ಬೆಂಗಳೂರು: ಕನ್ನಡ ಧ್ವಜಕ್ಕೆ ರಾಷ್ಟ್ರಧ್ವಜದ ಸ್ಥಾನಮಾನ ನೀಡುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(D K Shivakumar) ಘೋಷಿಸಿದ್ದು, ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸಿ ಅಧಿಕೃತ ಗೊಳಿಸುವ ಸುಳಿವು ನೀಡಿದ್ದಾರೆ.
ಕಂಠೀರವ ಮೈದಾನದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ (Kannada Rajyotsava) ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕನ್ನಡದ ಧ್ವಜಕ್ಕೆ ಹೊಸ ಸ್ವರೂಪ ನೀಡಿ ರಾಷ್ಟ್ರಧ್ವಜದ ಸ್ಥಾನಮಾನ ನೀಡುವ ಜತೆಗೆ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಕನ್ನಡ ಧ್ವಜ ಹಾರಾಟವನ್ನು ಕಡ್ಡಾಯಗೊಳಿಸಲಾಗುವುದು. ಈ ಬಗ್ಗೆ ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಿ ಅಧಿಕೃತವಾಗಿ ಘೋಷಣೆ ಮಾಡುತ್ತೇವೆ ಎಂದರು.
ರಾಷ್ಟ್ರಧ್ವಜದ ಪಕ್ಕ ಕನ್ನಡ ಧ್ವಜ ಹಾರಿಸಿದ್ದೇನೆ. ಈ ಕನ್ನಡ ಬಾವುಟಕ್ಕೆ ಅಧಿಕೃತ ಸ್ಥಾನಮಾನ ನೀಡಲು ಮುಂದಾಗಿದ್ದೇವೆ. ಈ ಹಿಂದೆ ಸಂಪುಟದಲ್ಲಿ ಈ ಬಗ್ಗೆ ತೀರ್ಮಾನ ಮಾಡಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೆವು. ಆದರೆ ನಮಗೆ ಈವರೆಗೂ ಮಾನ್ಯತೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಕಾನೂನು ತಜ್ಞರೊಂದಿಗೂ ಚರ್ಚಿಸಿದ್ದೇನೆ. ಮತ್ತೊಂದು ಸುತ್ತಿನ ಚರ್ಚೆ ನಡೆಸಿ ರಾಷ್ಟ್ರಧ್ವಜದ ಗೌರವ ಮತ್ತು ನಿಯಮಾವಳಿಗಳಿಗೆ ಯಾವುದೇ ಧಕ್ಕೆಯಾಗದಂತೆ ಕನ್ನಡ ಧ್ವಜದ ಬಳಕೆ, ಸ್ಥಾನಮಾನ ಹಾಗೂ ಸಂರಕ್ಷಣೆಗೆ ಸಂಬಂಧಿಸಿದ ಕಾನೂನು ಅಂಶಗಳನ್ನು ಪರಿಶೀಲಿಸಲಾಗುತ್ತಿದೆ ಎಂದರು.
ಇದನ್ನೂ ಓದಿ: Rajyotsava Award 2026: ಎಐ, ತಂತ್ರಜ್ಞಾನದ ಭಾಷೆಯಾಗಿ ಕನ್ನಡ ಬಳಕೆಯಾಗಬೇಕು: ಸಿಎಂ ಡಿ.ಕೆ.ಶಿವಕುಮಾರ್
ರಾಷ್ಟ್ರಧ್ವಜದ ಪಕ್ಕ ಕನ್ನಡ ಧ್ವಜವನ್ನು ಹಾರಿಸಲು ತೀರ್ಮಾನ ಮಾಡಲು ನಮ್ಮ ಸರಕಾರ ಬದ್ಧವಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಕಚೇರಿ ಒಳಗಡೆ ಮಾತ್ರವಲ್ಲ, ವಿಧಾನಸೌಧದಲ್ಲೂ ಈ ಧ್ವಜವನ್ನು ಹಾರಿಸಲು ಸಾರ್ವಜನಿಕ ಚರ್ಚೆಗೆ, ಶಾಸಕರ ಚರ್ಚೆಗೆ ಅವಕಾಶ ಮಾಡಿಕೊಡುತ್ತೇವೆ. ಚಳಿಗಾಲದ ಅಧಿವೇಶನದಲ್ಲಿ ಇದಕ್ಕೆ ಹೊಸ ರೂಪ ಕೊಡಲು ಮತ್ತು ಕೇಂದ್ರ ಸರಕಾರಕ್ಕೆ ನಿರ್ಣಯ ಮಾಡಿ ಕಳುಹಿಸಲು ನಮ್ಮ ಸರಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ವೃತ್ತಿಪರ ಶಿಕ್ಷಣದಲ್ಲಿ ಶೇ.7ರಷ್ಟು ಮೀಸಲು: ಪಂಚಾಯಿತಿ ಮಟ್ಟದ ಸರಕಾರಿ ಶಾಲೆಗಳನ್ನು ನಗರ ಪ್ರದೇಶದ ಶಾಲೆಗಳಂತೆ ರೂಪಿಸಲಾಗುತ್ತಿದೆ. ಈಗಾಗಲೇ 15 ಸಾವಿರ ಶಾಲಾ ಶಿಕ್ಷಕರ ನೇಮ ಕಾತಿಗೆ ಆದೇಶ ನೀಡಲಾಗಿದೆ. ಕರ್ನಾಟಕ ರಾಜ್ಯದಲ್ಲಿ 25,498 ದ್ವಿಭಾಷಾ ಶಾಲೆಗಳು ಆರಂಭವಾಗಿದೆ. 250 ಸರಕಾರಿ ಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯ ಸ್ಥಾಪನೆ ಮಾಡಲಾಗಿದೆ. ಆರನೇ ತರಗತಿ ಯಿಂದ ಕೌಶಲ್ಯಾಧಾರಿತ ಶಿಕ್ಷಣ ಆರಂಭಿಸಿದ್ದೇವೆ.
ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿ, ಪಿಯು ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣದಲ್ಲಿ ವ್ಯಾಸಂಗಕ್ಕೆ ಶೇ.7ರಷ್ಟು ಮೀಸಲು ನೀಡಲಾಗಿದೆ. ಈ ಮೀಸಲಾತಿ ಉದ್ದೇಶ ಗ್ರಾಮೀಣ ಸರಕಾರಿ ಶಾಲಾ ಮಕ್ಕಳಿಗೆ ಎಂಜಿನಿಯರ್, ವೈದ್ಯ ಶಿಕ್ಷಣದಲ್ಲಿ ಹೆಚ್ಚಿನ ಅವಕಾಶ ಸಿಗುವಂತೆ ಮಾಡುವುದಾಗಿದೆ ಎಂದು ತಿಳಿಸಿದರು.
![]()
ನಮ್ಮ ಬಾವುಟದ ಬಣ್ಣಗಳಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ. ಈಗಿರುವ ಬಾವುಟ ಮುಂದುವರಿಯಲಿದೆ. ನಮ್ಮ ಭಾಷೆ ಮತ್ತು ಜನರ ಮನಸ್ಸಿಗೆ ಒಪ್ಪಿಗೆಯಾಗಿರುವ, ಜನರು ಪ್ರೀತಿ ಯಿಂದ ಸ್ವೀಕರಿಸಿರುವ ಬಣ್ಣಗಳಿವು. ನಾವು ಬೇರೆ ಯಾವುದೇ ಬಣ್ಣವನ್ನು ಸೇರಿಸಲು ಹೋಗುವುದಿಲ್ಲ .
-ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