Bike Taxi Service: ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ; ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರ ಮೇಲ್ಮನವಿ ಅರ್ಜಿ
ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರ ವಿಭಾಗೀಯ ಪೀಠವು, ಬೈಕ್ ಟ್ಯಾಕ್ಸಿ ಮೇಲಿನ ನಿಷೇಧವು ಅಸಾಂವಿಧಾನಿಕ ಮತ್ತು ಮೋಟಾರು ವಾಹನಗಳ ಕಾಯಿದೆಗೆ ವಿರುದ್ಧ ಎಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು: ಬೈಕ್ ಟ್ಯಾಕ್ಸಿ ಸೇವೆಗೆ (Bike Taxi Service) ಅನುಮತಿ ನೀಡಿದ್ದ ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಅನುಮತಿ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯು ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ. ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರ ವಿಭಾಗೀಯ ಪೀಠವು, ಬೈಕ್ ಟ್ಯಾಕ್ಸಿ ಮೇಲಿನ ನಿಷೇಧವು ಅಸಾಂವಿಧಾನಿಕ ಮತ್ತು ಮೋಟಾರು ವಾಹನಗಳ ಕಾಯಿದೆಗೆ ವಿರುದ್ಧ ಎಂದು ತೀರ್ಪು ನೀಡಿತ್ತು. ಇದಾದ ಮೂರು ತಿಂಗಳ ಬಳಿಕ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಮೋಟಾರು ವಾಹನ ಎಂದು ರಾಜ್ಯ ಸರ್ಕಾರವು ಬೈಕ್ ಟ್ಯಾಕ್ಸಿಗೆ ಅನುಮತಿ ನಿರಾಕರಿಸಲಾಗದು ಎಂದು ಹೈಕೋರ್ಟ್ ಹೇಳಿತ್ತು. ಇದಕ್ಕೂ ಮುನ್ನ, ಮೋಟಾರು ವಾಹನಗಳ ಕಾಯಿದೆ 1988ರ ಅನ್ವಯ ಮಾರ್ಗಸೂಚಿ ಮತ್ತು ನಿಯಮಗಳನ್ನು ರೂಪಿಸುವವರೆಗೆ ಬೈಕ್ ಟ್ಯಾಕ್ಸಿಗಳು ಕಾರ್ಯಾಚರಣೆ ನಡೆಸುವಂತಿಲ್ಲ ಎಂಬ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್‌ಪ್ರಸಾದ್ ಅವರ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಅಗ್ರಿಗೇಟರ್ ಸಂಸ್ಥೆಗಳಾದ ಓಲಾ, ಉಬರ್, ರ‍್ಯಾಪಿಡೊ ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿಗಳನ್ನು ವಿಭಾಗೀಯ ಪೀಠ ಪುರಸ್ಕರಿಸಿತ್ತು.
ದ್ವಿಚಕ್ರ ವಾಹನ ಮಾಲೀಕರು ತಮ್ಮ ವಾಹನಗಳನ್ನು ಸಾರಿಗೆ ವಾಹನ ಎಂದು ನೋಂದಾಯಿಸಲು ಅರ್ಜಿ ಸಲ್ಲಿಸಲು ಮುಕ್ತರಾಗಿದ್ದಾರೆ. ಇಂತಹ ಅರ್ಜಿಗಳನ್ನು ಪರಿಗಣಿಸಿ, ವಾಹನ ಮಾಲೀಕರಿಗೆ ಸಾರಿಗೆ ವಾಹನವಾಗಿ ನೋಂದಣಿ ನೀಡಲು ಮತ್ತು ಕಾಂಟ್ರಾಕ್ಟ್ ಕ್ಯಾರಿಯೇಜ್ ಆಗಿ ಕಾರ್ಯನಿರ್ವಹಿಸಲು ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲಾಗಿತ್ತು.
ಮೋಟಾರು ವಾಹನಗಳನ್ನು ಕಾಂಟ್ರ್ಯಾಕ್ಟ್ ಕ್ಯಾರಿಯೇಜ್ ರೀತಿಯಲ್ಲಿ ಬಳಸುವುದಕ್ಕೆ ನಿಷೇಧ ಹೇರುವುದು ಅತಾರ್ಕಿಕ ನಿಯಂತ್ರಣವಾಗಿದ್ದು, ಇದು ಸಂವಿಧಾನದ 19(1)(g)ನೇ ವಿಧಿಯಡಿ ವಹಿವಾಟು ನಡೆಸುವ ಹಕ್ಕಿಗೆ ವಿರುದ್ಧ ಎಂದು ವಿಭಾಗೀಯ ಪೀಠ ಹೇಳಿತ್ತು. ಹೀಗಾಗಿ ಹೈಕೋರ್ಟ್ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದೆ.