ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Congress Protest in Delhi: ಪ್ರಜಾಪ್ರಭುತ್ವ, ಸಂವಿಧಾನದ ಉಳಿವಿಗೆ ಮತಕಳ್ಳತನದ ವಿರುದ್ಧ ಹೋರಾಟ: ಡಿಸಿಎಂ ಡಿ.ಕೆ. ಶಿವಕುಮಾರ್

ಈ ಹಿಂದೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಮತ‌ಕಳ್ಳತನದ ಬಗ್ಗೆ ದೊಡ್ಡ ಹೋರಾಟ ರೂಪಿಸಿದ್ದೆವು. ಭಾನುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ರೂಪಿಸಲಾಗಿದೆ. ಯಾವುದೇ ಕಾರಣಕ್ಕೂ ನಾವು ಜನರ ಹಕ್ಕನ್ನು ಕಸಿಯಲು ಬಿಡುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಪ್ರಜಾಪ್ರಭುತ್ವ, ಸಂವಿಧಾನದ ಉಳಿವಿಗೆ ಮತಕಳ್ಳತನದ ವಿರುದ್ಧ ಹೋರಾಟ: ಡಿಕೆಶಿ

ಡಿಸಿಎಂ ಡಿ.ಕೆ. ಶಿವಕುಮಾರ್. -

Prabhakara R
Prabhakara R Dec 13, 2025 10:40 PM

ದೆಹಲಿ, ಡಿ.13: "ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಉಳಿವಿಗೆ ಮತ ಕಳ್ಳತನದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುವುದಕ್ಕೆ ಬಿಡುವುದಿಲ್ಲ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ಹೇಳಿದರು. ಮತಕಳ್ಳತನದ ವಿರುದ್ಧ ಭಾನುವಾರ ನಡೆಯಲಿರುವ ಬೃಹತ್ ಪ್ರತಿಭಟನೆಯಲ್ಲಿ (Congress Protest in Delhi) ಭಾಗವಹಿಸಲು ದೆಹಲಿಗೆ ಶನಿವಾರ ರಾತ್ರಿ ಬಂದಿಳಿದ ಡಿಸಿಎಂ ಅವರು ವಿಮಾನ ನಿಲ್ದಾಣ ಹಾಗೂ ಕರ್ನಾಟಕ ಭವನದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

"ಈ ಹಿಂದೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಮತ‌ಕಳ್ಳತನದ ಬಗ್ಗೆ ದೊಡ್ಡ ಹೋರಾಟ ರೂಪಿಸಿದ್ದೆವು. ಈಗ ರಾಮಲೀಲಾ ಮೈದಾನದಲ್ಲಿ ರೂಪಿಸಲಾಗಿದೆ. ಯಾವುದೇ ಕಾರಣಕ್ಕೂ ನಾವು ಜನರ ಹಕ್ಕನ್ನು ಕಸಿಯಲು ಬಿಡುವುದಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಹೋರಾಟ ರೂಪಿಸಲಾಗಿದೆ" ಎಂದು ತಿಳಿಸಿದರು.

"ಅಲ್ಪಸಂಖ್ಯಾತರ ಮತಗಳನ್ನು ವ್ಯವಸ್ಥಿತವಾಗಿ ತೆಗೆದುಹಾಕುವಂತಹದ್ದು ನಡೆಯಿತ್ತಿತ್ತು. ಮಹದೇವಪುರ, ಆಳಂದ, ಗಾಂಧಿನಗರ ಸೇರಿದಂತೆ ದೇಶದ ಹಲವಾರು ಕ್ಷೇತ್ರದಲ್ಲಿ ಈ ರೀತಿ ನಡೆದಿದೆ. ರಾಹುಲ್ ಗಾಂಧಿ ಅವರು ಪ್ರಶ್ನೆ ಮಾಡಿದರೆ ನಮಗೆ ಮಾಹಿತಿ ನೀಡಿ ಎಂದು ಚುನಾವಣಾ ಆಯೋಗದವರು ಕೇಳುತ್ತಿದ್ದಾರೆ" ಎಂದರು.

