ಬೆಂಗಳೂರು: ಸಿಎಂ ಡಿ.ಕೆ. ಶಿವಕುಮಾರ್ (CM DK Shivakumar) ಅವರ ನೂತನ ಅಧಿಕೃತ ನಿವಾಸವಾಗಿ ಸಿದ್ಧಗೊಂಡಿರುವ ಶತಮಾನದಷ್ಟು ಹಳೆಯದಾದ ಐತಿಹಾಸಿಕ ಕುಮಾರಕೃಪಾ ಅತಿಥಿ (Kumara Krupa Guest House) ಗೃಹದ ಕಟ್ಟಡಕ್ಕೆ ಅಧಿಕೃತವಾಗಿ ‘ಗಂಗಾ’ ಎಂದು ಮರುನಾಮಕರಣ ಮಾಡಲಾಗಿದೆ. ಮೈಸೂರು ಸಂಸ್ಥಾನದ ದಿವಾನರ ನಿವಾಸವಾಗಿ ಆರಂಭವಾಗಿ, ಮಹಾತ್ಮ ಗಾಂಧೀಜಿ ಸೇರಿದಂತೆ ದೇಶ-ವಿದೇಶಗಳ ದಿಗ್ಗಜರಿಗೆ ಆತಿಥ್ಯ ನೀಡಿದ್ದ ಈ ಬಂಗಲೆಯ ನಿರ್ಮಾಣ ಮತ್ತು ಐತಿಹಾಸಿಕ ಹಿನ್ನೆಲೆಯ ಸಂಪೂರ್ಣ ವರದಿ ಇಲ್ಲಿದೆ.
1880 ರಿಂದ 1897ರ ಅವಧಿಯಲ್ಲಿ ಮೈಸೂರು ಸಂಸ್ಥಾನದ ದೀರ್ಘಕಾಲದ ದಿವಾನರಾಗಿದ್ದ ಸರ್ ಕೆ. ಶೇಷಾದ್ರಿ ಅಯ್ಯರ್ ಅವರ ವಾಸಕ್ಕಾಗಿ ಈ ಭವ್ಯ ಬಂಗಲೆಯನ್ನು ನಿರ್ಮಿಸಲಾಯಿತು. ರಾಜಮನೆತನದ ಆಸ್ತಿಗಳ ನಿಯಂತ್ರಕರಾಗಿದ್ದ ಈರೋಡ್ ಸುಬ್ಬಾರಾವ್ ಅವರು ಈ ಕಟ್ಟಡದ ನಿರ್ಮಾಣದ ಉಸ್ತುವಾರಿ ವಹಿಸಿದ್ದರು. ಆರಂಭದಲ್ಲಿ ಈ ಬಂಗಲೆಯ ಸುತ್ತಮುತ್ತ 100 ಎಕರೆಗೂ ಅಧಿಕ ವಿಶಾಲವಾದ ಜಾಗವಿದ್ದು, ಹೂವಿನ ತೋಟ, ದ್ರಾಕ್ಷಿ ತೋಟವಿತ್ತು ಎಂದು ಹೇಳಲಾಗುತ್ತದೆ. 1901ರಲ್ಲಿ ಶೇಷಾದ್ರಿ ಅಯ್ಯರ್ ಅವರ ನಿಧನದ ನಂತರ ಈ ಆಸ್ತಿ ಅವರ ಪುತ್ರರ ಪಾಲಾಯಿತು.
