ಬೆಂಗಳೂರಿನಲ್ಲಿ 7ನೇ ಮಹಡಿಯಿಂದ ಜಿಗಿದ ಪ್ರೇಮಿಗಳು; ಯುವತಿ ಸಾವು, ಯುವಕನ ಸ್ಥಿತಿ ಗಂಭೀರ
Bengaluru News: ಬೆಂಗಳೂರಿನ ವೈಟ್‌ಫೀಲ್ಡ್‌ನ ಕೋ ಲಿವಿಂಗ್ ಪಿಜಿ ಕಟ್ಟಡದಿಂದ ಪ್ರೇಮಿಗಳು ಜಿಗಿದಿದ್ದು, ಘಟನೆಯಲ್ಲಿ ಯುವತಿ ಮೃತಪಟ್ಟಿದ್ದಾಳೆ. ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ವೈಟ್ ಫೀಲ್ಡ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
-
ಬೆಂಗಳೂರು: ರಾಜಧಾನಿಯಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಪಿಜಿ ಕಟ್ಟಡದ 7ನೇ ಮಹಡಿಯಿಂದ ಪ್ರೇಮಿಗಳು ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು, ಘಟನೆಯಲ್ಲಿ ಪ್ರಿಯತಮೆ ಸ್ಥಳದಲ್ಲೇ ಮೃತಪಟ್ಟಿದ್ದರೆ, ಪ್ರಿಯಕರನ ಸ್ಥಿತಿ ಗಂಭೀರವಾಗಿದೆ. ವೈಟ್ ಫೀಲ್ಡ್ ನ ಕೋ ಲಿವಿಂಗ್ ಪಿಜಿಯಲ್ಲಿ ಘಟನೆ ನಡೆದಿದೆ.
ಪುದುಚೇರಿ ಮೂಲದ ಯುವತಿ ಜನನಿ ಸ್ಥಳದಲ್ಲಿ ಮೃತಪಟ್ಟಿದ್ದಾಳೆ. ಇನ್ನು ಪ್ರಿಯಕರ ಮಾಣಿಕ್ಯ ವೇಲು ಸ್ಥಿತಿ ಗಂಭೀರವಾಗಿದೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವೃತ್ತಿಯಲ್ಲಿ ಇಬ್ಬರು ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದರು. ಕಳೆದ ಒಂದು ತಿಂಗಳಿಂದ ಜನನಿ ಮತ್ತು ಮಾಣಿಕ್ಯ ವೇಲು ಒಂದೇ ಪಿಜಿಯಲ್ಲಿ ವಾಸಿಸುತ್ತಿದ್ದರು. ಇದ್ದಕ್ಕಿದ್ದಂತೆ ಇಬ್ಬರು ಕಟ್ಟಡದಿಂದ ಜಿಗಿದಿದ್ದಾರೆ. ಸ್ಥಳಕ್ಕೆ ವೈಟ್ ಫೀಲ್ಡ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಮೈಸೂರಿನಲ್ಲಿ ಮೈಕ್ರೋಫೈನಾನ್ಸ್ ಕಿರುಕುಳಕ್ಕೆ ಹೆದರಿ ಯುವಕ ಆತ್ಮಹತ್ಯೆ
ಮೈಸೂರು: ಮೈಕ್ರೋಫೈನಾನ್ಸ್ ಕಿರುಕುಳಕ್ಕೆ ಹೆದರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ನಂಜಾಪುರದಲ್ಲಿ ನಡೆದಿದೆ. ನಂಜಾಪುರದ ವಸಂತಕುಮಾರ್ ಪುತ್ರ ರಂಜಿತ್ (32) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಮನೆ ನಿರ್ಮಾಣಕ್ಕಾಗಿ ಮೈಕ್ರೋಫೈನಾನ್ಸ್‌ನಲ್ಲಿ 12 ಲಕ್ಷ ರೂ. ಸಾಲ ಪಡೆದಿದ್ದರು. ಸಾಲ ಮರುಪಾವತಿಯಲ್ಲಿ ವಿಳಂಬ ಹಿನ್ನೆಲೆ 2 ಬಾರಿ ಫೈನಾನ್ಸ್ ನವರು ಮನೆಗೆ ಬೀಗ ಹಾಕಿದ್ದರು. ಈವರೆಗೆ 8 ಲಕ್ಷ ರೂ. ಪಾವತಿ ಮಾಡಿದ್ದ ರಂಜಿತ್ ಇತ್ತೀಚೆಗೆ 3 ಲಕ್ಷ ರೂ. ಪಾವತಿಸಿದ್ದರೂ ಕಿರುಕುಳ ಮುಂದುವರಿಸಿದ್ದರು ಎಂಬ ಆರೋಪವಿದೆ.
ಮಳೆ ಕೊರತೆಯಿಂದ ಜಮೀನಿನ ಬೆಳೆ ಕೈಕೊಟ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ರಂಜಿತ್ ಮತ್ತೆ ಮನೆಗೆ ಬೀಗ ಹಾಕಿದರೆ ಗ್ರಾಮದಲ್ಲಿ ಅವಮಾನವಾಗುತ್ತದೆ ಎಂಬ ಭಯದಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತನ್ನ ಪತ್ನಿಗೆ ಹೇಳಿಕೊಂಡಿದ್ದನಂತೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾನೆ.
ಪತಿ ಸಾವಿಗೆ ಮೈಕ್ರೋಫೈನಾನ್ಸ್ ಸಿಬ್ಬಂದಿ ಕಿರುಕುಳವೇ ಕಾರಣ ಎಂದು ಪತ್ನಿ ಭಾಗ್ಯ ಆರೋಪಿಸಿದ್ದಾರೆ. ಘಟನೆ ಕುರಿತು ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.