JDS Padayatra: ಬೆಂಗಳೂರು ಪ್ರವೇಶಿಸದಂತೆ ಜೆಡಿಎಸ್ ಪಾದಯಾತ್ರೆಗೆ ಪೊಲೀಸರ ತಡೆ; ನಿಖಿಲ್ ಕುಮಾರಸ್ವಾಮಿ ವಶಕ್ಕೆ ಯತ್ನ, ಸ್ಥಳದಲ್ಲಿ ಹೈಡ್ರಾಮಾ!
ರಾಮನಗರ ಬಳಿಯ ಕಣಿಮಿಣಿಕೆ ಟೋಲ್ ಬಳಿ ಪಾದಯಾತ್ರೆಯನ್ನು ಬೆಂಗಳೂರು ಪೊಲೀಸರು ತಡೆದರು. ಬೆಂಗಳೂರು ಪ್ರವೇಶಿಸದಂತೆ ಜೆಡಿಎಸ್ ಪಾದಯಾತ್ರೆಯನ್ನು ತಡೆದ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಬಳಿಕ ಜೆಡಿಎಸ್ ಕಾರ್ಯಕರ್ತರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ.
-
ಬೆಂಗಳೂರು: ಬಿಡದಿ ಟೌನ್‌ಶಿಪ್ ವಿರೋಧಿಸಿ ಬೈರಮಂಗಲದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ವರೆಗೆ ಹಮ್ಮಿಕೊಂಡಿರುವ ಮೂರು ದಿನಗಳ ಬೃಹತ್ ಪಾದಯಾತ್ರೆಯ 2ನೇ ದಿನದ ಪಾದಯಾತ್ರೆಗೆ (JDS Padayatra) ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಅವರು ಸೋಮವಾರ ಚಾಲನೆ ನೀಡಿದ್ದಾರೆ. ಯುವ ಜನತಾದಳ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ರೈತರು ಸೇರಿ ಸಾವಿರಾರು ಮಂದಿ ಭಾಗಿಯಾಗಿದ್ದಾರೆ.
ಇನ್ನು ಕಣಿಮಿಣಿಕೆ ಟೋಲ್ ಬಳಿ ಪಾದಯಾತ್ರೆಯನ್ನು ಬೆಂಗಳೂರು ಪೊಲೀಸರು ತಡೆದರು. ಬೆಂಗಳೂರು ಪ್ರವೇಶಿಸದಂತೆ ಜೆಡಿಎಸ್ ಪಾದಯಾತ್ರೆಯನ್ನು ತಡೆದ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಈ ವೇಳೆ ನಿಖಿಲ್ ಕುಮಾರಸ್ವಾಮಿ ಅವರನ್ನು ವಶಕ್ಕೆ ಪಡೆಯಲು ಪೊಲೀಸರು ಯತ್ನಿಸಿದ್ದರಿಂದ ಹೈಡ್ರಾಮಾ ಸೃಷ್ಟಿಯಾಯಿತು. ಕಾರ್ಯಕರ್ತರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿ, ಸರ್ಕಾರ ಹಾಗೂ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದರು.

ಎರಡನೇ ದಿನದ ಪಾದಯಾತ್ರೆಗೆ ದೇವೇಗೌಡರಿಂದ ಚಾಲನೆ
ಬಿಡದಿ ಟೌನ್‌ಶಿಪ್ ವಿರೋಧಿಸಿ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದ್ದು, 2ನೇ ದಿನದ ಪಾದಯಾತ್ರೆಗೆ ಮಾಜಿ ಪ್ರಧಾನಮಂತ್ರಿಗಳಾದ ಎಚ್.ಡಿ. ದೇವೇಗೌಡ ಸಾಹೇಬರು, ಶಾಸಕಾಂಗ ಪಕ್ಷದ ನಾಯಕರಾದ ಸಿ.ಬಿ ಸುರೇಶ್ ಬಾಬು, ಮಾಗಡಿ ಮಾಜಿ ಶಾಸಕರಾದ ಎ. ಮಂಜುನಾಥ್ ಸೇರಿದಂತೆ ಪಕ್ಷದ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ಸೇರಿದಂತೆ ರೈತರೊಂದಿಗೆ ಚಾಲನೆ ನೀಡಲಾಯಿತು ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಭಾಗದ 26 ಗ್ರಾಮಗಳ ರೈತರು ಸುಧೀರ್ಘ 1 ವರ್ಷದಿಂದ ಬಿಡದಿ ಟೌನ್ ಶಿಪ್ ವಿರೋಧಿಸಿ ಹೋರಾಟ ಮಾಡುತ್ತಿದ್ದಾರೆ. ಅವರ ಹೋರಾಟಕ್ಕೆ ಬೆಂಬಲ ನೀಡುವ ನಿಟ್ಟಿನಲ್ಲಿ ಪಾದಯಾತ್ರೆ ಮಾಡುತ್ತಿದ್ದು, ರೈತರಿಗೆ ನ್ಯಾಯ ಕೊಡಬೇಕಾದ ಸರ್ಕಾರ ಮಾತ್ರ ಜಾಣಮೌನ ವಹಿಸಿದೆ.
