ಬೆಂಗಳೂರು: ಜೀವನದ ಹಾದಿ ಯಾವಾಗಲೂ ಅನಿಶ್ಚಿತ. ಸಾಮಾನ್ಯ ದಿನವೊಂದು ಊಹಿಸಲಾಗದ ದುರಂತಕ್ಕೆ ಸಾಕ್ಷಿಯಾಗಬಹುದು ಎಂಬುದಕ್ಕೆ 46 ವರ್ಷದ ದಿ. ವೆಂಕಟೇಶ್ ಕೆ. ಅವರ ಕುಟುಂಬಕ್ಕೆ ಎದುರಾದ ಪರಿಸ್ಥಿತಿಯೇ ಸಾಕ್ಷಿ. ತಮ್ಮ ಗಾಢವಾದ ದುಃಖದ ನಡುವೆಯೂ, ವೆಂಕಟೇಶ್ ಅವರ ಕುಟುಂಬದವರು ಕೈಗೊಂಡ ಒಂದು ನಿರ್ಧಾರವು ಬೆಂಗಳೂರಿನ ಹಲವು ಜನರಿಗೆ ಮರುಜೀವ ನೀಡಿದೆ.
ಘಟನೆಯ ವಿವರ: ಕಳೆದ ನವೆಂಬರ್ 29, 2025 ರಂದು ವೆಂಕಟೇಶ್ ಅವರಿಗೆ ಇದ್ದಕ್ಕಿದ್ದಂತೆ ತಲೆ ಸುತ್ತು ಮತ್ತು ವಾಂತಿ ಕಾಣಿಸಿಕೊಂಡು ಕುಸಿದು ಬಿದ್ದರು. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಯಶವಂತಪುರದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು.
ಮಣಿಪಾಲ್ ಆಸ್ಪತ್ರೆಯ ನರರೋಗ ವಿಭಾಗದ ಹಿರಿಯ ತಜ್ಞರಾದ ಡಾ. ರಾಘವೇಂದ್ರ ಎಸ್. ಮತ್ತು ಡಾ. ಸ್ವಾತಿ ಸುರೇಂದ್ರನ್ ನಾಯರ್ ಅವರ ನೇತೃತ್ವದಲ್ಲಿ ಪರೀಕ್ಷೆ ನಡೆಸಿದಾಗ, ಅವರಿಗೆ ತೀವ್ರ ಸ್ವರೂಪದ ಪಾರ್ಶ್ವವಾಯು (Posterior Circulation Stroke) ಸಂಭವಿಸಿರುವುದು ಮತ್ತು ಮೆದುಳಿನ ಕಾಂಡಕ್ಕೆ (Brainstem) ಸರಿಪಡಿಸಲಾಗದ ಹಾನಿಯಾಗಿರುವುದು ಕಂಡು ಬಂದಿತು.
ಡಾ. ಪ್ರದೀಪ್ ರಂಗಪ್ಪ, ಡಾ. ಕಾರ್ತಿಕ್ ಎನ್. ರಾವ್ ಮತ್ತು ಡಾ. ಪ್ರತಿಭಾ ಜಿ.ಎ. ಅವರನ್ನೊಳ ಗೊಂಡ ತಜ್ಞ ವೈದ್ಯರ ತಂಡವು ವೆಂಕಟೇಶ್ ಅವರಿಗೆ ನಿರಂತರ ಚಿಕಿತ್ಸೆ ನೀಡುವುದರ ಜೊತೆಗೆ ತುರ್ತು ನಿಗಾ ವಹಿಸಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಡಿಸೆಂಬರ್ 1, 2025 ರಂದು ರಾಷ್ಟ್ರೀಯ ವೈದ್ಯಕೀಯ ನಿಯಮಾವಳಿಗಳ ಪ್ರಕಾರ ಅವರನ್ನು 'ಬ್ರೈನ್ ಡೆಡ್' (ಮೆದುಳು ನಿಷ್ಕ್ರಿಯ) ಎಂದು ಘೋಷಿಸಲಾಯಿತು.
