Prof R G Hegde Column: ಮಾತಾಡಲು ಕಲಿತರೆ ಮಾತ್ರ ದಿನಗಳು ಸುಗಮ
ಕುತೂಹಲದ ವಿಷಯವೆಂದರೆ ರಾಜಕಾರಣಿಗಳ, ಅವರ ಒಳಬದುಕಿನ ಕುರಿತು ಮನಬಂದಂತೆ ಮಾತು ಉದುರಿಸಬಹುದು. ಅವರ ಜನ್ಮ ಜಾಲಾಡಬಹುದು. ಹಾಗೆ ನೋಡಿದರೆ ನಮ್ಮ ದೇಶದ ರಾಜಕಾರಣಿಗಳು ತುಂಬ ಒಳ್ಳೆಯವರು. ಅವರಿಗಿರುವ ಸಹನೆ ಯಾರಿಗೂ ಇಲ್ಲ. ಮತ್ತೆ ‘ಒಂದು ಧರ್ಮ’ವನ್ನು, ಅದರ ವ್ಯವಸ್ಥೆಯನ್ನು, ಕಟುವಾಗಿ ಟೀಕಿಸಿ ಬೇಕಷ್ಟು ಮಾತನಾಡಬಹುದು.
-
ಆಡುಮಾತು
ಪ್ರೊ.ಆರ್.ಜಿ.ಹೆಗಡೆ
ಒಮ್ಮೆ ಒಬ್ಬ ಅಮೆರಿಕನ್ ಮತ್ತು ರಷ್ಯನ್ ಭೇಟಿಯಾದರು. ತಮ್ಮ ತಮ್ಮ ದೇಶಗಳಲ್ಲಿರುವ ವ್ಯಕ್ತಿ ಸ್ವಾತಂತ್ರ್ಯದ ಕುರಿತು ಮಾತುಕತೆ ಆರಂಭವಾಯಿತು. ಅಮೆರಿಕನ್ ಹೇಳಿದ. ನಮ್ಮ ದೇಶದಲ್ಲಿ ಎಷ್ಟು ಸ್ವಾತಂತ್ರ್ಯವಿದೆ ಎಂದರೆ ನಾವು ವೈಟ್ ಹೌಸ್ಗೆ (ಅಧ್ಯಕ್ಷರ ಮನೆಗೆ) ಹೋಗಿ ಅಧ್ಯಕ್ಷರನ್ನು ಕಟುವಾಗಿ ಟೀಕಿಸಿ ಬರಬಹುದು. ಉತ್ತರವಾಗಿ ರಷಿಯನ್ ಗರ್ವದಿಂದ ಹೇಳಿಕೊಂಡ. ನಮ್ಮಲ್ಲಿಯೂ ಬೇಕಾದಷ್ಟು ಸ್ವಾತಂತ್ರ್ಯವಿದೆ. ಎಷ್ಟರ ಮಟ್ಟಿಗೆಂದರೆ ನಾವೂ ಕೂಡ ಕ್ರೆಮ್ಲಿನ್ಗೆ ಹೋಗಿ (ರಶಿಯಾ ಅಧ್ಯಕ್ಷರ ಮನೆ) ನಿಮ್ಮ ಅಧ್ಯಕ್ಷರನ್ನು ಬೇಕಾದಷ್ಟು ದೂಷಿಸಬಹುದು.
ನಮ್ಮ ದೇಶದ ಪರಿಸ್ಥಿತಿ ರಶಿಯಾದಷ್ಟು ಕೆಟ್ಟದೇನೂ ಇಲ್ಲ. ನಮ್ಮ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ವಾಕ್ ಸ್ವಾತಂತ್ರ್ಯ ಹೇರಳವಾಗಿಯೇ ಇದೆ. ಜನ ಬೇಕಷ್ಟು ಮಾತನಾಡಬಹುದು. ಅದಕ್ಕೆಲ್ಲ ಮಿತಿಯಿಲ್ಲ. ನಮ್ಮ ಅಧ್ಯಕ್ಷರನ್ನೂ ಟೀಕಿಸಬಹುದು. ಆದರೆ ಒಂದು ವಿಷಯ. ಇಲ್ಲಿನ ವಾಕ್ ಸ್ವಾತಂತ್ರ್ಯ ವಿಷಯಾಧಾರಿತವಾದುದು.
