Vimala Rangachar: ಹಿರಿಯ ರಂಗ ಕಲಾವಿದೆ ವಿಮಲಾ ರಂಗಾಚಾರ್ ಇನ್ನಿಲ್ಲ
Vimala Rangachar: ಬೆಂಗಳೂರಿನ ಎಂಇಎಸ್ ಸಂಸ್ಥೆಯ ಸ್ಥಾಪಕ ಸದಸ್ಯರಾಗಿ, ಅಧ್ಯಕ್ಷರಾಗಿದ್ದ ವಿಮಲಾ ರಂಗಾಚಾರ್ ಅವರು, ಬೆಂಗಳೂರಿನ ಸೇವಾ ಸದನ ಕಟ್ಟಿ ಬೆಳೆಸಿದ್ದಾರೆ. ಅಲ್ಲದೇ ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಕಟ್ಟಿದ ಭಾರತೀಯ ನಾಟ್ಯ ಸಂಘದ ಕರ್ನಾಟಕ ಘಟಕದ ಅಧ್ಯಕ್ಷರಾಗಿದ್ದರು.


ಬೆಂಗಳೂರು: ನಗರದ ಹಿರಿಯ ರಂಗ ಕಲಾವಿದೆ, ಸಂಘಟಕಿ, ಲಲಿತಕಲೆಗಳ ಪೋಷಕರಾಗಿದ್ದ ವಿಮಲಾ ರಂಗಾಚಾರ್ (97) (Vimala Rangachar) ಅವರು ಮಂಗಳವಾರ ಸಂಜೆ 4 ಗಂಟೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರು ಬೆಂಗಳೂರಿನ ಎಂಇಎಸ್ ಸಂಸ್ಥೆಯ ಸ್ಥಾಪಕ ಸದಸ್ಯರಾಗಿ, ಅಧ್ಯಕ್ಷರಾಗಿದ್ದರು. ಬೆಂಗಳೂರಿನ ಸೇವಾ ಸದನ ಕಟ್ಟಿ ಬೆಳೆಸಿದ ಇವರು, ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಕಟ್ಟಿದ ಭಾರತೀಯ ನಾಟ್ಯ ಸಂಘದ ಕರ್ನಾಟಕ ಘಟಕದ ಅಧ್ಯಕ್ಷರಾಗಿದ್ದರು. ಅಲ್ಲದೇ ಬೆಂಗಳೂರಿನ ಎಡಿಎ ರಂಗಮಂದಿರದ ಗೌರವ ಕಾರ್ಯದರ್ಶಿಯಾಗಿಯೂ ದುಡಿದಿದ್ದಾರೆ. ಇವರ ಮಗಳು ರೇವತಿ ವಿದೇಶದಲ್ಲಿದ್ದು, ಅವರು ಬಂದ ನಂತರ ವಿಮಲಾ ಅವರ ಅಂತ್ಯಕ್ರಿಯೆ ಗುರುವಾರ ಅಂದರೆ ಫೆಬ್ರುವರಿ 27ರಂದು ನಡೆಯಲಿದೆ.
ಸಚಿವ ಶಿವರಾಜ ತಂಗಡಗಿ ಶೋಕ
ಹಿರಿಯ ರಂಗ ಕಲಾವಿದೆ,ಸಾಂಸ್ಕೃತಿಕ ಪೋಷಕಿ, ಎಂಇಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿದ್ದ ಶ್ರೀಮತಿ ವಿಮಲಾ ರಂಗಾಚಾರ್ ಅವರ ನಿಧನಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ವಿಮಲಾ ರಂಗಾಚಾರ್ ರವರು ಭಾರತೀಯ ನಾಟ್ಯ ಸಂಘದ ಕರ್ನಾಟಕ ಘಟಕದ ಅಧ್ಯಕ್ಷರಾಗಿದ್ದರು, ಬೆಂಗಳೂರಿನ ಎಡಿಎ ರಂಗಮಂದಿರದ ಗೌರವ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿರುವ ಅವರು ಸ್ವತಹ ಕಲಾವಿದರಾಗಿ ಹೆಸರು ಮಾಡಿದ್ದರು.
ಈ ಸುದ್ದಿಯನ್ನೂ ಓದಿ | Roopa Gururaj Column: ತಲ್ಲಣಿಸದಿರು ಕಂಡ್ಯ ತಾಳು ಮನವೇ...
ಶಿಕ್ಷಣ ಕ್ಷೇತ್ರ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅವರ ಕೊಡುಗೆ ಅನನ್ಯವಾದದ್ದು, ಅವರ ನಿಧನದಿಂದ ಕನ್ನಡ ಸಾಂಸ್ಕೃತಿಕ ಲೋಕ ಒಂದು ಸ್ಫೂರ್ತಿ ಚಿಲುಮೆಯನ್ನು ಕಳೆದುಕೊಂಡಿದೆ. ಅವರ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ಅವರ ನಿಧನದ ದುಃಖ ಭರಿಸುವ ಶಕ್ತಿ ಆ ಭಗವಂತ ನೀಡಲಿ ಎಂದು ಎಂದು ಸಚಿವ ಶಿವರಾಜ ತಂಗಡಗಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.