ಇದನ್ನೂ ಓದಿ: Health Tips: ಚಳಿಗಾಲದ ಕೀಲುನೋವಿಗೆ ಅಡುಗೆ ಮನೆಯಲ್ಲಿದ್ದ ಈ ಮದ್ದುಗಳೇ ಪರಿಹಾರ!
ದುಃಖದ ನಡುವೆಯೂ ಮಾನವೀಯತೆ: ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ನೋವಿ ನಲ್ಲೂ ವೆಂಕಟೇಶ್ ಅವರ ಪತ್ನಿ, ಪೋಷಕರು ಮತ್ತು ಒಡಹುಟ್ಟಿದವರು ಒಂದು ಉದಾತ್ತ ನಿರ್ಧಾರ ಕೈಗೊಂಡರು. ಅವರ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಇತರರ ಜೀವ ಉಳಿಸಲು ಮುಂದೆ ಬಂದರು.
ದಾನದ ಮೂಲಕ ಮರುಜೀವ ಪಡೆದವರು: ವೆಂಕಟೇಶ್ ಅವರ ಈ ನಿಸ್ವಾರ್ಥ ನಿರ್ಧಾರದಿಂದ ಹಲವು ರೋಗಿಗಳಿಗೆ ಹೊಸ ಬದುಕು ಸಿಕ್ಕಿದೆ:
* ಯಕೃತ್ತು (ಲಿವರ್) ಮತ್ತು ಮೂತ್ರಪಿಂಡ (ಕಿಡ್ನಿ): ಇವುಗಳನ್ನು ಯಶವಂತಪುರದ ಮಣಿ ಪಾಲ್ ಆಸ್ಪತ್ರೆಯಲ್ಲೇ ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದ ರೋಗಿಗಳಿಗೆ ಯಶಸ್ವಿಯಾಗಿ ಅಳವಡಿಸಲಾಯಿತು.
* ಹೃದಯದ ಕವಾಟಗಳು: ಸಂಕೀರ್ಣ ಶಸ್ತ್ರಚಿಕಿತ್ಸೆಯ ಅಗತ್ಯವಿದ್ದ ರೋಗಿಗಳಿಗಾಗಿ ಹಳೆ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ಕಳುಹಿಸಲಾಯಿತು.
*ಶ್ವಾಸಕೋಶ: ಅಪೋಲೋ ಆಸ್ಪತ್ರೆಯಲ್ಲಿ ಶ್ವಾಸಕೋಶ ಕಸಿಗಾಗಿ ಕಾಯುತ್ತಿದ್ದ ರೋಗಿಗೆ ನೀಡಲಾಯಿತು.
*ಕಣ್ಣುಗಳು: ನಾರಾಯಣ ನೇತ್ರಾಲಯಕ್ಕೆ ದಾನ ಮಾಡಲಾಗಿದ್ದು, ಇಬ್ಬರಿಗೆ ದೃಷ್ಟಿ ನೀಡಲಿವೆ.
ಸಹೋದರನ ಅಂಗಾಂಗ ದಾನದ ಕುರಿತು ಮಾತನಾಡಿದ ವೆಂಕಟೇಶ್ ಅವರ ಸಹೋದರಿ, “ಅಂಗಾಂಗಗಳನ್ನು ಪಡೆದವರಲ್ಲಿ ನಮ್ಮ ಸಹೋದರ ಇಂದಿಗೂ ಜೀವಂತವಾಗಿದ್ದಾರೆ ಎಂದು ನಮಗೆ ಅನಿಸುತ್ತದೆ. ನಮ್ಮ ಸಹೋದರ ಸದಾ ಪರಿಶ್ರಮಿ, ವಿನಯವಂತ ಮತ್ತು ಕನಸುಗಳನ್ನು ಹೊತ್ತ ವ್ಯಕ್ತಿಯಾಗಿದ್ದ. ಆತನ ಅಂಗಾಂಗಗಳನ್ನು ದಾನ ಮಾಡುವುದು, ಆತನ ವ್ಯಕ್ತಿತ್ವಕ್ಕೆ ನಾವು ಸಲ್ಲಿಸಬಹುದಾದ ಅತ್ಯಂತ ಗೌರವಯುತ ಮಾರ್ಗವೆಂದು ನಮಗೆ ಅನ್ನಿಸಿತು” ಎಂದು ತಿಳಿಸಿದರು.
