“ನಾನು ನಿಮಗೆ ರೇಗಿದ್ದರೆ ಅದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ”: ಸಚಿವರಿಗೆ ಸಿದ್ದರಾಮಯ್ಯ ಭಾವುಕ ವಿದಾಯ
Siddaramaiah’s emotional farewell: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಂಪುಟ ಸಹೋದ್ಯೋಗಿಗಳನ್ನು ಉದ್ದೇಶಿಸಿ ಭಾವನಾತ್ಮಕ ಭಾಷಣ ಮಾಡಿದರು. ಕಳೆದ ಎರಡು ದಶಕಗಳಲ್ಲಿ ತಮ್ಮ ರಾಜಕೀಯ ಪ್ರಯಾಣ ಮತ್ತು ಸಚಿವರೊಂದಿಗಿನ ಒಡನಾಟವನ್ನು ಅವರು ಸ್ಮರಿಸಿದರು. ತಮ್ಮ ಹಿಂದಿನ ಕೋಪ ಅಥವಾ ಆಕ್ರೋಶಗಳನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ ಎಂದು ಹೇಳಿದ್ದಾರೆ.
ಸಚಿವರಿಗೆ ಸಿದ್ದರಾಮಯ್ಯ ಭಾವುಕ ವಿದಾಯ -
ಬೆಂಗಳೂರು, ಮೇ 28: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಮ್ಮ ಸಂಪುಟ ಸಹೋದ್ಯೋಗಿಗಳನ್ನು ಉದ್ದೇಶಿಸಿ ಭಾವನಾತ್ಮಕ ಭಾಷಣ ಮಾಡಿದರು. ಕಳೆದ ಎರಡು ದಶಕಗಳಲ್ಲಿ ತಮ್ಮ ರಾಜಕೀಯ ಪ್ರಯಾಣ ಮತ್ತು ಸಚಿವರೊಂದಿಗಿನ ಒಡನಾಟವನ್ನು ಅವರು ಸ್ಮರಿಸಿದರು. ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ನಂತರ, ಪಕ್ಷದ ಹೈಕಮಾಂಡ್ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರಿಗೆ ನಾಯಕತ್ವವನ್ನು ಹಸ್ತಾಂತರಿಸುತ್ತಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್‌ನ ಹಿರಿಯ ನಾಯಕ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಾರೆ.
ಸಂಪುಟ ಸದಸ್ಯರೊಂದಿಗಿನ ಸಭೆಯಲ್ಲಿ, ಸಿದ್ದರಾಮಯ್ಯ ಅವರು ತಮ್ಮ ಹಿಂದಿನ ಕೋಪ ಅಥವಾ ಆಕ್ರೋಶಗಳನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ ಎಂದು ಸಹೋದ್ಯೋಗಿಗಳಿಗೆ ಹೇಳಿದ್ದಾರೆ. “ಕಳೆದ 20 ವರ್ಷಗಳಲ್ಲಿ, ನಾನು ನಿಮ್ಮೆಲ್ಲರ ಮೇಲೆ ಕಿರುಚಿದ್ದೇನೆ, ಕೋಪಗೊಂಡಿದ್ದೇನೆ ಮತ್ತು ಬೈದಿದ್ದೇನೆ. ಅದನ್ನೆಂದಿಗೂ ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ. ಪಕ್ಷ ಮತ್ತು ಸರ್ಕಾರದ ಹಿತದೃಷ್ಟಿಯಿಂದ ನಾನು ಆ ರೀತಿ ವರ್ತಿಸಿದ್ದೇನೆ ಹೊರತು ಬೇರೇನಿಲ್ಲ. ವೈಯಕ್ತಿಕವಾಗಿ ಯಾರಿಗೂ ಏನೂ ಅಂದಿಲ್ಲ” ಎಂದು ಅವರು ಹೇಳಿದರು.