ಎಲ್ಲ ವಿಷಯಗಳ ಕುರಿತು ಮಾತನಾಡುವಂತಿಲ್ಲ. ಒಮ್ಮೆ ಮನಬಿಚ್ಚಿ, ನಾಲಿಗೆ ಹರಿಬಿಟ್ಟು ಮಾತನಾಡೋಣ ಅನಿಸಿದರೆ ಅಂತಹ ವಿಷಯಗಳ ಕುರಿತಾಗಿ ಮಾತನಾಡಬೇಕು. ಎಲ್ಲ ವಿಷಯಗಳ ಕುರಿತು ಆ ರೀತಿ ಮಾತನಾಡುವಂತಿಲ್ಲ. ಸುಮಾರಾಗಿ ಮಾತನಾಡಬಹುದಾದ ವಿಷಯಗಳು ಹೀಗಿವೆ. ಸಾಹಿತ್ಯ ಸಮ್ಮೇಳನಗಳಲ್ಲಿ, ಕವಿಗೋಷ್ಠಿಗಳಲ್ಲಿ ‘ಸಾಹಿತ್ಯದ’ ಕುರಿತು, ಕಾವ್ಯದ ಕುರಿತು, ಕಾದಂಬರಿ ಯ, ಅವುಗಳ ಶೈಲಿಯ, ರೂಪಕಗಳ ಕುರಿತು ಬೇಕಾದಷ್ಟು, ನೀರು ಬಾಟಲಿ ಖಾಲಿ ಮಾಡುತ್ತ ಮಾತನಾಡ ಬಹುದು. ತೊಂದರೆ ಇಲ್ಲ.
ಇದನ್ನೂ ಓದಿ: Prof R G Hegde Column: ಎಐ ದಾಳಿ ಮತ್ತು ಉನ್ನತ ಶಿಕ್ಷಣದ ಆತಂಕಗಳು
ಕುತೂಹಲದ ವಿಷಯವೆಂದರೆ ರಾಜಕಾರಣಿಗಳ, ಅವರ ಒಳಬದುಕಿನ ಕುರಿತು ಮನಬಂದಂತೆ ಮಾತು ಉದುರಿಸಬಹುದು. ಅವರ ಜನ್ಮ ಜಾಲಾಡಬಹುದು. ಹಾಗೆ ನೋಡಿದರೆ ನಮ್ಮ ದೇಶದ ರಾಜಕಾರಣಿಗಳು ತುಂಬ ಒಳ್ಳೆಯವರು. ಅವರಿಗಿರುವ ಸಹನೆ ಯಾರಿಗೂ ಇಲ್ಲ. ಮತ್ತೆ ‘ಒಂದು ಧರ್ಮ’ವನ್ನು, ಅದರ ವ್ಯವಸ್ಥೆಯನ್ನು, ಕಟುವಾಗಿ ಟೀಕಿಸಿ ಬೇಕಷ್ಟು ಮಾತನಾಡಬಹುದು. ಅದು ಈಗ ಎಷ್ಟೇ ಬದಲಾಗಿ ಹೋಗಿದ್ದರೂ ಹಳೆಯ ಕಾಲದಲ್ಲಿ ಅದು ಹೇಗಿತ್ತು ಎನ್ನುವ ಪುಸ್ತಕಗಳನ್ನು ಉದ್ಧರಿಸಿ ಯದ್ವಾತದ್ವಾ ಮಾತನಾಡಬಹುದು. ಅಂತಹ ಪ್ರಜಾಸತ್ತಾತ್ಮಕ ಅಧಿಕಾರ ಅವರಿಗೆ ಇರುತ್ತದೆ.
‘ಯಾರನ್ನೋ’ ತೆಗೆದುಕೊಂಡು ಹೋಗಿ ಸಮುದ್ರಕ್ಕೆ ಎಸೆಯಿರಿ ಎಂದು ಹೇಳಬಹುದು. ತಮಿಳು ನಾಡಿನ ಮಂತ್ರಿಯೊಬ್ಬರು ಎಂತೆಂತಹ ಮಾತುಗಳನ್ನಾಡಿದ್ದರು ಎಂದು ನೆನಪಿಸಿಕೊಳ್ಳಿ. ಹಾಗೆಯೇ ಕನ್ನಡದ ಖ್ಯಾತ ಸಂಪಾದಕಿಯೊಬ್ಬರು ಯಾವ ಮಾತುಗಳನ್ನು, ಯಾವ ರೀತಿಯಲ್ಲಿ ಆಡುತ್ತಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಮೈಸೂರಿನ ಬುದ್ಧಿಜೀವಿಯೊಬ್ಬರದಂತೂ ನಾಲಿಗೆ ದೇಶದ ಪ್ರಜಾಪ್ರಭುತ್ವವನ್ನು ಪೂರ್ತಿಯಾಗಿ ಬಳಸಿಕೊಂಡುಬಿಟ್ಟಿತ್ತು. ಅಷ್ಟೇ ಅಲ್ಲ, ಕೆಲವು ವಿಶೇಷ ಸೌಲಭ್ಯಗಳನ್ನೂ ಅದು ಪಡೆದಿತ್ತು ಅನಿಸುತ್ತದೆ. ಆದರೆ ಇಲ್ಲಿ ಒಂದು ಮಾತು.
