ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pahalgam Terror Attack: ಉಗ್ರರ ದಾಳಿಯಿಂದ ಮೃತಪಟ್ಟ ಕನ್ನಡಿಗರ ಮೃತದೇಹ ಬೆಂಗಳೂರಿಗೆ ಬರುವುದು ಯಾವಾಗ?

Pahalgam Terror Attack: ಪ್ರವಾಸಕ್ಕೆಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ತೆರಳಿದ್ದಾಗ ಟಿಆರ್​ಎಫ್ ಉಗ್ರರು ಮಂಗಳವಾರ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಶಿವಮೊಗ್ಗದ ಮಂಜುನಾಥ್‌ ರಾವ್‌ ಹಾಗೂ ಬೆಂಗಳೂರಿನ ಭರತ್ ಭೂಷಣ್ ಮೃತಪಟ್ಟಿದ್ದರು. ಇವರ ಮೃತದೇಹಗಳನ್ನು ಬೆಂಗಳೂರಿಗೆ ತರಲು ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ.

ಉಗ್ರರ ದಾಳಿಯಿಂದ ಮೃತಪಟ್ಟ ಕನ್ನಡಿಗರ ಮೃತದೇಹ ಬೆಂಗಳೂರಿಗೆ ಬರುವುದು ಯಾವಾಗ?

Profile Prabhakara R Apr 23, 2025 9:58 PM

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​ನಲ್ಲಿ ಉಗ್ರರ ಗುಂಡಿನ ದಾಳಿಗೆ (Pahalgam Terror Attack) ಬಲಿಯಾದ ಇಬ್ಬರು ಕನ್ನಡಿಗರ ಮೃತದೇಹಗಳನ್ನು ರಾಜ್ಯಕ್ಕೆ ತರಲು ರಾಜ್ಯ ಸರ್ಕಾರ ಅಗತ್ಯ ವ್ಯವಸ್ಥೆ ಕೈಗೊಂಡಿದೆ. ಪ್ರವಾಸಕ್ಕೆಂದು ಹೋಗಿದ್ದಾಗ ಶಿವಮೊಗ್ಗದ ಮಂಜುನಾಥ್ ರಾವ್ ಹಾಗೂ ಬೆಂಗಳೂರಿನ ಭರತ್ ಭೂಷಣ್ ಉಗ್ರರ ಗುಂಡಿನ ದಾಳಿಯಿಂದ ಮೃತಪಟ್ಟಿದ್ದರು. ಇವರ ಮೃತದೇಹವನ್ನು ಕಾಶ್ಮೀರದಿಂದ ಅವರ ಊರುಗಳಿಗೆ ತರಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಇನ್ನು ಕರ್ನಾಟಕ ಸರ್ಕಾರ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.

ಪ್ರವಾಸಕ್ಕೆಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ತೆರಳಿದ್ದಾಗ ಟಿಆರ್​ಎಫ್ ಉಗ್ರರು ಏಪ್ರಿಲ್ 22ರಂದು ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 26ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇದರಲ್ಲಿ ರಾಜ್ಯದ ಇಬ್ಬರು ಮೃತಪಟ್ಟಿದ್ದಾರೆ. ಶಿವಮೊಗ್ಗದ ಉದ್ಯಮಿ ಮಂಜುನಾಥ್​ ಹಾಗೂ ಬೆಂಗಳೂರಿನ ಭರತ್ ಭೂಷಣ್ ಉಗ್ರರ ಗುಂಡಿನ ದಾಳಿಗೆ ಬಲಿಯಾಗಿದ್ದು, ಇವರ ಮೃತದೇಹಗಳನ್ನು ಹುಟ್ಟೂರಿಗೆ ತರಲು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಎಲ್ಲಾ ವ್ಯವಸ್ಥೆ ಮಾಡಿದೆ. ಅದರಲ್ಲೂ ಸಚಿವ ಸಂತೋಷ್ ಲಾಡ್ ಅವರು ನೆನ್ನೆಯೇ ಸ್ಥಳಕ್ಕೆ ತೆರಳಿ ಕನ್ನಡಿಗರ ನೆರವಿಗೆ ನಿಂತಿದ್ದಾರೆ.

