ಮುಂಬೈ: ಆಧುನಿಕ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ತಂತ್ರಜ್ಞಾನದ ಪಾತ್ರ ದಿನೇದಿನೇ ವ್ಯಾಪಕವಾಗಿ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ಎಐ ತಂತ್ರಜ್ಞಾನ ವನ್ನು ಸಮರ್ಥವಾಗಿ ಬಳಸಿಕೊಳ್ಳಲು ಕಂಪ್ಯೂಟರ್ ಸೈನ್ಸ್ ನ ಮೂಲಭೂತ ಜ್ಞಾನ ಅತ್ಯಗತ್ಯ ಎಂಬುದನ್ನು ಮನಗಂಡು, ಪ್ರತಿಷ್ಠಿತ ಐಐಟಿ ಬಾಂಬೆ ಎಜುಕೇಷನಲ್ ಔಟ್‌ರೀಚ್ ಸಂಸ್ಥೆಯು ಕಂಪ್ಯೂಟರ್ ಸೈನ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನಲ್ಲಿ (ಸಿಎಸ್ & ಎಐ) ಇ-ಪೋಸ್ಟ್ ಗ್ರ್ಯಾಜುಯೇಟ್ ಡಿಪ್ಲೊಮಾ (ಇ-ಪಿಜಿಡಿ) ಕೋರ್ಸ್ ಅನ್ನು ಆರಂಭಿಸಿದೆ. ಕಂಪ್ಯೂಟರ್ ಸೈನ್ಸ್ ಅಡಿಪಾಯದೊಂದಿಗೆ ರೂಪಿಸಲಾಗಿರುವ ಈ ವಿಸ್ತೃತ ಪಠ್ಯಕ್ರಮವು ಎಐ ಹಾಗೂ ಮೆಷಿನ್ ಲರ್ನಿಂಗ್ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ.
ಐಐಟಿ ಬಾಂಬೆಯ ನುರಿತ ಬೋಧಕವೃಂದವೇ ರೂಪಿಸಿ ಬೋಧಿಸಲಿರುವ ಈ ಕೋರ್ಸ್ ಗೆ ಎಜುಟೆಕ್ ಸಂಸ್ಥೆ ಗ್ರೇಟ್ ಲರ್ನಿಂಗ್ ಪಾಲುದಾರಿಕೆ ಒದಗಿಸಿದೆ. ಇದು ಬಲವಾದ ಕಂಪ್ಯೂಟರ್ ಸೈನ್ಸ್ ತಳಹದಿಯ ಜೊತೆಗೆ ಎಐ ಮತ್ತು ಮೆಷಿನ್ ಲರ್ನಿಂಗ್‌ನ ಸಮಕಾಲೀನ ಬೆಳವಣಿಗೆಗಳನ್ನು ಸೇರಿಸಿದೆ. ಈ ಕೋರ್ಸ್ ಸಿಂಕ್ರೊನಸ್ ಮತ್ತು ಅಸಿಂಕ್ರೊನಸ್ ಆನ್ ಲೈನ್ ಕಲಿಕಾ ತರಗತಿಗಳ ಜೊತೆಗೆ ಐಐಟಿ ಬಾಂಬೆ ಕ್ಯಾಂಪಸ್ ನಲ್ಲಿ ಖುದ್ದು ಹಾಜರಿದ್ದು ಕಲಿಯುವ ಪ್ರಾಯೋಗಿಕ ಅನುಭವವನ್ನೂ (ಕ್ಯಾಂಪಸ್ ಇಮ್ಮರ್ಶನ್) ಒಳಗೊಂಡಿದೆ.
ಇದನ್ನೂ ಓದಿ: AI course: ಉಚಿತ ಎಐ ಕೋರ್ಸ್ : ಕಲಿಯಿರಿ, ಪ್ರಮಾಣ ಪತ್ರವನ್ನು ಪಡೆಯಿರಿ
ಕಂಪ್ಯೂಟಿಂಗ್ ಹಾಗೂ ಎಐ ವಿಷಯಗಳಲ್ಲಿ ತಮ್ಮ ಸೈದ್ಧಾಂತಿಕ ತಿಳುವಳಿಕೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಬಯಸುವ ತಾಂತ್ರಿಕ ನೈಪುಣ್ಯತೆ ಮತ್ತು ಕಲಿಕೆಯ ಉತ್ಸಾಹವುಳ್ಳ ವ್ಯಕ್ತಿಗಳಿಗಾಗಿ ಈ ಸಿಎಸ್ & ಎಐ ಇ-ಪಿಜಿ ಡಿಪ್ಲೊಮಾವನ್ನು ರೂಪಿಸಲಾಗಿದೆ. ಈ ಸಂಪೂರ್ಣ ಪಠ್ಯಕ್ರಮವನ್ನು ಕಂಪ್ಯೂಟರ್ ಸೈನ್ಸ್ ಹಾಗೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ ಎಂದು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ.
