ಸಾರಿಗೆ ಸಚಿವರನ್ನೇ ಬಸ್‌ನಿಂದ ಕೆಳಗಿಳಿಸಿದ ಪ್ರಕರಣ ಸುಖಾಂತ್ಯ: ಬಿಎಂಟಿಸಿ ನಿರ್ವಾಹಕನ ಅಮಾನತು ಆದೇಶ ವಾಪಸ್
Byrathi Suresh: ಚಿಲ್ಲರೆ ನೀಡದ ಕಾರಣ ಸಾರಿಗೆ ಸಚಿವ ಬೈರತಿ ಸುರೇಶ್ ಅವರನ್ನು ಬಸ್‌ನಿಂದ ಇಳಿಯುವಂತೆ ಹೇಳಿ ಅಮಾನತುಗೊಂಡಿದ್ದ ನಿರ್ವಾಹಕ ಟಿ.ಜಿ. ರಾಮಕೃಷ್ಣ ಇದೀಗ ಕ್ಷಮೆ ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಅಮಾನತು ಆದೇಶವನ್ನು ಹಿಂಪಡೆಯುವಂತೆ ಅಧಿಕಾರಿಗಳಿಗೆ ಬೈರತಿ ಸುರೇಶ್ ಸೂಚಿಸಿದ್ದಾರೆ.
ಬೈರತಿ ಸುರೇಶ್ (ಸಂಗ್ರಹ ಚಿತ್ರ) -
ಬೆಂಗಳೂರು, ಜು. 30: ರಿಯಾಲಿಟಿ ಚೆಕ್ ನಡೆಸಲೆಂದು ಬಿಎಂಟಿಸಿ ಬಸ್ ಏರಿದ್ದ ವೇಳೆ ಚಿಲ್ಲರೆ ನೀಡದ ಕಾರಣ ಸಾರಿಗೆ ಸಚಿವ ಬೈರತಿ ಸುರೇಶ್ (Byrathi Suresh) ಅವರನ್ನು ಬಸ್‌ನಿಂದ ಇಳಿಯುವಂತೆ ಹೇಳಿ ಅಮಾನತುಗೊಂಡಿದ್ದ ನಿರ್ವಾಹಕ ಟಿ.ಜಿ. ರಾಮಕೃಷ್ಣ ಇದೀಗ ಕ್ಷಮೆ ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಅಮಾನತು ಆದೇಶವನ್ನು ಹಿಂಪಡೆಯುವಂತೆ ಅಧಿಕಾರಿಗಳಿಗೆ ಬೈರತಿ ಸುರೇಶ್ ಸೂಚಿಸಿದ್ದಾರೆ. ಬುಧವಾರ (ಜುಲೈ 29) ನಿರ್ವಾಹಕ ರಾಮಕೃಷ್ಣ ಸಚಿವರನ್ನು ಭೇಟಿಯಾಗಿ ತಮ್ಮ ವರ್ತನೆಗೆ ಕ್ಷಮೆಯಾಚಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಇದೇ ವೇಳೆ ಬೈರತಿ ಸುರೇಶ್ ಎಲ್ಲ ಚಾಲಕರು ಮತ್ತು ನಿರ್ವಾಹಕರಿಗೆ ಎಚ್ಚರಿಕೆ ನೀಡಿ, ʼʼಚಿಲ್ಲರೆ ಕೊರತೆಯನ್ನು ನೆಪವನ್ನಾಗಿ ಮಾಡಿಕೊಂಡು ಪ್ರಯಾಣಿಕರಿಗೆ ತೊಂದರೆ ನೀಡಬಾರದು. ಎಲ್ಲ ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ದೂರು ಬಂದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದುʼʼ ಎಂದು ತಿಳಿಸಿದ್ದಾರೆ.
