ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮೊಟ್ಟೆಗೂ ತಟ್ಟಿದ ಯುದ್ಧದ ಬಿಸಿ

ಪ್ರತಿ ದಿನ 3 ಸಾವಿರಕ್ಕೂ ಹೆಚ್ಚಿನ ಮೊಟ್ಟೆ ಸಂಗ್ರಹವಾಗುತ್ತದೆ. ಬೇಸಿಗೆ ಸಮಯದಲ್ಲಿ ಮೊಟ್ಟೆ ಉತ್ಪಾದನೆ ಸಹಜವಾಗಿ ಕುಸಿಯುತ್ತದೆ. ಈ ಸಮಯಲ್ಲಿ ಬೆಲೆ ಮತ್ತು ಬೇಡಿಕೆ ಹೆಚ್ಚಾಗಬೇಕು. ಆದರೆ, ಶಾಲೆಗಳಲ್ಲಿ ಪರೀಕ್ಷೆ ಆರಂಭವಾಗಿದ್ದು, ಪ್ರತಿ ನಿತ್ಯ ಮೊಟ್ಟೆ ಕೊಳ್ಳುವವರ ಸಂಖ್ಯೆಯಲ್ಲಿ ಇಳಿಕೆಯಾಗಿದೆ.

ಹೂವಪ್ಪ ಐ.ಎಚ್. ಬೆಂಗಳೂರು

ಈ ಹಿಂದೆ 6 ರು. ಇದ್ದ ಸಗಟು ದರ 4.25 ರು.ಗೆ ಕುಸಿತ

3.80 ರು.ಗೆ ಕುಸಿಯುವ ನಿರೀಕ್ಷೆ

ಪಶ್ಚಿಮ ಏಷ್ಯಾ ಸಂಘರ್ಷದಿಂದ ದಿನೇ ದಿನೆ ಮೊಟ್ಟೆ ಧಾರಣೆ ಕುಸಿಯುತ್ತಿದೆ. ಹೊರದೇಶ ಗಳಿಗೆ ಹೋಗಬೇಕಿದ್ದ ಮೊಟ್ಟೆಗಳ ದಾಸ್ತಾನು ಈಗ ದೇಶೀಯ ಮಾರುಕಟ್ಟೆಯನ್ನೆ ಅವಲಂಬಿಸಿದೆ. ಇದರಿಂದಾಗಿ ಸಗಟು ಮತ್ತು ಚಿಲ್ಲರೆ ದರಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಇದರಿಂದ ಕೋಳಿ ಸಾಕಣೆದಾರರಿಗೆ ನಷ್ಟದ ಭೀತಿ ಆವರಿಸಿದೆ. ಕೋಳಿ ಆಹಾರದ ಬೆಲೆ ಹೆಚ್ಚಳ, ನಿರ್ವಹಣೆ ಕೊರತೆ ಹಾಗೂ ಸ್ಥಿರ ಬೆಲೆ ಇಲ್ಲದೆ ಮೊಟ್ಟೆ ಉದ್ಯಮದಾರರಲ್ಲಿ ಕಳವಳ ಉಂಟಾಗಿದೆ. ಆದರೆ ಬೆಲೆ ಏರಿಕೆಯ ಬಿಸಿಯಲ್ಲಿ ಬೆಂದಿದ್ದ ಜನಸಾಮಾನ್ಯರಿಗೆ ಈ ಮೊಟ್ಟೆ ದರ ಕುಸಿತ ದೊಡ್ಡ ಖುಷಿ ತಂದು ಕೊಟ್ಟಿದೆ.

ಮೊಟ್ಟೆ ಪ್ರಿಯರು ಈ ಬೆಲೆ ಇಳಿಕೆಯನ್ನು ಸಂಭ್ರಮದಿಂದ ಸ್ವಾಗತಿಸಿದ್ದು, ಮಾರುಕಟ್ಟೆ ಯಲ್ಲಿ ಖರೀದಿ ಜೋರಾಗಿ ನಡೆಯುತ್ತಿದೆ. 6-7 ಮೊಟ್ಟೆ ಖರೀದಿಸುತ್ತಿದ್ದ ಬಡ ಗ್ರಾಹಕರು 12ಕ್ಕೂ ಹೆಚ್ಚು ಮೊಟ್ಟೆ ಖರೀದಿಸುತ್ತಿದ್ದಾರೆ.

