ಕುಮಾರಕೃಪಾ ಅತಿಥಿ ಗೃಹ ಇನ್ಮುಂದೆ ‘ಗಂಗಾ’; ಸಿಎಂ ನೂತನ ನಿವಾಸದಲ್ಲಿ ಪೂಜೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೂತನ ಅಧಿಕೃತ ನಿವಾಸವಾಗಿ ಸಿದ್ಧಗೊಂಡಿರುವ ನಗರದ ಪ್ರತಿಷ್ಠಿತ ಕುಮಾರಕೃಪಾ ಅತಿಥಿ ಗೃಹದ ಹಳೆಯ ಕಟ್ಟಡಕ್ಕೆ ಅಧಿಕೃತವಾಗಿ ‘ಗಂಗಾ’ ಎಂದು ಮರುನಾಮಕರಣ ಮಾಡಲಾಗಿದೆ. ನವೀಕೃತಗೊಂಡಿರುವ ಈ ನಿವಾಸದ ಮುಂಭಾಗದಲ್ಲಿ ಈಗಾಗಲೇ ನೂತನ ನಾಮಫಲಕವನ್ನು ಅಳವಡಿಸಲಾಗಿದೆ.
ಸಂಗ್ರಹ ಚಿತ್ರ -
ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ( CM DK Shivakumar) ಅವರ ನೂತನ ಅಧಿಕೃತ ನಿವಾಸವಾಗಿ ಸಿದ್ಧಗೊಂಡಿರುವ ನಗರದ ಪ್ರತಿಷ್ಠಿತ ಕುಮಾರಕೃಪಾ ಅತಿಥಿ ಗೃಹದ (Kumar Krupa Guest House) ಹಳೆಯ ಕಟ್ಟಡಕ್ಕೆ ಅಧಿಕೃತವಾಗಿ ‘ಗಂಗಾ’ ಎಂದು ಮರುನಾಮಕರಣ ಮಾಡಲಾಗಿದೆ. ನವೀಕೃತಗೊಂಡಿರುವ ಈ ನಿವಾಸದ ಮುಂಭಾಗದಲ್ಲಿ ಈಗಾಗಲೇ ನೂತನ ನಾಮಫಲಕವನ್ನು ಅಳವಡಿಸಲಾಗಿದ್ದು, ಕಾರ್ತಿಕ ಮಾಸದ ಮೊದಲ ಸೋಮವಾರದ ಶುಭ ಮುಹೂರ್ತದಲ್ಲಿ (ನವೆಂಬರ್ 16) ಶಾಸ್ತ್ರೋಕ್ತವಾಗಿ ಗೃಹಪ್ರವೇಶ ನೆರವೇರುತ್ತಿದೆ.
ಗೃಹಪ್ರವೇಶಕ್ಕೆ ಪೂರ್ವಭಾವಿಯಾಗಿ ಭಾನುವಾರ ರಾತ್ರಿಯಿಂದಲೇ ನೊಣವಿನಕೆರೆ ಅಜ್ಜಯ್ಯನವರ ನೇತೃತ್ವದಲ್ಲಿ ನೂತನ ನಿವಾಸದಲ್ಲಿ ವಿಶೇಷ ಪೂಜೆ ಹಾಗೂ ಹೋಮ-ಹವನಗಳನ್ನು ನೆರವೇರಿಸಲಾಗಿದೆ. ಮುಖ್ಯಮಂತ್ರಿಗಳು ಹಾಗೂ ಅವರ ಕುಟುಂಬ ಸದಸ್ಯರು ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡಿದ್ದಾರೆ. ಕಾವೇರಿ ಮತ್ತು ಕೃಷ್ಣಾ ನಿವಾಸಗಳ ಸಾಲಿಗೆ ಇದೀಗ 'ಗಂಗಾ' ನಿವಾಸವೂ ಸೇರ್ಪಡೆಯಾಗಿದ್ದು, ಒಳಗಿನ ಕೊಠಡಿಗಳಿಗೂ ವಿವಿಧ ನದಿಗಳ ಹೆಸರನ್ನೇ ಇಡಲಾಗಿದೆ.
ಖಾಸಗಿ ಹಾಗೂ ಧಾರ್ಮಿಕ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನೂತನ ನಿವಾಸದ ಒಳಗೆ ಮಾಧ್ಯಮದವರಿಗೆ ಪ್ರವೇಶ ನಿರಾಕರಿಸಲಾಗಿದ್ದು, ಮುಖ್ಯ ದ್ವಾರದ ಬಳಿಯೇ ತಡೆಯಲಾಗಿದೆ. ಮುಂಜಾಗ್ರತಾ ಕ್ರಮವಾಗಿ 'ಗಂಗಾ' ನಿವಾಸದ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ. ಇಂದು ಸಾಂಕೇತಿಕವಾಗಿ ಗೃಹಪ್ರವೇಶ ನೆರವೇರಲಿದ್ದು, ನವೆಂಬರ್ ತಿಂಗಳ ಕೊನೆಯಲ್ಲಿ ಮುಖ್ಯಮಂತ್ರಿಗಳ ಕುಟುಂಬವು ಸದಾಶಿವನಗರದ ನಿವಾಸದಿಂದ ಇಲ್ಲಿಗೆ ಸಂಪೂರ್ಣವಾಗಿ ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ.
ಬೆಂಗಳೂರಿನ ಸುಮಾರು 160 ವರ್ಷಗಳಷ್ಟು ಹಳೆಯದಾದ ಐತಿಹಾಸಿಕ ‘ಕುಮಾರಕೃಪಾʼ 1856ರಲ್ಲಿ ನಿರ್ಮಾಣವಾಗಿತ್ತು. ಕಲ್ಲಿನ ಕಟ್ಟಡವು ಮೈಸೂರಿನ ದಿವಾನರಾಗಿದ್ದ ಸರ್ ಕೆ. ಶೇಷಾದ್ರಿ ಅಯ್ಯರ್ ಅವರ ಖಾಸಗಿ ನಿವಾಸವಾಗಿತ್ತು. ನಂತರ ಮೈಸೂರು ಮಹಾರಾಜರಾದ ಕೃಷ್ಣರಾಜ ಒಡೆಯರ್ ಅವರು ಇದನ್ನು ಸರ್ಕಾರದ ಆಸ್ತಿಯನ್ನಾಗಿ ಪರಿವರ್ತಿಸಿದರು.