Bengaluru Murder: ಪತ್ನಿಯ ಕೊಂದು ಸೂಟ್‌ಕೇಸ್‌ನಲ್ಲಿ ತುಂಬಿದ್ದ ಕೇಸ್; ಕೊಲೆಗೆ ಕಾರಣ ಬಿಚ್ಚಿಟ್ಟ ಆರೋಪಿಯ ತಂದೆ!
Bengaluru Murder: ಬೆಂಗಳೂರಿನಲ್ಲಿ ಗೌರಿ ಕೊಲೆ ಪ್ರಕರಣ ಬೆಳಕಿಗೆ ಬಂದ ನಂತರ ಮಹಾರಾಷ್ಟ್ರದ ಪುಣೆಯಿಂದ ಆರೋಪಿ ರಾಕೇಶ್‌ನನ್ನು ಕರೆತಂದು, ಕೋರಮಂಗಲದಲ್ಲಿರುವ ನ್ಯಾಯಾಧೀಶರ ನಿವಾಸದಲ್ಲಿ ಹಾಜರುಪಡಿಸಲಾಗಿತ್ತು. ಆರೋಪಿ ರಾಕೇಶ್‌ಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.


ಬೆಂಗಳೂರು: ವ್ಯಕ್ತಿಯೊಬ್ಬ ಪತ್ನಿಯನ್ನು ಕೊಂದು ಸೂಟ್‌ಕೇಸ್‌ನಲ್ಲಿ ಮೃತದೇಹ ಇರಿಸಿದ್ದ ಪ್ರಕರಣ ರಾಜಧಾನಿ ಬೆಂಗಳೂರನ್ನು ಬೆಚ್ಚಿ ಬೀಳಿಸಿತ್ತು. ಆರೋಪಿ ಪತಿ ರಾಕೇಶ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ. ಇದೀಗ ಹತ್ಯೆಗೆ ಕಾರಣ ತಿಳಿದುಬಂದಿದ್ದು, ಆರೋಪಿ ರಾಕೇಶ್ ತಂದೆ ರಾಜೇಂದ್ರ ಕೆಡೇಕರ್ ಅವರು ಈ ಕುರಿತು ಮಾತನಾಡಿದ್ದಾರೆ. ನಿತ್ಯ ಜಗಳ ಮಾಡುತ್ತಿದ್ದಳು. ಹೀಗಾಗಿ ಪತ್ನಿ ಗೌರಿಯನ್ನು ಕೊಲೆ (Bengaluru Murder) ಮಾಡಿದ್ದೇನೆ ಎಂದು ಪುತ್ರ ರಾಕೇಶ್ ತಮ್ಮ ಬಳಿ ಹೇಳಿರುವುದಾಗಿ ರಾಜೇಂದ್ರ ಕೆಡೇಕರ್ ತಿಳಿಸಿದ್ದಾರೆ.
ಕೊಲೆ ಪ್ರಕರಣ ಬೆಳಕಿಗೆ ಬಂದ ನಂತರ ಮಹಾರಾಷ್ಟ್ರದ ಪುಣೆಯಿಂದ ಆರೋಪಿ ರಾಕೇಶ್‌ನನ್ನು ಕರೆತಂದು, ಕೋರಮಂಗಲದಲ್ಲಿರುವ ನ್ಯಾಯಾಧೀಶರ ನಿವಾಸದಲ್ಲಿ ಹಾಜರುಪಡಿಸಲಾಗಿತ್ತು. ನ್ಯಾಯಾಧೀಶರು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಆದೇಶಿಸಿದ್ದರು. ಹೀಗಾಗಿ ಆರೋಪಿಯನ್ನು ಪರಪ್ಪನ ಅಗ್ರಹಾರದ ಕಳುಹಿಸಲಾಗಿದೆ.
ಮಾ.26ರಂದು ಹುಳಿಮಾವು ವ್ಯಾಪ್ತಿಯ ದೊಡ್ಡಕಮ್ಮನಹಳ್ಳಿಯ ಮನೆಯಲ್ಲಿ ಪತ್ನಿ ಗೌರಿಯನ್ನು (32) ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಂದು, ಬಳಿಕ ಮೃತದೇಹವನ್ನು ಟ್ರಾಲಿ ಬ್ಯಾಗ್‌ನಲ್ಲಿ ತುಂಬಿದ್ದ. ಟ್ರಾಲಿ ಸಾಗಿಸುವ ವೇಳೆ ಅದರ ಹ್ಯಾಂಡಲ್ ಕಟ್ ಆಗಿತ್ತು. ಹೀಗಾಗಿ ಅದನ್ನು ಮನೆಯಲ್ಲಿ ಬಿಟ್ಟು, ರಾಕೇಶ್ ಕಾರಿನಲ್ಲಿ ಪುಣೆಗೆ ತೆರಳಿದ್ದ.