ಸ್ಥಳೀಯ ಬೇಡಿಕೆ, ಶಾಲೆಗಳಿಗೆ ಹಂಚಿಕೆ ಹಾಗೂ ಅಂಗಡಿಗಳಿಗೆ ದಿನನಿತ್ಯ 5 ರಿಂದ 6 ಸಾವಿರಕ್ಕೂ ಹೆಚ್ಚು ಮೊಟ್ಟೆಗೆ ಬೇಡಿಕೆಯಿತ್ತು. ನೆರೆಯ ರಾಜ್ಯ ಆಂಧ್ರ ಮತ್ತು ಕೇರಳ ಮಾರುಕಟ್ಟೆಗಳಿಗೂ ಮೊಟ್ಟೆ ಪೂರೈಕೆ ಆಗುತ್ತಿತ್ತು. ಈಗ ಅಲ್ಲಿಗೂ ಪೂರೈಕೆ ಕಡಿಮೆಯಾಗಿದೆ ಎನ್ನುತ್ತಾರೆ ಮೈಸೂರು ಮೊಟ್ಟೆ ಪಾರಂ ಮಾಲೀಕ ಸುರೇಶ್.

ಇದನ್ನೂ ಓದಿ: Egg Health Benefits: ಒಂದು ಮೊಟ್ಟೆಯಲ್ಲಿ ಎಷ್ಟು ಪ್ರೊಟೀನ್‌ ದೊರೆಯುತ್ತದೆ?

ಉತ್ತರ ಕರ್ನಾಟಕದ ಮೊಟ್ಟೆ ಉದ್ಯಮಕ್ಕೂ ತಟ್ಟಿದ ಯುದ್ಧದ ಬಿಸಿ: ಇರಾನ್-ಇಸ್ರೇಲ್ ಯುದ್ಧದಿಂದ ಉತ್ತರ ಕರ್ನಾಟಕದ ಮೊಟ್ಟೆ ಉದ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಯಾದಗಿರಿ, ಹಾವೇರಿ, ಕೊಪ್ಪಳ ಜಿಲ್ಲೆಗಳಿಂದ ಗಲ್ಫ್ ರಾಷ್ಟ್ರಗಳಿಗೆ ಮೊಟ್ಟೆ ರಫ್ತು ಸ್ಥಗಿತಗೊಂಡಿದ್ದು, ಫಾರ್ಮ್ ಮಾಲೀಕರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ.

ಮೊಟ್ಟೆ ಬೆಲೆ ಕುಸಿದಿದ್ದಲ್ಲದೆ, ಪ್ರತಿದಿನ ಲಕ್ಷಾಂತರ ಮೊಟ್ಟೆಗಳು ಮಾರಾಟವಾಗದೆ ಉಳಿಯುತ್ತಿವೆ ಎಂದು ಫಾರ್ಮ್ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.

ಕೊಲ್ಲಿ ರಾಷ್ಟ್ರಗಳಿಗೆ ದಿನಕ್ಕೆ ಸುಮಾರು 50 ಲಕ್ಷದಿಂದ 1 ಕೋಟಿ ಮೊಟ್ಟೆಗಳು ರಫ್ತು ಆಗುತ್ತದೆ ಎಂದು ಅಂದಾಜು ಇದೆ. ಭಾರತದಲ್ಲಿಉತ್ಪಾದನೆಯಾಗುವ ಒಟ್ಟು ಮೊಟ್ಟೆ ಗಳಲ್ಲಿ ಸುಮಾರು ಶೇ.60ರಷ್ಟು ಮೊಟ್ಟೆಗಳು ಕೊಲ್ಲಿ ರಾಷ್ಟ್ರಗಳಿಗೆ ರಫ್ತಾಗುತ್ತಿದ್ದವು. ಆದರೆ, ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಭೀತಿಯಿಂದಾಗಿ ಸಾರಿಗೆ ವ್ಯವಸ್ಥೆ ಏರುಪೇರಾಗಿದ್ದು, ರಫ್ತು ಸಂಪೂರ್ಣವಾಗಿ ಸ್ಥಗಿತವಾಗಿದೆ ಎಂದು ಮೂಲಗಳು ಹೇಳುತ್ತಿವೆ.

