ಡಿ.7ರಂದು ಸೋರೆಕಾಯಿಪುರದಲ್ಲಿ ಮಲೆನಾಡು ಗಿಡ್ಡ ಹೋರಿ ಹಬ್ಬ; 50 ರೈತರಿಗೆ ಜೋಡಿ ಹೋರಿ ಉಚಿತ ವಿತರಣೆ
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆಯ ಸೋರೆಕಾಯಿಪುರದ ಮಲ್ಲಿಗಮ್ಮ ದೇವಸ್ಥಾನ ಆವರಣದಲ್ಲಿ ಡಿ.7ರಂದು 'ಮಲೆನಾಡು ಗಿಡ್ಡ ಹೋರಿ ಹಬ್ಬ' ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ 50 ರೈತರಿಗೆ ಉಚಿತವಾಗಿ ಮಲೆನಾಡು ಗಿಡ್ಡ ತಳಿಯ ಜೋಡಿ ಹೋರಿಗಳನ್ನು ನೀಡಲಾಗುತ್ತದೆ.
ವಿಶ್ವ ಒಕ್ಕಲಿಗ ಮಠದ ಮಠಾಧೀಶರಾದ ಶ್ರೀ ನಿಶ್ಚಲಾನಂದ ಸ್ವಾಮೀಜಿ ಮಾತನಾಡಿದರು. -
ಬೆಂಗಳೂರು, ಡಿ.1: ಅಳಿವಿನಂಚಿನಲ್ಲಿರುವ ಮಲೆನಾಡು ಗಿಡ್ಡ ತಳಿಗಳನ್ನು ಸಂರಕ್ಷಿಸುವ ಸಲುವಾಗಿ ಮಲೆನಾಡು ಗಿಡ್ಡ ತಳಿಯ ಸಂರಕ್ಷಣಾ ಮತ್ತು ಸಂವರ್ಧನಾ ಅಭಿಯಾನ ಹಾಗೂ ಹಾಸನ್ ಗೂಳಿಯ ಗೋವು ದೇವಾಲಯ ಆಶ್ರಯದಲ್ಲಿ ಡಿಸೆಂಬರ್ 7ರಂದು ʼಮಲೆನಾಡು ಗಿಡ್ಡ ಹೋರಿ ಹಬ್ಬʼ ವನ್ನು (Malnad Gidda Hori Habba) ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆಯ ಸೋರೆಕಾಯಿಪುರದ ಮಲ್ಲಿಗಮ್ಮ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ದೇಸಿ ತಳಿಯಾದ 50 ಮಲೆನಾಡು ಗಿಡ್ಡ ತಳಿಯ ಜೋಡಿ ಹೋರಿಗಳನ್ನು 50 ರೈತರಿಗೆ ಉಚಿತವಾಗಿ ನೀಡಲಾಗುತ್ತದೆ ಎಂದು ಮಲೆನಾಡು ಗಿಡ್ಡ ತಳಿ ಸಂರಕ್ಷಣಾ ಮತ್ತು ಸಂವರ್ಧನಾ ಅಭಿಯಾನದ ಸಂಘಟಕರಾದ ಅಕ್ಷಯ್ ಆಳ್ವ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಇತ್ತೀಚಿನ ದಿನಗಳಲ್ಲಿ ಮಲೆನಾಡು ಗಿಡ್ಡ ತಳಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಆದರೆ ಹೆಣ್ಣು ಕರುಗಳ ಅಭಾವ ಇದೆ. ಗಂಡು ಕರುಗಳ ಪ್ರಮಾಣ ಜಾಸ್ತಿಯಾಗುತ್ತಿದೆ. ಹೀಗಾಗಿ ಜೋಡೆತ್ತು ಕಾರ್ಯಕ್ರಮಗಳನ್ನು ಮಾಡಿದ್ದೇವೆ. ನಂದಿಗಳನ್ನು ಉಳಿಸಿದರೆ ಮಾತ್ರ ಮಲೆನಾಡು ಗಿಡ್ಡ ತಳಿಗಳ ಸಂತತಿ ವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಡಿಸೆಂಬರ್ 7ರಂದು ಮಲೆನಾಡು ಗಿಡ್ಡ ಹೋರಿ ಹಬ್ಬ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ವಿಶ್ವ ಒಕ್ಕಲಿಗರ ಮಠದ ಶ್ರೀ ಡಾ. ನಿಶ್ಚಲಾನಂದ ಸ್ವಾಮೀಜಿ ಅವರು ವಹಿಸಲಿದ್ದಾರೆ. ಶ್ರವಣಬೆಳಗೊಳದ ಶಾಸಕ ಡಾ. ಸಿ.ಎನ್. ಬಾಲಕೃಷ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ರಾಷ್ಟ್ರೀಯ ಗೋ ಸೇವಾ ಸಂಸ್ಥಾನದ ಅಧ್ಯಕ್ಷ ಭಕ್ತಿ ಭೂಷಣ್ ದಾಸ್ ಉದ್ಘಾಟಿಸಲಿದ್ದಾರೆ ಎಂದು ಅವರು ತಿಳಿಸಿದರು.
