ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru Rain: ಬೆಂಗಳೂರಲ್ಲಿ ಆಲಿಕಲ್ಲು ಮಳೆ ಅಬ್ಬರ; ಮರಗಳು ನೆಲಕ್ಕುರುಳಿ ಹಲವು ವಾಹನಗಳು ಜಖಂ

Bengaluru Rain: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ಆಕಾಶ ಇರಲಿದ್ದು, ಸಂಜೆಯ ವೇಳೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಾಗುತ್ತದೆ. ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ, ಜೊತೆಗೆ ಬಿರುಗಾಳಿಯ ಸಾಧ್ಯತೆ ಇದೆ.

ಬೆಂಗಳೂರಲ್ಲಿ ಆಲಿಕಲ್ಲು ಮಳೆ ಅಬ್ಬರ; ಪ್ರಮುಖ ರಸ್ತೆಗಳು ಜಲಾವೃತ

ಬೆಂಗಳೂರಿನ ರಾಮಮೂರ್ತಿನಗರದಲ್ಲಿ ಭಾರಿ ಮಳೆಗೆ ಮರದ ಕೊಂಬೆ ಮುರಿದು ಬಿದ್ದಿರುವುದು.

Profile Prabhakara R May 13, 2025 7:08 PM

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಬಿರುಗಾಳಿ, ಆಲಿಕಲ್ಲು ಸಹಿತ ಮಳೆ ಅಬ್ಬರಿಸಿದ್ದು, ಹಲವೆಡೆ ಪ್ರಮುಖ ರಸ್ತೆಗಳು ಜಲಾವೃತವಾಗಿ ವಾಹನ ಸವಾರರು ಪರದಾಡುವಂತಾಯಿತು. ನಗರದ ಔಟರ್ ರಿಂಗ್ ರೋಡ್ ಭಾಗದಲ್ಲಿ ಧಾರಾಕಾರ ಮಳೆಯಾಗಿದ್ದು, ಎಂ.ಜಿ ರೋಡ್, ಚಿನ್ನಸ್ವಾಮಿ ಸ್ಟೇಡಿಯಂ, ವಿಧಾನಸೌಧ, ಕೆ.ಆರ್ ಸರ್ಕಲ್, ಮೆಜೆಸ್ಟಿಕ್, ಕೆ.ಆರ್ ಮಾರ್ಕೆಟ್, ಟೌನ್ ಹಾಲ್ ಸೇರಿದಂತೆ ಹಲವು ಕಡೆ ಧಾರಾಕಾರ ಮಳೆ ಸುರಿದಿದೆ.

ಇನ್ನು ನಗರದ ವಿವಿಧೆಡೆ ಮರಗಳ ಕೊಂಬೆಗಳು ಉರುಳಿ ಬಿದ್ದು ಅವಾಂತರ ಸೃಷ್ಟಿಯಾಗಿದೆ. ಬಾಣಸವಾಡಿ, ಕಲ್ಯಾಣನಗರದಲ್ಲಿ ಬಿರುಗಾಳಿ ಜತೆಗೆ ಆಲಿಕಲ್ಲು ಮಳೆ ಜೋರಾಗಿ ಸುರಿದಿದೆ. ಮಾನತ್ಯಾ ಟೆಕ್ ಪಾರ್ಕ್‌ನಲ್ಲಿ ಜೋರು ಮಳೆಯಾಗಿದ್ದು, ರಸ್ತೆಯಲ್ಲಿ ನೀರು ನಿಂತ ಪರಿಣಾಮ ಕಿಲೋ ಮೀಟರ್‌ಗಟ್ಟಲೇ ಸಂಚಾರ ದಟ್ಟಣೆ ಉಂಟಾಗಿತ್ತು. ಮಾನ್ಯತಾ ಟೆಕ್ ಪಾರ್ಕ್ ಒಳಭಾಗದ ರಸ್ತೆಯಂತೂ ಸಂಪೂರ್ಣ ಜಲಾವೃತವಾಗಿದೆ.