ಪ್ರತಿ ದಿನ 3 ಸಾವಿರಕ್ಕೂ ಹೆಚ್ಚಿನ ಮೊಟ್ಟೆ ಸಂಗ್ರಹವಾಗುತ್ತದೆ. ಬೇಸಿಗೆ ಸಮಯದಲ್ಲಿ ಮೊಟ್ಟೆ ಉತ್ಪಾದನೆ ಸಹಜವಾಗಿ ಕುಸಿಯುತ್ತದೆ. ಈ ಸಮಯಲ್ಲಿ ಬೆಲೆ ಮತ್ತು ಬೇಡಿಕೆ ಹೆಚ್ಚಾಗಬೇಕು. ಆದರೆ, ಶಾಲೆಗಳಲ್ಲಿ ಪರೀಕ್ಷೆ ಆರಂಭವಾಗಿದ್ದು, ಪ್ರತಿ ನಿತ್ಯ ಮೊಟ್ಟೆ ಕೊಳ್ಳುವವರ ಸಂಖ್ಯೆಯಲ್ಲಿ ಇಳಿಕೆಯಾಗಿದೆ.

ತಮಿಳುನಾಡಿನ ನಾಮಕಲ್ ಮಾರುಕಟ್ಟೆ ಮೂಲಕ ಅರಬ್ ರಾಷ್ಟ್ರಗಳಿಗೆ ಪೂರೈಕೆ ಯಾಗುವ ಮೊಟ್ಟೆಯಲ್ಲಿಯೂ ಬೇಡಿಕೆ ಕುಸಿದಿದೆ. ದರ ಪರಿಣಾಮ ಸ್ಥಳೀಯ ಮಾರುಕಟ್ಟೆ ಮೇಲೆ ಆಗಿದೆ ಎನ್ನುತ್ತಾರೆ ಮೊಟ್ಟೆ ಮಾರಾಟಗಾರರು. ರಾಷ್ಟ್ರೀಯ ಮೊಟ್ಟೆ ಧಾರಣೆ ಸಮಿತಿ ನಿರ್ಣಯ ಮಾಡಿರುವ ಅನುಸಾರ ತಿಂಗಳ ಹಿಂದೆ ರು. 5.50 ರಿಂದ 6ರ ತನಕ ಬೆಲೆ ಇತ್ತು.

ಪ್ರಸ್ತುತ 4.25 ರು. ಗೆ ಧಾರಣೆ ಕುಸಿದಿದೆ. ಅಂಗಡಿಗಳಲ್ಲಿ ಡಿಸೆಂಬರ್-ಫೆಬ್ರವರಿ ಅಂತ್ಯದ ನಡುವೆ 1 ಮೊಟ್ಟೆಗೆ 7.50 ರಿಂದ 8 ರು. ದರದಲ್ಲಿ ಮಾರಾಟ ಆಗುತ್ತಿತ್ತು. ಆದರೆ ಈಗ 5.50 ರು.ಗೆ ಗಿರಕಿ ಹೊಡೆಯುತ್ತಿದೆ. ಇದರಿಂದ ಮೊಟ್ಟೆ ವಹಿವಾಟಿನ ಮೇಲೆ ಕಾರ್ಮೋಡ ಕವಿದಿದೆ ಎನ್ನುತ್ತಾರೆ ಅಂಗಡಿ ಮಾಲೀಕರು.

ಮೊಟ್ಟೆಯನ್ನು ಹೆಚ್ಚು ದಿನ ಸಂಗ್ರಹಿಸಿ ಇಡಲಾಗದು. ಮೂರು ನಾಲ್ಕು ದಿನಗಳಲ್ಲಿ ಮಾರಾಟ ಮಾಡಬೇಕು. ಬೇಸಿಗೆ ಕಾವು ಹೆಚ್ಚುತ್ತಾ ಹೋದಂತೆ ದೇಹಕ್ಕೆ ಉಷ್ಣ ಎಂದು ಸೇವನೆ ಕಡಿಮೆ ಮಾಡುತ್ತಾರೆ. ಆದರೂ, ಬೆಲೆ ಕುಸಿತದ ಲಾಭ ಮಾತ್ರ ಇನ್ನೂ ಗ್ರಾಹಕರಿಗೆ ವರ್ಗಾವಣೆ ಆಗದೆ ಇರುವುದು ಕೊಳ್ಳುವವರಲ್ಲಿ ಅಚ್ಚರಿ ಮೂಡಿಸಿದೆ.

