DK Shivakumar: 21 ದಿನ ರಸ್ತೆಯಲ್ಲೇ ಪಾರ್ಕಿಂಗ್ ಮಾಡಿದ್ದರೆ ನಿಮ್ಮ ವಾಹನ ಹರಾಜು!
ಪಾಲಿಕೆ ಕಾನೂನಿನ ಪ್ರಕಾರ 21 ದಿನಗಳ ಕಾಲ ರಸ್ತೆಯಲ್ಲಿ ನಿಲ್ಲಿಸಿರುವ ವಾಹನ ತೆಗೆಯದಿದ್ದರೆ ಅದನ್ನು ಅನಾಥ ವಾಹನ ಎಂದು ಪರಿಗಣಿಸಿ ಹರಾಜು ಹಾಕಲು ಅವಕಾಶ ಇದೆ ಎಂದಿರುವ ಡಿಸಿಎಂ, ಆ ಮೂಲಕ ಮತ್ತೆ ವಾಹನಗಳ ಟೋಯಿಂಗ್ ಆರಂಭಿಸುವ ಹಾಗೂ ನಗರದಲ್ಲಿ ಪೇ ಅಂಡ್ ಪಾರ್ಕ್‌ಗೆ ಮರು ಚಾಲನೆ ನೀಡುವ ಸುಳಿವು ನೀಡಿದ್ದಾರೆ.

ಡಿಕೆ ಶಿವಕುಮಾರ್

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ (Bengaluru) ಟ್ರಾಫಿಕ್ ಸಮಸ್ಯೆಗೆ (Traffic problem) ಕಡಿವಾಣ ಹಾಕುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದ್ದಾರೆ. ಇದರ ಭಾಗವಾಗಿ, ರಸ್ತೆ ಬದಿ ಹಳೆಯ ವಾಹನಗಳನ್ನು ನಿಲ್ಲಿಸಿ 21 ದಿನಗಳ ಒಳಗಾಗಿ ತೆಗೆಯದಿದ್ದರೆ, ಅವುಗಳನ್ನು ವಶಪಡಿಸಿಕೊಂಡು ಹರಾಜು (auction) ಹಾಕುವುದಾಗಿ ಘೋಷಿಸಿದ್ದಾರೆ. ಸುರಂಗ ರಸ್ತೆ ನಿರ್ಮಾಣ ಹಾಗೂ ಕಾವೇರಿ ಆರತಿ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಡಿಸಿಎಂ, ರಸ್ತೆಗಳಲ್ಲಿ ಬೇಕಾಬಿಟ್ಟಿ ವಾಹನ ನಿಲ್ಲಿಸದಂತೆ ಎಚ್ಚರಿಸಿದರು.
ರಸ್ತೆಗಳಲ್ಲಿ ಹಳೆ ವಾಹನಗಳನ್ನು ನಿಲ್ಲಿಸಿ ಹೋಗುತ್ತಿರುವ ಬಗ್ಗೆ ದೂರು ಬಂದಿವೆ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯಿಂದ 100 ಎಕರೆ ಜಾಗ ಒದಗಿಸಿ, ಆ ಎಲ್ಲಾ ವಾಹನಗಳನ್ನು ಅಲ್ಲಿಗೆ ಸ್ಥಳಾಂತರಿಸಲು ಸಂಚಾರಿ ಪೊಲೀಸರಿಗೆ ಸೂಚಿಸಲಾಗಿದೆ. ಪಾಲಿಕೆ ಕಾನೂನಿನ ಪ್ರಕಾರ 21 ದಿನಗಳ ಕಾಲ ರಸ್ತೆಯಲ್ಲಿ ನಿಲ್ಲಿಸಿರುವ ವಾಹನ ತೆಗೆಯದಿದ್ದರೆ ಅದನ್ನು ಅನಾಥ ವಾಹನ ಎಂದು ಪರಿಗಣಿಸಿ ಹರಾಜು ಹಾಕಲು ಅವಕಾಶ ಇದೆ ಎಂದು ತಿಳಿಸಿದ್ದಾರೆ. ಈ ಮೂಲಕ ಮತ್ತೆ ವಾಹನಗಳ ಟೋಯಿಂಗ್ ಆರಂಭಿಸುವ ಹಾಗೂ ನಗರದಲ್ಲಿ ಪೇ ಅಂಡ್ ಪಾರ್ಕ್‌ಗೆ ಮರು ಚಾಲನೆ ನೀಡುವ ಸುಳಿವು ನೀಡಿದ್ದಾರೆ.
ಅಲ್ಲದೆ, ''ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುವ ಮೆಟ್ರೋ ಕಾಮಗಾರಿಗಳ ಬಳಿ ಸರ್ವಿಸ್ ರಸ್ತೆ ನಿರ್ಮಾಣ ಮಾಡುತ್ತೇವೆ. ಇದರಿಂದ ಟ್ರಾಫಿಕ್ ಸಮಸ್ಯೆ ಕಡಿಮೆಯಾಗುತ್ತದೆ. ಜತೆಗೆ ಫುಟ್‌ಪಾತ್ ವ್ಯಾಪಾರಿಗಳಿಂದ ಟ್ರಾಫಿಕ್ ಕಿರಿಕಿರಿ ಮುಕ್ತಿಗೂ ಪರಿಹಾರ ಒದಗಿಸಲಾಗುವುದು. ಹಂತ ಹಂತವಾಗಿ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಿ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು," ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: National Herald Case: ನ್ಯಾಷನಲ್ ಹೆರಾಲ್ಡ್‌ಗೆ 2.5 ಕೋಟಿ ದೇಣಿಗೆ; ಹೌದು, ಕೊಟ್ಟಿದ್ದೇವೆ, ತಪ್ಪೇನಿದೆ ಎಂದ ಡಿಕೆಶಿ