ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026 Tickets: ನನ್ನ ಹೆಸರಲ್ಲಿ ಐಪಿಎಲ್‌ ಟಿಕೆಟ್, ಪಾಸ್‌ ವಿತರಿಸಬೇಡಿ: ಸ್ಪೀಕರ್‌ಗೆ ಶಾಸಕ ಸುರೇಶ್‌ ಕುಮಾರ್‌ ಪತ್ರ

ರಾಜ್ಯ ಸರ್ಕಾರ ಅಥವಾ ಕೆ.ಎಸ್.ಸಿ.ಎ. ವತಿಯಿಂದ ಶಾಸಕರಿಗೆ ನೀಡಲಾಗುವ ಐಪಿಎಲ್ ಪಂದ್ಯದ ಯಾವುದೇ ಪಾಸ್ ಅಥವಾ ಟಿಕೆಟ್‌ಗಳನ್ನು ನಾನು ಸವಿನಯವಾಗಿ ನಿರಾಕರಿಸುತ್ತಿದ್ದೇನೆ. ಹೀಗಾಗಿ ತಮ್ಮ ಹೆಸರಿನಲ್ಲಿ ಯಾವುದೇ ಟಿಕೆಟ್ ಅಥವಾ ಪಾಸ್‌ಗಳನ್ನು ವಿತರಿಸಬಾರದೆಂದು ಸ್ಪೀಕರ್‌ ಯು.ಟಿ. ಖಾದರ್‌ ಅವರಿಗೆ ಶಾಸಕ ಸುರೇಶ್‌ ಕುಮಾರ್‌ ಮನವಿ ಮಾಡಿದ್ದಾರೆ.

ನನಗೆ ಐಪಿಎಲ್‌ ಟಿಕೆಟ್‌ ಬೇಡ; ಸ್ಪೀಕರ್‌ಗೆ ಶಾಸಕ ಸುರೇಶ್‌ ಕುಮಾರ್‌ ಪತ್ರ

ಸ್ಪೀಕರ್‌ ಯು.ಟಿ.ಖಾದರ್‌ ಮತ್ತು ಶಾಸಕ ಸುರೇಶ್‌ ಕುಮಾರ್‌. -

Prabhakara R
Prabhakara R Mar 30, 2026 3:27 PM

ಬೆಂಗಳೂರು: ತಮಗೆ ಐಪಿಎಲ್ ಟಿಕೆಟ್‌ ಬೇಡ ಎಂದು ಬಿಜೆಪಿ ಶಾಸಕ ಎಸ್‌. ಸುರೇಶ್‌ ಕುಮಾರ್‌ ಅವರು ಇತ್ತೀಚೆಗೆ ಖಡಾಖಂಡಿತವಾಗಿ ಹೇಳಿದ್ದರು. ಈ ಬಗ್ಗೆ ಅಧಿಕೃತವಾಗಿ ಸ್ಪೀಕರ್‌ ಯು.ಟಿ.ಖಾದರ್‌ ಅವರಿಗೆ ಮನವಿ ಪತ್ರವನ್ನೂ ಬರೆದಿರುವ ಶಾಸಕರು, ಮುಂಬರುವ ಐಪಿಎಲ್ ಪಂದ್ಯಗಳಿಗೆ ಸಂಬಂಧಿಸಿದಂತೆ ನನ್ನ ಹೆಸರಿನಲ್ಲಿ ಯಾವುದೇ ಟಿಕೆಟ್ ಅಥವಾ ಪಾಸ್‌ಗಳನ್ನು ವಿತರಿಸಬಾರದೆಂದು ಕೋರಿದ್ದಾರೆ.

ಪತ್ರದಲ್ಲಿ ಏನಿದೆ?

ಮಾರ್ಚ್‌ 26ರಂದು ವಿಧಾನಸಭೆಯಲ್ಲಿ ಗ್ರೇಟರ್ ಬೆಂಗಳೂರು ಆಧಾರಿಟಿ (GBA) ವ್ಯಾಪ್ತಿಯಲ್ಲಿ ಜನಸಾಮಾನ್ಯರು ಅನುಭವಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ, ದಿಢೀರನೆ ಚಿನ್ನಸ್ವಾಮಿ ಸ್ಟೇಡಿಯಂನ ಐಪಿಎಲ್ ಪಂದ್ಯಕ್ಕೆ ಶಾಸಕರಿಗೆ ಟಿಕೆಟ್ ಹಂಚಿಕೆ ಹಾಗೂ ಶಾಸಕರ ಮರ್ಯಾದೆಯ ಕುರಿತು ಚರ್ಚೆಗಳು ಪ್ರಾರಂಭವಾದದ್ದು ತಮಗೆ ತಿಳಿದೇ ಇದೆ. ಜನರ ಪರವಾಗಿ ಧ್ವನಿ ಎತ್ತಬೇಕಾದ ಸದನದಲ್ಲಿ, ಜನಸೇವಕರಾದ ನಮಗೆ 'ವಿಐಪಿ ಮರ್ಯಾದೆʼ ಸಿಗಬೇಕೆಂಬ ಆಗ್ರಹ ವ್ಯಕ್ತವಾಗುತ್ತಿರುವುದು ನಿಜಕ್ಕೂ ದುರಂತ.