1915 ರಿಂದ 1918ರ ನಡುವೆ ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಶೇಷಾದ್ರಿ ಅಯ್ಯರ್ ಅವರ ವಂಶಸ್ಥರಿಂದ ಈ ಆಸ್ತಿಯನ್ನು ಖರೀದಿಸಿ ಸರ್ಕಾರದ ಸುಪರ್ದಿಗೆ ಪಡೆದುಕೊಂಡರು. ಸ್ವಾತಂತ್ರ್ಯದ ನಂತರ ಕರ್ನಾಟಕ ಸರ್ಕಾರವು ಇದನ್ನು ರಾಜ್ಯದ ಅತಿಗಣ್ಯರ (VVIP) ಅಧಿಕೃತ ಅತಿಥಿ ಗೃಹವನ್ನಾಗಿ ಪರಿವರ್ತಿಸಿತು. ಅಂದಿನ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್ ಕೆ. ಶೇಷಾದ್ರಿ ಅಯ್ಯರ್ ಅವರ ಹುಟ್ಟೂರು ಕೇರಳದ ಪಾಲಕ್ಕಾಡ್ ಜಿಲ್ಲೆಯ ಕುಮಾರಪುರಂ ಎಂಬ ಗ್ರಾಮದವರು. ತಮ್ಮ ಮನೆದೇವರಾದ ಕುಮಾರಸ್ವಾಮಿ ಹಾಗೂ ತಮ್ಮ ಹುಟ್ಟೂರಿನ ಸ್ಮರಣಾರ್ಥವಾಗಿ ಈ ಬಂಗಲೆಗೆ 'ಕುಮಾರ ಕೃಪಾ' (ಕುಮಾರಸ್ವಾಮಿಯ ಅನುಗ್ರಹ) ಎಂದು ಹೆಸರಿಟ್ಟರು. ಈ ಕಟ್ಟಡದ ಹೆಸರಿನಿಂದಲೇ ಈ ರಸ್ತೆಗೆ 'ಕುಮಾರ ಕೃಪಾ ರಸ್ತೆ' ಹಾಗೂ ಸುತ್ತಮುತ್ತಲಿನ ಬಡಾವಣೆಗೆ 'ಕುಮಾರ ಪಾರ್ಕ್' ಎಂಬ ಹೆಸರು ಬಂದಿತು.
ಗಾಂಧೀಜಿ ವಾಸ್ತವ್ಯ!
1934ರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಈ ಅತಿಥಿ ಗೃಹದಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ತಂಗಿದ್ದರು. ಅಂದು ಕಟ್ಟಡದ ವಿಶಾಲ ಹುಲ್ಲುಹಾಸಿನಲ್ಲಿ ಗಾಂಧೀಜಿ ಪ್ರತಿದಿನ ಸಂಜೆ ಪ್ರಾರ್ಥನಾ ಸಭೆಗಳನ್ನು ನಡೆಸುತ್ತಿದ್ದರು. ಇದಲ್ಲದೆ ಸರ್ ಎಂ. ವಿಶ್ವೇಶ್ವರಯ್ಯ, ಮಾಜಿ ಪ್ರಧಾನಿ ಇಂದಿರಾ ಗಾಂಧಿ, ದಲೈ ಲಾಮಾ, ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಸೇರಿದಂತೆ ಹಲವು ಗಣ್ಯರು ಇಲ್ಲಿ ವಾಸ್ತವ್ಯ ಹೂಡಿದ್ದಾರೆ. 2013-2018ರ ಅವಧಿಯಲ್ಲಿ ಪಾರಂಪರಿಕ ಕಟ್ಟಡದ ಹಿಂಭಾಗದಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (KSTDC) ನಿರ್ವಹಣೆಯಲ್ಲಿ ಏಳು ಅಂತಸ್ತಿನ ನೂತನ ಅತಿಥಿ ಗೃಹವನ್ನು ನಿರ್ಮಿಸಿ ಸಾರ್ವಜನಿಕರಿಗೂ ವಾಸ್ತವ್ಯದ ಅವಕಾಶ ಕಲ್ಪಿಸಲಾಗಿದೆ.
ಕುಮಾರಕೃಪಾ ಅತಿಥಿ ಗೃಹ ಇನ್ಮುಂದೆ ‘ಗಂಗಾ’; ಸಿಎಂ ನೂತನ ನಿವಾಸದಲ್ಲಿ ಪೂಜೆ
ಇದೀಗ ನವೀಕರಣಗೊಂಡಿರುವ ಈ ಹಳೆಯ ಪಾರಂಪರಿಕ ಕಟ್ಟಡವನ್ನು ಮುಖ್ಯಮಂತ್ರಿಗಳ ಅಧಿಕೃತ ನಿವಾಸವನ್ನಾಗಿ ಬಳಸಲು ಸರ್ಕಾರ ತೀರ್ಮಾನಿಸಿದೆ. ಕಟ್ಟಡಕ್ಕೆ ‘ಗಂಗಾ’ ಎಂದು ಮರುನಾಮಕರಣ ಮಾಡಲಾಗಿದ್ದು, ಒಳಗಿನ ಕೊಠಡಿಗಳಿಗೆ ದೇಶದ ಪ್ರಮುಖ ನದಿಗಳ ಹೆಸರನ್ನು ಇಡಲಾಗಿದೆ.