ಬೆಂಗಳೂರು: ಅನಾದಿ ಕಾಲದಿಂದಲೂ ದೇಶದ ಲಕ್ಷಾಂತರ ರೈತರಿಗೆ ಭೂಮಿಯೇ ಜೀವಾಳ. ಗದ್ದೆಗಳು ಗ್ರಾಮೀಣ ಕುಟುಂಬಗಳಿಗೆ ಅನ್ನ, ಆದಾಯ, ಅಸ್ಮಿತೆ ಒದಗಿಸುತ್ತಿವೆ. ಆದರೆ, ದರ ಏರಿಳಿತ, ಹವಾಮಾನ ವೈಪರೀತ್ಯ ಹಾಗೂ ಕೃಷಿ ವೆಚ್ಚಗಳಿಂದ ಬರೀ ಕೃಷಿಯನ್ನೇ ನೆಚ್ಚಿಕೊಂಡು ಆರ್ಥಿಕ ಭದ್ರತೆ ಕಂಡುಕೊಳ್ಳುವುದು ಕಷ್ಟಕರವಾಗುತ್ತಿದೆ. ಇಂತಹ ಸಮಸ್ಯೆಗಳ ಪರಿಹಾರಕ್ಕಾಗಿ ನವೀಕರಿಸ ಬಹುದಾದ ಇಂಧನದಿಂದ ಗ್ರಾಮೀಣ ಬದುಕು ಹಸನಾಗಿಸಿಕೊಳ್ಳಬಹುದು.
ನವೀಕರಿಸಬಹುದಾದ ಇಂಧನ ಮೂಲಸೌಕರ್ಯ ವಿಸ್ತಾರಗೊಳ್ಳುತ್ತಿರುವ ಪ್ರದೇಶಗಳಲ್ಲಿ ರೈತರು ಕೃಷಿ ಮುಂದುವರಿಸುತ್ತಾ ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಹೊಸ ಅವಕಾಶ ತೆರೆದುಕೊಂಡಿದೆ.ಈ ಮಾದರಿ ಸರಳವಾದರೂ ಅತ್ಯಂತ ಪರಿಣಾಮಕಾರಿಯಾಗಿದ್ದು, ಒಂದೇ ಭೂಮಿಯಲ್ಲಿ ಕೃಷಿ, ಇಂಧನ ಮೂಲಸೌಕರ್ಯಗಳೆರಡನ್ನೂ ನಿರ್ವಹಿಸುವ ಮೂಲಕ ಗ್ರಾಮೀಣ ಕುಟುಂಬಗಳಿಗೆ ದುಪ್ಪಟ್ಟು ಆದಾಯದ ಮಾರ್ಗ ಸೃಷ್ಟಿಯಾಗಲಿದೆ.
‘ಒಂದು ಭೂಮಿ, ಎರಡು ಆದಾಯ’ ಎಂದು ಕರೆಯಲ್ಪಡುವ ಈ ಪರಿಕಲ್ಪನೆಯು ನವೀಕರಿಸ ಬಹುದಾದ ಇಂಧನ ಪ್ರಸರಣ ಕಾರಿಡಾರ್‌ಗಳು ಹಾಗೂ ಸಂಬಂಧಿತ ಮೂಲಸೌಕರ್ಯ ಯೋಜನೆ ಗಳು ಅನುಷ್ಠಾನಗೊಳ್ಳುತ್ತಿರುವ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ.