ಈ ಉದಾತ್ತ ಕಾರ್ಯದ ಬಗ್ಗೆ ಮಾತನಾಡಿದ ಡಾ.ಪ್ರದೀಪ್ ರಂಗಪ್ಪ, “ವೆಂಕಟೇಶ್ ಅವರ ಈ ಕಥೆಯು ಮರಣಾನಂತರದ ಅಂಗಾಂಗ ದಾನದ ಅಸಾಧಾರಣ ಪ್ರಭಾವವನ್ನು ಎತ್ತಿ ತೋರಿಸುತ್ತದೆ. ಕಲ್ಪಿಸಿಕೊಳ್ಳಲಾಗದಷ್ಟು ದುಃಖದ ಕ್ಷಣದಲ್ಲೂ ಅವರ ಕುಟುಂಬದವರು ತೋರಿದ ಧೈರ್ಯ ಮತ್ತು ಶಕ್ತಿ ಶ್ಲಾಘನೀಯ. ಅವರ ಈ ನಿರ್ಧಾರವು ಅನೇಕ ಜನರ ಜೀವನವನ್ನು ಬದಲಿಸಲಿದೆ. ಒಂದು ದುರಂತವನ್ನು ಹೇಗೆ ಭರವಸೆಯಾಗಿ ಪರಿವರ್ತಿಸಬಹುದು ಎಂಬುದಕ್ಕೆ ಇವರ ಈ ಕಾರ್ಯವೇ ಒಂದು ಸ್ಫೂರ್ತಿದಾಯಕ ಉದಾಹರಣೆ” ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಇದೇ ವೇಳೆ ಭಾರತದಲ್ಲಿನ ಅಂಗಾಂಗ ದಾನದ ಸವಾಲುಗಳ ಕುರಿತು ಮಾತನಾಡಿದ, ಡಾ. ಕಾರ್ತಿಕ್ ಎನ್ ರಾವ್ ಅವರು "ಭಾರತದ ಮರಣಾನಂತರದ ಅಂಗಾಂಗ ದಾನದ ದರವು ಜಾಗತಿಕ ಮಟ್ಟಕ್ಕೆ ಹೋಲಿಸಿದರೆ ಇಂದಿಗೂ ಸಾಕಷ್ಟು ಹಿಂದುಳಿದಿದೆ. ಸ್ಪೇನ್, ಅಮೆರಿಕ ಮತ್ತು ಹಲವಾರು ಯುರೋ ಪಿಯನ್ ದೇಶಗಳಲ್ಲಿ ಶವದಾನದ ಪ್ರಮಾಣ ಗಮನಾರ್ಹವಾಗಿ ಹೆಚ್ಚಿದೆ. ಆದರೆ, ಭಾರತದಲ್ಲಿ ಜನಜಾಗೃತಿ, ಕುಟುಂಬದ ಒಪ್ಪಿಗೆ ಮತ್ತು ಸಮಯಕ್ಕೆ ಸರಿಯಾದ ದಾನಿಗಳ ಗುರುತಿಸುವಿಕೆಯಲ್ಲಿ ನಾವು ಇಂದಿಗೂ ಹೋರಾಡುತ್ತಿದ್ದೇವೆ. ಇಂತಹ ಪ್ರತಿಯೊಂದು ಉದಾತ್ತ ಕಾರ್ಯವು ದಾನದ ಅವಕಾಶಗಳನ್ನು ಕಳೆದುಕೊಂಡಾಗ ನಾವು ಎಷ್ಟು ಜೀವಗಳನ್ನು ಉಳಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬುದನ್ನು ನೆನಪಿಸುತ್ತದೆ”ಎಂದು ತಿಳಿಸಿದರು.