ಬೇರೆ ಧರ್ಮಗಳ ಇತಿಹಾಸ, ಸಮಕಾಲೀನ ಸ್ಥಿತಿ ಇತ್ಯಾದಿ ಕುರಿತು ಮಾತನಾಡಬಾರದು. ಇತರ ಕೆಲವು ವಿಷಯಗಳ ಕುರಿತಂತೂ ಯಾರೇ ಎಷ್ಟೇ ದೊಡ್ಡವರಾಗಿದ್ದರೂ, ಬುದ್ಧಿವಂತರಾಗಿದ್ದರೂ, ಬಿಲ್ಕುಲ್ ಮಾತನಾಡಕೂಡದು. ಉದಾಹರಣೆಗೆ ನಮ್ಮ ಸಂವಿಧಾನದಲ್ಲಿ ಇರುವ ದೋಷಗಳ ಕುರಿತು ಧ್ವನಿಯೆತ್ತ ಬಾರದು. ಕುತೂಹಲವೆಂದರೆ ಸಮಯಕ್ಕೆ, ಅವಶ್ಯಕತೆಗಳಿಗೆ ಹೊದಿಕೊಳ್ಳು ವಂತೆ ತನ್ನನ್ನು ಬದಲಾಯಿಸುವ ದಾರಿಗಳನ್ನು ಸಂವಿಧಾನವೇ ಸೂಚಿಸಿದೆ. ಅದೆಲ್ಲ ಏನೇ ಇದ್ದರೂ ಸಂವಿಧಾನದ ಕುರಿತು ಮಾತನಾಡಕೂಡದು.
ಸಂವಿಧಾನದ ಶಿಲ್ಪಿ, ಭಾರತ ರತ್ನ, ನಮ್ಮ ಶ್ರೇಷ್ಠ ಚಿಂತಕರಲ್ಲೊಬ್ಬರಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದ ವಿರುದ್ಧವೇ ಇಂದಿನ ಸಂವಿಧಾನದ ಬಳಕೆಯಾಗುತ್ತಿರು ವಂತಿದೆ ಎಂದು ಹೇಳಿದರಂತೂ ಆಕಾಶವೇ ಹರಿದುಕೊಂಡು ಕೆಳಗೆ ಬಿದ್ದು ಬಿಡುತ್ತದೆ.
ಹಾಗೆಯೇ ಸರಕಾರದ, ಅದರ ಅಂಗ ಸಂಸ್ಥೆಗಳ ದಕ್ಷತೆಯನ್ನು ಹೇಗೆ ಹೆಚ್ಚಿಸಬಹುದು ಎನ್ನುವುದರ ಕುರಿತು ಮಾತನಾಡಕೂಡದು. ಸಾಮಾಜಿಕ ನ್ಯಾಯದ ವಿಷಯ ತೆಗೆದರಂತೂ ಕಥೆ ಮುಗಿಯಿತು. ಖಾಸಗೀಕರಣದ ಪರ ತುಟಿ ಪಿಟಕ್ಕೆನ್ನುವಂತಿಲ್ಲ. ಸರಕಾರೀ ವ್ಯವಸ್ಥೆಯನ್ನು ಉತ್ತಮಗೊಳಿಸಿ ಅದನ್ನು ಸಶಕ್ತ ಎಂಜಿನ್ ಆಗಿಸುವ ಕುರಿತು ಮಾತನಾಡಕೂಡದು. ಭ್ರಷ್ಟ ವ್ಯವಸ್ಥೆಯನ್ನು ಸುಧಾರಿಸುವುದು ಹೇಗೆ ಎಂಬ ಕುರಿತು ಗಡಿಬಿಡಿ ಇದ್ದಂತಿಲ್ಲ. ಆ ಕುರಿತು ಚರ್ಚಿಸುವ ಅಗತ್ಯ ಇಲ್ಲ. ವ್ಯವಸ್ಥೆಗಳನ್ಬು ಸಬಲಗೊಳಿಸಿ ಸರಕಾರಿ ಸೇವೆಗಳನ್ನು ವೃತ್ತಿ ನಿರತವಾಗಿಸುವ ಕುರಿತು ಮಾತನಾಡ ಕೂಡದು.
