Rajyotsava Award 2026: ಎಐ, ತಂತ್ರಜ್ಞಾನದ ಭಾಷೆಯಾಗಿ ಕನ್ನಡ ಬಳಕೆಯಾಗಬೇಕು: ಸಿಎಂ ಡಿ.ಕೆ.ಶಿವಕುಮಾರ್
ಅನ್ಯಭಾಷೆಗಳು ಅತಿಥಿಯಾಗಿ ಇರಬೇಕು. ಕನ್ನಡ ಭಾಷೆ ಅಧಿಪತಿಯಾಗಿ ಇರಬೇಕು. ಕನ್ನಡ ಪ್ರೀತಿಸುವುದು ಎಂದರೆ ಬೇರೆ ಭಾಷೆಯನ್ನು ದ್ವೇಷಿಸುವುದಲ್ಲ. ಎಲ್ಲ ಭಾಷೆಗಳಿಗೂ ಗೌರವ ನೀಡುವುದು. ಕಚೇರಿ, ವ್ಯಾಪಾರದ ಸಮಯದಲ್ಲಿ ಸಾರ್ವಜನಿಕ ಜೀವನದಲ್ಲಿ, ಎಲ್ಲಾ ಕಡೆ ಕನ್ನಡ ಸಹಜವಾಗಿ ಬಳಕೆಯಾಗಬೇಕು ಎಂದು ಸಿಎಂ ಡಿ.ಕೆ.ಶಿವಕುಮಾರ್ ಸಲಹೆ ನೀಡಿದ್ದಾರೆ.
-
ಬೆಂಗಳೂರು, ನ. 1: "ಭಾರತದ ಬಲ ಕರ್ನಾಟಕ”ಎಂಬ ಪರಿಕಲ್ಪನೆಯೊಂದಿಗೆ ನಾವು ಬೆಳೆಯಬೇಕು ಎಂಬುದು ನಮ್ಮ ದೂರದೃಷ್ಟಿ. ಕರ್ನಾಟಕ ರಾಜ್ಯ ಅದರಲ್ಲೂ ಬೆಂಗಳೂರು ಭಾರತದ ಹೆಬ್ಬಾಗಿಲಾಗಿ ಪರಿವರ್ತನೆಯಾಗಿದೆ. ಬೆಂಗಳೂರಿನ ಮೂಲಕ ಭಾರತವನ್ನು ನೋಡಲಾಗುತ್ತಿದೆ" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು. ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ನಡೆದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವನ್ನು (Rajyotsava Award 2026) ಉದ್ಘಾಟಿಸಿ, ನಾಡಿನ 71 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ, ಮಾತನಾಡಿದರು.
"ನುಡಿ ಉಳಿದರೆ ನಾಡು ಉಳಿಯಲಿದೆ ಹಾಗೂ ನಾಡು ಉಳಿದರೆ ನುಡಿಯೂ ಉಳಿಯಲಿದೆ. 'ಜಗದ ಏಳಿಗೆ ಆಗುವುದೇ ಕನ್ನಡದಿಂದ' ಎನ್ನುವ ವರಕವಿ ಬೇಂದ್ರೆಯವರ ಮಾತು ನಿಜವಾಗುತ್ತಿದೆ. ದೇಶದ ಜನಸಂಖ್ಯೆಯಲ್ಲಿ ಕರ್ನಾಟಕದ ಪಾಲು ಶೇ.5.5ರಷ್ಟಿದೆ. ದೇಶದ ಆರ್ಥಿಕತೆಯಲ್ಲಿ ರಾಜ್ಯದ ಪಾಲು ಶೇ.9.19ರಷ್ಟಿದೆ" ಎಂದು ಹೇಳಿದರು.