ಇದಕ್ಕೆ ಪೂರಕವಾಗಿ ಮಾತನಾಡಿದ ಡಾ.ಪ್ರತಿಭಾ ಜಿ.ಎ. ಅವರು, "ಮಿದುಳು ನಿಷ್ಕ್ರಿಯಗೊಂಡ ನಂತರವೂ ಅಂಗಾಂಗ ದಾನಕ್ಕೆ ಮುಂದಾದ ಕುಟುಂಬದ ಅಸಾಧಾರಣ ಧೈರ್ಯ ಮತ್ತು ಮಾನವೀಯತೆಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. 'ನೋಟೋ' (NOTTO) ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ವಾರ್ಷಿಕವಾಗಿ 18,000 ಕ್ಕೂ ಹೆಚ್ಚು ಅಂಗಾಂಗ ಕಸಿ ನಡೆಯುತ್ತಿದ್ದರೂ, ಮರಣಾನಂತರದ ದಾನದ ಪ್ರಮಾಣವು ಪ್ರತಿ ಹತ್ತು ಲಕ್ಷ ಜನಸಂಖ್ಯೆಗೆ ಓರ್ವ ದಾನಿಗಿಂತಲೂ ಕಡಿಮೆ ಇದೆ. ಅಂಗಾಂಗಗಳಿಗಾಗಿ ಕಾಯುತ್ತಿರುವ ರೋಗಿಗಳು ಮತ್ತು ದಾನಿಗಳ ಲಭ್ಯತೆಯ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ಇಂತಹ ಉದಾತ್ತ ಕಾರ್ಯಗಳು ಪ್ರಮುಖ ಪಾತ್ರವಹಿಸುತ್ತವೆ. ಮರಣಾನಂತರದ ದಾನದ ಪ್ರಮಾಣವು ಈಗಷ್ಟೇ ಚೇತರಿಸಿ ಕೊಳ್ಳುತ್ತಿರುವ ನಮ್ಮ ದೇಶದಲ್ಲಿ, ಕುಟುಂಬದ ಜಾಗೃತಿ, ಒಪ್ಪಿಗೆ ಮತ್ತು ಸಮಯೋಚಿತ ನಿರ್ಧಾರ ಗಳು ಹೇಗೆ ಜೀವನ ಮತ್ತು ಮರಣದ ನಡುವಿನ ವ್ಯತ್ಯಾಸವನ್ನು ನಿರ್ಧರಿಸಬಲ್ಲವು ಎಂಬುದಕ್ಕೆ ವೆಂಕಟೇಶ್ ಅವರ ಕುಟುಂನ ಸಾಕ್ಷಿಯಾಗಿದೆ" ಎಂದರು.
ಯಶವಂತಪುರದ ಮಣಿಪಾಲ್ ಆಸ್ಪತ್ರೆಯು ನಿರಂತರ ಕೌನ್ಸೆಲಿಂಗ್, ಪಾರದರ್ಶಕ ಸಮನ್ವಯ ಮತ್ತು ಸಮುದಾಯದ ಜಾಗೃತಿಯ ಮೂಲಕ ಅಂಗಾಂಗ ದಾನ ಚಳವಳಿಯನ್ನು ಬಲಪಡಿಸುತ್ತಿದೆ. ನಾಗರಿಕರು ತಮ್ಮ ಅಂಗಾಂಗಗಳನ್ನು ದಾನ ಮಾಡಲು ಪ್ರತಿಜ್ಞೆ ಮಾಡುವಂತೆ, ತಮ್ಮ ಇಚ್ಛೆಯನ್ನು ಕುಟುಂಬ ಸದಸ್ಯರಿಗೆ ತಿಳಿಸುವಂತೆ ಮತ್ತು ಜೀವ ಉಳಿಸುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾ ರಿಯಾಗುವಂತಹ ಸಂಸ್ಕೃತಿಯನ್ನು ಬೆಳೆಸಲು ಆಸ್ಪತ್ರೆಯು ಮನವಿ ಮಾಡುತ್ತದೆ. ಒಂದು ಕುಟುಂಬ ದ ಧೈರ್ಯವು ಇಂದು ಹೊಸ ಹಾದಿಯನ್ನು ಬೆಳಗಿಸಿದೆ. ನಾವು ಆ ಹಾದಿಯನ್ನು ಅನುಸರಿಸಲು ನಿರ್ಧರಿಸಿದಾಗ ಇನ್ನೂ ಅನೇಕ ಜೀವಗಳನ್ನು ಉಳಿಸಲು ಸಾಧ್ಯವಿದೆ.