ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Saalumarada Thimmakka Death: ಸಾಲುಮರದ ತಿಮ್ಮಕ್ಕ ನಿಧನದ ಹಿನ್ನೆಲೆ ಶಾಲಾ-ಕಾಲೇಜುಗಳಿಗೆ ನಾಳೆ ರಜೆ ಘೋಷಿಸಿಲ್ಲ: ಸರ್ಕಾರ ಸ್ಪಷ್ಟನೆ

No holiday for Schools and colleges: ಖ್ಯಾತ ಪರಿಸರವಾದಿ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಾಲುಮರದ ತಿಮ್ಮಕ್ಕ (114) ಅವರು ಶುಕ್ರವಾರ ಬೆಳಗ್ಗೆ ಉಸಿರಾಟದ ತೊಂದರೆಯಿಂದಾಗಿ ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಇವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಸಾಲುಮರದ ತಿಮ್ಮಕ್ಕ ನಿಧನದ ಹಿನ್ನೆಲೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿಲ್ಲ

-

Prabhakara R
Prabhakara R Nov 14, 2025 9:28 PM

ಬೆಂಗಳೂರು, ನ.14: ಸಾಲು ಮರದ ತಿಮ್ಮಕ್ಕ (Saalumarada Thimmakka Death) ಅವರ ನಿಧನದ ಹಿನ್ನೆಲೆಯಲ್ಲಿ ನಾಳೆ (ನ.15) ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಆದರೆ, ಈ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದ್ದು, ಸಾಮಾಜಿಕ‌ ಜಾಲ ತಾಣದಲ್ಲಿ ಈ ಬಗ್ಗೆ ಹರಿದಾಡುತ್ತಿರುವ ಪತ್ರ ನಕಲಿಯದ್ದಾಗಿದೆ. ಸಾಲು ಮರದ ತಿಮ್ಮಕ್ಕ ಅವರ ನಿಧನದ ಹಿನ್ನೆಲೆಯಲ್ಲಿ ನಾಳೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಎಂಬುವುದು ಸುಳ್ಳು (No holiday for Schools and colleges) ಎಂದು ತಿಳಿಸಿದೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವಾಟ್ಸ್‌ಆಪ್‌ ಗ್ರೂಪ್‌ನಲ್ಲಿ ಹರಿದಾಡುತ್ತಿರುವ ಸರ್ಕಾರದ ಅಧಿಸೂಚನೆ ನೈಜತೆಯಿಂದ ಕೂಡಿರುವುದಿಲ್ಲ ಹಾಗೂ ಇದು ನಕಲಿ ಆಗಿರುತ್ತದೆ. ಇದರಲ್ಲಿ ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಹಾಗೂ ಶಾಲಾ-ಕಾಲೇಜುಗಳಿಗೆ ನ.15ರಂದು ಸಾರ್ವಜನಿಕ ರಜೆ ಎಂದು ಘೋಷಿಸಿರುವುದು ಕೂಡ ನಕಲಿ ಆಗಿರುತ್ತದೆ ಎಂದು ಸಿಎಂ ಸಿದ್ಧರಾಮಯ್ಯ ಅವರ ಕಚೇರಿಯು ಸ್ಪಷ್ಟ ಪಡಿಸಿದೆ.

ಖ್ಯಾತ ಪರಿಸರವಾದಿ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಾಲುಮರದ ತಿಮ್ಮಕ್ಕ (114) ಅವರು ಶುಕ್ರವಾರ ಬೆಳಗ್ಗೆ ಉಸಿರಾಟದ ತೊಂದರೆಯಿಂದಾಗಿ ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಇವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಇನ್ನು ಅಪೋಲೋ ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ಅವರು ಮಧ್ಯಾಹ್ನ ಭೇಟಿ ನೀಡಿ, ಸಾಲುಮರದ ತಿಮ್ಮಕ್ಕ ಅವರ ಅಂತಿಮ ದರ್ಶನ ಪಡೆದಿದ್ದರು. ಈ ವೇಳೆ ಮಾತನಾಡಿದ್ದ ಸಿಎಂ, ಪದ್ಮಶ್ರೀ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿಗೆ ನಡೆಸಲಾಗುವುದು ಎಂದು ತಿಳಿಸಿದ್ದರು.

ತಿಮ್ಮಕ್ಕ ಅವರ ಅಂತ್ಯಕ್ರಿಯೆಯ ಬಗ್ಗೆ ಕುಟುಂಬದವರು ಎರಡು ಮೂರು ಸ್ಥಳಗಳನ್ನು ಗೊತ್ತು ಮಾಡಿದ್ದು, ಅಂತ್ಯಕ್ರಿಯೆ ಎಲ್ಲಿ ಮಾಡಬೇಕೆಂದು ಸದ್ಯದಲ್ಲಿಯೇ ನಿರ್ಧರಿಸಲಾಗುವುದು ಎಂದು ಸಿಎಂ ಹೇಳಿದ್ದರು.

ಮರಗಳನ್ನೇ ಮಕ್ಕಳೆಂದು ಪ್ರೀತಿಸಿದ ಸಾಲುಮರದ ತಿಮ್ಮಕ್ಕ

salumarada thimmakka

ವೃಕ್ಷಮಾತೆ ಎಂದೇ ಖ್ಯಾತಿ ಪಡೆದ ಅವರು ರಸ್ತೆ ಬದಿಯಲ್ಲಿ ನೂರಾರು ಸಂಖ್ಯೆಯಲ್ಲಿ ಸಾಲು ಗಿಡಗಳನ್ನು ನೆಡುವ ಮೂಲಕ ಪರಿಸರಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ. ಪರಿಸರಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ 2019ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿತ್ತು. 1911ರ ಜೂನ್‌ 30ರಂದು ಅವರು ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಜನಿಸಿದರು.