ಇದನ್ನೂ ಓದಿ: Bangalore News: ಜನಗಣತಿಯಲ್ಲಿ ಸರ್ಕಾರಿ ನೌಕರರ ಬಳಕೆ: ಆಡಳಿತ ವ್ಯವಸ್ಥೆಯ ಮೇಲೆ ಕರಿನೆರಳು
ಬೃಹತ್ ಪ್ರಮಾಣದ ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಆಂಧ್ರಪ್ರದೇಶದಂತಹ ರಾಜ್ಯಗಳಲ್ಲಿ, ಸೌರ ಮತ್ತು ಪವನ ವಿದ್ಯುತ್ ಘಟಕಗಳಿಂದ ಶುದ್ಧ ವಿದ್ಯುತ್ ಅನ್ನು ರಾಷ್ಟ್ರೀಯ ಗ್ರಿಡ್‌ಗೆ ಸಾಗಿಸಲು ಪ್ರಸರಣ ಜಾಲಗಳು ಅತ್ಯಗತ್ಯವಾಗಿವೆ. ‘ರೆಸೋನಿಯಾ’ ದಂತಹ ಕಂಪನಿಗಳು ಈ ವಿದ್ಯುತ್ ಪ್ರಸರಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದ್ದು, ಈ ಪ್ರಕ್ರಿಯೆ ಯಿಂದ ಭೂಮಾಲೀಕರಿಗೂ ಲಾಭವಾಗುವಂತೆ ನೋಡಿಕೊಳ್ಳಲು ಸ್ಥಳೀಯ ರೈತರೊಂದಿಗೆ ಕೈಜೋಡಿಸುತ್ತಿವೆ.
ಇಂತಹ ಯೋಜನೆಗಳಲ್ಲಿ ಹೆಚ್ಚಾಗಿ ಕಂಡುಬರುವ ವ್ಯವಸ್ಥೆಯೆಂದರೆ ’ಭೂಮಿ ಗುತ್ತಿಗೆ ಮಾದರಿ’. ಈ ಒಪ್ಪಂದದಡಿ, ರೈತರು ತಮ್ಮ ಜಮೀನಿನ ಒಂದು ಸಣ್ಣ ಭಾಗದಲ್ಲಿ ಟ್ರಾನ್ಸ್‌ಮಿಷನ್ ಟವರ್ ಗಳಂತಹ ಮೂಲಸೌಕರ್ಯ ಅಳವಡಿಸಲು ಅನುಮತಿ ನೀಡುತ್ತಾರೆ. ಇದಕ್ಕೆ ಪ್ರತಿಯಾಗಿ ಅವರಿಗೆ ಪರಿಹಾರ ಅಥವಾ ಗುತ್ತಿಗೆ ಹಣ ದೊರೆಯುತ್ತದೆ. ಗಮನಾರ್ಹ ಸಂಗತಿಯೆಂದರೆ, ಈ ಪ್ರಕ್ರಿಯೆಯಲ್ಲಿ ಭೂಮಿಯ ಮಾಲೀಕತ್ವ ರೈತರ ಬಳಿಯೇ ಉಳಿಯುತ್ತದೆ. ಟ್ರಾನ್ಸ್‌ಮಿಷನ್ ಟವರ್‌ಗಳು ಆಕ್ರಮಿಸುವ ಜಾಗ ಬಹಳ ಕಡಿಮೆ ಇರುವುದರಿಂದ, ಅದರ ಸುತ್ತಲಿನ ಬಹುಪಾಲು ಭೂಮಿಯನ್ನು ಕೃಷಿ ಚಟುವಟಿಕೆಗಳಿಗೆ ನಿರಾತಂಕವಾಗಿ ಬಳಸಬಹುದು. ರೈತರು ಎಂದಿನಂತೆ ತಮ್ಮ ಬೆಳೆ ಬೆಳೆಯುತ್ತಲೇ, ತಮ್ಮ ಜಮೀನಿನಲ್ಲಿ ಅಳವಡಿಸಲಾದ ಮೂಲಸೌಕರ್ಯದಿಂದ ಬರುವ ಹೆಚ್ಚುವರಿ ಆದಾಯ ವನ್ನೂ ಗಳಿಸುತ್ತಾರೆ.
ಅನೇಕ ಗ್ರಾಮೀಣ ಕುಟುಂಬಗಳ ಪಾಲಿಗೆ ಈ ಸಂಯೋಜನೆಯು ಆರ್ಥಿಕ ಸ್ಥಿತಿಯನ್ನು ಗಣನೀಯ ವಾಗಿ ಸುಧಾರಿಸುತ್ತಿದೆ. ಕೃಷಿಯಲ್ಲಿ ಆದಾಯದ ಖಚಿತತೆ ಇರುವುದಿಲ್ಲ. ಬೆಳೆಗಳ ಬೆಲೆ ಕುಸಿಯ ಬಹುದು, ಮಳೆಯ ಪ್ರಮಾಣ ವ್ಯತ್ಯಾಸವಾಗಬಹುದು, ಜತೆಗೆ ರಸಗೊಬ್ಬರ, ಬೀಜ ಹಾಗೂ ಕಾರ್ಮಿಕರ ವೆಚ್ಚ ನಿರಂತರವಾಗಿ ಏರಿಕೆಯಾಗುತ್ತಲೇ ಇರುತ್ತದೆ.