ಜನಸಾಮಾನ್ಯರ ಅದಷ್ಟೋ ಗಂಭೀರ ಪ್ರಶ್ನೆಗಳಿಗೆ, ಸಮಸ್ಯೆಗಳಿಗೆ ವರ್ಷಾನುಗಟ್ಟಲೆ ಪರಿಹಾರ ಸಿಗುವುದಿಲ್ಲ. ಆದರೆ ಶಾಸಕರ ಸೌಲಭ್ಯ, ಟಿಕೆಟ್ ವಿಚಾರ ಬಂದಾಗ 24 ಗಂಟೆಯೊಳಗೆ ಸ್ಪಂದಿಸುವ ಉತ್ಸುಕತೆಯನ್ನು ಸರ್ಕಾರ ತೋರಿರುವುದು ಜನಸಾಮಾನ್ಯರಲ್ಲಿ ಆಶ್ಚರ್ಯ ಹಾಗೂ ಜನಪ್ರತಿನಿಧಿಗಳ ಬಗ್ಗೆ ತಿರಸ್ಕಾರ ಮೂಡುವಂತೆ ಮಾಡಿದೆ. ಮಾಧ್ಯಮಗಳ ವರದಿ ಪ್ರಕಾರ ಶಾಸಕರಿಗೆ ತಲಾ ಎರಡು ಹಾಗೂ ಮುಂದಿನ ದಿನಗಳಲ್ಲಿ ಐದು ಟಿಕೆಟ್/ಪಾನ್ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ. ಸಮಾಜವಾದಿ ಎಂದು ಹೇಳಿಕೊಳ್ಳುವ ಸರ್ಕಾರದ ಆಡಳಿತದಲ್ಲಿ ಈ ವಿಐಪಿ ಸಂಸ್ಕೃತಿಗೆ ಪುರಸ್ಕಾರ ಸಿಗುತ್ತಿರುವುದು ಆಘಾತಕಾರಿಯಾಗಿದೆ.

IPl

ಅಲ್ಲದೆ, ಕಳೆದ ವರ್ಷ ಇದೇ ಏಪಿಎಲ್ ಪಂದ್ಯದ ಸಂದರ್ಭದಲ್ಲಿ ನಡೆದ ದುರಂತದಲ್ಲಿ 11 ಜನ ಅಮಾಯಕರು ಪ್ರಾಣ ಕಳೆದುಕೊಂಡ ಘಟನೆಯ ಆಕ್ರಂದನ ಇಂದಿಗೂ ನನ್ನ ಕಿವಿಯಲ್ಲಿ ಮಾರ್ದನಿಸುತ್ತಿದೆ. ಆ ನೋವಿನ ನಡುವೆ ನಾವು ಐಪಿಎಲ್ ಟಿಕೆಟ್‌ಗಾಗಿ ಸದನದಲ್ಲಿ ಪಟ್ಟು ಹಿಡಿಯುವುದು ನಮ್ಮನ್ನು ಜನರ ದೃಷ್ಟಿಯಲ್ಲಿ ಇನ್ನಷ್ಟು ಕನಿಷ್ಠರನ್ನಾಗಿಸುತ್ತದೆ.

ಈ ಎಲ್ಲಾ ಹಿನ್ನೆಲೆಯಲ್ಲಿ ಹಾಗೂ ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ, ಸರ್ಕಾರ ಅಥವಾ ಕೆ.ಎಸ್.ಸಿ.ಎ. ವತಿಯಿಂದ ಶಾಸಕರಿಗೆ ನೀಡಲಾಗುವ ಐಪಿಎಲ್ ಪಂದ್ಯದ ಯಾವುದೇ ಪಾಸ್ ಅಥವಾ ಟಿಕೆಟ್‌ಗಳನ್ನು ನಾನು ಸವಿನಯವಾಗಿ ನಿರಾಕರಿಸುತ್ತಿದ್ದೇನೆ. ಆದ್ದರಿಂದ ದಯವಿಟ್ಟು ಮುಂಬರುವ ಐಪಿಎಲ್ ಪಂದ್ಯಗಳಿಗೆ ಸಂಬಂಧಿಸಿದಂತೆ ನನ್ನ ಹೆಸರಿನಲ್ಲಿ ಯಾವುದೇ ಟಿಕೆಟ್ ಅಥವಾ ಪಾಸ್‌ಗಳನ್ನು ವಿತರಿಸಬಾರದೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ಶಾಸಕ ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.