ಬೆಂಗಳೂರು, ಫೆ. 6: ಇತ್ತೀಚೆಗೆ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದ ಬೆಂಗಳೂರಿನ ಕೋಗಿಲು ಲೇಔಟ್ ತೆರವು (Kogilu Encroachment) ಪ್ರಕರಣದ ಕುರಿತು ಕರ್ನಾಟಕ ಹೈಕೋರ್ಟ್ (Karnataka High Court) ಮಹತ್ವದ ಸೂಚನೆ ನೀಡಿದ್ದು, ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿರುವುದು ಮತ್ತು ನಿರ್ಗತಿಕರಾಗಿರುವವರ ಮಾಹಿತಿಯನ್ನು ಒಳಗೊಂಡ ವರದಿ ಸಲ್ಲಿಸಲು ಅಮಿಕಸ್ ಕ್ಯೂರಿಗೆ ಶುಕ್ರವಾರ (ಫೆಬ್ರವರಿ 6) ನಿರ್ದೇಶಿಸಿದೆ. ಅಕ್ರಮವಾಗಿ ತೆರವು ಕಾರ್ಯಾಚರಣೆ ನಡೆಸಿರುವುದರಿಂದ ಅದನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಕೋಗಿಲು ಬಡಾವಣೆ ನಿವಾಸಿಗಳಾದ ಜೈಬಾ ತಬಸ್ಸುಮ್, ರೆಹನಾ ಮತ್ತು ಆರೀಫ್ ಬೇಗಂ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ವೇಳೆ ಹೈಕೋರ್ಟ್ ಈ ಸೂಚನೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರನ್ನೊಳಗೊಂಡ ವಿಭಾಗೀಯ ಪೀಠ ವಿಚಾರಣೆ ಕೈಗೆತ್ತಿಕೊಂಡಿದೆ.
ಅಮಿಕಸ್ ಕ್ಯೂರಿ ಬಿ.ವಿ. ವಿದ್ಯುಲ್ಲತಾ ಅವರನ್ನು ಉದ್ದೇಶಿಸಿ ಮಾತನಾಡಿದ ನ್ಯಾಯಾಲಯ, “ತೆರವು ಕಾರ್ಯಾಚರಣೆಯಿಂದ ಎಷ್ಟು ಮಂದಿ ನಿರ್ಗತಿಕರಾಗಿದ್ದಾರೆ? ಎಷ್ಟು ಜನರ ಮನೆ ತೆರವು ಮಾಡಲಾಗಿದೆ? ಎಷ್ಟು ಗುಡಿಸಲುಗಳನ್ನು ನಾಶಪಡಿಸಲಾಗಿದೆ? ಎಷ್ಟು ಕುಟುಂಬಗಳು ನಿರ್ಗತಿಕವಾಗಿವೆ? ಪುನರ್ವಸತಿಯ ವ್ಯವಸ್ಥೆ ಹೇಗಿದೆ? ಮುಂತಾದ ಅಂಶಗಳನ್ನು ಒಳಗೊಂಡು ವಿವರವಾದ ವರದಿ ಸಲ್ಲಿಸಬೇಕು" ಎಂದು ಸೂಚಿಸಿತು. ಜತೆಗೆ ವಿದ್ಯುಲ್ಲತಾ ಅವರಿಗೆ ಸಂಪೂರ್ಣ ನೆರವು ನೀಡುವಂತೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನಿರ್ದೇಶನವನ್ನೂ ನೀಡಿದೆ. ಜತೆಗೆ ಮಾರ್ಚ್ 12ಕ್ಕೆ ವಿಚಾರಣೆ ಮುಂದೂಡಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಫಕೀರ್ ಲೇಔಟ್‌ನಲ್ಲಿ 1990ರಿಂದ ನೆಲೆಸಿರುವ 15 ಮಂದಿಯ ನಿವಾಸಗಳನ್ನು ತೆರವು ಮಾಡಲಾಗಿದೆ ಎಂಬ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಪ್ರತ್ಯೇಕವಾಗಿ ನೋಟಿಸ್ ಜಾರಿ ಮಾಡಿದೆ. ಕೋಗಿಲು ಬಡಾವಣೆಯ ರಬಿಯಾ, ಮೊಹಮ್ಮದ್ ರಫೀಕ್ ಸೇರಿದಂತೆ 15 ಮಂದಿ ಸಲ್ಲಿಸಿರುವ ಈ ಕುರಿತು ಅರ್ಜಿ ಸಲ್ಲಿಸಿದ್ದರು.
ಕೋಗಿಲು ಸರ್ಕಾರಿ ಜಾಗ ಒತ್ತುವರಿ; ನಾಲ್ವರ ವಿರುದ್ಧ ಎಫ್‌ಐಆರ್ ದಾಖಲು
ಏನಿದು ಪ್ರಕರಣ?
ಯಲಹಂಕದ ಕೋಗಿಲು ಗ್ರಾಮದ ಸರ್ವೆ ನಂಬರ್ 99ರಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಆದೇಶದಂತೆ 14 ಎಕರೆ 36 ಗುಂಟೆ ಜಮೀನನ್ನು ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆಗೆ ಹಸ್ತಾಂತರಿಸಲಾಗಿತ್ತು. ಈ ಜಾಗದಲ್ಲಿ ಬಯೋ ಮೆಥನೈಸೆಷನ್ ಘಟಕ, ಎಳನೀರು ಬುರುಡೆ ಸಂಸ್ಕರಣೆ ಹಾಗೂ ಪ್ರಾಣಿ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ನಿರ್ಮಿಸಲು 2023ರಲ್ಲಿಯೇ ಟೆಂಡರ್ ಪ್ರಕ್ರಿಯೆ ಮುಗಿದು ಕಾರ್ಯಾದೇಶ ನೀಡಲಾಗಿತ್ತು. ಆದರೆ ಈ ಸರ್ಕಾರಿ ಜಾಗದ ಸುಮಾರು 4 ಎಕರೆ ಪ್ರದೇಶವನ್ನು ಅಕ್ರಮವಾಗಿ ಒತ್ತುವರಿ ಮಾಡಿ 160ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿತ್ತು. 2025ರ ಡಿಸೆಂಬರ್ 20ರಂದು ಜಿಲ್ಲಾಡಳಿತ ಮತ್ತು ಬಿಎಸ್‌ಡಬ್ಲ್ಯುಎಂಎಲ್ ಜಂಟಿ ಕಾರ್ಯಾಚರಣೆ ನಡೆಸಿ ಈ ಎಲ್ಲ ಒತ್ತುವರಿಗಳನ್ನು ತೆರವುಗೊಳಿಸಿತ್ತು.
ಒತ್ತುವರಿ ಮಾಡಿಕೊಂಡಿರುವರ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರಿದ್ದರು. ಇದೇ ಕಾರಣಕ್ಕೆ ನೆರೆಯ ಕೇರಳ ಈ ಪ್ರಕರಣದಲ್ಲಿ ಮೂಗು ತೂರಿಸಿ ಸಂತ್ರಸ್ತರಿಗೆ ವಸರಿ ಕಲ್ಪಿಸುವಂತೆ ಆಗ್ರಹಿಸಿತ್ತು. ಈ ಮೂಲಕ ಈ ಪ್ರಕರಣ ಭಾರಿ ಸದ್ದು ಮಾಡಿದ್ದು.