Road Rage: ಕಾರು ಟಚ್ ಆಗಿದ್ದನ್ನು ಪ್ರಶ್ನಿಸಿದ್ದಕ್ಕೆ ಮಚ್ಚು ತೆಗೆದ; ಕಿಡಿಗೇಡಿಯ ಕಾರನ್ನೇ ಧ್ವಂಸ ಮಾಡಿದ ಜನ!
Bengaluru News: ಬೆಂಗಳೂರಿನ ಓಕಳಿಪುರಂ ಜಂಕ್ಷನ್‌ನಲ್ಲಿ ಘಟನೆ ನಡೆದಿದೆ. ಇನ್ನೋವಾ ಕಾರು ಇಟಿಯೋಸ್ ಕ್ಯಾಬ್‌ಗೆ ಟಚ್ ಆಗಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ಕಾರಿಂದ ಇಳಿದು ಬಂದ ಇನ್ನೋವಾ ಕಾರು ಚಾಲಕ, ಮಚ್ಚು ತೋರಿಸಿ ಕ್ಯಾಬ್ ಚಾಲಕನಿಗೆ ಥಳಿಸಿದ್ದಾನೆ. ಇದರಿಂದ ಸ್ಥಳದಲ್ಲಿದ್ದ ಜನರು ರೊಚ್ಚಿಗೆದ್ದು ಕಿಡಿಗೇಡಿಯ ಇನ್ನೋವಾ ಕಾರನ್ನೇ ಧ್ವಂಸ ಮಾಡಿದ್ದಾರೆ.


ಬೆಂಗಳೂರು: ಕಾರು ಟಚ್ ಆಗಿದ್ದನ್ನು ಪ್ರಶ್ನಿಸಿದ್ದಕ್ಕೆ ಟ್ಯಾಕ್ಸಿ ಚಾಲಕನ ಮೇಲೆ ಇನ್ನೋವಾ ಕಾರು ಚಾಲಕನೊಬ್ಬ ಲಾಂಗ್‌ನಿಂದ ಹಲ್ಲೆಗೆ ಯತ್ನಿಸಿರುವುದು ನಗರದಲ್ಲಿ ನಡೆದಿದೆ. ಘಟನೆ (Road Rage) ವೇಳೆ ಸ್ಥಳದಲ್ಲಿದ್ದ ಇತರ ವಾಹನ ಸವಾರರು ಹಾಗೂ ಸಾರ್ವಜನಿಕರು ಇನ್ನೋವಾ ಕಾರು ಪುಡಿಗಟ್ಟಿದ್ದು, ಇದರಿಂದ ಕಿಡಿಗೇಡಿ ಸ್ಥಳದಿಂದ ಪರಾರಿಯಾಗಿದ್ದಾನೆ. ಬೆಂಗಳೂರಿನ ಓಕಳಿಪುರಂ ಜಂಕ್ಷನ್‌ನಲ್ಲಿ ಘಟನೆ ನಡೆದಿದೆ.
ಮೆಜೆಸ್ಟಿಕ್ ಸಮೀಪದಲ್ಲಿರುವ ರೈಲ್ವೇ ಗೇಟ್ ಹಿಂಭಾಗದ ರಸ್ತೆಯಲ್ಲಿ ಕ್ಯಾಬ್ ಚಾಲಕ ಕುಮಾರ್ ಪ್ರಯಾಣಿಕನನ್ನು ಕರೆದುಕೊಂಡು ವಿಜಯನಗರದಿಂದ ಬರುತ್ತಿದ್ದ. ಇದೇ ವೇಳೆ ಹಿಂಬದಿಯಿಂದ ಬಂದ ಇನ್ನೋವಾ ಕಾರು ಇಟಿಯೋಸ್ ಕ್ಯಾಬ್‌ಗೆ ಟಚ್ ಆಗಿದೆ. ಈ ವೇಳೆ ಇಬ್ಬರು ಚಾಲಕರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಕಾರಿಂದ ಇಳಿದು ಬಂದ ಇನ್ನೋವಾ ಕಾರು ಚಾಲಕ ಕ್ಯಾಬ್ ಚಾಲಕನಿಗೆ ಥಳಿಸಿದ್ದಾನೆ.

ಕಾರಲ್ಲಿ ಪ್ಯಾಸೆಂಜರ್ ಇದ್ದಿದ್ದರಿಂದ ಇಟಿಯೋಸ್ ಕಾರು ಚಾಲಕ ಸುಮ್ಮನಿದ್ದ. ಇಷ್ಟಾದರೂ ಸುಮ್ಮನಾಗದ ಇನ್ನೋವಾ ಕಾರು ಚಾಲಕ ಕಾರಿನಿಂದ ಮಚ್ಚು ತಂದು ಇಟಿಯೋಸ್ ಕಾರು ಚಾಲಕನ ಕುತ್ತಿಗೆಗೆ ಇಟ್ಟು ಬೆದರಿಕೆ ಹಾಕಿದ್ದಾನೆ. ಇದರಿಂದ ಆತ ಭಯಗೊಂಡರೇ, ಅಲ್ಲೇ ಇದ್ದ ಜನರು ರೊಚ್ಚಿಗೆದ್ದು, ಇನ್ನೋವಾ ಕಾರಿನ ಗಾಜುಗಳನ್ನು ಕಲ್ಲಿನಿಂದ ಪುಡಿಪುಡಿ ಮಾಡಿದ್ದಾರೆ. ಜನರ ಆಕ್ರೋಶಕ್ಕೆ ಹೆದರಿದ ಕಿಡಿಗೇಡಿ ಕಾರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಬಂದ ಶೇಷಾದ್ರಿಪುರಂ ಸಂಚಾರ ಪೊಲೀಸರು ಕಾರನ್ನು ಸ್ಥಳಾಂತರ ಮಾಡಿದರು. ಇನ್ನು ಕ್ಯಾಬ್ ಚಾಲಕ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ದೂರು ದಾಖಲಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಇನ್ನೋವಾ ಕಾರು ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ.
ಈ ಸುದ್ದಿಯನ್ನೂ ಓದಿ | Murder Case: ವ್ಯಕ್ತಿಯ ಅಪಹರಿಸಿ, ಖಾಸಗಿ ಅಂಗಕ್ಕೆ ಒದ್ದು ಹತ್ಯೆ; ಮಹಿಳೆ ಸೇರಿ ಮೂವರ ಬಂಧನ