ರಾಮನಗರದ ಜನತೆ ನೀಡಿದ ಪೆನ್ನು, ಪೇಪರ್ ಅನ್ನು ರೈತರ ಸ್ವಾಭಿಮಾನದ ಬದುಕಿಗೆ ಬಳಸಬೇಕಾದ ಮುಖ್ಯಮಂತ್ರಿಗಳು, ರಿಯಲ್ ಎಸ್ಟೇಟ್ ನವರಿಗೆ ಸಹಾಯ ಮಾಡಲು ಬಳಸುತ್ತಿದ್ದಾರೆ ಎಂದು ಆರೋಪಿಸಿ, ಸರ್ಕಾರ ಬಿಡದಿ ಟೌನ್ ಶಿಪ್ ಯೋಜನೆ ಕೈ ಬಿಡುವ ವರೆಗೆ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ ಎಂದು ಸರ್ಕಾರಕ್ಕೆ ನಿಖಿಲ್ ಎಚ್ಚರಿಕೆ ನೀಡಿದರು.
ರೈತರ ಸಮಾಧಿ ಮೇಲೆ ಸೌಧ ಕಟ್ಟಲು ನಾನು ಬದುಕಿರುವವರೆಗೂ ಬಿಡಲ್ಲ: ದೇವೇಗೌಡ
ಪಾದಯಾತ್ರೆಯಲ್ಲಿ ಮಾತನಾಡಿದ ಎಚ್.ಡಿ.ದೇವೇಗೌಡ ಅವರು, ಮುಖ್ಯಮಂತ್ರಿಗಳೇ, ರೈತನ ಮಗನೆಂದು ಹೇಳಿಕೊಂಡು ಯಾವ ಪುರುಷಾರ್ಥ ಸಾಧನೆಗೆ ಬಡ ರೈತರನ್ನು ಒಕ್ಕಲೆಬ್ಬಿಸುತ್ತಿದ್ದೀರಿ ? ಬಿಡದಿಯಲ್ಲಿ ಸೈಟ್ ಬೇಕು ಎಂದು ಯಾರು ಅರ್ಜಿ ಹಾಕಿದ್ದಾರೆ ? ನಮ್ಮ ಅನ್ನದಾತರ ಹೊಟ್ಟೆ ಮೇಲೆ ಹೊಡೆದು, ರೈತರ ಸಮಾಧಿಯ ಮೇಲೆ ನಿಮ್ಮ ಸೌಧವನ್ನು ಕಟ್ಟಲು ಈ ದೇವೇಗೌಡ ಬದುಕಿರುವವರೆಗೂ ಬಿಡುವುದಿಲ್ಲ ಎಂದು ಗುಡುಗಿದರು.
ಯಾವ ರೈತರೂ ಧೃತಿಗೆಡಬೇಡಿ, ಎದೆಗುಂದಬೇಡಿ, ನಿಮ್ಮ ಒಂದಿಂಚು ಜಮೀನನ್ನು ಯಾವುದೇ ಕಾರಣಕ್ಕೂ ಮಾರಲು ಅವಕಾಶ ಕೊಡಬೇಡಿ. ಇದು ಚಿನ್ನಕ್ಕಿಂತ ಹೆಚ್ಚು ಬೆಲೆ ಬಾಳುವ ಭೂಮಿ. ನೀವು ಕೊಟ್ಟ ಅಧಿಕಾರದಿಂದ ನನ್ನ ಹೋರಾಟದ ಕಿಚ್ಚು ಇನ್ನೂ ಜೀವಂತವಾಗಿದೆ. ಕಾಂಗ್ರೆಸ್ ಸರ್ಕಾರದ ಸ್ವಾರ್ಥದ ಟೌನ್ ಶಿಪ್‌ಗಾಗಿ, ರೈತರ ಸಮಾಧಿಯ ಮೇಲೆ ಸೌಧವನ್ನು ಕಟ್ಟಲು ಈ ದೇವೇಗೌಡ ಬದುಕಿರುವವರೆಗೂ ಬಿಡುವುದಿಲ್ಲ. ನಮ್ಮ ನಾಡಿನ ರೈತರ ಜೊತೆ ಜೆಡಿಎಸ್ ಪಕ್ಷ ಎಂದೆಂದಿಗೂ ಇರಲಿದೆ ಎಂದು ತಿಳಿಸಿದ್ದಾರೆ.