ಎಐ ವಿಭಾಗದಲ್ಲಿ ಜನರೇಟಿವ್ ಎಐ, ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ಸ್ (ಎಲ್ಎಲ್ಎಂ), ಎಐ ಏಜೆಂಟ್‌ಗಳು, ಆರ್ ಎ ಜಿ, ಎಂಸಿಪಿ, ರೀಇನ್‌ಫೋರ್ಸ್‌ಮೆಂಟ್ ಲರ್ನಿಂಗ್, ಕಂಪ್ಯೂಟರ್ ವಿಷನ್, ಎನ್ ಎಲ್ ಪಿ ಮತ್ತು ಡೀಪ್ ಲರ್ನಿಂಗ್ ವಿಷಯಗಳು ಒಳಗೊಂಡಿದ್ದರೆ; ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಅಲ್ಗಾರಿದಮ್ಸ್ ಮತ್ತು ಕಾಂಪ್ಲೆಕ್ಸಿಟಿ, ಬ್ಲಾಕ್ ಚೈನ್, ವೆಬ್ ಮತ್ತು ಸಾಫ್ಟ್ ವೇರ್ ಸೆಕ್ಯುರಿಟಿ, ಕ್ರಿಪ್ಟೋಗ್ರಫಿ ಮತ್ತು ನೆಟ್‌ವರ್ಕ್ ಸೆಕ್ಯುರಿಟಿ ಹಾಗೂ ಬಿಗ್ ಡೇಟಾ ಸಿಸ್ಟಮ್ ಇಂಟರ್ನಲ್ಸ್ ಮುಂತಾದ ವಿಷಯಗಳು ಒಳಗೊಂಡಿವೆ.
ವಿದ್ಯಾರ್ಥಿಗಳು ಒಟ್ಟು ಆರು ಕೋರ್ಸ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಬೇಕಿದ್ದು, ಪ್ರತಿ ವಿಭಾಗದಿಂದ ಕನಿಷ್ಠ ಎರಡು ಕೋರ್ಸ್‌ಗಳನ್ನು ಕಡ್ಡಾಯವಾಗಿ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಈ ಕೋರ್ಸ್ ಅನ್ನು ಒಂದು ವರ್ಷದಲ್ಲಿ ಮುಗಿಸಬಹುದಾಗಿದ್ದು, ಗರಿಷ್ಠ ಮೂರು ವರ್ಷಗಳ ಅವಧಿ ಯೊಳಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ಪೂರ್ಣಗೊಳಿಸುವ ವಿನಾಯಿತಿಯೂ ಲಭ್ಯವಿದೆ.
ಈ ಕುರಿತು ಮಾತನಾಡಿರುವ ಐಐಟಿ ಬಾಂಬೆಯ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಇಪಿಜಿಡಿ (ಸಿಎಸ್ & ಎಐ) ಫ್ಯಾಕಲ್ಟಿ ಸಂಯೋಜಕ ಪ್ರೊ. ವಿನಯ್ ಜೆ. ರಿಬೇರೊ ಅವರು , "ವಿದ್ಯಾರ್ಥಿಗಳಿಗೆ ಕೇವಲ ಎಐ ಪರಿಕರಗಳನ್ನು ಬಳಸುವುದನ್ನು ಹೇಳಿಕೊಡುವುದು ಮಾತ್ರವಲ್ಲದೆ, ಕಂಪ್ಯೂಟರ್ ಸೈನ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅನ್ನು ಮೂಲಭೂತ ಮಟ್ಟದಲ್ಲೇ ಆಳವಾಗಿ ಅರ್ಥಮಾಡಿಕೊಳ್ಳಲು ಈ ಕೋರ್ಸ್ ಸಜ್ಜುಗೊಳಿಸುತ್ತದೆ. ಈ ಆಳವಾದ ತಿಳುವಳಿಕೆಯು ನಾವು ಪ್ರವೇಶಿಸುತ್ತಿರುವ ಎಐ- ಕೇಂದ್ರಿತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೊಂದಿಕೊಳ್ಳಲು, ಪೈಪೋಟಿ ನೀಡಲು ಮತ್ತು ಮುಂಚೂಣಿಯಲ್ಲಿರಲು ಅವರಿಗೆ ಸಹಕಾರಿಯಾಗಲಿದೆ" ಎಂದು ತಿಳಿಸಿದ್ದಾರೆ.