ಖಾಸಗಿಯಲ್ಲಿನ ಜವಾಬ್ದಾರಿಯ ಸಂಸ್ಕೃತಿಯನ್ನು ಸರಕಾರಗಳು ಹೇಗೆ ಬಳಸಿಕೊಳ್ಳಬಹುದು ಎನ್ನುವುದರ ಕುರಿತು ಮಾತನಾಡಕೂಡದು. ಶಿಕ್ಷಣ ವ್ಯವಸ್ಥೆ ಕೊಳೆತು ಹೋಗುತ್ತಿದ್ದರೂ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರುವ ಕುರಿತು ಮಾತನಾಡಕೂಡದು. ಸರಕಾರ ಒಂದು ಬಡ, ಜಡ ವ್ಯವಸ್ಥೆಯಾಗಿಯೇ ಮುಂದುವರಿಯಬೇಕು.
ಯುಪಿಐ, ಆಧಾರ್ ಅಂತವನ್ನೆಲ್ಲ ಜಾರಿಗೊಳಿಸಿದ ವ್ಯಕ್ತಿಗಳ(ಕ್ಯಾಪಿಟಲಿಸ್ಟರ) ಕುರಿತು ‘ಹಳೇ’ ಭಾಷೆಯಲ್ಲಿಯೇ ಮಾತನಾಡಬೇಕು. ಅವರ ಒಳ್ಳೆಯ ಕೆಲಸಗಳನ್ನೂ ಕೂಡ ಗಮನಿಸಿ ಹೇಳುವಂತಿಲ್ಲ. ಯಾರಾದರೂ ಅಂತಹ ಧೈರ್ಯ ಮಾಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ. ಅಂತವರನ್ನು ಯದ್ವಾತದ್ವಾ ಟೀಕಿಸಲಾಗುತ್ತದೆ. ಸಮಾಜ ವಿರೋಧಿ ಎಂದು ಬಿಂಬಿಸಲಾಗುತ್ತದೆ.
ಮಾತನಾಡಿದವರ ಕರಿಯರ್ ನಾಶವಾಗಿ ಹೋಗುತ್ತದೆ. ಅಂತವರಿಗೆ ಅವಾರ್ಡ್ ಇತ್ಯಾದಿ ನೀಡಿದರೆ ಭಾರಿ ಗದ್ದಲವಾಗುತ್ತದೆ. ಪ್ಲೇಟನ್ನು ಅದೇ ರೀತಿಯಲ್ಲಿಯೇ ತಿರುಗಿಸದಿದ್ದರೆ ಗಂಡಾಂತರ ಎದುರಾಗು ತ್ತದೆ. ಇದೆಲ್ಲ ನಮ್ಮಲ್ಲಿ ಹೆಚ್ಚಿನ ಜನರಿಗೆ ಗೊತ್ತಾಗಿದೆ. ಹಾಗಾಗಿ ಇತ್ತೀಚೆಗೆ ಬುದ್ಧಿವಂತರು, ಸಾಧಕರು, ಸಮಾಜಕ್ಕೆ ನಿಜವಾದ ಮಾರ್ಗದರ್ಶನ ನೀಡಬಲ್ಲವರು ಸಾರ್ವಜನಿಕವಾಗಿ ಮಾತನಾಡುವುದೇ ಇಲ್ಲ. ತಮ್ಮ ಅಭಿಪ್ರಾಯ ಹೇಳಲು ಬಯಸುವುದೇ ಇಲ್ಲ.
