Svastha Nari Scheme: ನಿಮ್ಹಾನ್ಸ್ ನಲ್ಲಿ ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನಕ್ಕೆ ಚಾಲನೆ
ಮಗು ಹಾಗೂ ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ನೂತನ ಯೋಜನೆ 'ಸ್ವಸ್ಥ ನಾರಿ ಸಶಕ್ತ ಪರಿವಾರ' ಅಭಿಯಾನಕ್ಕೆ ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಚಾಲನೆ ನೀಡಲಾಯಿತು. ಪ್ರಧಾನಿ ಮೋದಿ ಅವರು ತಮ್ಮ ಹುಟ್ಟುಹಬ್ಬದ ದಿನದಂದು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

-

ಬೆಂಗಳೂರು: ಮಗು ಹಾಗೂ ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ನೂತನ ಯೋಜನೆ 'ಸ್ವಸ್ಥ ನಾರಿ ಸಶಕ್ತ ಪರಿವಾರ' (Svastha Nari Scheme) ಅಭಿಯಾನಕ್ಕೆ ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ (NIMHANS) ಚಾಲನೆ ನೀಡಲಾಯಿತು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿಗಳಾದ ಶ್ರೀ ನಿಖಿಲ್ ಗಜರಾಜ್ ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ (NHM) ನ ನಿರ್ದೇಶಕರಾದ ಡಾ. ಅವಿನಾಶ್ ಮೆನನ್ ಅವರು ಅಭಿಯಾನಕ್ಕೆ ಚಾಲನೆ ನೀಡಿದರು ನಿಮ್ಹಾನ್ಸ್‌ನ ಪ್ರಭಾರ ನಿರ್ದೇಶಕರು ಮತ್ತು ಮನೋವೈದ್ಯಶಾಸ್ತ್ರದ ಹಿರಿಯ ಪ್ರಾಧ್ಯಾಪಕರಾದ ಡಾ. ಪ್ರಭಾ ಎಸ್ ಚಂದ್ರ ಅವರು ಅಧ್ಯಕ್ಷತೆ ವಹಿಸಿದ್ದರು.
ಪ್ರಧಾನಿ ಮೋದಿ ಅವರು ತಮ್ಮ ಹುಟ್ಟುಹಬ್ಬದ ದಿನದಂದು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಅವರ ನಾಯಕತ್ವದಲ್ಲಿ ಮಹಿಳೆಯರ ಆರೋಗ್ಯ ಹಾಗೂ ಕುಟುಂಬಗಳನ್ನು ಬಲಪಡಿಸುವುದು ಮತ್ತು ರಾಷ್ಟ್ರೀಯ ಯೋಗಕ್ಷೇಮವನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ. ಈ ಅಭಿಯಾನದ ಭಾಗವಾಗಿ, ರೋಗಿಗಳು ಮತ್ತು ಅವರ ಜೊತೆಯಲ್ಲಿರುವ ಮಹಿಳಾ ಆರೈಕೆದಾರರು ಸೇರಿದಂತೆ ಎಲ್ಲಾ ಮಹಿಳೆಯರಿಗೆ ಸಾಂಕ್ರಾಮಿಕವಲ್ಲದ ರೋಗಗಳ ಆರೋಗ್ಯ ತಪಾಸಣೆಗಳನ್ನು ನಡೆಸಲಾಗುತ್ತಿದೆ.
ಅಭಿಯಾನದ ಭಾಗವಾಗಿ ಹಿಮೋಗ್ಲೋಬಿನ್ ಪರೀಕ್ಷೆ, ರಕ್ತದೊತ್ತಡದ ಮೇಲ್ವಿಚಾರಣೆ, ದೇಹದ ದ್ರವ್ಯರಾಶಿ ಸೂಚಿ ಮತ್ತು ಬೊಜ್ಜು ಮೌಲ್ಯಮಾಪನ ಸೇರಿದಂತೆ ಮಾನಸಿಕ ಆರೋಗ್ಯ ತಪಾಸಣೆ ನಡೆಸುವುದರ ಜೊತೆಗೆ, ಆಹಾರ ಪದ್ಧತಿಯ ಸಲಹೆಗಳನ್ನು ನೀಡಲಾಗುತ್ತಿದೆ. ಇದುವರೆಗೆ ಸುಮಾರು 600 ಪ್ರತಿಕ್ರಿಯೆಗಳು ದಾಖಲಾಗಿದ್ದು ಮುಂಬರುವ ವಾರದಲ್ಲಿ, ಮಹಿಳೆಯರಿಗಾಗಿ ಬಾಯಿ ಕ್ಯಾನ್ಸರ್ ಮತ್ತು ಗರ್ಭಕಂಠದ ಕ್ಯಾನ್ಸರ್ ತಪಾಸಣೆ ಜೊತೆಗೆ ರಕ್ತದಾನ ಶಿಬಿರ ಮತ್ತು ಮಹಿಳೆಯರಿಗಾಗಿ ಸಾಮೂಹಿಕ ಯೋಗ ತರಗತಿಗಳನ್ನು ಸಹ ಆಯೋಜಿಸಲಾಗುತ್ತದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Manipal Hospitals: ಮಣಿಪಾಲ್ ಹಾಸ್ಪಿಟಲ್ಸ್‌ನಲ್ಲಿ AI ಚಾಲಿತ ಡಿಜಿಟಲ್ ಆರೋಗ್ಯ ಸೇವೆ
ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ತಾಲೂಕು ಆಸ್ಪತ್ರೆಗಳು ಮತ್ತು ಜಿಲ್ಲಾ ಆಸ್ಪತ್ರೆಗಳು ಸೇರಿದಂತೆ ಉಪ ಕೇಂದ್ರಗಳ ಮಟ್ಟದಲ್ಲಿಯೂ ಈ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.