ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Namma Metro Yellow Line: ಮೆಟ್ರೋ ಹಳದಿ ಮಾರ್ಗದ ರೀಚ್-5 ವೆಚ್ಚವೆಷ್ಟು?; ಎಷ್ಟು ನಿಲ್ದಾಣಗಳಿವೆ, ಯಾರಿಗೆಲ್ಲಾ ಅನುಕೂಲ?

Namma Metro Yellow Line: ಸಿಲಿಕಾನ್‌ ಸಿಟಿಯಲ್ಲಿ ಸಂಚಾರ ದಟ್ಟಣೆ ಕಡಿಮೆಗೊಳಿಸಲು ನಮ್ಮ ಮೆಟ್ರೋದಿಂದ ಸಾಕಷ್ಟು ಅನುಕೂಲವಾಗಿದ್ದು, ದಿನ ನಿತ್ಯ ಲಕ್ಷಾಂತರ ಪ್ರಯಾಣಿಕರು ಓಡಾಡುತ್ತಿದ್ದಾರೆ. ಹಳದಿ ಮಾರ್ಗದಲ್ಲಿ ರೈಲು ಸಂಚಾರ ಸಂಪೂರ್ಣವಾಗಿ ಆರಂಭವಾದ ನಂತರ, ಸುಮಾರು 8 ಲಕ್ಷ ಪ್ರಯಾಣಿಕರಿಗೆ ಪ್ರಯೋಜನವಾಗುವ ನಿರೀಕ್ಷೆ ಇದೆ.

ಮೆಟ್ರೋ ಹಳದಿ ಮಾರ್ಗದಲ್ಲಿ ಎಷ್ಟು ನಿಲ್ದಾಣಗಳಿವೆ, ಯಾರಿಗೆಲ್ಲಾ ಅನುಕೂಲ?

Prabhakara R Prabhakara R Aug 5, 2025 7:29 PM

ಬೆಂಗಳೂರು: ನಮ್ಮ ಮೆಟ್ರೋ ಹಳದಿ ಮಾರ್ಗ ರೀಚ್‌-5 (Namma Metro Yellow Line) ಉದ್ಘಾಟನೆಗೆ ಸಜ್ಜುಗೊಂಡಿದ್ದು, ಆ.10ರಂದು ಪ್ರಧಾನಿ ಮೋದಿ ಅವರು ಹಸಿರು ನಿಶಾನೆ ತೋರಲಿದ್ದಾರೆ. ಆರ್‌.ವಿ. ರಸ್ತೆಯಿಂದ ಬೊಮ್ಮಸಂದ್ರಕ್ಕೆ ಸಂಪರ್ಕ ಕಲ್ಪಿಸುವ 19.5 ಕಿ.ಮೀ ಉದ್ದದ ಹಳದಿ ಮಾರ್ಗವನ್ನು 7,610 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಈ ಮಾರ್ಗವು ಒಟ್ಟು 16 ನಿಲ್ದಾಣಗಳನ್ನು ಒಳಗೊಂಡಿದೆ. ಈ ಮಾರ್ಗದಲ್ಲಿ ಯಾವೆಲ್ಲಾ ನಿಲ್ದಾಣಗಳು ಇವೆ?, ರೈಲುಗಳ ಓಡಾಟ ಸಮಯ ಸೇರಿ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.