ಒಮ್ಮೆ ಹೇಳಲೇಬೇಕಾದ ಅಗತ್ಯ ಬಂದು ಬಿಟ್ಟರೆ ಏನಾದರೂ ಹಳೆಯ, ‘ಪೊಲಿಟಿಲಿ ಕರೆಕ್ಟ್’ ಆದ ಮಾತುಗಳನ್ನು ಹೇಳಿ ಪಾರಾಗುತ್ತಾರೆ. ಸಾರ್ವಜನಿಕವಾಗಿ ಮಾತನಾಡಲು, ಇಂಟರ್ವ್ಯೂ ನೀಡಲು ಇತ್ಯಾದಿ ಇಷ್ಟಪಡುವುದೇ ಇಲ್ಲ. ನಿಜದ ವಿಷಯಗಳನ್ನು ಹೇಳಲು ಇಷ್ಟಪಡುವುದೇ ಇಲ್ಲ. ಏಕೆಂದರೆ ಬಾಯಿ ಬಿಟ್ಟರೆ ವಿವಾದ ಹುಟ್ಟಿಕೊಳ್ಳುತ್ತದೆ. ನಮ್ಮ ರಸ್ತೆಗಳನ್ನು ಹೇಗೆ ಸುಧಾರಿಸಬೇಕು? ನಗರಗಳನ್ನು ಹೇಗೆ ನಿರ್ವಹಿಸಬೇಕು? ಪ್ರಾಥಮಿಕ ಮತ್ತು ಉನ್ನತ ಶಿಕ್ಷಣವನ್ನು ಹೇಗೆ ಮರು ರೂಪಿಸಬೇಕು? ಬಜೆಟ್ ಅನ್ನು ಹೇಗೆ ನಿರ್ವಹಿಸಬೇಕು? ಫ್ರೀ ಬೀ ಪಡೆಯುವವರ, ನಿವೃತ್ತರ ಸೇವೆಗಳನ್ನು ಸಮಾಜಕ್ಕಾಗಿ ಹೇಗೆ ಬಳಸಿಕೊಳ್ಳಬೇಕು? ನೀರನ್ನು ಹೇಗೆ ಬಳಸಬೇಕು? ಇತ್ಯಾದಿ ವಿಷಯಗಳ ಕುರಿತು ಮಾರ್ಗದರ್ಶನ ಮಾಡಬಹುದಾದ ಸಾವಿರಾರು ಜನ ನಮ್ಮ ನಡುವೆ ಇದ್ದಾರೆ. ಆದರೆ ಅವರು ಮಾತನಾಡುವುದಿಲ್ಲ.
ಏಕೆಂದರೆ ಅವರಿಗೆ ಗೊತ್ತಿದೆ. ಜ್ಞಾನ ಹಂಚಿಕೊಂಡು ಪರೋಪಕಾರಕ್ಕೆ ನಿಂತರೆ ದೊಡ್ಡ ಗದ್ದಲ ವಾಗುತ್ತದೆ. ಹಾಗೆಯೇ ನಮ್ಮ ದೊಡ್ಡ ದೊಡ್ಡ ಬುದ್ಧಿಜೀವಿಗಳು, ಸಾಹಿತಿಗಳು, ಬರಹಗಾರರು, ಸಾಮಾಜಿಕ ನಾಯಕರು, ವಿಶ್ವವಿದ್ಯಾಲಯಗಳ ಕುಲಪತಿಗಳು, ಮಾಧ್ಯಮದವರು ಕೂಡ ನಿಜವಾದ ಮಾತುಗಳನ್ನು ಆಡುವುದು ಬಿಟ್ಟಿದ್ದಾರೆ. ಮಾತು ತಂದಿಡಬಹುದಾದ ಅಪಾಯಗಳನ್ನು ಅರಿತಿರುವ ಅವರೆಲ್ಲ ಇಂದು ಮೌನ ತಾಳಿದ್ದಾರೆ. ರಾಜಕಾರಣಿಗಳಿಗಂತೂ ಬುದ್ಧಿವಂತರು ಬಿಡಿ. ಹಾಗಾಗಿ ಇಂದು ಅವರ ಭಾಷಣಗಳಿಗೆ ಒಂದು ಟೆಂಪ್ಲೇಟ್ ಇದೆ.
