ಪಿಎಸ್‌ಐಗೆ ಪರಸ್ತ್ರೀ ವ್ಯಾಮೋಹ; ವರದಕ್ಷಿಣೆಗಾಗಿ ಪತ್ನಿ, ಮಾವನ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿ ಅರೆಸ್ಟ್
ಪತ್ನಿ ಮತ್ತು ಮಾವನ ಮೇಲೆಯೇ ಹಲ್ಲೆ ನಡೆಸಿರುವ ಪಿಎಸ್‌ಐ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರಂಭದಲ್ಲಿ ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡಿದ್ದರು. ಆದರೆ ಪ್ರಾಥಮಿಕ ತನಿಖೆಯಲ್ಲಿ ಸತ್ಯಾಂಶ ಬೆಳಕಿಗೆ ಬರುತ್ತಿದ್ದಂತೆಯೇ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
-
ಬೆಂಗಳೂರು: ಉದ್ಯಮಿಯೊಬ್ಬರಿಗೆ 50 ಲಕ್ಷ ರೂ. ಬೇಡಿಕೆಯಿಟ್ಟು ಲೋಕಾಯುಕ್ತ ಟ್ರ‍್ಯಾಪ್‌ಗೆ ಒಳಗಾಗಿ ಸಸ್ಪೆಂಡ್ ಆಗಿದ್ದ ಪಿಎಸ್‌ಐ ವಿರುದ್ಧ ಇದೀಗ ಪತ್ನಿ ಮತ್ತು ಮಾವನ ಮೇಲೆಯೇ ಮಚ್ಚಿನಿಂದ ಹಲ್ಲೆಗೆ ಯತ್ನಿಸಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತರು ಹಾಗೂ ಡಿಜಿಗೆ ಪಿಎಸ್‌ಐ ಬೈರಪ್ಪ ಪತ್ನಿ ದೂರು ನೀಡಲು ಮುಂದಾಗಿದ್ದಾರೆ.
ಐದು ವರ್ಷದ ಹಿಂದೆ ಪಿಎಸ್‌ಐ ಬೈರಪ್ಪ ಜತೆ ಸಂತ್ರಸ್ತೆಯ ವಿವಾಹವಾಗಿತ್ತು. ಆರಂಭದಲ್ಲಿ ಮೂರು ವರ್ಷ ಪತ್ನಿಯನ್ನು ಚೆನ್ನಾಗಿಯೇ ನೋಡಿಕೊಂಡಿದ್ದ. ಇವರಿಗೆ ಮೂರು ವರ್ಷದ ಹೆಣ್ಣು ಮಗುವಿದೆ. ಅದಾದ ಬಳಿಕ ಮನೆಗೆ ಯುವತಿಯರನ್ನು ಕರೆದುಕೊಂಡು ಬರುತ್ತಿದ್ದ. ಇದರ ಬಗ್ಗೆ ಪತ್ನಿ ಕುಟುಂಬಸ್ಥರಿಗೆ ತಿಳಿಸಿದ್ದರು. ಅಂದಿನಿಂದ ಕುಡಿದು ಬಂದು ಪತ್ನಿ ಜೊತೆಗೆ ನಿತ್ಯ ಗಲಾಟೆ ಮಾಡುತ್ತಿದ್ದ. ನಾನು ಮದುವೆ ಆಗಿದ್ದೇ ನೀನು ಹಣ ತರ್ತಿಯಾ ಅಂತ. ನಿಮ್ಮ ಅಪ್ಪನ ಮನೆಯಿಂದ 50 ಲಕ್ಷ ರೂ. ಹಣ ತಂದುಕೊಡು. ಇಲ್ಲದಿದ್ದರೆ ನೀನು ಬೇಡ ಎಂದು ನಿತ್ಯ ಕಿರುಕುಳ ನೀಡಿ, ಹಲ್ಲೆ ಮಾಡುತ್ತಿದ್ದ ಎಂದು ಪತ್ನಿ ಆರೋಪಿಸಿದ್ದಾರೆ.
ಇನ್ನು ಹೆಣ್ಣು ಮಗು ಹುಟ್ಟಿದ ಬಳಿಕ ಸುಖಾಸುಮ್ಮನೆ ಅನುಮಾನ ಪಟ್ಟು ನಿತ್ಯ ಕಿರುಕುಳ ನೀಡುತ್ತಿದ್ದ. ಗಲಾಟೆಯಾದಾಗ ಬಟ್ಟೆಗಳನ್ನು ಚೀಲಕ್ಕೆ ತುಂಬಿಕೊಂಡು ಹೆಂಡತಿ-ಮಗುವನ್ನು ಬಿಟ್ಟು ಓಡಿಹೋಗುತ್ತಿದ್ದ. ಇದೀಗ ಗಲಾಟೆಯಾದ ಬಳಿಕ ಹೆಂಡತಿ ತಂದೆ ಮನೆಗೆ ಬಂದಿದ್ದಾರೆ.
ಜುಲೈ 12ರಂದು ಮನೆಯಲ್ಲಿ ಗಲಾಟೆ ನಡೆದಾಗ ಬುದ್ಧಿ ಹೇಳಲು ಬಂದ ಮಾವನ ಮೇಲೆಯೇ ಮಚ್ಚು ತೆಗೆದುಕೊಂಡು ಹಲ್ಲೆಗೆ ಮುಂದಾಗಿದ್ದ. ಈ ಸಂಬಂಧ ಪತ್ನಿ ನೀಡಿದ ದೂರಿನ ಮೇರೆಗೆ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು, ಪಿಎಸ್‌ಐ ಬೈರಪ್ಪನನ್ನು ಬಂಧಿಸಿದ್ದಾರೆ.
ಆರಂಭದಲ್ಲಿ ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡಿದ್ದರು. ಆದರೆ ಪ್ರಾಥಮಿಕ ತನಿಖೆಯಲ್ಲಿ ಸತ್ಯಾಂಶ ಬೆಳಕಿಗೆ ಬರುತ್ತಿದ್ದಂತೆಯೇ ಈ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಯಾಗಿದ್ದರೂ ಕಾನೂನು ಉಲ್ಲಂಘಿಸಿ ಕ್ರೌರ್ಯ ಮೆರೆದ ಭೈರಪ್ಪ ವಿರುದ್ಧ ಕೆಂಗೇರಿ ಪೊಲೀಸರು ಅತ್ಯಂತ ಕಠಿಣ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.