29,000 ಸರ್ಕಾರಿ ಶಾಲೆಗಳಲ್ಲಿ ನಲಿ-ಕಲಿ ರದ್ದು; ರಾಜ್ಯ ಸರ್ಕಾರದ ತೀರ್ಮಾನ ಸ್ವಾಗತಿಸಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ
ನಲಿ-ಕಲಿ ಪದ್ಧತಿಯನ್ನು ರದ್ದುಗೊಳಿಸುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಕಳೆದ ಹಲವಾರು ವರ್ಷಗಳಿಂದ ಸರ್ಕಾರದ ಮೇಲೆ ಒತ್ತಡವನ್ನು ಹೇರುತ್ತಾ ಬರುತ್ತಿದೆ. ಇದೀಗ ನಲಿ-ಕಲಿ ಕಾರ್ಯಕ್ರಮ ರದ್ದು ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಶಿಕ್ಷಣ ಇಲಾಖೆ ಮೇಲಧಿಕಾರಿಗಳಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಧನ್ಯವಾದ ತಿಳಿಸಿದೆ.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ನುಗ್ಲಿ -
ಬೆಂಗಳೂರು: ರಾಜ್ಯದ 29,000 ಸರ್ಕಾರಿ ಶಾಲೆಗಳಲ್ಲಿ ನಲಿ-ಕಲಿ ಕಾರ್ಯಕ್ರಮ (Nali Kali programme) ರದ್ದುಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಐತಿಹಾಸಿಕ ತೀರ್ಮಾನವನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತುಂಬು ಹೃದಯದಿಂದ ಸ್ವಾಗತಿಸುತ್ತದೆ ಎಂದು ಸಂಘದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ತಿಳಿಸಿದ್ದಾರೆ.
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 1,2,3ನೇ ತರಗತಿಗಳನ್ನು ಒಟ್ಟುಗೂಡಿಸಿ ಬೋಧಿಸುವ ಪದ್ಧತಿ ನಲಿ-ಕಲಿ ಆಗಿದೆ. ಇದನ್ನು ಬಹುವರ್ಗ ಬೋಧನೆ ಎಂದು ಕೂಡ ಕರೆಯಬಹುದು. ಈ ನಲಿ-ಕಲಿ ಪದ್ಧತಿಯನ್ನು ರದ್ದುಗೊಳಿಸುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಕಳೆದ ಹಲವಾರು ವರ್ಷಗಳಿಂದ ಸರ್ಕಾರದ ಮೇಲೆ ಒತ್ತಡವನ್ನು ಹೇರುತ್ತಾ ಬರುತ್ತಿದೆ. ವಿಶೇಷವಾಗಿ ನಲಿ-ಕಲಿ ಪದ್ಧತಿಯಿಂದ ರಾಜ್ಯದಲ್ಲಿ ಸುಮಾರು 10 ವರ್ಷಗಳಲ್ಲಿ 15 ಲಕ್ಷಕ್ಕೂ ಹೆಚ್ಚು ಮಕ್ಕಳ ಸಂಖ್ಯೆ ಸರ್ಕಾರಿ ಶಾಲೆಗಲ್ಲಿ ದಾಖಲಾತಿ ಕಡಿಮೆಯಾಗುತ್ತಿರುವುದಕ್ಕೆ ನೇರವಾಗಿ ನಲಿ-ಕಲಿ ಪದ್ಧತಿಯೇ ಕಾರಣವಾಗಿದೆ ಎಂಬ ಹಲವಾರು ಅಂಕಿ ಅಂಶಗಳ ಸಹಿತ ವರದಿಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಿಗೆ ಹಾಗೂ ಇಲಾಖೆಯ ಅಧಿಕಾರಿಗಳಿಗೂ ಕೂಡ ಸಲ್ಲಿಸಲಾಗಿದೆ.
ಈ ಎಲ್ಲಾ ಅಂಶಗಳನ್ನು ವಿಶೇಷವಾಗಿ ನಲಿ-ಕಲಿ ಪದ್ಧತಿ ಚೆನ್ನಾಗಿದೆ ಎಂದು ವಾದಿಸುವವರು ಈ ಪದ್ಧತಿಯನ್ನು ಖಾಸಗಿ ಶಾಲೆಗಳಲ್ಲಿ, ಇಂಟರ್‌ನ್ಯಾಷನಲ್ ಶಾಲೆಗಳಲ್ಲಿ ಯಾಕೆ ಜಾರಿಗೊಳಿಸುತ್ತಿಲ್ಲ ಎಂಬ ಪ್ರಶ್ನೆಯನ್ನು ಕೂಡ ಹಲವಾರು ಬಾರಿ ಸಂಘಟನೆಯಿಂದ ಪ್ರತಿರೋಧಿಸಿ ಸರ್ಕಾರದ ಗಮನಕ್ಕೆ ತರಲಾಗಿದೆ. ಈ ಕಾರಣಕ್ಕಾಗಿ ಸರ್ಕಾರ ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 29,000 ನಲಿ-ಕಲಿ ಪದ್ಧತಿಯನ್ನು ರದ್ದುಗೊಳಿಸಿ, ಸಾಮಾನ್ಯ ಪದ್ಧತಿಗೆ ಅನುವು ಮಾಡಿಕೊಡುತ್ತಿರುವುದು ಅತ್ಯಂತ ಉತ್ತಮ ಬೆಳವಣಿಗೆಯಾಗಿದ್ದು, ಸರ್ಕಾರಿ ಶಾಲೆಗಳಲ್ಲಿ ದಾಖಲಾತಿಯನ್ನು ಹೆಚ್ಚಿಸಲು ಅನುಕೂಲ ಮಾಡಿಕೊಟ್ಟಿದ್ದು ಈ ಐತಿಹಾಸಿಕ ತೀರ್ಮಾನವನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಸ್ವಾಗತಿಸುತ್ತದೆ ಎಂದು ತಿಳಿಸಿದ್ದಾರೆ.
ಜತೆಗೆ 2027-28ನೇ ಸಾಲಿನಲ್ಲಿ ಉಳಿದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಕೂಡ ನಲಿ-ಕಲಿ ಪದ್ಧತಿಯನ್ನು ರದ್ದುಗೊಳಿಸಿ ಸಾಮಾನ್ಯ ಪದ್ಧತಿಯನ್ನೇ ಜಾರಿಗೊಳಿಸಬೇಕೆಂದು ಒತ್ತಾಯಿಸುತ್ತೇವೆ. ಈ ನಲಿ-ಕಲಿ ಪದ್ಧತಿಯನ್ನು ರದ್ದುಗೊಳಿಸಲು ಕಾರಣೀಭೂತರಾಗಿರುವಂತಹ ಮುಖ್ಯಮಂತ್ರಿ ಸಿದ್ದರಾಮಯ್ಯ , ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಶೇಷವಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಮಧು ಬಂಗಾರಪ್ಪ, ಅಪರ ಮುಖ್ಯ ಕಾರ್ಯದರ್ಶಿಗಳಾದ ರಶ್ಮಿ.ವಿ.ಮಹೇಶ್, ಆಯಕ್ತರಾದ ವಿಕಾಸ್ ಸುರಳ್ಳರ್ ಹಾಗೂ ಎಲ್ಲಾ ಹಿರಿಯ ಅಧಿಕಾರಿಗಳಿಗೆ ಅನಂತ ಅನಂತ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದು ಹೇಳಿದ್ದಾರೆ.