ಉದಾಹರಣೆಗೆ ಅವರು ಹೇಳುವುದು: ನಾವೆಲ್ಲರೂ ಗಾಂಧಿ, ನೆಹರು, ಸುಭಾಷ್ಚಂದ್ರ ಬೋಸ್, ಅಂಬೇಡ್ಕರ್ ಅವರು ನಡೆದ ದಾರಿಯಲ್ಲಿ, ಸಾಮಾಜಿಕ ನ್ಯಾಯದ ದಾರಿಯಲ್ಲಿ ನಡೆದು ದೇಶ ಕಟ್ಟಬೇಕು ಇತ್ಯಾದಿ. ಗಾಂಧಿ, ನೆಹರು, ಸುಭಾಷ್ ಚಂದ್ರ ಬೋಸ್, ಅಂಬೇಡ್ಕರ್, ಇವರೆಲ್ಲರ ದಾರಿಗಳು ಬೇರೆ ಬೇರೆಯೇ ಆಗಿದ್ದವು ಎನ್ನುವುದು ಹಲವರಿಗೆ ಗೊತ್ತಿಲ್ಲ. ಮತ್ತು ಅದೆಲ್ಲ ಮಹತ್ವವೂ ಅಲ್ಲ. ಅದನ್ನೆಲ್ಲ ಕೇಳುವವರಾದರೂ ಯಾರು? ಅಲ್ಲದೆ ವಿಷಯಗಳನ್ನು ಸ್ಪಷ್ಟವಾಗಿ ಮಾತನಾಡಿ ಪೆಟ್ಟು ತಿನ್ನುವುದು ಯಾಕೆ? ಹಾಗಾಗಿ ಇಂದು ಪಕ್ಷಾತೀತವಾಗಿ ಮಾತುಗಳೆಲ್ಲವೂ ಅವೇ. ಹೀಗೆ ಮಾತನಾಡುವುದನ್ನು ಕಲಿತರೆ ಮಾತ್ರ ದಿನಗಳು ಸುರಳೀತವಾಗಿ ಮುಂದೆ ಹೋಗುವುದು. ಇದು ಸಾರ್ವಜನಿಕ ನೌಕರಿಯಲ್ಲಿರುವವರಿಗೂ ಗೊತ್ತು. ಹಾಗಾಗಿ ಯಾರೂ ಬಿಲ್ಕುಲ್ ನಿಜದ ಮಾತುಗಳನ್ನು ಆಡುವುದಿಲ್ಲ. ಇನ್ನೂ ಒಂದು ವಿಷಯ, ಮಾತನಾಡುವಾಗ ಸಂಬಂಧವಿರಲಿ, ಬಿಡಲಿ. ವೇದಿಕೆ ಮೇಲೆ ಇರುವ ಎಲ್ಲರನ್ನೂ ಹೊಗಳಬೇಕು. ತಾತ್ವಿಕವಾದ ವಿಭಿನ್ನತೆಯಲ್ಲಿ ಮಾತನಾಡುವಂತಿಲ್ಲ.
ನಮ್ಮ ದೇಶ ಅಪಾರ ಪ್ರಗತಿ ಸಾಧಿಸುತ್ತಿದೆ ಎಂದೇ ಹೇಳಬೇಕು. ಮತ್ತೆ ಬೇರೆ ದೇಶಗಳು ಬಹಳ ಮುಂದೆ ಹೋಗಿವೆ. ನಾವು ಅವರನ್ನು ನೋಡಿ ಕಲಿಯಬೇಕು ಇತ್ಯಾದಿ ಮಾತನಾಡಕೂಡದು. ಬಾಯಿ ತೆಗೆದರೆ ಬಡವರ, ದೀನದಲಿತರ, ಹಿಂದುಳಿದ, ವರ್ಗದವರ ಅಲ್ಪಸಂಖ್ಯಾತರ, ಮಹಿಳೆಯರ, ರೈತರ ಕಾರ್ಮಿಕರ, ಇತ್ಯಾದಿ ಶಬ್ದಗಳು ಬಾಯಲ್ಲಿ ಬರಲೇಬೇಕು. ಎಲ್ಲರ ಸಹಕಾರದಿಂದ ನಾವು ಪ್ರಗತಿ ಸಾಧಿಸುತ್ತಿದ್ದೇವೆ ಎಂದು ಹೇಳಬೇಕು.
ಅಧಿಕಾರಿಗಳು ಕೂಡ ಎಲ್ಲರ ಸಹಕಾರದಿಂದ ನಮ್ಮ ಇಲಾಖೆ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಬೇಕು. ಇಲ್ಲವಾದರೆ ಅವರ ಕರಿಯರ್ ಹಾಳಾಗುತ್ತದೆ. ಎಲ್ಲರಿಗೂ ಏನು ತಿಳಿದಿದೆಯೋ ಅಷ್ಟೇ ಮಾತನಾಡಬೇಕು. ಕಮಕ್ ಕಿಮಕ್ ಅನ್ನದೆ ತಿಂದುಕೊಂಡು ಏಳೇಳು ಜನ್ಮಗಳಿಗೆ ಸಾಕಷ್ಟು ಆಸ್ತಿ ಮಾಡಿಕೊಂಡು ಹೋದರೆ ಅಂತವರ ಕುರಿತು ದೋಷಾರೋಪಣೆ ಬರುವುದೇ ಇಲ್ಲ. ಬಾಯಿ ಬಿಟ್ಟರೆ ಗದ್ದಲ ನಿಶ್ಚಿತ. ಸುಧಾರಣೆ ತರುವ ಮಾತುಗಳನ್ನಂತೂ ಖಂಡಿತ ಆಡಬಾರದು.
