ಬೆಂಗಳೂರಿನಲ್ಲಿ ಆರ್‌ಟಿಒ ಅಧಿಕಾರಿಗಳ ಕಾರ್ಯಾಚರಣೆ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಮತ್ತು ಆಟೋ ಚಾಲಕರ ನಡುವಣ ತಿಕ್ಕಾಟ ಮುಂದುವರಿದಿದ್ದು, ಆಟೋ ಚಾಲಕರ ಸಂಘದ ಒತ್ತಡಕ್ಕೆ ಮಣಿದ ಸಾರಿಗೆ ಅಧಿಕಾರಿಗಳು ಬೈಕ್ ಟ್ಯಾಕ್ಸಿಗಳ ವಿರುದ್ಧ ನಗರದಾದ್ಯಂತ ಬೃಹತ್ ಕಾರ್ಯಾಚರಣೆ ಆರಂಭಿಸಿದ್ದಾರೆ. ಬುಧವಾರ ಕಾರ್ಯಾಚರಣೆ ಶುರುವಾದ ಮೊದಲ ದಿನವೇ ನಗರದ ವಿವಿಧ ಆರ್‌ಟಿಒ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿ ಓಡಿಸುತ್ತಿದ್ದ 230ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಖಾಸಗಿ ಬಳಕೆಯ ವಾಹನಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಹಾಗೂ ಬಾಡಿಗೆಗೆ ನೀಡಲು ಬಳಸ ಲಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ಹಾಗೂ ಅಧಿಕೃತ ಟ್ಯಾಕ್ಸಿ ಯೂನಿಯನ್‌ಗಳಿಂದ ನಿರಂತರ ದೂರುಗಳು ಕೇಳಿಬಂದಿದ್ದವು. ಸರಕಾರದ ಯಾವುದೇ ಪರವಾನಗಿ ಪಡೆಯದ ಅನಽಕೃತ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಈ ಬೈಕ್ ಟ್ಯಾಕ್ಸಿ ಸೇವೆಗಳನ್ನು ರಾಜಾರೋಷವಾಗಿ ಒದಗಿಸ ಲಾಗುತ್ತಿತ್ತು.
ಈ ಹಿನ್ನೆಲೆಯಲ್ಲಿ ಖಾಸಗಿ ವಾಹನಗಳನ್ನು ಬಾಡಿಗೆಗೆ ಬಳಸುತ್ತಿದ್ದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ರಾಜಾಜಿನಗರದಲ್ಲಿ 50ಕ್ಕೂ ಹೆಚ್ಚು ವಾಹನಗಳನ್ನು ಜಪ್ತಿ ಮಾಡಲಾಗಿದ್ದು, ಆರ್‌ಟಿಒ ಕಚೇರಿ ಬಳಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಹೈಕೋರ್ಟ್ ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ ನೀಡಿದ ಬಳಿಕವೂ ಸಾರಿಗೆ ಇಲಾಖೆ ಕಾರ‍್ಯಾಚರಣೆಗೆ ಮುಂದಾಗಿದೆ.
ರ‍್ಯಾಪಿಡೋ ಚಾಲಕರು, ಆಟೋ ಚಾಲಕರೇ ಬೈಕ್ ಟ್ಯಾಕ್ಸಿ ಬುಕ್ ಮಾಡಿ ಅಧಿಕಾರಿಗಳಿಗೆ ಮಾಹಿತಿ ನೀಡಿ ವಾಹನಗಳನ್ನು ಜಪ್ತಿ ಮಾಡಿಸುತ್ತಿದ್ದಾರೆ ಎಂದು ಸವಾರರು ಆರೋಪಿಸಿದ್ದಾರೆ.
ಬೆಂಗಳೂರು ಪಶ್ಚಿಮ ಆರ್‌ಟಿಒ ವ್ಯಾಪ್ತಿಯಲ್ಲಿ 10 ವಾಹನಗಳು, ಉತ್ತರ ಆರ್‌ಟಿಒದಲ್ಲಿ 8 ವಾಹನ ಗಳು, ಯಲಹಂಕದ ಸಿಂಗನಾಯಕನಹಳ್ಳಿ ಆರ್‌ಟಿಒ ವ್ಯಾಪ್ತಿಯಲ್ಲಿ ಸುಮಾರು 40ಕ್ಕೂ ಹೆಚ್ಚು ಬೈಕ್‌ಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಪರಿಶೀಲನೆಗಾಗಿ ಕೆಲ ಬೈಕ್ ಸವಾರರ ಮೊಬೈಲ್‌ಗಳನ್ನು ಕೂಡ ವಶಕ್ಕೆ ಪಡೆದು ದಾಖಲೆ ಪರಿಶೀಲನೆ ನಡೆಸಲಾಗಿದೆ.
