ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ ಸಿದ್ದರಾಮಯ್ಯ
Karnataka Leadership Change: ಬಹುದೊಡ್ಡ ರಾಜಕೀಯ ಸ್ಥಿತ್ಯಂತರಕ್ಕೆ ರಾಜ್ಯ ಸಾಕ್ಷಿಯಾಗಿದ್ದು, 3 ವರ್ಷ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅಧಿಕೃತವಾಗಿ ರಾಜೀನಾಮೆ ಘೋಷಿಸಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಡಿ.ಕೆ. ಶಿವಕುಮಾರ್ ಸಿಎಂ ಆಗಿ ಆಯ್ಕೆಯಾಗಿದ್ದಾರೆ. ಲೋಕ ಭವನದಲ್ಲಿ ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಅವರ ಕಾರ್ಯದರ್ಶಿ ಪ್ರಭು ಶಂಕರ್ ಅವರಿಗೆ ಸಿದ್ದರಾಮಯ್ಯ ರಾಜೀನಾಮೆ ನೀಡಿದರು.
ಸಿದ್ದರಾಮಯ್ಯ (ಸಂಗ್ರಹ ಚಿತ್ರ) -
ಬೆಂಗಳೂರು, ಮೇ 28: ಬಹುದೊಡ್ಡ ರಾಜಕೀಯ ಸ್ಥಿತ್ಯಂತರಕ್ಕೆ ರಾಜ್ಯ ಸಾಕ್ಷಿಯಾಗಿದ್ದು, 3 ವರ್ಷ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ (Siddaramaiah) ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಾರೆ. ಲೋಕ ಭವನಕ್ಕೆ ತೆರಳಿ ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಅವರ ಕಾರ್ಯದರ್ಶಿ ಪ್ರಭು ಶಂಕರ್ ಅವರಿಗೆ ಸಿದ್ದರಾಮಯ್ಯ ರಾಜೀನಾಮೆ ಪತ್ರ ಹಸ್ತಾಂತರಿಸಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಡಿ.ಕೆ. ಶಿವಕುಮಾರ್ (DK Shivakumar) ಸಿಎಂ ಆಗಲಿದ್ದಾರೆ. ಡಿಕೆಶಿ ಆಯ್ಕೆಯನ್ನು ಕಾಂಗ್ರೆಸ್ ಸದ್ಯದಲ್ಲೇ ಅಧಿಕೃತವಾಗಿ ಘೋಷಿಸಲಿದೆ.
ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ದಿಢೀರ್ ಮಹಾರಾಷ್ಟ್ರದ ಮುಂಬೈಗೆ ತೆರಳಿದ ಹಿನ್ನೆಲೆಯಲ್ಲಿ ಅವರ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಲಾಗಿದೆ. ಸಂಬಂಧಿಕರ ಅನಾರೋಗ್ಯದ ಕಾರಣ ನೀಡಿ ರಾಜ್ಯಪಾಲರು ಬುಧವಾರ ರಾತ್ರಿ 11.45ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈಗೆ ತೆರಳಿದ್ದರು.
ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಸಿಎಂ ರಾಜೀನಾಮೆ ಹೇಗೆ? ಸಂವಿಧಾನ ಏನು ಹೇಳುತ್ತದೆ?
ರಾಜ್ಯಪಾಲರು ಕೇಂದ್ರ ಸ್ಥಾನದಲ್ಲಿ ಇಲ್ಲದಿದ್ದರೂ ಮುಖ್ಯಮಂತ್ರಿ ರಾಜೀನಾಮೆ ಪತ್ರವನ್ನು ಸಲ್ಲಿಸಲು ಸಂವಿಧಾನದಲ್ಲಿ ಅವಕಾಶವಿದೆ. ಸಾಂವಿಧಾನಿಕ ನಿಯಮಗಳ ಪ್ರಕಾರ, ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಪತ್ರವನ್ನು ರಾಜ್ಯಪಾಲರ ಕಾರ್ಯದರ್ಶಿ ರಾಜ್ಯಪಾಲರು ಪ್ರವಾಸ ಮುಗಿಸಿ ವಾಪಸ್ ಬಂದ ತಕ್ಷಣ ಅವರ ವಿವೇಚನೆಗೆ ಕಳುಹಿಸಿಕೊಡಲಿದ್ದಾರೆ. ಕೇವಲ ಪತ್ರ ತಲುಪಿದ ತಕ್ಷಣ ರಾಜೀನಾಮೆ ಅಂಗೀಕಾರವಾಗುವುದಿಲ್ಲ. ರಾಜೀನಾಮೆ ಅಂಗೀಕರಿಸುವ ಮುನ್ನ ರಾಜ್ಯಪಾಲರು ಮುಖ್ಯಮಂತ್ರಿಯನ್ನು ಖುದ್ದಾಗಿ ಲೋಕ ಭವನಕ್ಕೆ ಕರೆಸಿ, ಮುಖಾಮುಖಿ ಮಾತುಕತೆ ನಡೆಸಿದ ಬಳಿಕವಷ್ಟೇ ಅದಕ್ಕೆ ಅಧಿಕೃತವಾಗುತ್ತದೆ.
ಇದಕ್ಕೂ ಮುನ್ನ ಬ್ರೇಕ್ ಫಾಸ್ಟ್ ಮೀಟಿಂಗ್‌ನಲ್ಲಿ ರಾಜೀನಾಮೆಯ ಬಗ್ಗೆ ಮುಕ್ತವಾಗಿ ಮಾತನಾಡಿದ ಸಿದ್ದರಾಮಯ್ಯ, ʼʼನಾನು ಹೈಕಮಾಂಡ್ ಸೂಚನೆಯಂತೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ. ಮುಂದಿನ ಸಿಎಂ ಆಯ್ಕೆಯನ್ನ ಹೈಕಮಾಂಡ್ ತೀರ್ಮಾನ ಮಾಡುತ್ತೆʼʼ ಎಂದು ಹೇಳಿ ಭಾವುಕರಾಗಿದ್ದರು. ಇದೇ ವೇಳೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಡಿಕೆಶಿ ಕಾಲಿಗೆ ಬಿದ್ದು ನಮಸ್ಕರಿಸಿದ್ದರು. ಆ ಮೂಲಕ ಇಬ್ಬರು ನಾಯಕ ಮಧ್ಯೆ ಯಾವುದೇ ವೈಮನಸ್ಸು ಇಲ್ಲ ಎನ್ನುವ ಸಂದೇಶ ಸಾರಲಾಯಿತು.
ಬ್ರೇಕ್ ಫಾಸ್ಟ್ ಸಭೆಯಲ್ಲಿ ಸಚಿವರನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಇಷ್ಟು ದಿನಗಳ ಕಾಲ ಸರ್ಕಾರ ಮುನ್ನಡೆಸಲು ಮತ್ತು ಜನಪದ ಕಾರ್ಯಕ್ರಮಗಳನ್ನು ಜಾರಿಗೆ ತರಲು ತಮಗೆ ಬೆಂಬಲವಾಗಿ ನಿಂತ ಎಲ್ಲ ಸಚಿವರಿಗೂ ಹಾಗೂ ಶಾಸಕರಿಗೂ ಆತ್ಮೀಯವಾಗಿ ಕೃತಜ್ಞತೆ ಸಲ್ಲಿಸಿದರು.