ರಾಷ್ಟ್ರಧ್ವಜದ ಜತೆಗೆ ನಾಡಧ್ವಜ ಹಾರಾಡಲಿ
"ಇಡೀ ರಾಜ್ಯ ಒಗ್ಗಟ್ಟಾಗಿ ನಾಡಧ್ವಜವನ್ನು ಅಧಿಕೃತಗೊಳಿಸುವ ಕುರಿತು ಕೇಂದ್ರಕ್ಕೆ ಸಂದೇಶ ರವಾನಿಸೋಣ. ಸಂವಿಧಾನದಲ್ಲಿ ನಾಡಧ್ವಜ ಹೊಂದಬಾರದು ಎಂದು ಎಲ್ಲಿಯೂ ಹೇಳಿಲ್ಲ. ರಾಷ್ಟ್ರಧ್ವಜದ ಕೆಳಗೆ ನಾಡಧ್ವಜ ಹಾರುವಂತೆ ನಾವು ಹೆಜ್ಜೆ ಇಡೋಣ. ಕನ್ನಡ, ಕರ್ನಾಟಕದ ಗೌರವ ಹೆಚ್ಚಿಸೋಣ" ಎಂದರು.
"ಕನ್ನಡಿಗರ ಹಕ್ಕಿನ ಪ್ರಶ್ನೆ ಬಂದಾಗ ಪಕ್ಷಭೇದ ಇರಬಾರದು. ಕನ್ನಡದ ವಿಚಾರದಲ್ಲಿ ರಾಜಕೀಯ ಬೇಡ. ಕನ್ನಡವೇ ನಮ್ಮ ನಾಡಿನ ಬದ್ಧತೆ.ಬನಾವೆಲ್ಲರೂ ಸಂವಿಧಾನದ ಚೌಕಟ್ಟಿನಲ್ಲಿ, ಶಾಂತಿಯುತವಾಗಿ ಮತ್ತು ಜನಜಾಗೃತಿಯ ಮೂಲಕ ಕನ್ನಡ ಕಟ್ಟುವುದು, ಕನ್ನಡ, ಕರ್ನಾಟಕದ ಗೌರವ ಹೆಚ್ಚಿಸುವುದು ನಮ್ಮೆಲ್ಲರ ಕರ್ತವ್ಯ. ಈ ಮೊದಲೇ ಹೇಳಿದಂತೆ ಕನ್ನಡ ಬಾವುಟಕ್ಕೆ ಅಧಿಕೃತ ನಾಡಧ್ವಜ ಸ್ಥಾನಮಾನ ನೀಡಲು ಸರ್ಕಾರ ಚಿಂತನೆ ನಡೆಸಿದೆ. ಈ ವಿಚಾರವಾಗಿ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ನಡೆಸಿ ತೀರ್ಮಾನ ಮಾಡಲಾಗುವುದು" ಎಂದರು.
ಬೆಂಗಳೂರು ವೈವಿಧ್ಯಮಯ ಸಂಸ್ಕೃತಿ ನಗರ
"2018 ರಲ್ಲಿ ಭಾಷೆ ಸಮೀಕ್ಷೆ ಪ್ರಕಾರ ದೇಶದಲ್ಲಿ ಅತಿ ಹೆಚ್ಚು ಮಾತನಾಡುವವರ ಭಾಷೆಯಲ್ಲಿ ಕನ್ನಡಕ್ಕೆ 8ನೇ ಸ್ಥಾನ ಸಿಕ್ಕಿದೆ. 2011 ಜನಗಣತಿ ಪ್ರಕಾರ ಬೆಂಗಳೂರಲ್ಲಿ 107 ಭಾಷೆ ಮಾತನಾಡುವ ಜನರಿದ್ದಾರೆ. ಶೇ 44.5 ರಷ್ಟು ಜನ ಮಾತ್ರ ಕನ್ನಡ ಮಾತೃಭಾಷೆ ಮಾತನಾಡುವವರು ಇದ್ದಾರೆ. ಶೇಕಡ 90 ರಷ್ಟು ಕನ್ನಡ ಮಾತನಾಡುತ್ತಾ ಇದ್ದ ಬೆಂಗಳೂರಲ್ಲಿ ಕಡಿಮೆಯಾಗಿದ್ದಾರೆ. ಈ ಬಗ್ಗೆ ನಾವೆಲ್ಲರೂ ಆಲೋಚನೆ ಮಾಡಬೇಕು. 2011 ರಲ್ಲಿ ನಡೆದ ಸಮೀಕ್ಷೆ ಪ್ರಕಾರ ಬೆಂಗಳೂರಲ್ಲಿ 44-47 ಲಕ್ಷ ಜನ ವಲಸಿಗರು ಇದ್ದಾರೆ. ವಲಸೆ ಬಂದ ಶೇ.78 ಕ್ಕಿಂತ ಹೆಚ್ಚು ಜನ ವಾಪಸ್ ಹೋಗ್ತಾ ಇಲ್ಲ. ದೇಶದ ಯಾವ ನಗರದಲ್ಲೂ ಇಷ್ಟು ವೈವಿಧ್ಯತೆ ಇಲ್ಲ" ಎಂದು ಹೇಳಿದರು.