ಈಗಾಗಲೇ ಮಲೆನಾಡು ಗಿಡ್ಡ ತಳಿ ಸಂರಕ್ಷಣೆ ಮತ್ತು ಸಂವರ್ಧನಾ ಅಭಿಯಾನದಿಂದ ಬಿಂಡಿಕೆನವಿಲೆಯಲ್ಲಿ ಗೋಕಲ್ಯಾಣ ಉತ್ಸವವನ್ನು ಆಯೋಜಿಸಲಾಗಿತ್ತು. ಈ ಉತ್ಸವದಲ್ಲಿ 15 ರೈತರಿಗೆ ಒಂದು ಹೋರಿ - ಒಂದು ದನದ ಜೋಡಿಯನ್ನು ವಿತರಿಸಲಾಗಿದೆ. ಅಲ್ಲದೆ ಮಲೆನಾಡು ಗಿಡ್ಡ ತಳಿಯ ಸುಮಾರು ನೂರು ಜೋಡೆತ್ತುಗಳನ್ನು ಬಯಲು ಸೀಮೆಯಲ್ಲಿ ವಿತರಣೆ ಮಾಡಿದ್ದೇವೆ ಎಂದು ಅಕ್ಷಯ್ ಆಳ್ವ ತಿಳಿಸಿದರು.
ಆದರೆ ಈ ಜೋಡೆತ್ತುಗಳು ಅಥವಾ ಮಲೆನಾಡು ಗಿಡ್ಡ ತಳಿಗಳನ್ನು ಪಡೆಯುವ ರೈತರಿಗೆ ಷರತ್ತುಗಳನ್ನು ವಿಧಿಸಲಾಗುತ್ತದೆ. ಸಾವಯವ ಕೃಷಿ ಮಾಡುವ ರೈತರು, ಹಿಂದೂ ಸಮುದಾಯವರಿಗೆ ಮಾತ್ರ ಮಲೆನಾಡು ಗಿಡ್ಡ ತಳಿಗಳನ್ನು ಉಚಿತವಾಗಿ ನೀಡಲಾಗುತ್ತದೆ. ಈ ಮಲೆನಾಡು ಗಿಡ್ಡ ಗಳನ್ನು ಮಾರಾಟ ಮಾಡುವ ಹಾಗಿಲ್ಲ. ತಳಿಗಳು ಮೃತಪಟ್ಟರೆ ಪೋಸ್ಟ್ ಮಾರ್ಟಮ್ ರಿಪೋರ್ಟ್ ನೀಡಬೇಕು. ಕಾಣೆಯಾದರೆ ಎಫ್‍ಐಆರ್ ಮಾಡಬೇಕು. ಇಲ್ಲದೇ ಇದ್ದರೆ 2 ಲಕ್ಷ ರೂಪಾಯಿ ದಂಡವನ್ನು ಕಟ್ಟಬೇಕು. ಹಾಗೇ ನಾವು ವಿತರಣೆ ಮಾಡಿದ ಮಲೆನಾಡು ಗಿಡ್ಡ ತಳಿಗಳ ಬಗ್ಗೆಯೂ ಮಾಹಿತಿಯನ್ನು ಪಡೆದುಕೊಳ್ಳುತ್ತೇವೆ. ಎಲ್ಲೂ ಕೂಡ ದುರುಪಯೋಗ ಆಗದಂತೆ ನೋಡಿಕೊಳ್ಳುತ್ತಿದ್ದೇವೆ ಎಂದು ಅಕ್ಷಯ್ ಆಳ್ವ ಮಾಹಿತಿ ನೀಡಿದರು.
