ರಾಜ್ಯದ ಸಾಂಸ್ಕೃತಿಕ ಅಂಗವಾದ ಹವ್ಯಕ ಭಾಷೆ ಬೆಳವಣಿಗೆಗೆ ‘ಹವ್ಯಕ ಭಾಷಾ ಅಕಾಡೆಮಿ’ ಸ್ಥಾಪನೆ ಘೋಷಣೆ ಈ ಬಾರಿಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಹೊರಹೊಮ್ಮಿರುವುದು ವಿಶೇಷ. ಹವಿಗನ್ನಡ, ಹವ್ಯಕ ಕನ್ನಡ, ಹೈವಗನ್ನಡ, ಹೈಗಭಾಷೆ ಎಂಬ ಹೆಸರುಗಳಿಂದ ಗುರುತಿಸಲ್ಪಡುವ ಹವ್ಯಕ ಭಾಷೆ, ಕನ್ನಡದ ಸಾಮಾಜಿಕ ಉಪಭಾಷೆ ಯಾಗಿದೆ.
ಭಾಷಾ ವೈವಿಧ್ಯ- ಭಾಷಾ ಶ್ರೀಮಂತಿಕೆ ಕಾರಣದಿಂದಾಗಿ ಭಾಷೆಗಳ ಲೋಕದಲ್ಲಿ ತನ್ನದೇ ವಿಶಿಷ್ಟ ಸ್ಥಾನ ಹೊಂದಿದೆ. ಇಂದಿನ ಶಿಷ್ಟ ಕನ್ನಡದಿಂದ ಭಿನ್ನವಾಗಿ ಹಳಗನ್ನಡದ ಭಾಷಾ ರೂಪಗಳನ್ನು ಇಂದಿಗೂ ಉಳಿಸಿಕೊಂಡು ಬಂದಿರುವುದು ಇದರ ವಿಶೇಷ.
ಪ್ರಾಂತ್ಯವಾರು ಭಾಷಾ ವೈವಿಧ್ಯವು ಹವಿಗನ್ನಡದ ಶ್ರೀಮಂತಿಕೆಯ ಪ್ರತೀಕ. ಇದು ಕನ್ನಡದ ಇತರ ಉಪಭಾಷೆಗಳ ನಡುವೆ ಕಳೆದುಹೋಗಿರುವ ಹಳೆಗನ್ನಡದ ಅನೇಕ ವೈಶಿಷ್ಟ್ಯಗಳನ್ನು ಇಂದಿಗೂ ಉಳಿಸಿಕೊಂಡಿದೆ. ಇಂದು ಕನ್ನಡದಲ್ಲಿ 6 ಲಕ್ಷಕ್ಕೂ ಅಧಿಕ ಜನ ಹವ್ಯಕ ಕನ್ನಡ ಭಾಷೆ ಮಾತಾಡುತ್ತಾರೆ.
ಇದನ್ನೂ ಓದಿ: Karnataka Budget 2026: ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆ: ಸಿಎಂ ಘೋಷಣೆ; ಹವ್ಯಕ ಮಹಾಸಭಾ, ವಿಶ್ವೇಶ್ವರ ಭಟ್ ಸ್ವಾಗತ
ಕನ್ನಡ ಭಾಷೆಯ ಇತಿಹಾಸವನ್ನು ಅರ್ಥ ಮಾಡಿಕೊಳ್ಳಲು ಹವಿಗನ್ನಡದ ಅಧ್ಯಯನ ಬಹಳ ಮುಖ್ಯ. ಈವರೆಗೆ ಲಭ್ಯವಿರುವ ಅತ್ಯಂತ ಹಳೆಯ ಕನ್ನಡ ಸಾಹಿತ್ಯ ಮತ್ತು ಶಾಸನ ಗಳಲ್ಲಿಯೂ ಕಂಡುಬರುವ ಕೆಲವು ಆದಿ-ದ್ರಾವಿಡ ಲಕ್ಷಣಗಳನ್ನು ಹವಿಗನ್ನಡವು ಇಂದಿಗೂ ಉಳಿಸಿಕೊಂಡಿದೆ.
ಆದ್ದರಿಂದ ಹವಿ ಗನ್ನಡದ ಆಮೂಲಾಗ್ರ ಅಧ್ಯಯನ ಹಾಗೂ ಸಂರಕ್ಷಣೆಗಾಗಿ ಅಕಾಡೆಮಿ ಯೊಂದರ ಸ್ಥಾಪನೆ ಅತ್ಯಗತ್ಯವಾಗಿತ್ತು. ಇದನ್ನು ಮನಗಂಡು ‘ಹವ್ಯಕ ಭಾಷಾ ಅಕಾಡೆಮಿ’ ಸ್ಥಾಪನೆಯನ್ನು ಸಿಎಂ ಸಿದ್ದರಾಮಯ್ಯ ಘೋಷಿಷಿದ್ದಾರೆ.
ಅಂಕಿ ಸಂಖ್ಯೆ
5 ಕೋಟಿ ರು.: ವಾರ್ಷಿಕ ರಂಗಭೂಮಿ, ಲಲಿತಕಲೆ, ಚಿತ್ರಕಲೆ, ಶಿಲ್ಪಕಲೆ ಕಲಾ ಪ್ರಕಾರ ಕಾರ್ಯಕ್ರಮ ಆಯೋಜನೆಗೆ ಮೀಸಲು.