ತಮ್ಮ ಅಧಿಕಾರಾವಧಿಯಲ್ಲಿ ಬೆಂಬಲ ನೀಡಿದ್ದಕ್ಕಾಗಿ ಈ ವೇಳೆ ಸಚಿವರು ಮತ್ತು ಪಕ್ಷದ ನಾಯಕರಿಗೆ ಮುಖ್ಯಮಂತ್ರಿ ಧನ್ಯವಾದ ಅರ್ಪಿಸಿದರು. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಗ್ಗೆ ರಾಜಕೀಯ ಚರ್ಚೆಗಳು ತೀವ್ರಗೊಂಡಿರುವ ಸಮಯದಲ್ಲಿ ಸಿದ್ದರಾಮಯ್ಯ ಈ ಹೇಳಿಕೆ ನೀಡಿದ್ದಾರೆ. ಈಗಾಗಲೇ ಅವರು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
Siddaramaiah Resigns: ʼʼರಾಷ್ಟ್ರ ರಾಜಕಾರಣಕ್ಕೆ ಹೋಗಲ್ಲʼʼ: ಸಿದ್ದರಾಮಯ್ಯ ಸ್ಪಷ್ಟನೆ
ರಾಜೀನಾಮೆಗೂ ಮುನ್ನ, ಸಂಭವನೀಯ ಸಚಿವ ಸಂಪುಟ ಪುನರ್‌ರಚನೆ ಅಥವಾ ನಾಯಕತ್ವ ಬದಲಾವಣೆಯ ಭಾಗವಾಗಿ, ತಮ್ಮ ಪುತ್ರ ಸೇರಿ 15 ನಿಷ್ಠಾವಂತರಿಗೆ ಸಚಿವ ಸ್ಥಾನ ನೀಡುವಂತೆ ಸಿದ್ದರಾಮಯ್ಯ ಅವರು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಜೊತೆಗೆ, ತಮ್ಮ ಬೆಂಬಲಿಗರಿಗೆ ಮಂಡಳಿಗಳು ಮತ್ತು ನಿಗಮಗಳಲ್ಲಿ ಪ್ರಮುಖ ಹುದ್ದೆಗಳನ್ನೂ ನೀಡುವಂತೆ ಅವರು ಒತ್ತಾಯಿಸಿದ್ದಾರೆ ಎಂದು ಹೇಳಲಾಗಿದೆ.
ಉನ್ನತಾಧಿಕಾರಿಗಳ ವರ್ಗಾವಣೆ
ಇನ್ನು ಸಿದ್ದರಾಮಯ್ಯ ಅವರು ತಮ್ಮ ಆಪ್ತ ವಲಯದ ಪ್ರಮುಖ ಅಧಿಕಾರಿಗಳನ್ನು ರಾಜ್ಯದ ಪ್ರಮುಖ ಸರ್ಕಾರಿ ಹುದ್ದೆಗಳಿಗೆ ವರ್ಗಾಯಿಸಿದ್ದಾರೆ. ಮುಖ್ಯಮಂತ್ರಿಗಳ ಶಿಬಿರದಲ್ಲಿ ವಿಶೇಷ ಕರ್ತವ್ಯ ಅಧಿಕಾರಿಯಾಗಿದ್ದ ಹಿರಿಯ ಕೆಎಎಸ್ ಅಧಿಕಾರಿ ರಮೇಶ್ ಪಿ ಕೋನರೆಡ್ಡಿ ಅವರನ್ನು ವರ್ಗಾವಣೆ ಮಾಡಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಲಿಮಿಟೆಡ್ (ಕೆಪಿಟಿಸಿಎಲ್) ನ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಅವರು ವಿಜಯ್ ಬಿಪಿ ಅವರ ಸ್ಥಾನವನ್ನು ಭರ್ತಿ ಮಾಡಲಿದ್ದಾರೆ. ವಿಜಯ್ ಬಿಪಿ ಅವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR)ಗೆ ವರ್ಗಾಯಿಸಲು ಸೂಚಿಸಲಾಗಿದೆ.
ಮತ್ತೊಂದು ಪ್ರಮುಖ ಪುನರ್ರಚನೆಯಲ್ಲಿ, ಸಿದ್ದರಾಮಯ್ಯ ಅವರ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಹಿರಿಯ ಕೆಎಎಸ್ ಅಧಿಕಾರಿ ಡಾ. ವೆಂಕಟೇಶಯ್ಯ ಅವರನ್ನು ಬೆಂಗಳೂರಿನಲ್ಲಿ ಕೃಷಿ ಮಾರುಕಟ್ಟೆ ಇಲಾಖೆಯ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಅವರು ಐಎಎಸ್ ಅಧಿಕಾರಿ ಎಚ್. ಪ್ರಸನ್ನ ಅವರ ಸ್ಥಾನವನ್ನು ತುಂಬಲಿದ್ದಾರೆ.
ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತಾಸಕ್ತಿ ಎಂದು ಉಲ್ಲೇಖಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಎರಡೂ ವರ್ಗಾವಣೆ ಆದೇಶಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ.
ಸಿದ್ದರಾಮಯ್ಯ ಅವರು ಔಪಚಾರಿಕವಾಗಿ ಹುದ್ದೆಯಿಂದ ಕೆಳಗಿಳಿಯುವ ಮುನ್ನ, ತಮ್ಮ ಆಪ್ತರು ಎಂದು ಪರಿಗಣಿಸಲಾದ ಅಧಿಕಾರಿಗಳನ್ನು ಪ್ರಭಾವಿ ಇಲಾಖೆಗಳಲ್ಲಿ ನೇಮಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.