ಫ್ರಿಡ್ಜ್‌ನೊಳಗೆ ಸಿಲಿಕಾನ್ ಸಿಟಿ; ಬೆಂಗಳೂರಲ್ಲಿ ದಾಖಲಾಯಾಯ್ತು ಕಂಡರಿಯದಷ್ಟು ಚಳಿ
ಈಗಾಗಲೇ ರಾಜ್ಯಾದ್ಯಂತ ನಮ್ಮ ಅಭಿಯಾನಕ್ಕೆ ಉತ್ತಮ ಬೆಂಬಲ ಸಿಗುತ್ತಿದೆ. ಅದರಲ್ಲೂ ಬಯಲು ಸೀಮೆಗಳ ರೈತರು ಹೆಚ್ಚಿನ ಬೇಡಿಕೆಯನ್ನಿಡುತ್ತಿದ್ದಾರೆ. ನಾವು ಈ ಹೋರಿ ಹಬ್ಬದಲ್ಲಿ ಒಂದರಿಂದ ಮೂರು ವರ್ಷದ ಕರುಗಳನ್ನು ಮಾತ್ರ ವಿತರಣೆ ಮಾಡುತ್ತೇವೆ. ಇಲ್ಲಿ ಯಾವುದೇ ವ್ಯಾಪಾರ ನಡೆಯುವುದಿಲ್ಲ. ಮಲೆನಾಡು ಗಿಡ್ಡ ತಳಿಗಳ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡುತ್ತೇವೆ. ಹಾಗೇ ಮಲೆನಾಡು ಗಿಡ್ಡ ತಳಿಗಳನ್ನು ಸಾಕುತ್ತಿರುವ ರೈತರಿಗೆ ಸನ್ಮಾನ ಕಾರ್ಯಕ್ರಮ ಕೂಡ ನಡೆಯಲಿದೆ ಎಂದು ತಿಳಿಸಿದರು.
ಮಲೆನಾಡು ಗಿಡ್ಡ ತಳಿಗಳು ಅವನತಿಯ ಅಂಚಿನಲ್ಲಿವೆ: ಶ್ರೀ ನಿಶ್ಚಲಾನಂದ ಸ್ವಾಮೀಜಿ
ಮಲೆನಾಡು - ಕರಾವಳಿ ಸೇರಿದಂತೆ ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಗಿಡ್ಡ ತಳಿಯೇ ಮಲೆನಾಡು ಗಿಡ್ಡ. ಅದರಲ್ಲೂ ಪ್ರಕೃತಿದತ್ತವಾದ ಗಿಡ್ಡ ಆಕಾರವೇ ಮಲೆನಾಡು ಗಿಡ್ಡ ತಳಿಯ (Malnad gidda breeds) ವಿಶೇಷತೆ. ನೋಡಲು ಗಿಡ್ಡವಾಗಿದ್ರೂ ಗುಡ್ಡಗಾಡು ಪ್ರದೇಶದಲ್ಲಿ ಸಂಚರಿಸಲು ಬೇಕಾದ ದೇಹ ರಚನೆ, ಗಟ್ಟಿಮುಟ್ಟಾದ ಗೊರಸುಗಳು ಚಂಗನೆ ನೆಗೆಯುವ ಸಾಮರ್ಥ್ಯ, ಕಡಿಮೆ ಆಹಾರ, ಗುಡ್ಡಗಾಡಿನಲ್ಲಿ ಮೇಯುವ ಕಾರಣದಿಂದ ಔಷಧಿಯ ಗುಣಗಳನ್ನೊಳಗೊಂಡಿರುವ ಗವ್ಯ ಉತ್ಪನ್ನಗಳು ಮಲೆನಾಡು ಗಿಡ್ಡ ತಳಿಗಳಿಂದ ಪಡೆಯಬಹುದಾಗಿದೆ. ಅಲ್ಲದೆ ಸಾವಯವ ಕೃಷಿಗೂ ಈ ತಳಿಗಳನ್ನು ಬಳಸುವುದರಿಂದ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಲು ಸಾಧ್ಯ ಆಗುತ್ತದೆ ಎಂದು ವಿಶ್ವ ಒಕ್ಕಲಿಗ ಮಠದ ಮಠಾಧೀಶರಾದ ಶ್ರೀ ನಿಶ್ಚಲಾನಂದ ಸ್ವಾಮೀಜಿ ಹೇಳಿದರು.