ಮಂಜುನಾಥ್ ರಾವ್ ಮತ್ತು ಭರತ್ ಭೂಷಣ್ ಮೃತದೇಹಗಳನ್ನು ಹೊತ್ತ ಇಂಡಿಗೋ ವಿಮಾನ ಶ್ರೀನಗರದಿಂದ ದೆಹಲಿಯತ್ತ ಹೊರಟಿದ್ದು, ಬಳಿಕ ದೆಹಲಿಯಿಂದ ಮತ್ತೊಂದು ವಿಮಾನ ಮೂಲಕ ಮೃತದೇಹಗಳು ಬೆಂಗಳೂರಿಗೆ ಬರಲಿವೆ. ಗುರುವಾರ ಬೆಳಗಿನ ಜಾವ ಮೂರು ಗಂಟೆಗೆ ಮೃತದೇಹಗಳು ಬೆಂಗಳೂರು ತಲುಪುವ ಸಾಧ್ಯತೆಗಳಿವೆ. ನಂತರ ಮೃತರ ಸ್ವಗ್ರಾಮಗಳಿಗೆ ಪಾರ್ಥಿವ ಶರೀರ ತಲುಪಿಸುವ ಕಾರ್ಯ ನಡೆಯಲಿದೆ.

ಇನ್ನು ಶಿವಮೊಗ್ಗದ ಮಂಜುನಾಥ್ ರಾವ್ ಅವರ ಪಾರ್ಥೀವ ಶರೀರ ವಿಮಾನದ ಮೂಲಕ ನಾಳೆ ಬೆಳಗಿನ ಜಾವ ಬೆಂಗಳೂರು ತಲುಪುವ ನಿರೀಕ್ಷೆ ಇದೆ. ಅಲ್ಲಿಂದ ಅವರ ದೇಹವನ್ನು ಶಿವಮೊಗ್ಗಗೆ ಕಾರು ಅಥವಾ ಅಂಬ್ಯುಲೆನ್ಸ್‌ನಲ್ಲಿ ತೆಗೆದುಕೊಂಡು ಹೋಗುವ ಸಾಧ್ಯತೆ ಇದೆ. ಹೀಗಾಗಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಮಂಜುನಾಥ್ ನಿವಾಸದ ಬಳಿ ವ್ಯವಸ್ಥೆ ಮಾಡಲಾಗಿದ್ದು ಯಾವುದೇ ಅಹಿತಕರ ಘಟನೆ ಜರುಗದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಈ ಸುದ್ದಿಯನ್ನೂ ಓದಿ | Pahalgam Terror Attack: ಭಯೋತ್ಪಾದಕ ದಾಳಿಗೆ ಭಾರತ ಪ್ರತೀಕಾರ; ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ರದ್ದು

ಉಗ್ರರ ದಾಳಿಯಲ್ಲಿ ಮೃತಪಟ್ಟ ಕನ್ನಡಿಗರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ದಲ್ಲಿ ನಡೆದ ಉಗ್ರರ ದಾಳಿಯಲ್ಲಿ (Pahalgam Terror Attack) ಮೃತರಾದ ಕನ್ನಡಿಗರ ಕುಟುಂಬಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಲಾ 10 ಲಕ್ಷ ರೂ.ಗಳ ಪರಿಹಾರ ಘೋಷಣೆ ಮಾಡಿದ್ದಾರೆ.‌ ಶಿವಮೊಗ್ಗದ ಮಂಜುನಾಥ್‌ ರಾವ್‌ ಹಾಗೂ ಹಾವೇರಿ ಮೂಲದ ಬೆಂಗಳೂರು ನಿವಾಸಿ ಭರತ್‌ ಭೂಷಣ್‌ ಕುಟುಂಬಕ್ಕೆ ಪರಿಹಾರ ಘೋಷಿಸಲಾಗಿದೆ.

ಇನ್ನು ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಉಗ್ರರ ದಾಳಿಯನ್ನು ಅತ್ಯಂತ ತೀವ್ರವಾಗಿ ಖಂಡಿಸುತ್ತೇನೆ. ಕರ್ನಾಟಕದ ಪ್ರವಾಸಿಗರಲ್ಲಿ ಮಂಜುನಾಥ್ ರಾವ್ ಹಾಗೂ ಭರತ್ ಭೂಷಣ್ ಎಂಬುವರು ಮೃತಪಟ್ಟಿದ್ದಾರೆ. ಕನ್ನಡಿಗರ ರಕ್ಷಣೆ ಹಾಗೂ ಇನ್ನಿತರ ವ್ಯವಸ್ಥೆಗಳಿಗಾಗಿ ಅಧಿಕಾರಿಗಳ ತಂಡವನ್ನು ಕಾಶ್ಮೀರಕ್ಕೆ ರವಾನಿಸಲಾಗಿದೆ. ಅಲ್ಲದೇ, ಕಾಶ್ಮೀರಕ್ಕೆ ತೆರಳಿರುವ 40 ಕ್ಕೂ ಅಧಿಕ ಕನ್ನಡಿಗರನ್ನು ವಿಶೇಷ ವಿಮಾನ ವ್ಯವಸ್ಥೆ ಮಾಡಿ ಸುರಕ್ಷಿತವಾಗಿ ಕರೆತರಲು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನೂ ಕಾಶ್ಮೀರಕ್ಕೆ ಕಳಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.