ದೇಶದ ಅತಿ ಹೆಚ್ಚು ಖ್ಯಾತಿ ಪಡೆದಿರುವ ಯೋಜನೆ. ಇದರಿಂದ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ, ಅಭಿವೃದ್ಧಿ, ಆರ್ಥಿಕ ಶಕ್ತಿ ಸಿಗುತ್ತಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದ ವಿರುದ್ಧ ನಾವು ಬೀದಿಗಿಳಿದು ಹೋರಾಟ ಮಾಡುತ್ತೇವೆ. ಬಿಜೆಪಿಯ ಕೊನೆ ದಿನಗಳು ಆರಂಭವಾಗಿದೆ. ಈ ದೇಶದಲ್ಲಿ ಸಂವಿಧಾನ, ರಾಷ್ಟ್ರಗೀತೆ, ರಾಷ್ಟ್ರಧ್ವಜ, ಪ್ರಜಾಪ್ರಭುತ್ವ ತೆಗೆದು ಹಾಕಲು ಸಾಧ್ಯವಿಲ್ಲʼ ಎಂದು ತಿಳಿಸಿದರು.

ತಪ್ಪು ಮಾಹಿತಿ ನೀಡಿದ್ದರೆ ಹಕ್ಕುಚ್ಯುತಿ ಮಂಡಿಸಲಿ

ಗೃಹಲಕ್ಷ್ಮಿ ಹಣದ ಬಗ್ಗೆ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ವಿರೋಧ ಪಕ್ಷಗಳು ಪ್ರತಿಭಟನೆ ಮಾಡುವ ಬಗ್ಗೆ ಕೇಳಿದಾಗ, ʼತಪ್ಪು ಮಾಹಿತಿ ನೀಡಿದ್ದರೆ ಹಕ್ಕುಚ್ಯುತಿ ಮಂಡಿಸಲಿ. ಅವರಿಗೆ ಮಾನ ಮರ್ಯಾದೆ ಇದ್ದರೆ ನರೇಗಾ ಅನುದಾನ ಬಾರದಿರುವ ಬಗ್ಗೆ ಧ್ವನಿ ಎತ್ತಲಿ. ನರೇಗಾ ಮಾತ್ರವಲ್ಲ, ನೀರಾವರಿ ಯೋಜನೆಗಳ ಅನುದಾನ, ಜಲ್ ಜಿವನ್ ಮಿಷನ್ ಅನುದಾನ ಬಂದಿಲ್ಲ. ಅವರು ಮೊದಲು ಮಾತನಾಡಲಿ. ಜಿಎಸ್‌ಟಿಯಿಂದ 15 ಕೋಟಿ ನಷ್ಟವಾಗಿದೆ. ಇದನ್ನು ನೀಡುವವರು ಯಾರು? ಗ್ಯಾರಂಟಿ ಯೋಜನೆಗಳನ್ನು ನಾವು ಘೋಷಣೆ ಮಾಡಿದ್ದು, ನಾವು ಅದನ್ನು ನೀಡುತ್ತೇವೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮಿ ಹಣವನ್ನು ತೆಗದುಕೊಂಡು ಹೋಗಿದ್ದಾರಾ? ಫಲಾನುಭವಿಗಳಲ್ಲಿ ಯಾರೊಬ್ಬರು ಒಂದು ರೂಪಾಯಿ ಹಣ ಲಂಚ ನೀಡದೇ, ನೇರವಾಗಿ ತಮ್ಮ ಹಣ ಪಡೆಯುತ್ತಿದ್ದಾರೆ. ಸರ್ಕಾರಕ್ಕೆ ಹಣ ಬಂದಂತೆ ಹಂತಹಂತವಾಗಿ ಫಲಾನುಭವಿಗಳಿಗೆ ನೀಡುತ್ತಿದ್ದೇವೆ. ಸ್ವಲ್ಪ ತಡವಾಗಬಹುದು, ಆದರೆ ಬರುತ್ತದೆ. ಬಿಜೆಪಿಯವರು ಗ್ಯಾರಂಟಿ ಯೋಜನೆಗಳನ್ನು ವಿರೋಧ ಮಾಡಿದವರು. ಐದು ಬೆರಳು ಸೇರಿ ಕೈ ಮುಷ್ಟಿಯಾಯ್ತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಬಿಜೆಪಿಯವರು ಕೇಂದ್ರ ಸರ್ಕಾರದಿಂದ ಬರಬೇಕಾಗಿರುವ ಅನುದಾನ ಬಿಡುಗಡೆ ಮಾಡಿಸಲಿ” ಎಂದರು.

ದೆಹಲಿ ಪೊಲೀಸ್ ನೋಟೀಸ್‌ಗೆ ಉತ್ತರಿಸಲು ಕಾಲಾವಕಾಶ ಕೇಳುವೆ: ಡಿ.ಕೆ. ಶಿವಕುಮಾರ್

ಸಚಿವೆ ಕಾಣೆಯಾಗಿದ್ದಾರೆ ಎಂದು ಬಿಜೆಪಿ ಟ್ರೋಲ್ ಮಾಡುತ್ತಿದೆ ಎಂದು ಕೇಳಿದಾಗ, ʼಅವರು ಇದೇ ಕ್ಷೇತ್ರದಲ್ಲಿರುವವರು. ಅವರು ಹೇಗೆ ಕಾಣೆಯಾಗುತ್ತಾರೆʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.