ದಂಡ, ಜಪ್ತಿಯ ಎಚ್ಚರಿಕೆ: ನಗರದಾದ್ಯಂತ ಇರುವ ವಿವಿಧ ಆರ್‌ಟಿಒ ಕಚೇರಿಗಳ ವ್ಯಾಪ್ತಿಯಲ್ಲಿ ವಿಶೇಷ ತಂಡಗಳನ್ನು ರಚಿಸಿ ತಪಾಸಣೆ ನಡೆಸಲಾಗುತ್ತಿದೆ. ಬಿಳಿ ಬಣ್ಣದ ಬೋರ್ಡ್ ಹೊಂದಿರುವ ವಾಹನ ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದು ಮೋಟಾರು ವಾಹನ ಕಾಯಿದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಕಾನೂನುಬಾಹಿರವಾಗಿ ಬೈಕ್ ಟ್ಯಾಕ್ಸಿ ಸೇವೆ ನಡೆಸುತ್ತಿರುವವರ ವಾಹನ ಜಪ್ತಿ ಮಾತ್ರವಲ್ಲ, ಚಾಲಕರ ಡ್ರೈವಿಂಗ್ ಲೈಸೆನ್ಸ್ ಹಾಗೂ ವಾಹನದ ಆರ್‌ಸಿ ಅಮಾನತು ಮಾಡುವ ಕ್ರಮ ಕೈಗೊಳ್ಳ ಲಾಗುತ್ತದೆ ಎಂದು ಆರ್‌ಟಿಒ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಕಾನೂನು ಸ್ಥಿತಿಗತಿ ಏನಿದೆ ?: ಜನವರಿ 2026ರಲ್ಲಿ ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠವು ಬೈಕ್ ಟ್ಯಾಕ್ಸಿಗಳ ಮೇಲಿದ್ದ ನಿಷೇಧವನ್ನು ಸಂಪೂರ್ಣವಾಗಿ ರದ್ದುಗೊಳಿಸಿ ಕೇಂದ್ರದ ಮೋಟಾರು ವಾಹನ ಕಾಯ್ದೆಯಡಿ ದ್ವಿಚಕ್ರ ವಾಹನಗಳನ್ನು ‘ಸಾರಿಗೆ ವಾಹನ’ಗಳಾಗಿ ನೋಂದಾಯಿ ಸಲು ಅವಕಾಶವಿದೆ ಮತ್ತು ಇದನ್ನು ರಾಜ್ಯ ಸರಕಾರ ನಿರಾಕರಿಸುವಂತಿಲ್ಲ ಎಂದು ತೀರ್ಪು ನೀಡಿತ್ತು.
ಇದರಂತೆ ಅಗ್ರಿಗೇಟರ್‌ಗಳು ಮತ್ತು ಬೈಕ್ ಮಾಲೀಕರಿಗೆ ಸಾರಿಗೆ ಇಲಾಖೆಯಲ್ಲಿ ಪರವಾನಗಿಗಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಹೈಕೋರ್ಟ್ ತೀರ್ಪಿನ ನಂತರ ಓಲಾ, ಉಬರ್ ಮತ್ತು ರ‍್ಯಾಪಿಡೋ ಸಂಸ್ಥೆಗಳು ತಮ್ಮ ಬೈಕ್ ಟ್ಯಾಕ್ಸಿ ಸೇವೆಗಳನ್ನು ಪುನರಾರಂಭಿಸಿದ್ದವು. ಈ ನಡುವೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ಸರಕಾರ 2026ರ ಏಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಆಟೋ ಮತ್ತು ಟ್ಯಾಕ್ಸಿ ಚಾಲಕರ ವಿರೋಧ ಹಾಗೂ ಮಹಿಳಾ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಈ ಸೇವೆ ಸೂಕ್ತವಲ್ಲ ಎಂಬುದು ಸರಕಾರದ ವಾದ ವಾಗಿದೆ. ಈ ಅರ್ಜಿಯ ವಿಚಾರಣೆ ಇನ್ನೂ ಬಾಕಿಯಿದೆ.
![]()
ಹೈಕೋರ್ಟ್ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಿಲ್ಲ. ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ವಿಚಾರಣೆ ನಡೆಯುತ್ತಿರುವುದನ್ನು ನೆಪ ಮಾಡಿಕೊಂಡು ಕೆಲವು ಅಗ್ರಿಗೇಟರ್ ಸಂಸ್ಥೆಗಳು ಮತ್ತೆ ಬೈಕ್ ಟ್ಯಾಕ್ಸಿ ಸೇವೆ ಆರಂಭಿಸಿವೆ. ಇದು ಸಂಪೂರ್ಣ ಕಾನೂನುಬಾಹಿರ.
-ನಾರಾಯಣಸ್ವಾಮಿ, ಆಟೋ ಚಾಲಕರ ಸಂಘದ ಅಧ್ಯ?