ಪುಟ್ಟಣ್ಣ ಕಣಗಾಲ್ ಕನ್ನಡ ಸಂಸ್ಕೃತಿಯ ನೇಕಾರರು: ಕೆ.ವಿ. ಪ್ರಭಾಕರ್
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಇತ್ತೀಚಿನ ದಿನಗಳಲ್ಲಿ ಮಲೆನಾಡು ಗಿಡ್ಡ ತಳಿಗಳು ಅವನತಿಯ ಅಂಚಿನಲ್ಲಿವೆ. ಹೈನುಗಾರಿಕೆಯ ಕ್ರಾಂತಿಯಿಂದಾಗಿ ಮಲೆನಾಡು ಗಿಡ್ಡ ತಳಿಗಳನ್ನು ಸಾಕುವವರ ಸಂಖ್ಯೆ ಕೂಡ ಕಡಿಮೆಯಾಗಿದೆ. ಹೀಗಾಗಿ ಅಳಿವಿನಂಚಿನಲ್ಲಿರುವ ಮಲೆನಾಡು ಗಿಡ್ಡ ತಳಿಗಳನ್ನು ಉಳಿಸಿ, ಬೆಳೆಸುವ ಪ್ರಯತ್ನವನ್ನು ಮಲೆನಾಡು ಗಿಡ್ಡ ತಳಿ ಸಂರಕ್ಷಣೆ ಹಾಗೂ ಸಂವರ್ಧನಾ ಅಭಿಯಾನ ತಂಡವು ಮಾಡುತ್ತಿದೆ. ಈ ಅಭಿಯಾನದ ರೂವಾರಿ ಸುಳ್ಯ ತಾಲೂಕಿನ ಅಲೆಕಾಡಿಯ ನೀರುಡೇಲ್‍ನ ಅಕ್ಷಯ್ ಆಳ್ವ. ಸ್ನಾತಕೋತ್ತರ ಪದವಿ ಪಡೆದು ಉದ್ಯೋಗದಲ್ಲಿದ್ರೂ ಇದೀಗ ಉದ್ಯೋಗವನ್ನು ಬಿಟ್ಟು ಮಲೆನಾಡು ಗಿಡ್ಡ ತಳಿಗಳ ಸಂರಕ್ಷಣೆ ಮತ್ತು ಸಂವರ್ಧನಾ ಅಭಿಯಾನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದರು.
ಈಗಾಗಲೇ ಸಾವಯವ ಕೃಷಿ, ಗೋ ಆಧಾರಿತ ಕೃಷಿ ಮಾಡುವ ಸುಮಾರು ಮೂರು ಸಾವಿರ ರೈತರಿಗೆ ಉಚಿತವಾಗಿ ಮಲೆನಾಡು ಗಿಡ್ಡ ತಳಿಗಳನ್ನು ವಿತರಣೆ ಮಾಡಲಾಗಿದೆ ಎಂದರು.