"ವಾಜಪೇಯಿ ಅವರು ಭಾರತವನ್ನು ಬೆಂಗಳೂರಿನ ಮೂಲಕ ನೋಡಲಾಗುತ್ತದೆ ಎಂದಿದ್ದರು. ಕನ್ನಡ, ಕರ್ನಾಟಕ, ಕನ್ನಡಿಗ ಈ ಮೂರು 'ಕ'ಗಳಿಗೆ ನಮ್ಮ ಸರ್ಕಾರ ಮೊದಲ ಆದ್ಯತೆ ನೀಡುತ್ತಿದೆ. ಶಿಕ್ಷಣ, ಆರೋಗ್ಯ, ಕೃಷಿ, ಕೈಗಾರಿಕೆ ಮತ್ತು ಮೂಲಸೌಕರ್ಯಗಳಲ್ಲಿ ಹೂಡಿಕೆ ಹೆಚ್ಚಿಸುವ ಮೂಲಕ ಈ ಗುರಿ ಸಾಧಿಸುವ ಹಂಬಲ ನಮ್ಮದು. ಖಾಸಗಿ ಸಂಸ್ಥೆಗಳೂ, ಐಟಿ- ಬಿಟಿ ಕಂಪೆನಿಗಳು ಸೇರಿದಂತೆ ಕರ್ನಾಟಕದಲ್ಲಿ ನೆಲೆಗೊಂಡಿರುವ ಎಲ್ಲಾ ಕಾರ್ಖಾನೆಗಳಲ್ಲೂ ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು ಎಂದು ಕಳೆದ ವಾರ ಎಲ್ಲರಿಗೂ ಎಚ್ಚರಿಕೆ ನೀಡಿದ್ದೆ" ಎಂದು ಹೇಳಿದರು.
"ನಾನು ಡಿಸಿಎಂ ಆಗಿದ್ದಾಗ ಬೆಂಗಳೂರಿನ ಎಲ್ಲಾ ಬೋರ್ಡ್ ಗಳು ಶೇ. 60 ಕನ್ನಡ, ಶೇ 40 ಇಂಗ್ಲಿಷ್ ಎಂದು ನಿಯಮ ಮಾಡಿದ್ದೆ. ಬೆಂಗಳೂರು ನಗರದಲ್ಲಿ ಎಲ್ಲಾ ಖಾಸಗಿ ಸಂಸ್ಥೆಗಳು, ಶಾಲಾ, ಕಾಲೇಜು ಹಾಗೂ ವಿದ್ಯಾ ಸಂಸ್ಥೆಗಳು ತಮ್ಮ ಕಚೇರಿಯಲ್ಲಿ ಕಡ್ಡಾಯವಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಬೇಕು ಎಂದು ಆದೇಶ ಮಾಡಿದ್ದೆ" ಎಂದು ತಿಳಿಸಿದರು.