ಸಿಲಿಕಾನ್‌ ಸಿಟಿಯಲ್ಲಿ ಸಂಚಾರ ದಟ್ಟಣೆ ಕಡಿಮೆಗೊಳಿಸಲು ನಮ್ಮ ಮೆಟ್ರೋದಿಂದ ಸಾಕಷ್ಟು ಅನುಕೂಲವಾಗಿದ್ದು, ದಿನ ನಿತ್ಯ ಲಕ್ಷಾಂತರ ಪ್ರಯಾಣಿಕರು ಓಡಾಡುತ್ತಿದ್ದಾರೆ. 72.10 ಕಿ.ಮೀ (ಪರಿಷ್ಕೃತ 75.06 ಕಿ.ಮೀ) ಮಾರ್ಗದ ಎರಡನೇ ಹಂತದ ಯೋಜನೆಯನ್ನು 2014 ರಲ್ಲಿ 30,695 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಮಂಜೂರು ಮಾಡಲಾಗಿತ್ತು. 2ನೇ ಹಂತದ ಮೆಟ್ರೋ ಜಾಲವು ಮೊದಲ ಹಂತದ ನಾಲ್ಕು ವಿಸ್ತರಣೆ ಮಾರ್ಗ ಮತ್ತು ಎರಡು ಹೊಸ ಮಾರ್ಗಗಳನ್ನು ಒಳಗೊಂಡಿದೆ.

2ನೇ ಹಂತದ ಮೆಟ್ರೋ ಜಾಲವು ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್ (ಕಾಡುಗೋಡಿ) ವರೆಗೆ 15.81 ಕಿ.ಮೀ ಉದ್ದದ ರೀಚ್-1 ವಿಸ್ತರಣೆ, ಮೈಸೂರು ರಸ್ತೆಯಿಂದ ಚಲ್ಲಘಟ್ಟವರೆಗೆ 9.58 ಕಿ.ಮೀ ಉದ್ದದ ರೀಚ್-2 ವಿಸ್ತರಣೆ, ನಾಗಸಂದ್ರದಿಂದ ಮಾದಾವರವರೆಗೆ 3.14 ಕಿ.ಮೀ ಉದ್ದದ ರೀಚ್-3 ವಿಸ್ತರಣೆ, ಯಲಚೇನಹಳ್ಳಿಯಿಂದ ಸಿಲ್ಕ್ ಇನ್ಸ್ಟಿಟ್ಯೂಟ್‌ವರೆಗೆ 6.12 ಕಿ.ಮೀ ಉದ್ದದ ರೀಚ್-4 ವಿಸ್ತರಣೆ ಹಾಗೂ ಬೊಮ್ಮಸಂದ್ರದಿಂದ ಆರ್.ವಿ. ರಸ್ತೆಗೆ 19.15 ಕಿ.ಮೀ ಉದ್ದದ ರೀಚ್-5 ಹೊಸ ಮಾರ್ಗ, ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ 21.26 ಕಿ.ಮೀ (ಎತ್ತರ -7.5 ಕಿ.ಮೀ ಮತ್ತು ಭೂಗತ - 13.76 ಕಿ.ಮೀ) ಉದ್ದದ ರೀಚ್-6 ಹೊಸ ಮಾರ್ಗವನ್ನು ಒಳಗೊಂಡಿದೆ.

2021ರ ಜ.14ರಂದು ಯಲಚೇನಹಳ್ಳಿಯಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ನಡುವಿನ ರೀಚ್-4ನ 6.12 ಕಿ.ಮೀ ವಿಸ್ತರಿತ ಮಾರ್ಗ ಉದ್ಘಾಟನೆಯಾಗಿತ್ತು. 2021ರ ಆ.29ರಂದು ಮೈಸೂರು ರಸ್ತೆಯಿಂದ ಕೆಂಗೇರಿ ನಡುವಿನ 7.53 ಕಿ.ಮೀ ಉದ್ದ ರೀಚ್-2 ವಿಸ್ತರಿತ ಮಾರ್ಗ ಉದ್ಘಾಟಿಸಲಾಯಿತ್ತು. 2023ರ ಮಾ.25ರಂದು ವೈಟ್‌ಫೀಲ್ಡ್ (ಕಾಡುಗೋಡಿ)ನಿಂದ ಕೃಷ್ಣರಾಜಪುರವರೆಗಿನ 13.71 ಕಿ.ಮೀ. ರೀಚ್-1 ಎಕ್ಸ್‌ಟೆನ್ಶನ್ ಅನ್ನು ಪ್ರಧಾನ ಮಂತ್ರಿಗಳು ಉದ್ಘಾಟಿಸಿದ್ದರು. 2023ರ ಅ.9ರಂದು ರಂದು, ಕೃಷ್ಣರಾಜಪುರದಿಂದ ಬೈಯಪ್ಪನಹಳ್ಳಿ ಮತ್ತು ಕೆಂಗೇರಿಯಿಂದ ಚಲ್ಲಘಟ್ಟ ನಿಲ್ದಾಣದ ನಡುವೆ ಸಂಚಾರ ಆರಂಭವಾಗಿತ್ತು.