ಮಾ.27ರಂದು ಗೌರಿಯ ಸಹೋದರ, ನಗರದಲ್ಲಿದ್ದ ಬಾಡಿಗೆ ಮನೆ ಮಾಲೀಕನಿಗೆ ರಾಕೇಶ್ ಕರೆ ಮಾಡಿ ಪತ್ನಿ ಹತ್ಯೆ ಬಗ್ಗೆ ಮಾಹಿತಿ ನೀಡಿದ್ದ. ಅಲ್ಲದೇ ಮಾರ್ಗ ಮಧ್ಯೆ ಫಿನಾಯಿಲ್ ಕುಡಿದು ಅಸ್ವಸ್ಥಗೊಂಡಿದ್ದ. ಬಳಿಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಂತರ ಪುಣೆ ಪೊಲೀಸರ ಮಾಹಿತಿ ಮೇರೆಗೆ ತೆರಳಿದ್ದ ಹುಳಿಮಾವು ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದರು.
ಪುಣೆಗೆ ವಾಪಸ್ ಹೋಗಲು ಒತ್ತಾಯಿಸಿದ ಪತ್ನಿ
ಒಂದೂವರೆ ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದ ರಾಕೇಶ್ ಮತ್ತು ಗೌರಿ ದೊಡ್ಡಕಮ್ಮನಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ರಾಕೇಶ್‌ಗೆ ಖಾಸಗಿ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಕೆಲಸ ಸಿಕ್ಕಿತ್ತು. ಆದರೆ, ಗೌರಿಗೆ ಕೆಲಸ ಸಿಕ್ಕಿರಲಿಲ್ಲ. ಇದೇ ವಿಚಾರಕ್ಕೆ ಕೆಲ ದಿನಗಳಿಂದ ದಂಪತಿ ನಡುವೆ ಗಲಾಟೆ ನಡೆಯುತ್ತಿತ್ತು. ಅಲ್ಲದೆ, ಗೌರಿ, ಮತ್ತೆ ಪುಣೆಗೆ ವಾಪಸ್ ಹೋಗಲು ಪತಿಗೆ ಒತ್ತಾಯಿಸುತ್ತಿದ್ದಳು. ಇದರಿಂದ ಕೋಪಗೊಂಡ ರಾಕೇಶ್, ಪುಣೆಯಲ್ಲಿದ್ದಾಗಲೂ ನನ್ನ ಪೋಷಕರಿಂದ ದೂರ ಮಾಡಿ, ಇಲ್ಲಿಗೆ ಕರೆಕೊಂಡು ಬಂದಿರುವೆ. ಈಗ ಮತ್ತೆ ಅಲ್ಲಿಗೆ ಹೋಗೋಣ ಎಂದರೆ ಹೇಗೆ ಎಂದು ಪ್ರಶ್ನಿಸಿದ್ದಾನೆ. ಈ ವಿಚಾರದಲ್ಲಿ ಮಾ. 26ರಂದು ಇಬ್ಬರ ನಡುವೆ ಗಲಾಟೆಯಾಗಿ, ಪತ್ನಿಯನ್ನು ಹತ್ಯೆ ಮಾಡಿದ್ದ.
ಈ ಸುದ್ದಿಯನ್ನೂ ಓದಿ | Vinay Gowda: ಇನ್ಮುಂದೆ ರಜತ್ ಜೊತೆ ರೀಲ್ಸ್ ಮಾಡಲ್ಲ: ವಿನಯ್ ಗೌಡ ಖಡಕ್ ನಿರ್ಧಾರ
ರಾಕೇಶ್ ತಂದೆ ಹೇಳಿದ್ದೇನು?
ನನ್ನ ಜತೆ ಪತ್ನಿ ಗೌರಿ ನಿತ್ಯ ಜಗಳ ಮಾಡುತ್ತಿದ್ದಳು. ಅದಕ್ಕೆ ಆಕೆಯನ್ನು ಕೊಲೆ ಮಾಡಿದ್ದೇನೆ ಎಂದು ಪುತ್ರ ರಾಕೇಶ್ ಹೇಳಿದ್ದ. ಘಟನೆಯ ಮರುದಿನ ಕೊಲೆಯ ವಿಚಾರವನ್ನು ತಿಳಿಸಿ, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದ. ಆತ್ಮಹತ್ಯೆ ಮಾಡಿಕೊಳ್ಳಬೇಡ, ಪೊಲೀಸ್ ಠಾಣೆಗೆ ತೆರಳಿ ಘಟನೆ ಬಗ್ಗೆ ಹೇಳ್ಳೋಣ ಎಂದಿದ್ದೆ. ಅದಕ್ಕೆ ಒಪ್ಪಿಕೊಂಡಿದ್ದ ಎಂದು ಆರೋಪಿ ರಾಕೇಶ್ ತಂದೆ ರಾಜೇಂದ್ರ ಕೆಡೇಕರ್ ಹೇಳಿದ್ದಾರೆ ಎಂದು ತಿಳಿದುಬಂದಿದೆ.