"ಅನ್ಯಭಾಷೆಗಳು ಅತಿಥಿಯಾಗಿ ಇರಬೇಕು. ಕನ್ನಡ ಭಾಷೆ ಅಧಿಪತಿಯಾಗಿ ಇರಬೇಕು. ಕನ್ನಡ ಪ್ರೀತಿಸುವುದು ಎಂದರೆ ಬೇರೆ ಭಾಷೆಯನ್ನು ದ್ವೇಷಿಸುವುದಲ್ಲ. ಎಲ್ಲ ಭಾಷೆಗಳಿಗೂ ಗೌರವ ನೀಡುವುದು. ಕಚೇರಿ, ವ್ಯಾಪಾರದ ಸಮಯದಲ್ಲಿ ಸಾರ್ವಜನಿಕ ಜೀವನದಲ್ಲಿ, ಎಲ್ಲಾ ಕಡೆ ಕನ್ನಡ ಸಹಜವಾಗಿ ಬಳಕೆಯಾಗಬೇಕು. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮನಾಗಿರಬೇಕು. ಕನ್ನಡ ಜನರ ಬದುಕಿನ ಭಾಷೆಯಾಗಬೇಕು. ಬೇರೆ ಸಂಸ್ಕೃತಿಯನ್ನು ಪ್ರೀತಿಸು, ನಿನ್ನ ಸಂಸ್ಕೃತಿಯಲ್ಲಿ ಜೀವಿಸು ಎನ್ನುವ ಮಹಾತ್ಮ ಗಾಂಧಿ ಅವರ ಮಾತಿನಂತೆ ನಾವುಗಳು ನಡೆಯಬೇಕಿದೆ" ಎಂದರು.
ಎಐ, ತಂತ್ರಜ್ಞಾನದ ಭಾಷೆಯಾಗಿ ಕನ್ನಡ ಬಳಕೆಯಾಗಬೇಕು
"ನಮ್ಮನ್ನು ಉಳಿಸಿರುವ ಕನ್ನಡವನ್ನ, ನಾವುಗಳೇ ಬಳಸಿ, ಬೆಳಸಬೇಕು. ಭಾಷೆ ಉಳಿಬೇಕು ಅಂದರೆ ನಾವು ಅದನ್ನು ಜಾಸ್ತಿ ಬಳಸಬೇಕು. ಕನ್ನಡ ಕಲಿಯುವ ಅನಿವಾರ್ಯತೆ ಸೃಷ್ಟಿ ಮಾಡಬೇಕು. ಕನ್ನಡದ ಬಲದೊಂದಿಗೆ ಜಗತ್ತನ್ನು ಗೆಲ್ಲಬೇಕು. ಕನ್ನಡ ಎಐ ಭಾಷೆಯಾಗಿ ಬೆಳೆಯಬೇಕು. ವಿಜ್ಞಾನದ, ಸ್ಟಾರ್ಟ್ಅಪ್ಗಳ, ಡಿಜಿಟಲ್ ಯುಗದ ಭಾಷೆಯಾಗಬೇಕು" ಎಂದು ಹೇಳಿದರು.
ಕರ್ನಾಟಕ ನಾಮಕರಣ, ಏಕೀಕರಣ ಕಾಂಗ್ರೆಸ್ ಕೊಡುಗೆ
"ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಜತೆಗೆ ಕರ್ನಾಟಕ ಏಕೀಕರಣ ಆಗಬೇಕು ಎಂದು ದನಿ ಎತ್ತಿದ್ದೂ ಕಾಂಗ್ರೆಸ್ ಪಕ್ಷ. ಕರ್ನಾಟಕ ಎಂದು ನಾಮಕರಣ ಮಾಡಿದ್ದೂ ಕಾಂಗ್ರೆಸ್ ಪಕ್ಷ. ಇದರೊಟ್ಟಿಗೆ ನಾ.ಸು. ಹರ್ಡಿಕರ್, ರಂಗನಾಥ್ ದಿವಾಕರ್ ಅವರು ಕರ್ನಾಟಕ ಏಕೀಕರಣದ ಬಗ್ಗೆ ಸ್ವಾತಂತ್ರ್ಯ ಪೂರ್ವದಲ್ಲೇ ದನಿ ಎತ್ತಿದ್ದರು. ದೇವರಾಜ ಅರಸು ಅವರು ಕರ್ನಾಟಕ ಎಂದು ನಾಮಕರಣ ಮಾಡಿದರು. ಹೀಗೆ ಕನ್ನಡ ಕಟ್ಟಿದ ಸಾವಿರಾರು ಜನರನ್ನು ಈ ಸಂದರ್ಭದಲ್ಲಿ ನೆನೆಯಲೇ ಬೇಕು" ಎಂದು ಹೇಳಿದರು.