ಈ ಕುರಿತು ಗ್ರೇಟ್ ಲರ್ನಿಂಗ್ ನ ಸಂಸ್ಥಾಪಕ ಹಾಗೂ ಸಿಇಓ ಮೋಹನ್ ಲಖಂರಾಜು ಮಾತನಾಡಿ , "ಸಾಫ್ಟ್ ವೇರ್ ಡೆವಲಪ್‌ಮೆಂಟ್ ಮತ್ತು ಕಂಪ್ಯೂಟಿಂಗ್ ಸಿಸ್ಟಮ್‌ಗಳಲ್ಲಿ ಎಐ ಈಗ ಅನಿವಾರ್ಯ ಅಂಗವಾಗಿ ಮಾರ್ಪಟ್ಟಿದೆ. ವೃತ್ತಿಪರರಿಗೆ ಕೇವಲ ಎಐ ಟೂಲ್‌ಗಳ ಪರಿಚಯವಿದ್ದರೆ ಸಾಲದು, ಅವರಲ್ಲಿ ಬಲವಾದ ಕಂಪ್ಯೂಟರ್ ಸೈನ್ಸ್ ಅಡಿಪಾಯದ ಜೊತೆಗೆ, ವಿಶ್ವಾಸಾರ್ಹ ಹಾಗೂ ವಿಸ್ತರಿಸ ಬಹುದಾದ ಎಐ ವ್ಯವಸ್ಥೆಗಳ ವಿನ್ಯಾಸ ಮತ್ತು ನಿಯೋಜನೆಗೆ ಅದರ ಸಿದ್ಧಾಂತಗಳು ಹೇಗೆ ನೆರವಾಗುತ್ತವೆ ಎಂಬ ತಿಳುವಳಿಕೆ ಇರಬೇಕು. ಕಂಪ್ಯೂಟರ್ ಸೈನ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿ ಜೆನ್ಸ್ ನ ಈ ಇಪಿಜಿಡಿ ಕೋರ್ಸ್ ಈ ಎಲ್ಲಾ ಕ್ಷೇತ್ರಗಳನ್ನು ಒಗ್ಗೂಡಿಸಿದ್ದು, ಪ್ರಸ್ತುತ ಮಾರುಕಟ್ಟೆ ಯಲ್ಲಿ ಎಐ ಕ್ಷೇತ್ರದ ಉನ್ನತ ಬೇಡಿಕೆಯ ಹುದ್ದೆಗಳನ್ನು ಗಿಟ್ಟಿಸಿಕೊಳ್ಳಲು ಅಗತ್ಯವಿರುವ ತಾಂತ್ರಿಕ ಕೌಶಲವನ್ನು ಕಲಿಸುತ್ತದೆ" ಎಂದಿದ್ದಾರೆ.
ಪದವಿ ಶಿಕ್ಷಣದ ಅವಧಿಯಲ್ಲಿ ಅಥವಾ ಉದ್ಯೋಗದ ಭಾಗವಾಗಿ ಕಂಪ್ಯೂಟರ್ ಸೈನ್ಸ್ ಕಲಿತ ಸಾಫ್ಟ್ ವೇರ್ ಡೆವಲಪರ್‌ಗಳು, ಎಂಜಿನಿಯರ್‌ಗಳು, ಐಟಿ ವೃತ್ತಿಪರರು, ಡೇಟಾ ಸೈಂಟಿಸ್ಟ್ ಗಳು ಹಾಗೂ ಕಂಪ್ಯೂಟರ್ ಸೈನ್ಸ್ ನ ಪ್ರಾಥಮಿಕ ಜ್ಞಾನ ಹೊಂದಿರುವ ನೂತನ ಪದವೀಧರರನ್ನು ಗಮನ ದಲ್ಲಿಟ್ಟುಕೊಂಡು ಈ ಕೋರ್ಸ್ ವಿನ್ಯಾಸಗೊಳಿಸಲಾಗಿದೆ.
ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದವರಿಗೆ ಐಐಟಿ ಬಾಂಬೆ ಇ-ಅಲುಮ್ನಿ ಸ್ಥಾನಮಾನ ದೊರೆಯಲಿದೆ.