35 ವರ್ಷದ ಮಹಿಳಾ ಟೆಕ್ಕಿ ಸಾವಿನ ರಹಸ್ಯ ಬಯಲು: ಪ್ರೀತಿ ನಿರಾಕರಿಸಿದ ಕಾರಣಕ್ಕೆ ಕೊಲೆಗೈದ 18 ವರ್ಷದ ವಿದ್ಯಾರ್ಥಿ ಅರೆಸ್ಟ್
Bengaluru News: ಬೆಂಗಳೂರಿನ ರಾಮಮೂರ್ತಿ ನಗರದ ಸುಬ್ರಹ್ಮಣ್ಯ ಬಡಾವಣೆಯ ಅಪಾರ್ಟ್‌ಮೆಂಟ್‌ನಲ್ಲಿ ಜನವರಿ 3ರಂದು ಉಸಿರುಗಟ್ಟಿ ಮೃತಪಟ್ಟ ಮಹಿಳಾ ಟೆಕ್ಕಿಯ ಸಾವಿನ ಪ್ರಕರಣಕ್ಕೆ ತಿರುವು ಲಭಿಸಿದ್ದು, ಇದೊಂದು ವ್ಯವಸ್ಥಿತ ಕೊಲೆ ಎನ್ನುವುದು ತನಿಖೆಯಿಂದ ಬಯಲಾಗಿದೆ. ಕೊಲೆಗಾರನನ್ನು 18 ವರ್ಷದ ವಿದ್ಯಾರ್ಥಿ, ಕೇರಳ ಮೂಲದ ಕರ್ನಲ್ ಕುರೈ ಎಂದು ಗುರುತಿಸಲಾಗಿದೆ.
ಶರ್ಮಿಳಾ ಮತ್ತು ಕರ್ನಲ್ ಕುರೈ (ಸಂಗ್ರಹ ಚಿತ್ರ) -
ಬೆಂಗಳೂರು, ಜ. 11: ಬೆಂಗಳೂರಿನ ರಾಮಮೂರ್ತಿ ನಗರದ ಸುಬ್ರಹ್ಮಣ್ಯ ಬಡಾವಣೆಯ ಅಪಾರ್ಟ್‌ಮೆಂಟ್‌ನಲ್ಲಿ ಜನವರಿ 3ರಂದು ಉಸಿರುಗಟ್ಟಿ ಮೃತಪಟ್ಟ ಮಹಿಳಾ ಟೆಕ್ಕಿಯ ಸಾವಿನ ಪ್ರಕರಣಕ್ಕೆ ತಿರುವು ಲಭಿಸಿದ್ದು, ಇದೊಂದು ವ್ಯವಸ್ಥಿತ ಕೊಲೆ ಎನ್ನುವುದು ತನಿಖೆಯಿಂದ ಬಯಲಾಗಿದೆ (Bengaluru News). ಆರಂಭದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಕಾಣಿಸಿಕೊಂಡ ಹೊಗೆಯಿಂದ ಶರ್ಮಿಳಾ (35) ಉಸಿರುಗಟ್ಟಿ ಮೃತಪಟ್ಟಿದ್ದರು ಎನ್ನಲಾಗಿತ್ತು (Crime News). ಆದರೆ ಇದೀಗ ತನಿಖೆ ವೇಳೆ ಸ್ಫೋಟಕ ರಹಸ್ಯ ಹೊರಬಿದ್ದಿದ್ದು, ಶರ್ಮಿಳಾ ಅವರನ್ನು ಪ್ರೀತಿಸುತ್ತಿದ್ದ18 ವರ್ಷದ ವಿದ್ಯಾರ್ಥಿ, ಕೇರಳ ಮೂಲದ ಕರ್ನಲ್ ಕುರೈ ಕೊಲೆ ಮಾಡಿ, ಸಾಕ್ಷ್ಯ ನಾಶಕ್ಕಾಗಿ ಬೆಂಕಿ ಹಚ್ಚಿದ್ದಾನೆ ಎನ್ನುವುದು ಗೊತ್ತಾಗಿದೆ.
ಕರ್ನಲ್ ಕುರೈನದ್ದು ಒನ್ ಸೈಡ್ ಲವ್ ಎನ್ನಲಾಗಿದ್ದು, ಹಿರಿಯಳಾದ ಶರ್ಮಿಳಾ ಆತನ ಪ್ರೀತಿ ಒಪ್ಪಿಕೊಂಡಿರಲಿಲ್ಲ. ಆಕೆಯ ಅಪಾರ್ಟ್‌ಮೆಂಟ್ ಸಮೀಪವೇ ವಾಸಿಸುತ್ತಿದ್ದ ಕರ್ನಲ್ ಕುರೈ ತನ್ನ ಪ್ರೀತಿಯನ್ನು ನಿರಾಕಸಿದ್ದಾಳೆ ಎಂದು ಕೊಲೆ ಮಾಡಿದ್ದಾಗಿ ಮೂಲಗಳು ತಿಳಿಸಿವೆ.