"ಮಾಸ್ತಿ ಅವರ ಮಾತೃಭಾಷೆ ತಮಿಳು. ಬೇಂದ್ರೆ ಅವರ ಮಾತೃಭಾಷೆ ಮರಾಠಿ. ಕುವೆಂಪು ಅವರು ಮೊದಲು ಕವನ ಬರೆದಿದ್ದು ಇಂಗ್ಲಿಷ್ನಲ್ಲಿ. ಬೂಕರ್ ಪ್ರಶಸ್ತಿಗಳಿಸಿದ ಬಾನು ಮುಷ್ತಾಕ್ ಅವರ ಮನೆ ಭಾಷೆ ಉರ್ದು. ಆದರೆ ಇವರೆಲ್ಲರೂ ಉಸಿರಾಡಿದ್ದು, ಹೆಸರು ಮಾಡಿದ್ದು ಕನ್ನಡದಲ್ಲಿ. ಈಗಿನ ಯುವ ಪೀಳಿಗೆಯು ಸೋಶಿಯಲ್ ಮೀಡಿಯಾ ಮೂಲಕ ಚಾಮರಾಜನಗರ ಕನ್ನಡ, ಹಾಸನ ಕನ್ನಡ, ಕುಂದಾಪುರ ಕನ್ನಡ, ದಾವಣಗೆರೆ ಕನ್ನಡ, ತುಮಕೂರು ಕನ್ನಡ ಹೀಗೆ ಕನ್ನಡದ ವೈವಿದ್ಯತೆ ಪರಿಚಯಿಸುವ ಕೆಲಸವನ್ನು ಮಾಡುತ್ತಿದ್ದಾರೆ" ಎಂದರು.
"ಕಲಿಯುತ್ತೇವೆ ಎಂದರೆ ಕೋಟಿ ಭಾಷೆಗಳಿವೆ. ಆದರೆ ನಮಗೆ ಆಡೋಕೆ ಕನ್ನಡ ಭಾಷೆಯೊಂದೆ ಇರುವುದು. ಕನ್ನಡದಲ್ಲಿ ಪ್ರಾರ್ಥನೆ ಮಾಡಿದರೆ ವಿಷ್ಣು ವರ ನೀಡುತ್ತಾನೆ. ಶಿವ ಮಳೆ ಸುರಿಸುತ್ತಾನೆ ಎಂದು ಕುವೆಂಪು ಹೇಳಿದ್ದಾರೆ. ನಿಮಗೆ ಸಿಕ್ಕಿರುವ ಈ ರಾಜ್ಯೋತ್ಸವ ಪ್ರಶಸ್ತಿ ಕನ್ನಡ ನಾಡಿನ ಜನರ ಆಶೀರ್ವಾದ. ಕನ್ನಡ ಸನ್ಮಾನ ಅದೇ ನಿಮಗೆ ವರದಾನ. ಕನ್ನಡದ ಕೀರ್ತಿಯೇ ನಮ್ಮೆಲ್ಲರಿಗೆ ಸ್ಫೂರ್ತಿ" ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ವಂದಿಸಿದರು.
