ಬೆಂಗಳೂರು, ಜ. 24: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಮಹಿಳೆಯೊಬ್ಬರು ಹಂಚಿಕೊಂಡಿರುವ ಒಂದು ಆತಂಕಕಾರಿ ಘಟನೆಯು ನಗರದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಕಳವಳವನ್ನು ಹುಟ್ಟು ಹಾಕಿದೆ. ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಕೆಲಸದಿಂದ ಮನೆಗೆ ಹಿಂದಿರುಗುವಾಗ ಬೆತ್ತಲೆಯಾಗಿದ್ದ ವ್ಯಕ್ತಿಯೊಬ್ಬ ತನಗೆ ಕಿರುಕುಳ ನೀಡಿ ಬೆನ್ನಟ್ಟಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ಮಹಿಳೆಯ ಪ್ರಕಾರ, ಅವರು ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಬೆತ್ತಲೆಯಾಗಿ ಕಾರನ್ನು ಚಲಾಯಿಸಿಕೊಂಡು ಬಂದ ವ್ಯಕ್ತಿಯೊಬ್ಬ ಹಿಂಬಾಲಿಸಲು ಪ್ರಾರಂಭಿಸಿದ. ವಿಡಿಯೊದಲ್ಲಿ ಮಹಿಳೆಯು ಏದುಸಿರುಬಿಡುತ್ತ ಉಸಿರಾಡುತ್ತಿರುವುದನ್ನು ಮತ್ತು ಸಹಾಯಕ್ಕಾಗಿ ಪದೇ ಪದೆ ಕೂಗುತ್ತಿರುವುದನ್ನು ಕೇಳಬಹುದು. ಆ ವ್ಯಕ್ತಿ ಅವಳನ್ನು ಕರೆದು ಅವಳ ಕಡೆಗೆ ಕಾರು ಚಲಾಯಿಸಿದ್ದಾನೆ. ಇದರಿಂದ ಆಕೆ ಮತ್ತಷ್ಟು ಭಯಗೊಂಡಿರುವುದು ಕಂಡು ಬಂದಿದೆ.
ಕೊರಿಯನ್ ಯುವತಿಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲೈಂಗಿಕ ಕಿರುಕುಳ
ಘಟನೆಯನ್ನು ರೆಕಾರ್ಡ್ ಮಾಡುತ್ತಲೇ ಇದ್ದಾಗ ಮಹಿಳೆ ವೇಗವಾಗಿ ನಡೆಯುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದು. ಅವನು ಕಾರಿನೊಳಗೇ ಇದ್ದ ಮತ್ತು ಮಹಿಳೆಯನ್ನು ಒಳಗೆ ಬರುವಂತೆ ಪದೇ ಪದೆ ಕರೆಯುತ್ತಲೇ ಇದ್ದ. ಅದಕ್ಕೆ ಆಕೆ ಸಹಾಯಕ್ಕಾಗಿ ಕೂಗುತ್ತಿದ್ದರು. ಆದರೆ ಯಾರೂ ತನ್ನ ನೆರವಿಗೆ ಬಂದಿಲ್ಲ ಎಂದು ಮಹಿಳೆ ಹೇಳಿದ್ದಾರೆ. ಘಟನೆ ಸಾರ್ವಜನಿಕ ರಸ್ತೆಯಲ್ಲಿ ನಡೆದಿದ್ದರೂ ಯಾರೂ ಮಹಿಳೆಯ ನೆರವಿಗೆ ಆಗಮಿಸದೇ ಇದ್ದುದು ಚರ್ಚೆಗೆ ಗ್ರಾಸವಾಗಿದೆ.
ಇನ್ನು ಘಟನೆ ಸಂಬಂಧ ಮಹಿಳೆಯು ಪೊಲೀಸರನ್ನು ಸಂಪರ್ಕಿಸಿದ್ದಾರೆಯೇ ಅಥವಾ ದೂರು ದಾಖಲಿಸಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಘಟನೆಯು ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆಯ ಬಗೆಗಿನ ಕಳವಳವನ್ನು ಹುಟ್ಟು ಹಾಕಿದೆ. ಅಪರಾಧಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ.
ಇಲ್ಲಿದೆ ವಿಡಿಯೊ:
ರಸ್ತೆಯಲ್ಲಿ ಜಾರಿ ಬಿದ್ದ ಬೈಕ್ ಸವಾರರು
ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಅನೇಕ ಬೈಕ್ ಸವಾರರು ಒಬ್ಬರ ನಂತರ ಒಬ್ಬರು ರಸ್ತೆಗೆ ಬಿದ್ದಿದ್ದಾರೆ. ಶುಕ್ರವಾರದ (ಜನವರಿ 23) ಹಠಾತ್ ಮಳೆಯ ನಂತರ, ಅಮ್ರೋಹಾದ ರಸ್ತೆ ಅಪಘಾತ ವಲಯವಾಯಿತು. ಇಲ್ಲಿ ಅನೇಕ ದ್ವಿಚಕ್ರ ವಾಹನಗಳು ರಸ್ತೆಯಲ್ಲಿ ಜಾರುತ್ತಿರುವುದು ಕಂಡುಬಂತು.
ರಸ್ತೆಯಲ್ಲಿ ಮಣ್ಣು ಹರಡಿಕೊಂಡಿದ್ದು ಇದಕ್ಕೆ ಕಾರಣವೆಂದು ತಿಳಿದುಬಂದಿದೆ. ಇದರಿಂದಾಗಿ ದ್ವಿಚಕ್ರ ವಾಹನಗಳು ಬಿದ್ದು ದೂರದವರೆಗೆ ಜಾರಿದೆ. ಘಟನೆಯಲ್ಲಿ ಹೆಚ್ಚಿನ ಸಂಖ್ಯೆಯ ವಾಹನ ಸವಾರರು ಗಾಯಗೊಂಡರು. ಅಲ್ಲಿದ್ದ ಜನರು ಅಪಘಾತದ ಲೈವ್ ವಿಡಿಯೊವನ್ನು ರೆಕಾರ್ಡ್ ಮಾಡಿ ಅದನ್ನು ವೈರಲ್ ಮಾಡಿದರು. ಇದು ಅಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಕ್ರಮ ಕೈಗೊಂಡರು.