2024ರ ನ.7ರಂದು ಮೆಟ್ರೋ ಎರಡನೇ ಹಂತದಡಿ ರೀಚ್-3 ವಿಸ್ತರಣೆಯ 3.14 ಕಿ.ಮೀ. ಎಲಿವೇಟೆಡ್‌ ಮೆಟ್ರೋ ಕಾರಿಡಾರ್ 1168 ಕೋಟಿ ರೂ. ವೆಚ್ಚದಲ್ಲಿ ನಾಗಸಂದ್ರದಿಂದ ಮಾದಾವರಕ್ಕೆ (BIEC) ಮಂಜುನಾಥನಗರ, ಚಿಕ್ಕಬಿದರಕಲ್ಲು ಮತ್ತು ಮಾದಾವರ (BIEC) ಎಂಬ 3 ಮೆಟ್ರೋ ನಿಲ್ದಾಣಗಳನ್ನು ಉದ್ಘಾಟಿಸಲಾಗಿದೆ.

ಇದರೊಂದಿಗೆ ಬೆಂಗಳೂರು ಮೆಟ್ರೋದ ಕಾರ್ಯಾಚರಣೆಯ ಜಾಲವು 76.95 ಕಿ.ಮೀ. ಆಗಿದ್ದು, 69 ನಿಲ್ದಾಣಗಳನ್ನು ಹೊಂದಿದೆ. ಉತ್ತರ-ದಕ್ಷಿಣ ಕಾರಿಡಾರ್ (ಹಸಿರು ಮಾರ್ಗ) 33.46 ಕಿ.ಮೀ. ಉದ್ದವಿದ್ದು, 31 ನಿಲ್ದಾಣಗಳನ್ನು ಹೊಂದಿದೆ ಮತ್ತು ಪೂರ್ವ-ಪಶ್ಚಿಮ ಕಾರಿಡಾರ್ (ನೇರಳೆ ಮಾರ್ಗ) 43.49 ಕಿ.ಮೀ. ಉದ್ದವಿದ್ದು, 38 ನಿಲ್ದಾಣಗಳನ್ನು ಹೊಂದಿದೆ ಮತ್ತು ದೆಹಲಿ ಮೆಟ್ರೋ ನಂತರ ದೇಶದಲ್ಲಿ ಎರಡನೇ ಅತಿದೊಡ್ಡ ಮೆಟ್ರೋ ಜಾಲವಾಗಿದೆ.

2017ರಲ್ಲಿ ನಿರ್ಮಾಣ ಆರಂಭ

ನಮ್ಮ ಮೆಟ್ರೋ ಹಳದಿ ಮಾರ್ಗದ ನಿರ್ಮಾಣವು 2017ರಲ್ಲಿ ಪ್ರಾರಂಭವಾಯಿತು. ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗೆ ಈ ಯೋಜನೆಯ ನಿರ್ಮಾಣ ಸಂಪೂರ್ಣವಾಗಿ ಪೂರ್ಣಗೊಂಡಿದ್ದು, ಕಾರ್ಯಾಚರಣೆಗೆ ಸಿದ್ಧವಾಗಿದೆ.