ರಫ್ತು ಮಾರುಕಟ್ಟೆ ಚೇತರಿಸಿಕೊಳ್ಳುವವರೆಗೆ ಈ ಕಡಿಮೆ ದರ ಮುಂದುವರಿಯುವ ಸಾಧ್ಯತೆಯಿದೆ. ಇದು ಕುಕ್ಕುಟೋದ್ಯಮಿಗಳಿಗೆ ತುಸು ಆತಂಕ ತಂದಿದ್ದರೂ, ಪ್ರೊಟೀನ್ ಯುಕ್ತ ಆಹಾರವನ್ನು ಕಡಿಮೆ ದರದಲ್ಲಿ ಪಡೆಯುತ್ತಿರುವ ಗ್ರಾಹಕರಿಗೆ ಮಾತ್ರ ಇದು ನಿಜಕ್ಕೂ ಹಬ್ಬದ ಸುದ್ದಿಯಾಗಿದೆ.

ಮೊಟ್ಟೆಯ ದರ ಗ್ರಾಹಕರಿಗೆ ಕೆಗೆಟಕುವ ದರಕ್ಕೆ ಬಂದಿಳಿದಿದ್ದು ಮಾರುಕಟ್ಟೆ ಚುರುಕು ಕಂಡಿದೆ. ಒಮ್ಮೆ ಗಗನಕ್ಕೇರಿದ ಮೊಟ್ಟೆಯ ಬೆಲೆ ಇದೀಗ ಒಮ್ಮೆಲೇ ಕಡಿಮೆಯಾಗಿರುವುದು ಮಾರುಕಟ್ಟೆಯಲ್ಲಿ ಬೇಡಿಕೆ ಬದಲಾವಣೆಗಳಾಗಿವೆ.

image

ಕೊಲ್ಲಿ ದೇಶಗಳಲ್ಲಿ ಯುದ್ಧ ಆರಂಭವಾದ ನಂತರ ಮೊಟ್ಟೆ ಬೆಲೆ ಕುಸಿಯುತ್ತಿದೆ. ಈಗಿನ ಬೆಲೆ ಅಸಲು ಆಗುತ್ತದಷ್ಟೇ. ಲಾಭ ಸಿಗದೆ, ಮೊಟ್ಟೆ ಕೋಳಿ ಸಾಕಣೆದಾರರು ನಷ್ಟ ಅನುಭವಿಸಬೇಕಿದೆ ಕೋಳಿ ಸಾಕಣೆಗೆ ಆಳುಗಳ ಖರ್ಚು ಹಾಗೂ ಔಷಧೋಪಚಾರ ಮತ್ತಿತರ ಖರ್ಚಿನಲ್ಲಿ ಏರಿಕೆಯಾಗಿದೆ.

- ಸುರೇಶ್ ಬಾಬು ಮೊಟ್ಟೆ ಉತ್ಪಾದಕ
image

ಈ ಹಿಂದೆ ಒಂದು ಮೊಟ್ಟೆಗೆ 8 ರು. ಇತ್ತು. ಇದರ ಜತೆಗೆ ಮೀನು ಕೋಳಿ ಮಾಂಸ ಬೆಲೆ ಕೂಡ ವಿಪರೀತ ಏರಿಕೆಯಾಗಿತ್ತು. ಇದೀಗ ಒಂದು ಮೊಟ್ಟೆ 5.25 ರು. ನಿಂದ 5.50 ರು.ಗೆ ಸಿಗುತ್ತಿದೆ. ನಮ್ಮಂಥ ಕೂಲಿ ಕಾರ್ಮಿಕರಿಗೆ ಬೆಲೆ ಇಳಿಕೆ ಭಾರೀ ಖುಷಿಯಾಗಿದೆ.

- ಹನುಮಕ್ಕ, ಗ್ರಾಹಕಿ, ಬೆಂಗಳೂರು