ದೆಹಲಿ ತಲುಪಿದ ಡಿಸಿಎಂ ಡಿ.ಕೆ.ಶಿವಕುಮಾರ್‌; ಸೋನಿಯಾ ಗಾಂಧಿ ಭೇಟಿ ಬಗ್ಗೆ ಹೇಳಿದ್ದೇನು?

"ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಹಾಕಿದರೂ ಮಾಹಿತಿ ನೀಡಲಿಲ್ಲ. ನಾನೇ ಹೋಗಿ ಮಾಹಿತಿ ನೀಡಿ ಬಂದಿದ್ದೆ. ಸಿಐಡಿ ಅಧಿಕಾರಿಗಳು 18 ಕಾಗದ ಬರೆದಿದ್ದಾರೆ. ದೂರವಾಣಿ ಸಂಖ್ಯೆಗಳು, ಇತರೇ ಮಾಹಿತಿಗಳನ್ನು ಕೇಳಿದರೂ ನೀಡಿಲ್ಲ. ಆದರೂ ತ‌ನಿಖಾ ವರದಿ ತಯಾರಿದೆ" ಎಂದರು.

ಕರ್ನಾಟಕದಲ್ಲಿ ಮಾತ್ರವಲ್ಲ, ಹಲವು ರಾಜ್ಯಗಳಲ್ಲಿ ವೋಟ್‌ ಚೋರಿ

"ಚಿಲುಮೆ ಸಂಸ್ಥೆಗೆ ಜವಾಬ್ದಾರಿ ನೀಡಿ, ಬಿಜೆಪಿ ಕಾರ್ಯಕರ್ತರಿಗೆ ಐಡಿ ಕಾರ್ಡ್ ಗಳನ್ನು ನೀಡಲಾಗಿತ್ತು. ಆಗ ನಾನು ದೊಡ್ಡ ಹೋರಾಟ ರೂಪಿಸಿದ್ದೆ. ಇದನ್ನು ಇಡೀ ದೇಶದ ಜನರಿಗೆ ತಿಳಿಸಬೇಕಾಗಿದೆ. ಇದು ಕೇವಲ ಕರ್ನಾಟಕಕ್ಕೆ ಆಗಿರುವ ತೊಂದರೆಯಲ್ಲ. ಬಿಹಾರ, ಮಹಾರಾಷ್ಟ್ರ ಹೀಗೆ ಅನೇಕ ಕಡೆ ನಡೆದಿದೆ" ಎಂದರು.

"ನಾವು ಗೆದ್ದಿರಬಹುದು ಸೋತಿರಬಹುದು ಆದರೆ ದೇಶದ ಪ್ರಜಾಪ್ರಭುತ್ವ ಉಳಿಯಬೇಕು. ಜನರಿಗೆ ನ್ಯಾಯ ಒದಗಿಸಬೇಕು ಎಂದು ದೇಶದ ಮೂಲೆ,‌ ಮೂಲೆಯಿಂದ ಕರ್ನಾಟಕದಿಂದ ಸಾವಿರಾರು ಜನ ಬಂದಿದ್ದಾರೆ" ಎಂದರು.

ದೆಹಲಿಗೆ ಸ್ಪೆಷಲ್ ರೈಲು ರದ್ದು ಮಾಡಿದ್ದಾರೆ

"ಕೊನೆ ಕ್ಷಣದಲ್ಲಿ ಸ್ಪೆಷಲ್ ರೈಲನ್ನು ರದ್ದು ಮಾಡಿದ್ದಾರೆ. ಮೊದಲು ಕೊಡುತ್ತೇವೆ ಎಂದು ಹೇಳಿದ್ದರು. 1 ಕೋಟಿಯಷ್ಟು ದುಡ್ಡು ಕಟ್ಟಲು ಸಹ ತಯಾರಿದ್ದೆವು. ಕೆಪಿಸಿಸಿಯಿಂದ ಹಣ‌ ಕಟ್ಟಲು ತಯಾರಿದ್ದೆವು. ಆದರೆ ಅವರಿಗೆ ಏನೋ ತೊಂದರೆ ಇರಬೇಕು ಅದಕ್ಕೆ ರದ್ದು ಮಾಡಿದ್ದಾರೆ" ಎಂದರು.

