ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Marutha Movie: ಸ‌ದ್ದಿಲ್ಲದೆ ಮುಕ್ತಾಯವಾಯಿತು ದುನಿಯಾ ವಿಜಯ್, ಶ್ರೇಯಸ್ ಕೆ ಮಂಜು ಅಭಿನಯದ ʼಮಾರುತʼ ಚಿತ್ರದ ಶೂಟಿಂಗ್

Marutha Movie: ಎಸ್. ನಾರಾಯಣ್ ಹಾಗೂ ದುನಿಯಾ ವಿಜಯ್ ಅವರ ಕಾಂಬಿನೇಶನ್‌ನಲ್ಲಿ ಬರುತ್ತಿರುವ ಮೂರನೇ ಚಿತ್ರ ʼಮಾರುತʼ. ಈ ಹಿಂದೆ ʼಚಂಡʼ ಹಾಗೂ ʼದಕ್ಷʼ ಚಿತ್ರಗಳು ಇವರಿಬ್ಬರ ಕಾಂಬಿನೇಶನ್‌ನಲ್ಲಿ ಬಂದು ಜನಪ್ರಿಯವಾಗಿತ್ತು.

ಸ‌ದ್ದಿಲ್ಲದೆ ಮುಕ್ತಾಯವಾಯಿತು ದುನಿಯಾ ವಿಜಯ್, ಶ್ರೇಯಸ್ ಕೆ ಮಂಜು ಅಭಿನಯದ  ʼಮಾರುತʼ ಚಿತ್ರದ ಶೂಟಿಂಗ್

Profile Prabhakara R Jan 26, 2025 3:54 PM

ಬೆಂಗಳೂರು: ಕನ್ನಡದಲ್ಲಿ ಸಾಕಷ್ಟು ಸದಭಿರುಚಿ ಚಿತ್ರಗಳನ್ನು ನಿರ್ದೇಶಿಸಿರುವ ಹೆಸರಾಂತ ನಿರ್ದೇಶಕ ಡಾ. ಎಸ್. ನಾರಾಯಣ್ ನಿರ್ದೇಶನದ ಹಾಗೂ ತಮ್ಮ ಅಮೋಘ ಅಭಿನಯದ ಮೂಲಕ ಜನಪ್ರಿಯರಾಗಿರುವ ದುನಿಯಾ ವಿಜಯ್ ಮತ್ತು ಶ್ರೇಯಸ್ ಕೆ ಮಂಜು ಅಭಿನಯಿಸಿರುವ ಬಹು ನಿರೀಕ್ಷಿತ ಚಿತ್ರ 'ಮಾರುತ' (Marutha Movie) ಚಿತ್ರೀಕರಣ ಮುಕ್ತಾಯವಾಗಿದೆ. ಖ್ಯಾತ ನಿರ್ಮಾಪಕರಾದ ಕೆ.ಮಂಜು ಹಾಗೂ ರಮೇಶ್ ಯಾದವ್ ಅವರು, ಈಶಾ ಪ್ರೊಡಕ್ಷನ್ಸ್ ಮೂಲಕ ಜಂಟಿಯಾಗಿ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ.

ಅಪಾರ ವೆಚ್ಚದಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಧಾರವಾಡ, ಕೂಡಲ ಸಂಗಮ, ಸವದತ್ತಿ, ಬೆಳಗಾವಿ, ಗೋವಾ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಇತ್ತೀಚೆಗೆ ಬೆಂಗಳೂರು ಸಮೀಪ ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಒಡೆಯಲಾಯಿತು.

ಎಸ್. ನಾರಾಯಣ್ ಹಾಗೂ ದುನಿಯಾ ವಿಜಯ್ ಅವರ ಕಾಂಬಿನೇಶನ್‌ನಲ್ಲಿ ಬರುತ್ತಿರುವ ಮೂರನೇ ಚಿತ್ರ ʼಮಾರುತʼ. ಈ ಹಿಂದೆ ʼಚಂಡʼ ಹಾಗೂ ʼದಕ್ಷʼ ಚಿತ್ರಗಳು ಇವರಿಬ್ಬರ ಕಾಂಬಿನೇಶನ್‌ನಲ್ಲಿ ಬಂದು ಜನಪ್ರಿಯವಾಗಿತ್ತು.