ಇಂತಹ ಪ್ರತಿಕೂಲ ವಾತಾವರಣದಲ್ಲಿ, ಈ ಗುತ್ತಿಗೆಯಿಂದ ಬರುವ ಖಚಿತ ಆದಾಯವು ಎಷ್ಟೇ ಸಣ್ಣದಾಗಿದ್ದರೂ, ಕುಟುಂಬದ ಆರ್ಥಿಕ ಭದ್ರತೆಗೆ ದೊಡ್ಡ ಆಸರೆಯಾಗುತ್ತದೆ. ಗುತ್ತಿಗೆಯಿಂದ ಬರುವ ಹಣವನ್ನು ರೈತರು ಮತ್ತೆ ಕೃಷಿಗೇ ಬಂಡವಾಳವಾಗಿ ಬಳಸುತ್ತಿದ್ದಾರೆ. ಕೆಲವರು ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಅಥವಾ ನೀರಾವರಿ ಉಪಕರಣಗಳನ್ನು ಖರೀದಿಸಿದರೆ, ಇನ್ನು ಕೆಲವರು ಪಶುಸಂಗೋಪನೆಗೆ ಒತ್ತು ನೀಡುವ ಮೂಲಕ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.
ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ: ಈ ಯೋಜನೆಗಳ ಪ್ರಯೋಜನ ಕೇವಲ ವ್ಯಕ್ತಿಗತ ಕುಟುಂಬಗಳಿಗೆ ಮಾತ್ರ ಸೀಮಿತವಾಗಿಲ್ಲ. ನವೀಕರಿಸಬಹುದಾದ ಇಂಧನ ಯೋಜನೆಗಳು ಸುತ್ತ ಮುತ್ತಲಿನ ಸಮುದಾಯಗಳ ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ನೀಡುತ್ತವೆ. ಕಾಮಗಾರಿಯ ಹಂತದಲ್ಲಿ ಗುತ್ತಿಗೆದಾರರಿಗೆ ಸಾರಿಗೆ ಸೇವೆಗಳು, ಯಂತ್ರೋಪಕರಣಗಳ ನಿರ್ವಾಹಕರು, ಸ್ಥಳೀಯ ಕಾರ್ಮಿಕರು ಹಾಗೂ ಇತರ ಪೂರಕ ಸೇವೆಗಳ ಅಗತ್ಯವಿರುತ್ತದೆ. ಈ ಬಹುತೇಕ ಉದ್ಯೋಗಾವ ಕಾಶಗಳು ಸುತ್ತಮುತ್ತಲಿನ ಹಳ್ಳಿಗಳ ಜನರಿಗೇ ಒಲಿಯುತ್ತಿವೆ.
ಯೋಜನಾ ಸ್ಥಳಗಳ ಸುತ್ತ ಸಣ್ಣಪುಟ್ಟ ವ್ಯಾಪಾರ-ವಹಿವಾಟುಗಳು ಹುಟ್ಟಿಕೊಳ್ಳುತ್ತವೆ. ಸ್ಥಳೀಯ ಯುವಕರು ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡುವುದು, ಸರಕು ಸಾಗಣೆಗೆ ವಾಹನಗಳನ್ನು ಬಾಡಿಗೆಗೆ ನೀಡುವುದು ಅಥವಾ ನಿರ್ಮಾಣ ಸಾಮಗ್ರಿಗಳನ್ನು ಪೂರೈಸುವಂತಹ ಉದ್ಯಮಗಳನ್ನು ಆರಂಭಿಸಬಹುದು. ಮೂಲಸೌಕರ್ಯ ಅಭಿವೃದ್ಧಿಯೊಂದಿಗೆ ಈ ಸೂಕ್ಷ್ಮ ಆರ್ಥಿಕತೆಗಳು ಕೂಡ ಬೆಳೆಯುತ್ತವೆ.