ಜಡ ಚೇತನವನ್ನು ಅರಳಿಸಲು ಪ್ರಯತ್ನಿಸಲೇಬಾರದು. ಮೇಲೆ ಹೇಳಲಾದ ಮಾತುಗಳಿಗೆ ತೀರ ಇತ್ತೀಚಿನ ಉದಾಹರಣೆ ರಾಜ್ಯದ ಅತ್ಯುನ್ನತ ಸರಕಾರಿ ಹುದ್ದೆಯಲ್ಲಿರುವ ಮಹನೀಯರೊಬ್ಬರ ಮಗಳು ಆಡಿದ ಕೆಲವು ಮಾತುಗಳಿಗೆ ಬಂದ ಪ್ರತಿಕ್ರಿಯೆ. ಪ್ರಾಥಮಿಕ ಶಿಕ್ಷಣದ ಕುರಿತು ಆಕೆ ಕೆಲವು ಮಾತುಗಳನ್ನು ಆಡಿಬಿಟ್ಟರು. ಆಕೆ ಈ ಮಾತುಗಳನ್ನು ಯಾರನ್ನೋ ದೂಷಿಸಲು ಆಡಿದ್ದು ಅಲ್ಲ. ಅಧಿಕಾರವಿದೆ ಎಂದು ಆಡಿದ್ದು ಅಲ್ಲ.
ತಂದೆಯ ಅಧಿಕಾರದ ಧೀಮಾಕಿನಿಂದ ಆಡಿದ್ದಲ್ಲ. ಆಸ್ತಿ ಇದೆ ಎಂದು ಆಡಿದ್ದೂ ಅಲ್ಲ. ಮಾಡಲು ಆಡಿದ್ದೂ ಅಲ್ಲ. ಅನವಶ್ಯಕವಾಗಿ ಆಡಿದ್ದು ಅಲ್ಲ. (ಆಕೆಯ ಮಾತಿಗೆ ಇಂತಹ ಪ್ರತಿಕ್ರಿಯೆ ಬಂದವು.) ಮಾತನಾಡಲು ಆಹ್ವಾನವಿದ್ದಾಗ, ತಮಗೆ ಸರಿ ಅನಿಸಿದ್ದನ್ನು ಮೆತ್ತನೆಯ ಪಾರ್ಲಿಮೆಂಟರಿ ಭಾಷೆಯಲ್ಲಿ ಅವರು ಹೇಳಿದ್ದು. ಇದೆಲ್ಲ ಹೇಳಲೋ ಬೇಡವೋ ಎಂಬ ಅನುಮಾನ ಕೂಡ ಆಕೆಗೆ ಇತ್ತು. (ಭಾಷಣದ ಪೂರ್ಣ ಪಠ್ಯ ಯೂಟ್ಯೂಬ್ ನಲ್ಲಿದೆ.) ಅವರು ಮಾತನಾಡಿದ್ದು ಪ್ರಾಥಮಿಕ ಶಿಕ್ಷಣದ ಸೇವೆಗಳನ್ನು ಹೇಗೆ ಉನ್ನತೀಕರಣಗೊಳಿಸಬಹುದು ಎನ್ನುವುದರ ಕುರಿತು.
ಆಕೆ ಹೇಳಿದ್ದು ಇಷ್ಟು: ಅನವಶ್ಯಕವಾಗಿ ಮೂಲಭೂತ ಸೌಕರ್ಯಗಳಿಗೆ ನಾವು ದುಡ್ಡು ಖರ್ಚು ಮಾಡಲು ಹೋಗಬಾರದು. ಏಕೆಂದರೆ ಶಾಲೆಗಳಲ್ಲಿ ಈಗಾಗಲೇ ಇರುವ ಪರಿಕರಗಳು ತುಕ್ಕು ಹಿಡಿಯುತ್ತ ಬಿದ್ದಿವೆ. ಅವು ನಿಜವಾಗಿಯೂ ವಿದ್ಯಾರ್ಥಿಗಳ ಸಲುವಾಗಿ ಬಳಕೆಯಾಗುತ್ತಿದೆಯೇ ಎನ್ನುವುದನ್ನು ಪರಿಶೀಲಿಸಬೇಕು. ಆಡಿಟ್ ಮಾಡಬೇಕು. ವಿದ್ಯಾರ್ಥಿನಿಯರಿಗಾಗಿ ಶಾಲೆಗಳಲ್ಲಿ ಕನಿಷ್ಠ ಸೌಲಭ್ಯಗಳಿರಬೇಕು. ಮಕ್ಕಳಿಗೆ ಶಾಲೆಗೆ ಬಂದು ಹೋಗಲು ಬಸ್ ವ್ಯವಸ್ಥೆ ಕಲ್ಪಿಸಬೇಕು. ಶಾಲೆಯಲ್ಲಿ ಸೆಕ್ಯೂರಿಟಿ ಇರಬೇಕು. ಇವೆಲ್ಲವುಗಳ ಜತೆಯೇ ಅವರು ಹೇಳಿದ್ದು ಲಕ್ಷ ಲಕ್ಷ ಸಂಬಳ ತೆಗೆದುಕೊಳ್ಳುವ ಸರಕಾರಿ ಶಿಕ್ಷಕರ ದಕ್ಷತೆಯನ್ನು ಪರಿಶೀಲಿಸಬೇಕು. ಒಟ್ಟಾರೆಯಾಗಿ ಆಕೆ ಹೇಳಿದ್ದು ಪ್ರಾಥಮಿಕ ಶಾಲೆಗಳನ್ನು ನಾವು ಹೇಗೆ ಸುಧಾರಿಸಬೇಕು ಎನ್ನುವುದರ ಕುರಿತು.
