Karnataka CM Row: ಬಜೆಟ್ ಬೆನ್ನಲ್ಲೇ ನಾಳೆ ಡಿ.ಕೆ. ಶಿವಕುಮಾರ್ ದೆಹಲಿ ಪ್ರವಾಸ; ಕುತೂಹಲ ಮೂಡಿಸಿದ ಡಿಸಿಎಂ ನಡೆ!
ಡಿ.ಕೆ. ಶಿವಕುಮಾರ್ ಅವರು ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುವ ಕಲಬುರಗಿಯ ಚಿತ್ತಾಪುರದಲ್ಲಿ ನಾಳೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮಾಡಲಿದ್ದಾರೆ. ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಜತೆ ಕಲಬುರಗಿಯಿಂದ ದೆಹಲಿಗೆ ಜತೆಯಾಗಿ ಪ್ರಯಾಣಿಸಲಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ -
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿಸಿದ ಬೆನ್ನಲ್ಲೇ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ನಾಳೆ (ಮಾ.8) ದೆಹಲಿ ಯಾತ್ರೆ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ನೀರಾವರಿ ಇಲಾಖೆಯ ಕೆಲಸದ ಹಿನ್ನೆಲೆಯಲ್ಲಿ ದೆಹಲಿಗೆ ಹೋಗುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೂ ಬಜೆಟ್ ಮಂಡನೆ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಜತೆ ಡಿಕೆಶಿ ದೆಹಲಿಗೆ ಹೋಗುತ್ತಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.
ಡಿ.ಕೆ. ಶಿವಕುಮಾರ್ ಅವರು ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುವ ಕಲಬುರಗಿಯ ಚಿತ್ತಾಪುರದಲ್ಲಿ ನಾಳೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮಾಡಲಿದ್ದಾರೆ. ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಜತೆ ಕಲಬುರಗಿಯಿಂದ ದೆಹಲಿಗೆ ಜತೆಯಾಗಿ ಪ್ರಯಾಣಿಸಲಿದ್ದಾರೆ. ಸೋಮವಾರ ಬೆಳಗ್ಗೆ ಅವರು ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಬಳಿಕ ಬಜೆಟ್ ಅಧಿವೇಶನದಲ್ಲಿ ಅವರು ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಬಜೆಟ್ ಅಧಿವೇಶದ ಬಳಿಕ ನಾಯಕತ್ವ ಬದಲಾವಣೆ ಚರ್ಚೆ ತೀವ್ರಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಎರಡೂ ಬಣದ ಶಾಸಕರು, ಸಚಿವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಡಿಕೆ ಶಿವಕುಮಾರ್ ಅವರ ನಡೆಯೂ ಸಾಕಷ್ಟು ಕುತೂಹಲ ಕೆರಳಿಸಿದೆ.
ಸಾಮಾಜಿಕ ನ್ಯಾಯ ಕೇಂದ್ರೀಕರಿಸಿ ಈ ಬಾರಿಯ ಬಜೆಟ್: ಸಿಎಂ
ಬೆಂಗಳೂರು: ಇಡೀ ರಾಜ್ಯದ ಬೆಳವಣಿಗೆಯನ್ನು ಬಜೆಟ್‌ನಲ್ಲಿ ನಿರೀಕ್ಷಿಸಬಹುದಾಗಿದ್ದು, ಸಮಾಜದ ಎಲ್ಲ ವರ್ಗದ ಜನರಿಗೂ ಸಮಾನ ಅವಕಾಶ ನೀಡುವುದೇ ಈ ಬಾರಿಯ ಬಜೆಟ್ ನ ಉದ್ದೇಶವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೈಸೂರಿನ ಪಿಲ್ಲಹಳ್ಳಿ ಗ್ರಾಮದ ಹೆಲಿಪ್ಯಾಡ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಸಿಎಂ ಪ್ರತಿಕ್ರಿಯೆ ನೀಡಿದರು. ಬಿಜೆಪಿಯ ಪ್ರಧಾನಿ ನರೇಂದ್ರ ಮೋದಿ ಅವರು ಸಾಲ ಮಾಡಿದ್ದಾರೆ. ಸಾಲ ಮಾಡದೇ ಅಭಿವೃದ್ಧಿ ಸಾಧ್ಯವಿಲ್ಲ. ಆರ್ಥಿಕ ಹೊಣೆಗಾರಿಕೆ ಕಾಯ್ದೆ ತಿಳಿಸಿರುವ ಮಾನದಂಡಗಳ ಮಿತಿಯಲ್ಲಿ ಸಾಲದ ಪ್ರಮಾಣ ಇದೆ. ಈ ಕಾಯ್ದೆಯಂತೆ ಸಾಲವು ಶೇ. 25 ರಷ್ಟಿರಬೇಕಿದ್ದು, ನಮ್ಮ ಸಾಲದ ಪ್ರಮಾಣ 24.94 ಇದ್ದು, ಮಿತಿಯೊಳಗೇ ಇದೆ. ಕೇಂದ್ರದ ಸಾಲದ ಪ್ರಮಾಣ 214 ಲಕ್ಷ ಕೋಟಿ ಇದೆ.
