ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vokkaligara Sangha: ಬಗೆದಷ್ಟು ಬಯಲಾಗುತ್ತಲೇ ಇದೆ ಒಕ್ಕಲಿಗರ ಸಂಘದ ಕರ್ಮಕಾಂಡ

ಸ್ವತಃ ಸಂಘದ ಕೆಲ ನಿರ್ದೇಕರು ನಡೆಯುತ್ತಿರುವ ಅಕ್ರಮಗಳ ಬಗ್ಗೆ ಬೆಳಕಿಗೆ ತಂದಿದ್ದಾರೆ. ರಾಜ್ಯದ ಪ್ರತಿಷ್ಠಿತ ಸಮುದಾಯ ಸಂಸ್ಥೆಗಳಲ್ಲಿ ಒಂದಾದ ರಾಜ್ಯ ಒಕ್ಕಲಿಗರ ಸಂಘ ವಿವಾದಗಳ ಸುಳಿಯಲ್ಲಿ ಸಿಲುಕಿದೆ. ಸಂಘದ ನಿಯಮಾವಳಿ ಹಾಗೂ ನೇಮಕಾತಿ ನಿಯಮ ಉಲ್ಲಂಘಿಸಿ ಹಲವರನ್ನು ನೇರವಾಗಿ ನೇಮಕ ಮಾಡಲಾಗಿದೆ.

ಸಿಬ್ಬಂದಿ ನೇಮಕಾತಿಯಲ್ಲಿ ಅಕ್ರಮ, ಕಾಮಗಾರಿಗಳಲ್ಲಿ ಹಣ ಲೂಟಿ

ಬೆಂಗಳೂರು: ಸಿಬ್ಬಂದಿಗಳ ನೇಮಕಾತಿಯಲ್ಲಿ ಅಕ್ರಮ, ಕಾಮಗಾರಿಗಳಲ್ಲಿ ಹಣ ಲೂಟಿ, ಕಾನೂನಿಗೆ ವಿರುದ್ಧವಾಗಿ ಆಡಳಿತಾತ್ಮಕ ನಿರ್ಧಾರಗಳು, ಬಗೆದಷ್ಟು ಬಯಲಿಗೆ ಬರುತ್ತಿದೆ ಒಕ್ಕಲಿಗರ ಸಂಘದ ಕರ್ಮಕಾಂಡ...ಒಕ್ಕಲಿಗರ ಸಂಘದ ಆಡಳಿತ ಮಂಡಳಿಗೆ ಭ್ರಷ್ಟಾಚಾರ ಆರೋಪ ಅಂಟಿಕೊಂಡಿದೆ.

ಸ್ವತಃ ಸಂಘದ ಕೆಲ ನಿರ್ದೇಕರು ನಡೆಯುತ್ತಿರುವ ಅಕ್ರಮಗಳ ಬಗ್ಗೆ ಬೆಳಕಿಗೆ ತಂದಿದ್ದಾರೆ. ರಾಜ್ಯದ ಪ್ರತಿಷ್ಠಿತ ಸಮುದಾಯ ಸಂಸ್ಥೆಗಳಲ್ಲಿ ಒಂದಾದ ರಾಜ್ಯ ಒಕ್ಕಲಿಗರ ಸಂಘ ವಿವಾದಗಳ ಸುಳಿಯಲ್ಲಿ ಸಿಲುಕಿದೆ. ಸಂಘದ ನಿಯಮಾವಳಿ ಹಾಗೂ ನೇಮಕಾತಿ ನಿಯಮ ಉಲ್ಲಂಘಿಸಿ ಹಲವರನ್ನು ನೇರವಾಗಿ ನೇಮಕ ಮಾಡಲಾಗಿದೆ. ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಂಪ್ಯೂಟರ್ ಆಪರೇಟರ್ ಮತ್ತು ಇತರೆ ಸಿಬ್ಬಂದಿ ಹುದ್ದೆಗಳನ್ನು ಜಾಹೀರಾತು ನೀಡಿ, ಸಂದರ್ಶನ ನಡೆಸಿ, ನಿಯಮಾನುಸಾರ ನೇಮಕ ಮಾಡಿಕೊಳ್ಳಲು ತೀರ್ಮಾನಿಸಿದ್ದರೂ, ನಂತರ ಅದನ್ನು ಪಾಲಿಸದೇ ಇಷ್ಟಾನಿಷ್ಟವಾಗಿ ನೇಮಕಾತಿ ಆದೇಶ ನೀಡಲಾಗಿದೆ.