ಈ ಮಾರ್ಗವು 1) ಹಸಿರು ಮಾರ್ಗದೊಂದಿಗೆ ರಾಷ್ಟ್ರೀಯ ವಿದ್ಯಾಲಯ ರಸ್ತೆ ಉತ್ತರ ದಕ್ಷಿಣ ಕಾರಿಡಾರ್ (ನಾಗಸಂದ್ರದಿಂದ ಸಿಲ್ಕ್ ಬೋರ್ಡ್‌), 2) ಪಿಂಕ್ ಮಾರ್ಗದೊಂದಿಗೆ ಜಯದೇವ ಮೆಟ್ರೋ ನಿಲ್ದಾಣ, ರೀಚ್ 6 ಕಾರಿಡಾರ್ (ಕಾಳೇನ ಅಗ್ರಹಾರದಿಂದ ನಾಗವಾರಕ್ಕೆ) ಮತ್ತು 3) ನೀಲಿ ಮಾರ್ಗದೊಂದಿಗೆ ಸೆಂಟ್ರಲ್ ಸಿಲ್ಕ್ ಬೋರ್ಡ್ ಮೆಟ್ರೋ ನಿಲ್ದಾಣ - 2A ಮತ್ತು 2B (ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ) ಇಂಟರ್ಚೇಂಜ್ ನಿಲ್ದಾಣಗಳನ್ನು ಹೊಂದಿದೆ.

ಇದು ಇನ್ಫೋಸಿಸ್, ವಿಪ್ರೋ, ಬಯೋಕಾನ್, ಡೆಲ್ಟಾ ಮತ್ತು ಟೆಕ್ ಮಹೀಂದ್ರಾ ಮುಂತಾದ ಪ್ರಸಿದ್ಧ ಕಂಪನಿಗಳು ತಮ್ಮ ಕಚೇರಿಗಳನ್ನು ಹೊಂದಿರುವ ಪ್ರಮುಖ ಟೆಕ್ ಕಾರಿಡಾರ್‌ಗಳಲ್ಲಿ ಸಾಗುತ್ತದೆ. ಈ ಮಾರ್ಗದಲ್ಲಿ ಮೆಟ್ರೋ ರೈಲು ಓಡಾಟದಿಂದ ಸುತ್ತಮುತ್ತಲಿನ ವಸತಿ ಪ್ರದೇಶಗಳು, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬೊಮ್ಮಸಂದ್ರದ ಸುತ್ತಮುತ್ತಲಿನ ಸಣ್ಣ ಮತ್ತು ದೊಡ್ಡ ಪ್ರಮಾಣದ ಕೈಗಾರಿಕಾ ಪ್ರದೇಶಗಳಿಗೆ ಉತ್ತಮ ಸಂಪರ್ಕವನ್ನು ಒದಗಿಸುತ್ತದೆ. ಇದು ಬೆಂಗಳೂರಿನ ಮೆಟ್ರೋ ಉಪಕ್ರಮದಲ್ಲಿ ಒಂದು ದೊಡ್ಡ ಮೈಲುಗಲ್ಲಾಗಲಿದೆ.

ಯೆಲ್ಲೋ ಮಾರ್ಗದಲ್ಲಿನ ನಿಲ್ದಾಣಗಳು ಯಾವುವು?

1) ಆರ್.ವಿ. ರಸ್ತೆ (ಹಸಿರು ಮಾರ್ಗದೊಂದಿಗೆ ಇಂಟರ್ಚೇಂಜ್ ನಿಲ್ದಾಣ)

2) ರಾಗಿಗುಡ್ಡ

3) ಜಯದೇವ (ಗುಲಾಬಿ ಮಾರ್ಗದೊಂದಿಗೆ ಇಂಟರ್ಚೇಂಜ್ ನಿಲ್ದಾಣ)

4) ಬಿಟಿಎಂ ಲೇಔಟ್

5) ಸೆಂಟ್ರಲ್ ಸಿಲ್ಕ್ ಬೋರ್ಡ್ (ನೀಲಿ ಲೈನ್‌ನೊಂದಿಗೆ ಇಂಟರ್ಚೇಂಜ್ ಸ್ಟೇಷನ್)