ನಾಗವಾರ-ಹೆಬ್ಬಾಳ ಮುಖ್ಯರಸ್ತೆಯಲ್ಲಿ ಮಳೆ ಅಬ್ಬರ ಜೋರಾಗಿತ್ತು. ಬಿಎಂಟಿಸಿ ಬಸ್‌ನ ಒಳಭಾಗಕ್ಕೆ ಮಳೆ ನೀರು ನುಗ್ಗಿದ್ದರಿಂದ ಪ್ರಯಾಣಿಕರು ಪರದಾಡಿದರು. ಎಚ್‌ಬಿಆರ್ ಲೇಔಟ್‌ನಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಮರ ಬಿದ್ದು ಜಖಂ ಆಗಿದೆ. ಯಲಚೇನಹಳ್ಳಿ ಬಳಿ ಮೂರು ಮರಗಳು ಬಿದ್ದ ಪರಿಣಾಮ ನಾಲ್ಕು ಕಾರುಗಳಿಗೆ ಹಾನಿಯಾಗಿದೆ. ಮಲ್ಲೇಶ್ವರದ ಪಿಯು ಬೋರ್ಡ್, ಕಾವೇರಿ ಜಂಕ್ಷನ್ ಬಳಿ ಗಾಳಿ ಮಳೆಗೆ ಮರ ಏಕಾಏಕಿ ಬಿದ್ದಿದ್ದು, ಯಾವುದೇ ಹಾನಿ ಸಂಭವಿಸಿಲ್ಲ.

Bengaluru Rain (17)

ವಿಂಡ್ಸನ್ ಮ್ಯಾನರ್ ಅಂಡರ್ ಪಾಸ್‌ನಿಂದ ಅರಮನೆ ಮೈದಾನ ಕಡೆ ಹೋಗುವ ಮಾರ್ಗದಲ್ಲೂ ಮರದ ಕೊಂಬೆ ಮುರಿದು ಬಿದ್ದಿದೆ. ಕುಮಾರಸ್ವಾಮಿ ಲೇಔಟ್ ಬಳಿ ಆಟೋ ಮುಂದಿನ ಚಕ್ರ ಗುಂಡಿಗೆ ಬಿದ್ದು ಆಟೋ ಚಾಲಕ ಹೈರಾಣಾದ ದೃಶ್ಯ ಕಂಡು ಬಂತು.

ಇನ್ನು ಮುಂದಿನ 5 ದಿನಗಳವರೆಗೆ ಕರ್ನಾಟಕದಾದ್ಯಂತ ಗರಿಷ್ಠ ತಾಪಮಾನದಲ್ಲಿ ಇಳಿಕೆಯ ಪ್ರವೃತ್ತಿಯೊಂದಿಗೆ ದೊಡ್ಡ ಬದಲಾವಣೆಗಳಿಲ್ಲ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ಆಕಾಶ ಇರಲಿದ್ದು, ಸಂಜೆಯ ವೇಳೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಾಗುತ್ತದೆ. ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ, ಜೊತೆಗೆ ಬಿರುಗಾಳಿಯ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 33°C ಮತ್ತು 21°C ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Bengaluru Rain (18)

ಈ ಸುದ್ದಿಯನ್ನೂ ಓದಿ | Karnataka Rains: ಹಾವೇರಿಯಲ್ಲಿ ಸಿಡಿಲು ಬಡಿದು ರೈತ ಸಾವು

ಮೇ 14ರಂದು ಕೂಡ ಕರಾವಳಿ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಗದಗ, ಧಾರವಾಡ, ಹಾವೇರಿ, ವಿಜಯಪುರ, ಬೀದರ್‌, ಕೊಪ್ಪಳ, ಕಲಬುರಗಿ, ರಾಯಚೂರು, ಯಾದಗಿರಿ ಜಿಲ್ಲೆಯಲ್ಲಿ ಹಾಗೂ ದಕ್ಷಿಣ ಒಳನಾಡಿನ ಬಳ್ಳಾರಿ, ಚಾಮರಾಜನಗರ, ಚಿತ್ರದುರ್ಗ, ಹಾಸನ, ತುಮಕೂರು, ಬೆಂಗಳೂರು, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ದಾವಣಗೆರೆ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.