ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಗಳೂರು ಪುಲಕೇಶಿನಗರ ನಿಗೂಢ ಸ್ಫೋಟದ ಕಾರಣ ಬಹಿರಂಗ; ಆನ್‌ಲೈನ್‌ ಮೂಲಕ ಬಾಂಬ್‌ ತಯಾರಿಕೆ ಕಲಿತಿದ್ದ ವ್ಯಕ್ತಿಯ ಸಂಚು ವಿಫಲವಾಗಿದ್ದೇಗೆ?

Bengaluru Blast Case: ಇತ್ತೀಚೆಗೆ ಬೆಂಗಳೂರಿನ ಪುಲಕೇಶಿನಗರದ ನಿರ್ಮಾಣ ಹಂತದ ಕಟ್ಟಡದಲ್ಲಿ ನಡೆದ ನಿಗೂಢ ಸ್ಫೋಟದ ಕಾರಣ ಬಹಿರಂಗಗೊಂಡಿದೆ. ಸಂಬಂಧಿಕರ ನಡುವಿನ ಕಲಹವೇ ಪ್ರಕರಣಕ್ಕೆ ಕಾರಣ ಎಂದು ಪೊಲೀಸರು ವಿವರಿಸಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ.

ಬೆಂಗಳೂರು ಪುಲಕೇಶಿನಗರ ನಿಗೂಢ ಸ್ಫೋಟದ ಕಾರಣ ಬಹಿರಂಗ

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Oct 25, 2026 11:20 PM

ಬೆಂಗಳೂರು, ಅ. 25: ಇತ್ತೀಚೆಗೆ ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ನಿಗೂಢ ಸ್ಫೋಟ ಸಂಭವಿಸಿ, ಇಬ್ಬರು ಗಾಯಗೊಂಡ ಪ್ರಕರಣವನ್ನು ತನಿಖಾಧಿಕಾರಿಗಳು ಬೇಧಿಸಿದ್ದು, ಬೆಚ್ಚಿ ಬೀಳಿಸುವ ಅಂಶಗಳು ಬೆಳಕಿಗೆ ಬಂದಿದೆ. ಸಂಬಂಧಿಕರ ನಡುವಿನ ಕಲಹವೇ ಪ್ರಕರಣಕ್ಕೆ ಕಾರಣ ಎಂದು ಪೊಲೀಸರು ವಿವರಿಸಿದ್ದಾರೆ. ಜಮೀನು ಮತ್ತು ಹಣಕಾಸಿನ ವಿವಾದದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಕಸಿನ್‌ ಹತ್ಯೆಗೆ ಯತ್ನಿಸಿದ ಅಸ್ಸಾಂನ ಮೂವರನ್ನು ಪೊಲೀಸರು ಬಂಧಿಸುವ ಮೂಲಕ ನಿಗೂಢತೆಯನ್ನು ಬೇಧಿಸಿದ್ದಾರೆ. ಬಂಧಿತ ಮೂವರೂ ಅಸ್ಸಾಂನವರು. ಇವರು ಹತ್ಯೆಗೆ ಆನ್‌ಲೈನ್‌ ಮೂಲಕ ಬಾಂಬ್‌ ತಯಾರಿಸುವುದನ್ನು ಕಲಿತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಂಧಿತರನ್ನು ಝಹಿದುಲ್‌ ಹುಸೈನ್‌ ಹುಸೇನ್ ಬರ್ಭುಯಾ, ಸಾಜಿದುಲ್ ಇಸ್ಲಾಂ ಲಸ್ಕರ್ ಮತ್ತು ಬರ್ಹಾನ್ ಅಹ್ಮದ್ ಬರ್ಭುಯಾ ಎಂದು ಗುರುತಿಸಲಾಗಿದೆ. ಈ ಮೂವರು ಸೇರಿ ಅಸ್ಸಾಂ ಮೂಲದವರೇ ಆದ ಅಲ್ಲಾವುದ್ದೀನ್‌ ಎಂ. ಎಂಬವರ ಹತ್ಯೆಗೆ ಸಂಚು ರೂಪಿಸಿದ್ದರು.

ಘಟನೆ ವಿವರ

ನಿರ್ಮಾಣ ಕಾಮಗಾರಿ ಕಾರ್ಮಿಕನಾಗಿ ಕಾರ್ಯ ನಿರ್ವಹಿಸುತ್ತಿರುವ ಅಲ್ಲಾವುದ್ದೀನ್‌ ಜತೆಗೆ ಅಪರಾಧಿಗಳಿಗೆ ಜಮೀನು ಮತ್ತು ಹಣಕಾಸಿನ ತಕರಾರು ಇದ್ದಿದ್ದರಿಂದಲೇ ಹತ್ಯೆಗೆ ಸಂಚು ರೂಪಿಸಿದ್ದರು ಎನ್ನಲಾಗಿದೆ. ಟಾರ್ಚ್‌ ಬ್ಯಾಟರಿಯಲ್ಲಿ ಐಇಡಿ (ಸುಧಾರಿತ ಸ್ಫೋಟಕ ವಸ್ತು) ಇರಿಸಿ ಅದನ್ನು ಅಲ್ಲಾವುದ್ದೀನ್‌ಗೆ ಪಾರ್ಸೆಲ್‌ ಕಳುಹಿಸಿದ್ದರು.