6) ಬೊಮ್ಮನಹಳ್ಳಿ

7) ಹೊಂಗಸಂದ್ರ

8) ಕೂಡ್ಲು ಗೇಟ್

9) ಸಿಂಗಸಂದ್ರ

10) ಹೊಸ ರಸ್ತೆ

11) ಬೆರಟೇನ ಅಗ್ರಹಾರ

12) ಎಲೆಕ್ಟ್ರಾನಿಕ್ ಸಿಟಿ

13) ಇನ್ಫೋಸಿಸ್ ಫೌಂಡೇಶನ್ ಕೋನಪ್ಪನ ಅಗ್ರಹಾರ

14) ಹುಸ್ಕೂರು ರಸ್ತೆ

15) ಬಯೋಕಾನ್ ಹೆಬ್ಬಗೋಡಿ

16) ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ

8 ಲಕ್ಷ ಪ್ರಯಾಣಿಕರಿಗೆ ಅನುಕೂಲ

ಈ ಮಾರ್ಗದಲ್ಲಿ ರೈಲು ಸಂಚಾರ ಸಂಪೂರ್ಣವಾಗಿ ಆರಂಭವಾದ ನಂತರ, ಸುಮಾರು 8 ಲಕ್ಷ ಪ್ರಯಾಣಿಕರಿಗೆ ಪ್ರಯೋಜನವಾಗುವ ನಿರೀಕ್ಷೆ ಇದೆ. ಬೆಳಗ್ಗೆ 5 ರಿಂದ ರಾತ್ರಿ 11 ರವರೆಗೆ ಮೆಟ್ರೋ ರೈಲುಗಳು ಸಂಚರಿಸುತ್ತವೆ. ಹಳದಿ ಮಾರ್ಗದಲ್ಲಿ ಪ್ರಸ್ತುತ ಮೂರು ರೈಲುಗಳು ಕಾರ್ಯಚರಣೆ ಮಾಡುತ್ತವೆ. ಈಗ ಮೆಟ್ರೋ ರೈಲು ಕಡಿಮೆ ಇರುವ ಕಾರಣಕ್ಕೆ 25 ನಿಮಿಷಗಳಿಗೊಂದು ರೈಲು ಓಡಾಡಲಿದೆ. ನಂತರ ಹಂತ ಹಂತವಾಗಿ 10 ನಿಮಿಷಕ್ಕೊಮ್ಮೆ ಮೆಟ್ರೋ ರೈಲು ಸಂಚರಿಸಲಿದೆ.

ಈ ಸುದ್ದಿಯನ್ನೂ ಓದಿ | Namma Metro Yellow Line: ಆ.10ರಂದು ಪ್ರಧಾನಿ ಮೋದಿಯಿಂದ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ: ಡಿಕೆಶಿ

ಇನ್ನು ಆ.10ರಂದು ಪ್ರಧಾನಿ ನರೇಂದ್ರ ಮೋದಿ ಹಳದಿ ಮಾರ್ಗದ ಉದ್ಘಾಟನೆ ಜತೆಗೆ ನಮ್ಮ ಮೆಟ್ರೋದ 3 ನೇ ಹಂತಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ₹15,611 ಕೋಟಿ ವೆಚ್ಚದಲ್ಲಿ 44.65 ಕಿ.ಮೀ. ಉದ್ದದ ಮಾರ್ಗ ನಿರ್ಮಾಣವಾಗಲಿದ್ದು, ಇದು 31 ಹೊಸ ನಿಲ್ದಾಣಗಳನ್ನು ಹೊಂದಿರಲಿದೆ. ಹೊಸ ಕಾರಿಡಾರ್‌ಗಳು ಜೆ. ಪಿ. ನಗರದ 4ನೇ ಹಂತದಿಂದ ಕೆಂಪಾಪುರ (ಹೆಬ್ಬಾಳ) ಮತ್ತು ಹೊಸಹಳ್ಳಿಯಿಂದ ಕಡಬಗೆರೆಗೆ ಸಂಪರ್ಕ ಕಲ್ಪಿಸಲಿವೆ. 2029 ರ ವೇಳೆಗೆ ಈ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.