ಈ ಸುದ್ದಿಯನ್ನೂ ಓದಿ | Saalumarada Thimmakka: ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ನಿಧನ

ರಸ್ತೆ ಬದಿ ನೆಟ್ಟ ಗಿಡಗಳಿಂದಲೇ ಸಾಲುಮರದ ತಿಮ್ಮಕ್ಕೆ ಎಂದೇ ಕರೆಸಿಕೊಳ್ಳುತ್ತಿದ್ದ ತಿಮ್ಮಕ್ಕ ಅವರನ್ನು ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ಗೌರವಿಸಿವೆ. ರಾಮನಗರದ ಹುಲಿಕಲ್‌ ಮತ್ತು ಕುದೂರು ನಡುವಿನ ಹೆದ್ದಾರಿಯ ಸುಮಾರು 45 ಕಿ.ಮೀ. ಉದ್ದಕ್ಕೂ ತಮ್ಮ ಪತಿ ಚಿಕ್ಕಯ್ಯ ಅವರೊಂದಿಗೆ 385ಕ್ಕೂ ಹೆಚ್ಚು ಆಲದ ಮರ ನೆಟ್ಟಿದ್ದಾರೆ. ಜತೆಗೆ ಇತರ ಸುಮಾರು 8 ಸಾವಿರ ಗಿಡ ಪೋಷಿಸಿದ್ದಾರೆ. ಯಾವುದೇ ಶಿಕ್ಷಣ ಪಡೆಯದ ಅವರು ಆರಂಭದಲ್ಲಿ ಕ್ವಾರೆಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾನಿಲಯ 2020ರಲ್ಲಿ ತಿಮ್ಮಕ್ಕ ಅವರಿಗೆ ಗೌರವ ಡಾಕ್ಟರೇಟ್‌ ನೀಡಿದೆ. ಮಕ್ಕಳಿಲ್ಲದ ತಿಮ್ಮಕ್ಕ ಅವರು ಉಮೇಶ್‌ ಎಂಬ ಸಾಕು ಮಗನನ್ನು ಅಗಲಿದ್ದಾರೆ.

ತಿಮ್ಮಕ್ಕ ಮತ್ತು ಚಿಕ್ಕಯ್ಯ ದಂಪತಿಗೆ ಹಲವು ವರ್ಷಗಳ ಕಾಲ ಮಕ್ಕಳಿರಲಿಲ್ಲ. ಈ ಬಗ್ಗೆ ಕೊರಗುತ್ತ ಕುಳಿತುಕೊಳ್ಳದ ಅವರು ಗಿಡಗಳನ್ನು ನಡೆದುವ ಮೂಲಕ ಅದರಲ್ಲೇ ತಮ್ಮ ಮಕ್ಕಳನ್ನು ಕಾಣ ತೊಡಗಿದರು. ತಿಮ್ಮಕ್ಕ ಮಕ್ಕಳಿಲ್ಲದ ದುಃಖವನ್ನು ಮರೆಯಲು ರಸ್ತೆಯ ಬದಿಗಳಲ್ಲಿ ಆಲದ ಸಸಿಗಳನ್ನು ನೆಡಲು ಆರಂಭಿಸಿದರು. 1994 ಕುದೂರಿನಿಂದ ಹುಲಿಕಲ್ ತನಕ ಇರುವ ರಾಜ್ಯ ಹೆದ್ದಾರಿ ತಿಮ್ಮಕ್ಕ ಆಲದ ಸಸಿಗಳನ್ನು ನೆಟ್ಟರು. ಮುಂದೆ ಈ ಪ್ರವೃತ್ತಿ ಬೆಳೆಯುತ್ತ ಹೋಯಿತು.

ತೀರಾ ಬಡತದಲ್ಲಿ ಜೀವನ ದೂಡುತ್ತಿದ್ದ ತಿಮ್ಮಕ್ಕ ದಂಪತಿ ಎಷ್ಟೇ ಕಷ್ಟ ಇದ್ದರೂ ತಮ್ಮ ಪರಿಸರ ಸ್ನೇಹಿ ಕ್ರಮವನ್ನು ಕೈ ಬಿಡಲಿಲ್ಲ. ಗಂಡ-ಹೆಂಡತಿ 4 ಕಿ.ಮೀ.ವರೆಗೆ ಬಿಂದಿಗೆ ನೀರನ್ನು ಹೊತ್ತು ಕೊಂಡೊಯ್ಯುತ್ತಿದ್ದರು. ಸಸಿಗಳ ಸುತ್ತ ಮುಳ್ಳು ಪೊದೆಗಳನ್ನು ಹೊದಿಸುತ್ತಿದ್ದರು. ನೀರಿನ ಅಭಾವ ಉಂಟಾಗಿ ಗಿಡಗಳಿಗೆ ತೊಂದರೆಯಾಗುತ್ತದೆ ಎಂದು ಅನಿಸಿದಾಗ ಮತ್ತೆ ಹೆಚ್ಚಾಗಿ ಮುಂಗಾರು ಮಳೆಯ ಕಾಲದಲ್ಲಿ ಗಿಡವನ್ನು ನೆಡಲು ಶುರು ಮಾಡಿದ್ದರು. ಸದ್ಯ ಮರಗಳ ನಿರ್ವಹಣೆಯನ್ನು ಈಗ ಕರ್ನಾಟಕ ಸರ್ಕಾರವು ವಹಿಸಿಕೊಂಡಿದೆ.