ಸಾಮಾಜಿಕ ಅಭಿಪ್ರಾಯದ ಹಿನ್ನೆಲೆಯಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದವರು ಆಕೆ. ಆಕೆಯ ಮಾತುಗಳಲ್ಲಿ ತಪ್ಪಿದ್ದರೆ ಆಕೆ ಆಡಿದ ರೀತಿಯಲ್ಲಿಯೇ ಪಾರ್ಲಿಮೆಂಟರಿ ಭಾಷೆಯಲ್ಲಿ ಉತ್ತರ ನೀಡಬಹುದಿತ್ತು. ಸರಕಾರಿ ಶಿಕ್ಷಕರ ದಕ್ಷತೆ ಕಡಿಮೆ ನಿಜಕ್ಕೂ ಕಡಿಮೆಯಾಗುತ್ತಿದೆಯೇ ಎಂಬುದನ್ನು ಸುಸಂಸ್ಕೃತ ಭಾಷೆಯಲ್ಲಿ ಚರ್ಚಿಸಬಹುದಿತ್ತು. ಬದಲಿಗೆ ಮಾತುಗಳಿಗೆ ಬೆಂಕಿ ಯಂತಹ ಪ್ರತಿಕ್ರಿಯೆಗಳು ಬಂದವು. ಸರಕಾರಿ ಶಾಲೆಗಳನ್ನು ಖಾಸಗೀಕರಣಗೊಳಿಸುವ ಹುನ್ನಾರ ವಿದೆ ಎಂಬ ಮಾತು ಬಂತು.
ಬಾಣಗಳು ಆಕೆಯನ್ನು ಅಷ್ಟೇ ಅಲ್ಲ, (ಅನವಶ್ಯಕವಾಗಿ) ತಂದೆಯನ್ನು ಕೂಡ ಗುರಿಯಾಗಿಸಿದವು. ತಂದೆಯ ಆಸ್ತಿಯ ಅಧಿಕಾರದ, ಹಣದ ಧೀಮಾಕಿನ ಹಿನ್ನೆಲೆಯಲ್ಲಿ ಇಂತಹ ಮಾತುಗಳು ಬಂದಿವೆ ಎಂಬ ವೈಯಕ್ತಿಕ ಟೀಕೆಗಳು ಬಂದವು. ಟೀಕೆಗಳು ಸ್ಥೂಲವಾಗಿ ಹೇಳಿದ್ದೆಂದರೆ ‘ಇಂತಹ ವಿಷಯಗಳಿಗೆ ನೀವು ಕೈ ಹಾಕಬೇಡಿ. ದೂರವಿರಿ. ಕೈ ಹಾಕಿದರೆ ‘ಹುಷಾರ್’ ಇರಲಿ. ಯಾರೇ ಆಗಿರಲಿ, ದಕ್ಷತೆ ಇತ್ಯಾದಿ ವಿಷಯ ಕುರಿತು ಮಾತನಾಡಬೇಡಿ.’
ಒಟ್ಟಾರೆ ಅರ್ಥ, ಕೆಲವು ವಿಷಯಗಳ ಕುರಿತು ಮುಖ್ಯಮಂತ್ರಿಯ ಮಗಳೇ ಆಗಿರಲಿ, ಮುಕ್ತವಾಗಿ ಮಾತನಾಡುವಂತಿಲ್ಲ. ಯಾರೋ ಬಿಗ್ ಬ್ರದರ್ನ ಅಪ್ಪಣೆ ಪಡೆದೇ ಮಾತಾಡಬೇಕು. ವಾಕ್ ಸ್ವಾತಂತ್ರ್ಯದ ವಿಷಯ ಅರ್ಥವಾಯಿತು. ಅಲ್ಲವೇ?