"ಮತದಾರರ ಪಟ್ಟಿಯಲ್ಲಿ ಯಾರು ಸತ್ತಿದ್ದಾರೆ ಎಂದು ಉಲ್ಲೇಖಿಸಲಾಗಿತ್ತೋ ಅವರನ್ನು ರಾಹುಲ್ ಗಾಂಧಿ ಅವರು ಭೇಟಿ ಮಾಡಿದ್ದಾರೆ. ಮಾಧ್ಯಮಗಳು ಒಂದೇ ಮನೆಯಲ್ಲಿ 80 ಮತ ಇದ್ದಿದ್ದನ್ನು ತನಿಖೆ ಮಾಡಿ ತಿಳಿಸಿದ್ದಾರೆ. ಪ್ರತಿಭಟನೆ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ನಮ್ಮ ಪಕ್ಷ ಈ‌ ದೇಶಕ್ಕೆ ನಾನಾ ಕೊಡುಗೆ ನೀಡಿದೆ" ಎಂದರು.

ಡಿ.19ರೊಳಗೆ ನೋಟಿಸ್‌ಗೆ ಉತ್ತರಿಸಬೇಕು

ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡುವಿರಾ ಎಂದಾಗ, "ಸದ್ಯಕ್ಕೆ ಪ್ರತಿಭಟನೆಗೆ ಬಂದಿದ್ದೇ‌‌ನೆ. ಇದರ ನಡುವೆ ನನಗೆ ಒಂದು ಕಾಟ ಕೊಡುತ್ತಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರು ನನಗೆ ನೋಟಿಸ್ ನೀಡಿದ್ದಾರೆ. 19ರ ಒಳಗೆ ಉತ್ತರಿಸಬೇಕು ಎಂದು ಹೇಳಿದ್ದಾರೆ. ನಮ್ಮ‌ ವಕೀಲರಿಗೆ ಬರಲು ಹೇಳಿರುವೆ. ಬಹುಶಃ ಸೋಮವಾರ ಹೋಗಬಹುದು. ಕಾನೂನು ತಜ್ಞರ ಸಲಹೆ ಪಡೆದು ಹೋಗಬೇಕು. ಹೋಗುವಾಗ ನಿಮಗೆ (‌ಮಾಧ್ಯಮಗಳಿಗೆ) ತಿಳಿಸುವೆ" ಎಂದರು.

ಪ್ರೀತಿಯಿಂದ ಊಟಕ್ಕೆ ಕರೆದರೆ ಬರಲ್ಲ ಅನ್ನಲು ಆಗುತ್ತದೆಯೇ?: ಡಿಸಿಎಂ ಡಿಕೆ ಶಿವಕುಮಾರ್

"ಪಕ್ಷದ ಕಚೇರಿ ನಮ್ಮ ಪಾಲಿಗೆ ದೇವಾಲಯ.‌ ಇಂದಿರಾ ಭವನದಲ್ಲಿ ಭಾನುವಾರ ಮಧ್ಯಾಹ್ನ ಊಟಕ್ಕೆ ಆಹ್ವಾನ ನೀಡಲಾಗಿದೆ. ಅಲ್ಲಿಗೆ ಹೋದಾಗ ಎಲ್ಲರೂ ಸಿಕ್ಕೆ ಸಿಗುತ್ತಾರೆ. ನಾನು ದೆಹಲಿಗೆ ಬಂದಿದ್ದೇನೆ ಎಂದು ಗೊತ್ತಾದ ತಕ್ಷಣ ಗೆಳೆಯರು, ನಾಯಕರು ಭೇಟಿಗೆ ಬಂದಿದ್ದಾರೆ. ದೇಶದ ನಾನ ಮೂಲೆಯಿಂದ ಬಂದವರು ಇಲ್ಲಿದ್ದಾರೆ" ಎಂದು ಹೇಳಿದರು.