ಉಸಿರುಗಟ್ಟಿ ಮೃತಪಟ್ಟಿದ್ದಾಗಿ ವರದಿಯಾಗಿತ್ತು
ಇತ್ತೀಚೆಗೆ ಬೆಂಗಳೂರಿನ ರಾಮಮೂರ್ತಿ ನಗರದ ಅಪಾರ್ಟ್‌ಮೆಂಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು, ದಟ್ಟ ಹೊಗೆ ಆವರಿಸಿ ಮಂಗಳೂರು ಮೂಲದ ಸಾಫ್ಟ್‌ವೇರ್ ಉದ್ಯೋಗಿ ಶರ್ಮಿಳಾ ಮೃತಪಟ್ಟಿದ್ದಾರೆ ಎಂದು ವರದಿಯಾಗಿತ್ತು. ಈ ಸಂಬಂಧ ರಾಮಮೂರ್ತಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಈ ವೇಳೆ ಭಗ್ನ ಪ್ರೇಮಿಯ ಕೃತ್ಯ ಬಯಲಾಗಿದೆ. ಕಾಲೇಜು ಓದುತ್ತಿರುವ ಕರ್ನಲ್ ಕುರೈಗೆ ತನಗಿಂತ ದುಪ್ಪಟ್ಟು ವಯಸ್ಸಿನ ಶರ್ಮಿಳಾ ಮೇಲೆ ಪ್ರೀತಿ ಮೂಡಿತ್ತು. ಆದರೆ ಇದನ್ನು ಆಕೆಯ ಮುಂದೆ ಹೇಳಿರಲಿಲ್ಲ. ಆದರೆ ಆಕೆ ಕೈ ತಪ್ಪಿ ಹೋಗಬಹುದೆನ್ನುವ ಭೀತಿಯಲ್ಲಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಅಪಾರ್ಟ್‌ಮೆಂಟ್‌ನಲ್ಲೇ ಉಸಿರುಗಟ್ಟಿ ಮಹಿಳಾ ಟೆಕ್ಕಿ ಸಾವು
ಕೊಲೆ ರಹಸ್ಯ ಬಯಲು
ಮಂಗಳೂರಿನ ಕಾವೂರು ಮೂಲದ ಶರ್ಮಿಳಾ ಕೆಲವು ತಿಂಗಳಿಂದ ಬೆಂಗಳೂರಿನಲ್ಲಿದ್ದರು. ಅಪಾರ್ಟ್‌ಮೆಂಟ್‌ನಲ್ಲಿ ಅವರು ಗೆಳತಿಯರೊಂದಿಗೆ ವಾಸವಾಗಿದ್ದರು. ಜನವರಿ 3ರಂದು ಶರ್ಮಿಳಾ ಮನೆಯಲ್ಲಿ ಒಬ್ಬರೇ ಇದ್ದರು. ಇದನ್ನು ಗಮನಿಸಿದ ನೆರೆ ಮನೆಯ ಕರ್ನಲ್ ಕುರೈ ಆಕೆಯ ಅಪಾರ್ಟ್‌ಮೆಂಟ್‌ಗೆ ನುಗ್ಗಿದ. ಬಾಲ್ಕನಿ ಮೂಲಕ ಶರ್ಮಿಳಾಳ ಮನೆಯೊಳಗೆ ಬಂದು ಆಕೆಯನ್ನು ಹಿಂದಿನಿಂದ ಅಪ್ಪಿಕೊಂಡಿದ್ದ. ಆಗ ಶರ್ಮಿಳಾ ಕರ್ನಲ್ ಕುರೈನಿಂದ ಬಿಡಿಸಿಕೊಳ್ಳಲು ಯತ್ನಿಸಿದರು. ಆ ವೇಳೆ ಕುರೈ ಆಕೆಯ ಕುತ್ತಿಗೆಗೆ ಬಲವಾಗಿ ಹೊಡೆದಿದ್ದ. ಕೂಡಲೇ ಶರ್ಮಿಳಾ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಬಳಿಕ ಕುರೈ ಉಸಿರುಗಟ್ಟಿಸಿ ಶರ್ಮಿಳಾ ಅವರನ್ನು ಕೊಲೆ ಮಾಡಿದ್ದ. ಅಲ್ಲದೇ ಸಾಕ್ಷಿ ನಾಶ ಮಾಡಲು ಮನೆಗೆ ಬೆಂಕ್ಕಿ ಹಚ್ಚಿ ಪರಾರಿಯಾಗಿದ್ದ ಎನ್ನುವುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.
ಅನುಮಾನ ಬಂದಿದ್ದು ಹೇಗೆ?
ಎಲ್ಲವೂ ಕುರೈಯ ಯೋಜನೆಯಂತೆ ನಡೆದಿತ್ತು. ಆದರೆ ಶರ್ಮಿಳಾ ಶರೀರದಲ್ಲಿ ಯಾವುದೇ ಸುಟ್ಟಗಾಯಗಳಿಲ್ಲದೆ ಇರುವುದು ಅನುಮಾನಕ್ಕೆ ಕಾರಣವಾಗಿತ್ತು. ಒಂದುವೇಳೆ ಆಕಸ್ಮಿಕವಾಗಿ ಮನೆಗೆ ಬೆಂಕಿ ಬಿದ್ದಿದ್ದರೆ ಪಾರಾಗುವ ಪ್ರಯತ್ನದಲ್ಲಿ ಸ್ವಲ್ಪವಾದರೂ ಗಾಯವಾಗಬೇಕಿತ್ತು ಎನ್ನುವ ಅನುಮಾನವೇ ಪೊಲೀಸರನ್ನು ಕೊಲೆ ಆರೋಪಿಯ ಬಳಿಗೆ ತಂದು ನಿಲ್ಲಿಸಿತು.