ಈ ಸುದ್ದಿಯನ್ನೂ ಓದಿ | Shiva Rajkumar: ಕರುನಾಡಿಗೆ ಮರಳಿದ ಶಿವಣ್ಣನಿಗೆ ಅದ್ದೂರಿ ಸ್ವಾಗತ; ಭವ್ಯ ಮೆರವಣಿಗೆ

ನಿರ್ಮಾಪಕ ಕೆ.ಮಂಜು ಅವರು ದುನಿಯಾ ವಿಜಯ್ ಅವರ ನಟನೆಯ ʼರಜನಿಕಾಂತʼ, ʼಶಂಕರ ಐ.ಪಿ.ಎಸ್ʼ ಚಿತ್ರಗಳನ್ನು ನಿರ್ಮಿಸಿದ್ದರು. ನಿರ್ಮಾಪಕ ರಮೇಶ್ ಯಾದವ್ ಅವರಿಗೆ ದುನಿಯಾ ವಿಜಯ್ ಅವರ ಜೊತೆಗೆ ಇದು ಮೊದಲ ಚಿತ್ರ.

ʼಮಾರುತʼ ಒಂದು ಕಂಟೆಂಟ್ ಓರಿಯಂಟೆಡ್ ಚಿತ್ರ. ಇದು ನಿಮ್ಮ ಕಥೆ. ನಮ್ಮ, ನಿಮ್ಮೆಲ್ಲರ ಮನೆಯ ಕಥೆಯೂ ಹೌದು.‌ ನಮಗೆ ಗೊತ್ತಿಲ್ಲದ ಹಾಗೆ ನಮ್ಮನ್ನೆಲ್ಲಾ ಅವರಿಸಿಕೊಂಡಿರುವ ಭೂತ. ಆದ್ದರಿಂದ ಸಮಾಜದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳೇನು? ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತಿದೆ ಎಂದು ಚಿತ್ರದ ಕಥಾಹಂದರದ ಬಗ್ಗೆ ನಿರ್ದೇಶಕರು ತಿಳಿಸಿದ್ದಾರೆ.

ದುನಿಯಾ ವಿಜಯ್, ಶ್ರೇಯಸ್ ಕೆ ಮಂಜು ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರದ ನಾಯಕಿ ಬೃಂದಾ. ಈವರೆಗೂ ಮಾಡಿರದ ವಿಭಿನ್ನ ಪಾತ್ರದಲ್ಲಿ ಸಾಧುಕೋಕಿಲ ಅವರು ಕಾಣಿಸಿಕೊಂಡಿದ್ದಾರೆ. ನಿಶ್ವಿಕಾ ನಾಯ್ಡು, ರಂಗಾಯಣ ರಘು, ತಾರಾ ಅನುರಾಧ, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಮಂಜು ಪಾವಗಡ , ಚಿತ್ರಾ ಶೆಣೈ ಸೇರಿ ಅನೇಕ ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ಇರುವ ʼಮಾರುತʼ ಚಿತ್ರದ ವಿಶೇಷ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿದ್ದಾರೆ.

ಈ ಸುದ್ದಿಯನ್ನೂ ಓದಿ | Rashmi Hegde Column: ಗೂಢಚಾರಿ ನೀರಾ ಆರ್ಯ

ಎಸ್. ನಾರಾಯಣ್ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಪಿ.ಕೆ.ಎಚ್ ದಾಸ್ ಛಾಯಾಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನ, ವಿನೋದ್ ಹಾಗೂ ಅರ್ಜುನ್ ಸಾಹಸ ನಿರ್ದೇಶನ ಮತ್ತು ಮೋಹನ್ ಕುಮಾರ್, ಸಂತು ಅವರ ನೃತ್ಯ ನಿರ್ದೇಶನವಿದೆ.