ಸಂಘದ ಸಿಎನ್‌ಆರ್ ನಿಯಮಾವಳಿಗಳ ಪ್ರಕಾರ ಅರ್ಜಿಗಳನ್ನು ಆಹ್ವಾನಿಸಿ, ಅರ್ಹತಾ ಪಟ್ಟಿ ಸಿದ್ಧಪಡಿಸಿ, ನೇಮಕಾತಿ ಸಮಿತಿಯ ಮೂಲಕ ಸಂದರ್ಶನ ನಡೆಸಬೇಕಿತ್ತು. ಆದರೆ ಈ ಎಲ್ಲ ಪ್ರಕ್ರಿಯೆಗಳನ್ನು ಕಡೆಗಣಿಸಿ, ಅರ್ಹತೆ ಇಲ್ಲದವರಿಗೂ ನೇಮಕಾತಿ ನೀಡಲಾಗಿದೆ ಎಂದು ಸುದ್ದಿ ಗೋಷ್ಠಿಯಲ್ಲಿ ಒಕ್ಕಲಿಗ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಕೋನಪ್ಪರೆಡ್ಡಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:Vokkaligara Sangha: ಒಕ್ಕಲಿಗರ ಸಂಘದಲ್ಲಿ ಅವ್ಯವಹಾರದ ವಾಸನೆ

ಯೋಗ್ಯವಲ್ಲದ ಗುತ್ತಿಗೆದಾರರಿಗೆ ಟೆಂಡರ್: ಕಪ್ಪುಪಟ್ಟಿಗೆ ಸೇರಿಸಲಾಗಿದ್ದ ಕೆಲವು ಗುತ್ತಿಗೆದಾರರಿಗೆ ಮರುಕಾಮಗಾರಿ ನೀಡಲಾಗಿದೆ. ಕಾರ್ಯಕಾರಿ ಸಮಿತಿಯ ತೀರ್ಮಾನದಂತೆ ಕೆಲವು ಗುತ್ತಿಗೆದಾರರ ಒಪ್ಪಂದಗಳನ್ನು ರದ್ದುಪಡಿಸಿ, ಇಎಂಡಿ ಮೊತ್ತ ವಶದಲ್ಲಿಟ್ಟುಕೊಂಡು ಕಪ್ಪುಪಟ್ಟಿಗೆ ಸೇರಿಸ ಲಾಗಿತ್ತು. ಆದರೂ ನಂತರ ಅವರಿಗೇ ಮತ್ತೆ ಕಾಮಗಾರಿಗಳನ್ನು ನೀಡಿರುವುದು ಪ್ರಶ್ನಾರ್ಥಕವಾಗಿದೆ. ತಮ್ಮ ವಿರುದ್ಧ ಡೆಂಟಲ್ ಕಾಲೇಜಿನ ಉಪನ್ಯಾಸಕರಿಗೆ ಹೆಚ್ಚುವರಿ ವೇತನ ನೀಡಿದ ಆರೋಪದಡಿ ಕೈಗೊಂಡ ಅಮಾನತು ಕ್ರಮವೂ ಕಾನೂನು ಬಾಹಿರವಾಗಿದೆ. ಈ ಸಂಬಂಧ ಸಹಕಾರ ಇಲಾಖೆ ಹಾಗೂ ನ್ಯಾಯಾಲಯಗಳಿಂದ ನಮ್ಮ ಪರವಾಗಿ ಅನುಕೂಲಕರ ಆದೇಶಗಳು ಬಂದಿದ್ದು, ಸದಸ್ಯತ್ವದಿಂದ ಅಮಾನತುಗೊಳಿಸಿರುವ ಕ್ರಮ ಸಂಘದ ಬೈಲಾ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಇಲಾಖೆ ವರದಿಗಳು ಹೇಳಿವೆ ಎಂದು ಆರೋಪ ಮಾಡಿದ್ದಾರೆ.