ಬಿಎಂಟಿಸಿಯಲ್ಲಿ ಸಚಿವ ಬೈರತಿ ಸುರೇಶ್ ರಿಯಾಲಿಟಿ ಚೆಕ್; ಬಸ್ ನಿಲ್ಲಿಸದ ಡ್ರೈವರ್, ಕಂಡಕ್ಟರ್ ಅಮಾನತು
ಘಟನೆ ವಿವರ
ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿದ ಈ ಘಟನೆ ಜುಲೈ 11ರಂದು ನಡೆದಿತ್ತು. ರಿಯಾಲಿಟಿ ಚೆಕ್ ಮಾಡಲು ಸಚಿವ ಬೈರತಿ ಸುರೇಶ್ ಸಾಮಾನ್ಯ ಪ್ರಯಾಣಿಕರಂತೆ ಬಿಎಂಟಿಸಿ ಬಸ್ ಹತ್ತಿದ್ದರು. ಹೆಬ್ಬಾಳದಿಂದ ನಾಗಶೆಟ್ಟಿಹಳ್ಳಿಗೆ ಹೋಗುವ ಬಸ್ ಹತ್ತಿದ ಬೈರತಿ ಸುರೇಶ್ 2 ಟಿಕೆಟ್ ನೀಡುವಂತೆ ಹೇಳಿ, 100 ರುಪಾಯಿ ನೋಟು ನೀಡಿದ್ದರು. ಆಗ ಕಂಡಕ್ಟರ್ ಚಿಲ್ಲರೆ ಕೊಡಿ ಎಂದು ಕೇಳಿದ್ದರು. ಇದಕ್ಕೆ ಪ್ರತಿಯಾಗಿ ಸಚಿವರು ಚಿಲ್ಲರೆ ಇಲ್ಲ ಎಂದಿದ್ದಕ್ಕೆ, ತನ್ನ ಬಳಿಯೂ ಚಿಲ್ಲರೆ ಇಲ್ಲದಿರುವುದನ್ನು ಬ್ಯಾಗ್ ತೋರಿಸಿ ಹೇಳಿದ್ದರು. ಅಷ್ಟಕ್ಕೆ ಸುಮ್ಮನಾಗದ ಕಂಡಕ್ಟರ್ ರಾಮಕೃಷ್ಣ ಚಿಲ್ಲರೆ ಇಲ್ಲದಿದ್ದರೆ ಕೆಳಗೆ ಇಳಿಯುವಂತೆ ಸಚಿವರಿಗೆ ಸೂಚಿಸಿದ್ದರು. ಇದಕ್ಕೆ ಮರುಮಾತಾನಾಡದೇ ಸಚಿವರು ಕೆಳಗಿಳಿದಿದ್ದರು. ಅದಾದ ಬಳಿಕ ಅಧಿಕಾರಿಗಳಿಗೆ ರಾಮಕೃಷ್ಣ ಅವರನ್ನು ಅಮಾನತು ಮಾಡುವಂತೆ ಸೂಚಿಸಿದ್ದರು. ಈ ಕ್ರಮ ವ್ಯಾಪಕ ಟೀಕೆಗೆ ಕಾರಣವಾಗಿತ್ತು. ಿದೀಗ ಅಮಾನತು ಆದೇಶ ಹಿಂಪಡೆಯಲು ಆದೇಶ ಹೊರಡಿಸಿದ್ದಾರೆ.
ರಿಯಾಲಿಟಿ ಚೆಕ್
ಬೈರತಿ ಸುರೇಶ್ ಜುಲೈ 11ರ ರಾತ್ರಿ ಬಿಎಂಟಿಸಿ ಬಸ್‌ಗಳಲ್ಲಿ ದಿಢೀರ್ ಪ್ರಯಾಣಿಸಿ ರಿಯಾಲಿಟಿ ಚೆಕ್ ನಡೆಸಿದ್ದರು. ಪ್ರಯಾಣದ ವೇಳೆ ಸಹ ಪ್ರಯಾಣಿಕರೊಂದಿಗೆ ಮಾತುಕತೆ ನಡೆಸಿದ ಸಚಿವರು, ಬಸ್ ಸೇವೆಯ ಗುಣಮಟ್ಟ, ಸಿಬ್ಬಂದಿಯ ವರ್ತನೆ ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಂಡಿದ್ದರು.
ಬಿಎಂಟಿಸಿ ಸೇರಿ ಎಲ್ಲ ಸಾರಿಗೆ ನಿಗಮಗಳ ನಿರ್ವಾಹಕರಿಗೆ ಸಾರಿಗೆ ಸಚಿವರ ಸೂಚನೆ
ರಾತ್ರಿ 7.10ರಿಂದ 9.10ರವರೆಗೆ ಜಯಮಹಲ್‌ನಿಂದ ಟಿವಿ ಟವರ್, ಟಿವಿ ಟವರ್‌ನಿಂದ ಆರ್.ಟಿ. ನಗರ, ಆರ್.ಟಿ. ನಗರದಿಂದ ಸಿಬಿಐ ರಸ್ತೆ, ಸಿಬಿಐ ಜಂಕ್ಷನ್‌ನಿಂದ ಮುಂದಿನ ನಿಲ್ದಾಣ, ಸಿಬಿಐ ಸ್ಟಾಪ್‌ನಿಂದ ಮಸೀದಿ ಸ್ಟಾಪ್‌ನಿಂದ ಬಳ್ಳಾರಿ ಮುಖ್ಯರಸ್ತೆ, ಅಲ್ಲಿಂದ ಆಟೋದಲ್ಲಿ ಹೆಬ್ಬಾಳಕ್ಕೆ, ಹೆಬ್ಬಾಳದಿಂದ ಭೂಪಸಂದ್ರ, ಹೆಬ್ಬಾಳ ರಿಂಗ್ ರಸ್ತೆಯಿಂದ ಮಾನ್ಯತಾ ಟೆಕ್ ಪಾರ್ಕ್, ನಾಗವಾರ, ನಾಗವಾರದಿಂದ ಹೆಣ್ಣೂರು, ಹೆಣ್ಣೂರಿನಿಂದ ಹೆಣ್ಣೂರು ಬಂಡೆ, ಬಂಡೆಯಿಂದ ಬೈರತಿ ಬಂಡೆ, ಬೈರತಿ ಬಂಡೆಯಿಂದ ಗೆದ್ಲಹಳ್ಳಿವರೆಗೆ 10ಕ್ಕೂ ಹೆಚ್ಚು ಬಸ್‌ಗಳಲ್ಲಿ ಪ್ರಯಾಣ ಮಾಡಿ, ಬಿಎಂಟಿಸಿ ವ್ಯವಸ್ಥೆಯನ್ನು ಖುದ್ದು ಪರಿಶೀಲಿಸಿದ್ದರು.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.