Physical abuse: ಬೆಂಗಳೂರಲ್ಲಿ ಹಾಡಹಗಲೇ ಯುವತಿ ಮೈ ಕೈ ಮುಟ್ಟಿ, ಹಲ್ಲೆಗೈದ ಗಾಂಜಾ ಗ್ಯಾಂಗ್!
Physical abuse: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಮೈಲಸಂದ್ರ ಬಳಿ ಘಟನೆ ನಡೆದಿದೆ. ಯುವತಿ ದಿನಸಿ ತರಲು ಅಂಗಡಿಗೆ ಹೋಗುತ್ತಿದ್ದಳು. ಈ ವೇಳೆ ಗಾಂಜಾ ನಶೆಯಲ್ಲಿದ್ದ ಕಿಡಿಗೇಡಿಗಳು, ಆಕೆಯನ್ನು ಅಡ್ಡಗಟ್ಟಿ ಲೈಂಗಿಕ ಕಿರುಕುಳ ನೀಡಿ, ಹಲ್ಲೆ ಮಾಡಿದ್ದಾರೆ.


ಆನೇಕಲ್: ಅಂಗಡಿಗೆ ಹೊರಟಿದ್ದ ಯುವತಿ ಮೈ ಕೈ ಮುಟ್ಟಿ ಹಾಡಹಗಲೇ ಲೈಂಗಿಕ ಕಿರುಕುಳ ನೀಡಿರುವ ಘಟನೆ (Physical abuse) ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಮೈಲಸಂದ್ರ ಬಳಿ ನಡೆದಿದೆ. ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ರೇಣುಕಾ ಯಲ್ಲಮ್ಮ ಬಡಾವಣೆಯಲ್ಲಿ ಗಾಂಜಾ ನಶೆಯಲ್ಲಿದ್ದ ಐದಾರು ಮಂದಿ ಕೃತ್ಯ ಎಸಗಿದ್ದಾರೆ. ಈ ವೇಳೆ ಪ್ರತಿರೋಧ ತೋರಿದ ಯುವತಿ ಮೇಲೆ ಹಲ್ಲೆ ಕೂಡ ಮಾಡಲಾಗಿದೆ.
ಸಂತ್ರಸ್ತ ಯುವತಿ ದಿನಸಿ ತರಲು ಅಂಗಡಿಗೆ ಹೋಗುತ್ತಿದ್ದರು. ಈ ವೇಳೆ ಗಾಂಜಾ ನಶೆಯಲ್ಲಿದ್ದ ಕಿಡಿಗೇಡಿಗಳು, ಆಕೆಯನ್ನು ಅಡ್ಡಗಟ್ಟಿ ಮೈಕೈ ಮುಟ್ಟಿ ಎಳೆದಾಡಿದ್ದಾರೆ. ಯುವತಿ ಪ್ರತಿರೋಧ ತೋರಿದ್ದಕ್ಕೆ ನಡುರಸ್ತೆಯಲ್ಲೇ ಹಲ್ಲೆ ಮಾಡಿದ್ದಾರೆ. ಹೇಗೋ ಆಕೆ ಸ್ಥಳೀಯರ ನೆರವಿನಿಂದ ತಪ್ಪಿಸಿಕೊಂಡಿದ್ದಾಳೆ. ಯುವತಿಯನ್ನು ರಕ್ಷಿಸಲು ಮುಂದಾದ ಸ್ಥಳೀಯರ ಮೇಲೂ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ.
ಯುವತಿ ಮತ್ತು ಸ್ಥಳೀಯರ ಮೇಲಿನ ಕಿಡಿಗೇಡಿಗಳು ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಂತ್ರಸ್ತ ಯುವತಿ ಹೇಳಿದ್ದೇನು?
ಪ್ರಕರಣ ಸಂಬಂಧ ಸಂತ್ರಸ್ತ ಯುವತಿ ಮಾತನಾಡಿ, ನಾನು ಅಂಗಡಿಗೆ ಹೋಗುವಾಗ ಯುವಕರು ರಸ್ತೆಯಲ್ಲಿ ಗಲಾಟೆ ಮಾಡುತ್ತಿದ್ದರು. ಎಲ್ಲರೂ ಕುಡಿದಿದ್ದರು, ಗಾಂಜಾ ನಶೆಯಲ್ಲಿದ್ದರು. ರಸ್ತೆಯಲಲಿ ನನ್ನ ಅಡ್ಡಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಹೊಡೆಯಲು ಮತ್ತು ಮುಟ್ಟಲು ಬಂದರು. ಈ ವೇಳೆ ಸ್ಥಳೀಯರು ನನ್ನ ರಕ್ಷಿಸಿದರು ಎಂದು ಹೇಳಿದ್ದಾಳೆ.
ಈ ಸುದ್ದಿಯನ್ನೂ ಓದಿ | Shocking News: ಇಬ್ಬರು ಅಪ್ರಾಪ್ತರಿಂದಲೇ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ
ಸ್ಥಳೀಯರು ನನ್ನನ್ನು ರಕ್ಷಣೆ ಮಾಡಲು ಬಂದಾಗ, ಕಿಡಿಗೇಡಿಗಳು ನನ್ನ ಮನೆ ಗೇಟ್ ಎಗರಿ ಒಳ ನುಗ್ಗಿದರು. ಏಳೆಂಟು ಜನ ಯುವಕರಿದ್ದರು. ಯುವಕರು ನಮ್ಮ ಮನೆ ಹಿಂದುಗಡೆ ವಾಸವಾಗಿದ್ದಾರಂತೆ. ಕಳೆದ ಒಂದು ವಾರದಿಂದ ಈ ಬಡವಾಣೆಯಲ್ಲಿ ವಾಸಿಸುತ್ತಿದ್ದೇನೆ. ದೌರ್ಜನ್ಯ ನಡೆಸಿದ ಯುವಕರು ಯಾರೆಂದು ಗೊತ್ತಿಲ್ಲ. ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಗೆ ನಾನು ದೂರು ನೀಡಿದ್ದು, ಎಫ್‌ಐಆರ್ ಆಗಿದೆ. ವಾರದ ಹಿಂದೆ ರೇಣುಕಾ ಯಲ್ಲಮ್ಮ ಬಡಾವಣೆ ಮನೆಗೆ ಶಿಫ್ಟ್ ಆಗಿದ್ದೆವು ಎಂದು ಯುವತಿ ಹೇಳಿದ್ದಾಳೆ.