ಬೆಂಗಳೂರು: ಬರುವ 2047 ರ ವೇಳೆಗೆ ವಿಕಸಿತ ಭಾರತ ಗುರಿ ಸಾಧನೆಗೆ 30 ಟ್ರಿಲಿಯನ್ ಆರ್ಥಿಕತೆ ಹೊಂದುವ ಮಹತ್ವಾಕಾಂಕ್ಷೆಯ ಗುರಿ ನಿಗದಿ ಮಾಡಿದ್ದು, ಈ ಸಾಧನೆಗೆ ವಿದ್ಯಾರ್ಥಿ ಸಮೂಹ ಮಹತ್ವದ ಕೊಡುಗೆ ನೀಡಬೇಕು ಎಂದು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಸದಸ್ಯ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಡಾ. ಕೆ. ವಿ ರಾಜು ಕರೆ ನೀಡಿದ್ದಾರೆ.
ಮೈಸೂರು ರಸ್ತೆಯ ಕೆಂಗೇರಿಯಲ್ಲಿರುವ ಐಸಿಎಫ್ಎಐ ಫೌಂಡೇಶನ್ ಫಾರ್ ಹೈಯರ್ ಎಜುಕೇಶನ್ ನ ಐಬಿಎಸ್ ಬ್ಯುಸಿನೆಸ್ ಸ್ಕೂಲ್ ನ 2ನೇ ಘಟಿಕೋತ್ಸವದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪದಕ ಪ್ರದಾನ ಮಾಡಿ ಘಟಿಕೋತ್ಸವ ಭಾಷಣ ಮಾಡಿದ ಅವರು, ವಿದ್ಯಾರ್ಥಿ ಸಮುದಾಯ ಬಹು ಆಯಾಮಗಳಲ್ಲಿ ಕಾರ್ಯನಿರ್ವಹಿಸಬೇಕು. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ ಮೂಲಕ ದೇಶದ ಜಿಡಿಪಿಗೆ ಗಣನೀಯ ಕೊಡುಗೆ ನೀಡಬೇಕು ಎಂದರು.
ಇದನ್ನೂ ಓದಿ:Bangalore News: ಮಾನಸಿಕ ಆರೋಗ್ಯ ಅಭಿಯಾನಗಳಿಗಾಗಿ ಎಚ್ಎಲ್ಎಲ್ ನಿಂದ ನಿಮ್ಹಾನ್ಸ್ ಜತೆ ಒಪ್ಪಂದ
ದೇಶದ ಪ್ರಸ್ತುತ ಜಿಡಿಪಿ 4.2 ಟ್ರಿಲಿಯನ್ ಡಾಲರ್ ನಷ್ಟಿದ್ದು, ಮುಂಬರುವ ದಿನಗಳಲ್ಲಿ ಮಹತ್ವದ ಬದಲಾವಣೆ ಮತ್ತು ಸುಧಾರಣೆಗಳಿಗೆ ವಿದ್ಯಾರ್ಥಿ ಸಮುದಾಯ ತನ್ನನ್ನು ತೊಡಗಿಸಿಕೊಳ್ಳಬೇಕು. ದೇಶದ ಜಿಡಿಪಿಗೆ ಉತ್ತರ ಪ್ರದೇಶ ಮೂರನೇ ಒಂದರಷ್ಟು ಕೊಡುಗೆ ನೀಡುತ್ತಿದೆ. ಇದು ದಕ್ಷಿಣ ಭಾರತದ ಆರು ರಾಜ್ಯಗಳ ಕೊಡುಗೆಗೆ ಸಮ. ದೇಶದ ಪ್ರಗತಿಯಲ್ಲಿ ಉತ್ತರ ಪ್ರದೇಶ ಪ್ರಮುಖ ಪಾತ್ರ ವಹಿಸುತ್ತಿದ್ದು, ಅಲ್ಲಿನ ಪ್ರತಿಯೊಂದು ಜಿಲ್ಲೆಯಲ್ಲಿ ಜಿಡಿಪಿ ಅಳೆಯುವ, ಪ್ರತ್ಯೇಕ ಯೋಜನೆ ರೂಪಿ ಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. 84 ನವನಗರಗಳನ್ನು ನಿರ್ಮಿಸಲಾಗುತ್ತಿದೆ. ಉತ್ತರ ಪ್ರದೇಶ ಎಲ್ಲಾ ವಲಯಗಳಲ್ಲೂ ಗಣನೀಯ ಪ್ರಗತಿ ಕಾಣುತ್ತಿದೆ ಎಂದು ಹೇಳಿದರು.