ಮೋದಿಯವರು ಅಧಿಕಾರಕ್ಕೆ ಬಂದ ನಂತರ ₹165 ಲಕ್ಷ ಕೋಟಿ ಸಾಲವನ್ನು ಮಾಡಿದ್ದಾರೆ. ಇದು ಸದರಿ ಕಾಯ್ದೆಯ ಪ್ರಕಾರ 55.6 % ರಷ್ಟು ಇದೆ. ಭಾರತದ ವಿತ್ತೀಯ ಕೊರತೆ 4.4 ರಷ್ಟಿದ್ದು, ಕರ್ನಾಟಕ ರಾಜ್ಯದ ವಿತ್ತೀಯ ಕೊರತೆ 2.95 ರಷ್ಟಿದ್ದು, ಕಾಯ್ದೆಯು ಸೂಚಿಸಿರುವ ಜಿಡಿಪಿಯ ಶೇ. 3 ರ ಮಿತಿಯೊಳಗೆ ಇದೆ. ಕರ್ನಾಟಕದ ಜಿಎಸ್‌ಡಿಪಿ ₹33,05,500 ಕೋಟಿ ಇದೆ. ಬಿಜೆಪಿಯವರು ನಮ್ಮ ಸರ್ಕಾರ ಹೆಚ್ಚು ಸಾಲ ಮಾಡಿದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಆರ್ಥಿಕ ಹೊಣೆಗಾರಿಕೆ ಕಾಯ್ದೆಯು ಸೂಚಿಸಿರುವ ಮಾನದಂಡದ ಮಿತಿಯೊಳಗೆ ಸಾಲ ಮಾಡಲಾಗಿದೆ.
ಈ ಬಾರಿಯ ಬಜೆಟ್ ಸಾಮಾಜಿಕ ನ್ಯಾಯವನ್ನು ಕೇಂದ್ರೀಕರಿಸಿ ಮಾಡಲಾಗಿದ್ದು, ಇಡೀ ರಾಜ್ಯದ ಬೆಳವಣಿಗೆಯನ್ನು ಬಜೆಟ್ ನಲ್ಲಿ ನಿರೀಕ್ಷಿಸಬಹುದು. ಇದು ಸಮಾಜದ ಎಲ್ಲ ವರ್ಗದ ಜನರಿಗೂ ಸಮಾನ ಅವಕಾಶ ನೀಡುವ ಉದ್ದೇಶವನ್ನು ಹೊಂದಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ನ್ಯಾಯಯುತವಾಗಿ ನೀಡಬೇಕಾಗಿದ್ದ ಅನುದಾನವನ್ನು ನೀಡದಿರುವುದರಿಂದ ರಾಜ್ಯದ ಮೇಲೆ ಆರ್ಥಿಕ ಹೊರೆ ಹೆಚ್ಚಾಗಿದೆ. ಕೇಂದ್ರದ ಜಿಎಸ್‌ಟಿ ದರಪರಿಷ್ಕರಣೆಯಿಂದ ರಾಜ್ಯಕ್ಕೆ 10 ಸಾವಿರ ಕೋಟಿ ನಷ್ಟವಾಗಿದೆ.
Karnataka Budget 2026: ಅಮರ್ಥ್ಯಸೇನ್ ಅಶಯ ಬಿಂಬಿಸಿದ ರಾಜ್ಯ ಬಜೆಟ್; 11 ಜಿ ಮಾದರಿ ಎಂದರೇನು?
ಪಕ್ಷದ ವರಿಷ್ಠರು ಅವಕಾಶ ನೀಡಿದರೆ ಮುಂದಿನ ಎರಡು ಬಜೆಟ್ ಗಳನ್ನೂ ನಾನೇ ಮಂಡಿಸುತ್ತೇನೆ. ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿದೆ. ದಾಖಲೆ ಮುರಿಯುವುದು ಸಾಧನೆಯಲ್ಲ. ಆದರೆ ಜನರು ಆಶೀರ್ವದಿಸಿ, ಅವಕಾಶ ನೀಡಿದರೆ, ಖಂಡಿತ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ ಎಂದು ಹೇಳಿದರು.