2 ಕೋಟಿ ರು.: ಕರ್ನಾಟಕ ಏಕೀಕರಣಕ್ಕೆ ಕಾರಣವಾದ ಧಾರವಾಡ ವಿದ್ಯಾವರ್ಧಕ ಸಂಘ ಚಟುವಟಿಕೆಗೆ ಅನುದಾನ.
2 ಕೋಟಿ ರು.: ತಿಗಳರ ಸಮಾಜ ಆಚರಿಸುವ ಕರಗ ಉತ್ಸವಕ್ಕೆ ಪ್ರಸಕ್ತ ಸಾಲಿನಲ್ಲಿ ಅನುದಾನ.
*
ಭಾಷಾ ಸಂರಕ್ಷಣೆಯ ಕುರಿತಾದ ಸರಕಾರದ ನಡೆಗೆ ಮಠದ ಸ್ವಾಗತ
ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆಗೆ ಶ್ರೀರಾಮಚಂದ್ರಾಪುರ ಮಠದ ಅಭಿನಂದನೆ
ಭಾಷೆಗೂ ಸಂಸ್ಕೃತಿಗೂ ಅನ್ಯೋನ್ಯ ಸಂಬಂಧವಿದ್ದು, ಭಾಷೆಯನ್ನು ಉಳಿಸಿ ಬೆಳೆಸುವ ಮೂಲಕ ಸಂಸ್ಕೃತಿಯನ್ನು ಉಳಿಸಿಕೊಳ್ಳಬಹುದಾಗಿದೆ. ಪ್ರಾಂತ್ಯವಾರು ವೈವಿಧ್ಯದ ಜತೆಗೆ ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡಿರುವ ಹವಿಗನ್ನಡದ ಸಂವರ್ಧನೆಗಾಗಿ ರಾಜ್ಯ ಸರಕಾರವು ಹವ್ಯಕ ಭಾಷಾ ಅಕಾಡೆಮಿಯನ್ನು ಸ್ಥಾಪಿಸಲು ನಿರ್ಧರಿಸಿರುವ ನಿರ್ಣಯ ವನ್ನು ಶ್ರೀರಾಮಚಂದ್ರಾಪುರ ಮಠವು ಸ್ವಾಗತಿಸುತ್ತದೆ ಹಾಗೂ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನ ವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತದೆ.
ಮಾತೃಭಾಷೆಯ ಉಳಿವು ಹಾಗೂ ಜಾಗೃತಿಗಾಗಿ ಕಳೆದ ವರ್ಷದ ತಮ್ಮ ಚಾತುರ್ಮಾಸ್ಯ ವನ್ನು ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳು ‘ಸ್ವಭಾಷಾ ಚಾತುರ್ಮಾಸ್ಯ’ ವಾಗಿ ಆಚರಿಸಿ, ಭಾಷೆಯ ಕುರಿತಾಗಿ ನಾಡಿನಾ ದ್ಯಂತ ಜಾಗೃತಿ ಮೂಡಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದ್ದು, ಕನ್ನಡದ ಉಪಭಾಷೆ ಹವಿಗನ್ನಡದ ಸಂರಕ್ಷಣೆಗೆ ಇದೀಗ ಸರಕಾರವೇ ಮುಂದಾಗಿರುವುದು ಅಭಿನಂದನೀಯ ವಾಗಿದೆ.
ಸರಕಾರದ ಈ ನಿರ್ಧಾರವು ಹವ್ಯಕ ಭಾಷೆಯ ಉಳಿವು, ಬೆಳವಣಿಗೆ ಹಾಗೂ ಅದರ ಅಧ್ಯಯನ ಮತ್ತು ಸಂಶೋಧನೆಗೆ ಹೊಸ ಉತ್ತೇಜನ ನೀಡಲಿದೆ ಹಾಗೂ ಅಕಾಡೆಮಿಯ ಮೂಲಕ ಭಾಷೆಯ ಪ್ರಚಾರ ಹಾಗೂ ಯುವಪೀಳಿಗೆಗೆ ಅದರ ಮಹತ್ವ ಪರಿಚಯಿಸುವ ಕಾರ್ಯಗಳು ಇನ್ನಷ್ಟು ವೇಗ ಪಡೆಯಲಿವೆ ಎಂದು ಶ್ರೀ ರಾಮಚಂದ್ರಾಪುರ ಮಠವು ಆಶಿಸುತ್ತದೆ ಹಾಗೂ ಭಾಷಾ ಉಳಿವಿನ ಈ ಕಾರ್ಯಕ್ಕೆ ಮುನ್ನುಡಿ ಬರೆದ ಶ್ರೀ ಅಖಿಲ ಹವ್ಯಕ ಮಹಾಸಭೆ ಮತ್ತು ಕೈಜೋಡಿಸಿದ ಎಲ್ಲರಿಗೂ ಶ್ರೀಮಠವು ಶುಭ ಹಾರೈಸುತ್ತದೆ