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ನ ವ್ಯವಹಾರ ವಿಭಾಗದ ಮುಖ್ಯಸ್ಥ ಗೋಪಾಲ ಕೃಷ್ಣ ಜಿ.ಎಸ್.ಎಸ್ ಮಾತನಾಡಿ, ಸಾಮಾಜಿಕ ವಲಯದಲ್ಲಿ ತಂತ್ರಜ್ಞಾನ ಮತ್ತು ಸಾಮಾಜಿಕ ವಿಜ್ಞಾನಗಳನ್ನು ಸಮಾನವಾಗಿ ಅಳವಡಿಸಿಕೊಳ್ಳುವ ಅಗತ್ಯವಿದೆ. ಇಂದು ಕೃತಕ ಬುದ್ದಿಮತ್ತೆ ಆರೋಗ್ಯ ಒಳಗೊಂಡಂತೆ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನ ಪ್ರಭಾವ ಬೀರುತ್ತಿದೆ. ಹತ್ತು ವರ್ಷಗಳ ಹಿಂದೆ ನಿರಂತರ ಕಲಿಕೆ ಎಂಬುದು ಒಂದು ಸಿದ್ಧಾಂತವಾಗಿತ್ತು. ಇದು ಅದು ವಾಸ್ತವ ವಾಗಿದ್ದು, ಕಠಿಣ ಪರಿಶ್ರಮವಿಲ್ಲದಿದ್ದರೆ ಯಾವುದನ್ನೂ ಸಾಧಿಸಲು ಸಾಧ್ಯವಿಲ್ಲ ಎಂದರು.
ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದ ಐಎಫ್‌ಎಚ್ಇಯ ಕುಲಪತಿ ಪ್ರೊ.ಡಾ.ಕೋಟಿ ರೆಡ್ಡಿ, ವೇಗವಾಗಿ ಬದಲಾಗುತ್ತಿರುವ ಉದ್ಯಮದ ಅಗತ್ಯಗಳಿಗೆ ಸಂಬಂಧಿಸಿದ ಜ್ಞಾನ ಸೃಷ್ಟಿ ಮತ್ತು ನಾವೀನ್ಯತೆಗೆ ಅನುಕೂಲಕರ ವಾತಾವರಣವನ್ನು ಐಎಫ್‌ಎಚ್ಇ ನೀಡುತ್ತಿದೆ. ಇದರ ಪರಿಣಾಮ ಪ್ರಮುಖ ಕೋರ್ಸ್ ಗಳಿಗೆ ಭಾರಿ ಬೇಡಿಕೆ ಕಂಡು ಬಂದಿದೆ ಎಂದರು.
ಉಪಕುಲಪತಿ ಡಾ. ಮುದ್ದು ವಿನಯ್ ಮಾತನಾಡಿ, ಸಂಸ್ಥೆ ಶೈಕ್ಷಣಿಕ ಸಂಶೋಧನೆ ಮತ್ತು ಕೈಗಾರಿಕಾ ಸಂಪರ್ಕದಲ್ಲಿ ಹೆಚ್ಚಿನ ಎತ್ತರಕ್ಕೆ ಏರಿದೆ. ಇಲ್ಲಿ ಪಡೆದ ಜ್ಞಾನವನ್ನು ವಿದ್ಯಾರ್ಥಿಗಳು ದೇಶದ ಪ್ರಗತಿಗೆ ಬಳಸಿಕೊಳ್ಳಬೇಕು ಎಂದರು.
ರಿಜಿಸ್ಟ್ರಾರ್ ಡಾ. ವಿಜಯಲಕ್ಷ್ಮಿ, ಕ್ಯಾರೆಲಾನ್ ಗ್ಲೋಬಲ್ ಸೊಲ್ಯೂಷನ್ಸ್ ಇಂಡಿಯಾದ ನಿರ್ದೇಶಕ ಕಾಮೇಶ್ ಗುಪ್ತಾ ಮತ್ತಿತರರು ಉಪಸ್ಥಿತರಿದ್ದರು.
*
ಘಟಿಕೋತ್ಸವದಲ್ಲಿ ಬೆಂಗಳೂರಿನ ಐಸಿಎಫ್ಎಐ ಬಿಸಿನೆಸ್ ಸ್ಕೂಲ್ನ 409 ವಿದ್ಯಾರ್ಥಿಗಳಿಗೆ ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (ಎಂಬಿಎ) ಪ್ರಮಾಣಪತ್ರಗಳನ್ನು ನೀಡಲಾಯಿತು. 42 ವಿದ್ಯಾರ್ಥಿ ಗಳು ತಮ್ಮ ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (ಬಿಬಿಎ) ಪದವಿಗಳನ್ನು ಪಡೆದರು. ಶೈಕ್ಷಣಿಕ ಸಾಧನೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪದಕಗಳು ಮತ್ತು ನಗದು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.