"ಪ್ರಶಸ್ತಿ ಪುರಸ್ಕೃತರಾದ ಬಿ ವಿ ಆಚಾರ್ಯ ಅವರು ಜಯಲಲಿತಾ ಅವರ ಪ್ರಕರಣವನ್ನು ಚೆನ್ನಾಗಿ ನಿಭಾಯಿಸಿದವರು. ಅವರ ವಾದಗಳು ಇತಿಹಾಸದಲ್ಲಿ ದಾಖಲಾಗಿವೆ. ವಸ್ತ್ರ ವಿನ್ಯಾಸಕರ ಪ್ರಸಾದ್ ಬಿದ್ದಪ್ಪ ಅವರು ಮೈಸೂರು ರೇಷ್ಮೆಯನ್ನು ರೂಪದರ್ಶಿಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿದ್ದಾರೆ. ಚನ್ನಪ್ಪ ಗೌಡರು ಹಾಪ್ ಕಾಮ್ಸ್ ಅನ್ನು ರೈತರ ಬದುಕಿಗೆ ಬಲವಾಗಿ ಬೆಳೆಸಿದವರು. ಶಿಕ್ಷಣ, ಆರೋಗ್ಯ ಹೀಗೆ ಅನೇಕ ಕ್ಷೇತ್ರದ ಸಾಧಕರನ್ನು ಗುರುತಿಸಲಾಗಿದೆ. ಕನ್ನಡಕ್ಕೆ ದುಡಿಯುವ ಅನಿವಾಸಿ ಕನ್ನಡಿಗರನ್ನು ಗುರುತಿಸುವ ಕೆಲಸ ಮಾಡಲಾಗುವುದು ಎನ್ನುವ ಕಳೆದ ವರ್ಷ ನೀಡಿದ್ದ ಮಾತನ್ನು ಉಳಿಸಿಕೊಂಡಿದ್ದೇನೆ. ವಿಶ್ವದ ಕನ್ನಡಿಗರನ್ನು ಬೆಸೆಯುವ ಕೆಲಸ ಮಾಡಲಾಗುತ್ತಿದೆ" ಎಂದರು.
"ನಾನು ಶಾಲೆಯಲ್ಲಿದ್ದಾಗ ವಾಟಾಳ್ ನಾಗರಾಜ್ ಅವರ ಭಾಷಣಗಳನ್ನು ಕೇಳುತ್ತಿದ್ದೆ. ಅಂತಹ ಹಿರಿಯ ಹೋರಾಟಗಾರರ ಹೆಸರನ್ನು ಪ್ರಶಸ್ತಿ ಪಟ್ಟಿಗೆ ಸೇರಿಸಲಾಗಿತ್ತು. ಆದರೆ ಅವರು ಸಿಎಂಗೆ ಧನ್ಯವಾದ ಹೇಳಿ ಎಂದು ಶಿವರಾಜ ತಂಗಡಗಿ ಅವರಿಗೆ ಹೇಳಿದರು. ದ್ವಾರಕನಾಥ್ ಅವರು ಮುಂದೊಂದು ದಿನ ನೀನು ಮುಖ್ಯಮಂತ್ರಿಯಾಗುತ್ತೇನೆ ಎಂದು ಮಾರ್ಗದರ್ಶನ ನೀಡಿದ್ದರು" ಎಂದರು.
"ಪ್ರಯತ್ನ ವಿಫಲ ಆಗಬಹುದು. ಆದರೆ ಪ್ರಾರ್ಥನೆ ವಿಫಲ ಆಗುವುದಿಲ್ಲ. ಪ್ರಶಸ್ತಿ ಪುರಸ್ಕೃತರ ಸೇವೆಯನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ. ಲಕ್ಷಾಂತರ ಸಾಧಕರು ಇದ್ದಾರೆ. ಆದರೆ ಇಲ್ಲಿರುವ 71 ಜನರಿಗೆ ಪ್ರಶಸ್ತಿ ಅರಸಿಕೊಂಡು ಬಂದಿದೆ. ನಾವೆಲ್ಲರೂ ಒಗ್ಗೂಡಿ ಇಂದಿಗೆ 71 ವರ್ಷ. ರಾಜ್ಯೋತ್ಸವ ಎಂದರೆ ಕನ್ನಡಿಗರೆಲ್ಲ ಒಂದಾದ ಹಬ್ಬ. ಕನ್ನಡಮ್ಮನ ಗೂಡು ಕಟ್ಟಿದ ಹಬ್ಬ. ಭುವನೇಶ್ವರಿಯ ಹಬ್ಬ ತಾಯ್ನುಡಿಯ ಹಬ್ಬ" ಎಂದು ಬಣ್ಣಿಸಿದರು.