ಫಾರ್ಮಸಿ ಕಾಲೇಜಿನಲ್ಲಿ ಆಯ್ಕೆಯಾದ ಸಿಬ್ಬಂದಿಗೆ ಹಲವು ತಿಂಗಳುಗಳಿಂದ ಸಂಬಳ ಪಾವತಿಸಿಲ್ಲ. ಈ ಸಂಬಂಧ ನ್ಯಾಯಾಲಯ ಆದೇಶ ನೀಡಿದರೂ ಸಂಬಳ ವಿತರಣೆ ಆಗಿಲ್ಲ ಎಂದು ಆರೋಪಿಸಿ ದರು. ಅಲ್ಲದೆ, ಕಾಲೇಜು ಪ್ರವೇಶಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲದಿರುವುದು, ಗುತ್ತಿಗೆದಾರ ರಿಂದ ಕಮಿಷನ್ ಬೇಡಿಕೆ ಇಟ್ಟಿರುವುದು ಹಾಗೂ ವಿವಿಧ ಕಾಮಗಾರಿಗಳಲ್ಲಿ ಹಣಕಾಸು ಅವ್ಯವಹಾರಗಳು ನಡೆದಿವೆ. ಸಂಘದ ಕೆಲ ಪದಾಧಿಕಾರಿಗಳ ವರ್ತನೆ ಮತ್ತು ಆಡಳಿತ ಶೈಲಿಯಿಂದ ಸಂಘದ ಗೌರವಕ್ಕೆ ಧಕ್ಕೆಯಾಗುತ್ತಿದೆ. ಅಧ್ಯಕ್ಷರು ಆಡಳಿತದ ಮೇಲೆ ಸಮರ್ಪಕ ನಿಯಂತ್ರಣ ವಹಿಸು ತ್ತಿಲ್ಲ ಎಂಬ ಆರೋಪವನ್ನೂ ಅವರು ಮಾಡಿದರು. ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳ ಖರೀದಿ ಪ್ರಕ್ರಿಯೆಗಳಲ್ಲಿ ಕೂಡ ಅಕ್ರಮಗಳಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.

ತಮ್ಮ ವಿರುದ್ಧ ಹೊರಡಿಸಿರುವ ಅಮಾನತು ಆದೇಶ ಅನ್ಯಾಯವಾಗಿದೆ ಎಂದು ಹೇಳಿದ ಸೋಮ ನಾಥ್ ರೆಡ್ಡಿ, ಸಂಘದ ಹಿತಾಸಕ್ತಿಗಾಗಿ ಈ ವಿಚಾರಗಳನ್ನು ಸಾರ್ವಜನಿಕರ ಮುಂದಿಡು ತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು. ಆರೋಪಗಳ ಕುರಿತು ಸ್ವತಂತ್ರ ತನಿಖೆ ನಡೆಸಿ ಸತ್ಯಾಂಶ ಬಹಿರಂಗ ಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಸಂಘದ ಆಡಳಿತದಲ್ಲಿ ಹಣಕಾಸು ದುರುಪಯೋಗ

ಸಂಘದ ಆಡಳಿತದಲ್ಲಿ ಪಾರದರ್ಶಕತೆ ಕೊರತೆಯಿದ್ದು, ಚುನಾವಣಾ ಉದ್ದೇಶದಿಂದ ಹಣಕಾಸು ಮತ್ತು ಆಡಳಿತಾತ್ಮಕ ನಿರ್ಧಾರ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಸಂಘದ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದಲೇ ನಾವು ಈ ವಿಷಯಗಳನ್ನು ಸಾರ್ವಜನಿಕರ ಮುಂದೆ ತರುತ್ತಿದ್ದೇವೆ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಗಾಗಿ ಅಲ್ಲ, ಸಂಸ್ಥೆಯ ಭವಿಷ್ಯಕ್ಕೆ ಧಕ್ಕೆಯಾಗುತ್ತಿರುವ ಅಕ್ರಮಗಳ ವಿರುದ್ಧ ಧ್ವನಿ ಎತ್ತುತ್ತಿದ್ದೇವೆ. ಸಂಘದ ಹಣ ದುರುಪಯೋಗ ಹಾಗೂ ವಂಚನೆಯಾಗುತ್ತಿರುವುದು ಬೇಸರದ ಸಂಗತಿ ಎಂದು ಒಕ್ಕಲಿಗ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಕೋನಪ್ಪ ರೆಡ್ಡಿ ಅವರು ತಿಳಿಸಿದ್ದಾರೆ.

image

ವಿವಿಧ ಶಿಕ್ಷಣ ಸಂಸ್ಥೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಉಲ್ಲಂಘಿಸಿ ಅಂಕಗಳನ್ನು ನೀಡಲಾಗಿದ್ದು, ಇದರಿಂದ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಕೆಲವು ನೇಮಕಾತಿ ವಿಚಾರಗಳು ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿವೆ.

-ಟಿ.ಕೋನಪ್ಪರೆಡ್ಡಿ ಒಕ್ಕಲಿಗ ಸಂಘದ ಪ್ರಧಾನ ಕಾರ್ಯದರ್ಶಿ