ಬೆಂಗಳೂರಿನ ನಿರ್ಮಾಣ ಹಂತದ ಕಟ್ಟಡದಲ್ಲಿ ನಿಗೂಢ ಸ್ಫೋಟ; ಪೊಲೀಸ್‌ ಕಮಿಷನರ್‌ ಹೇಳಿದ್ದೇನು?

ಅಕ್ಟೋಬರ್‌ 20ರಂದು ಈ ಪಾರ್ಸೆಲ್‌ ಬೆಂಗಳೂರಿನ ಪುಲಿಕೇಶಿ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಜಾಮಿಯಾ ರಸ್ತೆಯಲ್ಲಿರುವ ನಿರ್ಮಾಣ ಹಂತದ ಕಟ್ಟಡಕ್ಕೆ ತಲುಪಿ ಸ್ಫೋಟಗೊಂಡಿತ್ತು. ಈ ಘಟನೆಯಲ್ಲಿ ಅಲ್ಲಾವುದ್ದೀನ್‌ ಮತ್ತು ಅವರೊಂದಿಗೆ ಕೆಲಸ ಮಾಡುತ್ತಿದ್ದ ಸೂರಜ್‌ ಕುಮಾರ್‌ ಗಾಯಗೊಂಡಿದ್ದರು.

ಈ ನಿಗೂಢ ಸ್ಫೋಟವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆಗಾಗಿ 10 ವಿಶೇಷ ತಂಡ ರಚಿಸಿದ್ದರು. 1,500ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾ ಪರಿಶೀಲಿಸಿ, 100ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆಗೆ ಒಳಪಡಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬೆಂಗಳೂರಿನಲ್ಲಿ ಮತ್ತು ಓರ್ವನನ್ನು ರಾಯಚೂರಿನ ಮಸ್ಕಿಯಲ್ಲಿ ವಶಕ್ಕೆ ಪಡೆದರು.

ಬಂಧಿತ ಝಹಿದುಲ್‌ ಹುಸೈನ್‌ ಹುಸೇನ್ ಬರ್ಭುಯಾ, ಸಾಜಿದುಲ್ ಇಸ್ಲಾಂ ಲಸ್ಕರ್ ಮತ್ತು ಬರ್ಹಾನ್ ಅಹ್ಮದ್ ಬರ್ಭುಯಾ- ಈ ಮೂವರು ಬಾಲ್ಯದಿಂದಲೇ ಸ್ನೇಹಿತರು ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಯ ಸಂಚನ್ನು ಇವರು ವಾಟ್ಸ್‌ಆ್ಯಪ್‌ ಗ್ರೂಪ್‌ ಮೂಲಕ ರೂಪಿಸಿದ್ದರು. ಅಲ್ಲಾವುದ್ದೀನ್‌ ಜತೆಗಿನ ಜಮೀನು ಮತ್ತು ಹಣಕಾಸಿನ ವಿವಾದವೇ ದಾಳಿಗೆ ಕಾರಣ ಎನ್ನುವುದು ತನಿಖೆ ವೇಳೆ ಬಯಲಾಗಿದೆ.

ಬೆಂಗಳೂರು ವಿಧಾನಸೌಧ ಸ್ಫೋಟಿಸುವಂತೆ ಎಐ ವಿಡಿಯೊ ಸೃಷ್ಟಿಸಿದ ಬಿಹಾರ ವ್ಯಕ್ತಿಯ ಬಂಧನ

ಬಂಧಿತರು ಯಾವ ರೀತಿ ಸ್ಫೋಟಕಗಳನ್ನು ಜೋಡಿಬೇಕು ಎನ್ನುವುದನ್ನು ಆನ್‌ಲೈನ್‌ ಮೂಲಕ ಕಲಿತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅದರಂತೆ ಅಪರಾಧಿಗಳು ಸ್ಫೋಟಕವನ್ನು ಟಾರ್ಚ್‌ನಲ್ಲಿ ಇರಿಸಿ ಅದನ್ನು ಅಂಗಡಿಯೊಂದರಲ್ಲಿ ಇರಿಸಿ ಅಲ್ಲಾವುದ್ದೀನ್‌ನ ಕರೆ ಮಾಡಿ ತೆಗೆದುಕೊಳ್ಳುವಂತೆ ಸೂಚಿಸಿದ್ದರು. ಅಲ್ಲದೆ ಪಾರ್ಸೆಲ್‌ ತೆರೆದು ನೋಡುವಂತೆ ಪಟ್ಟು ಹಿಡಿದಿದ್ದರು.

ಅವರ ಸಂಚು ವಿಫಲವಾಗಿ ಸೂರಜ್‌ ಕುಮಾರ್‌ ಪಾರ್ಸೆಲ್‌ ತೆರೆದುಬಿಟ್ಟಿದ್ದರು. ಹೀಗಾಗಿ ಇಬ್ಬರೂ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ.

ಇನ್ನಷ್ಟು ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.