ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

K Sudhakar: ತಮ್ಮ ಹೆಸರು ಬರೆದಿಟ್ಟು ಚಾಲಕ ಆತ್ಮಹತ್ಯೆಗೆ ಶರಣಾದ ಪ್ರಕರಣ; ಸಂಸದ ಸುಧಾಕರ್‌ ಮೊದಲ ಪ್ರತಿಕ್ರಿಯೆ

ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೀಪ್ ಚಾಲಕ 33 ವರ್ಷದ ಬಾಬು ಸಂಸದ ಡಾ. ಕೆ. ಸುಧಾಕರ್‌ ಹೆಸರು ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸುಧಾಕರ್‌ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ.

ಚಾಲಕ ಆತ್ಮಹತ್ಯೆ; ಸಂಸದ ಸುಧಾಕರ್‌ ಮೊದಲ ಪ್ರತಿಕ್ರಿಯೆ

Ramesh B Ramesh B Aug 7, 2025 5:44 PM

ದೆಹಲಿ: ಚಿಕ್ಕಬಳ್ಳಾಪುರ (Chikkaballapuara news) ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೀಪ್ ಚಾಲಕ 33 ವರ್ಷದ ಬಾಬು ನೇಣಿಗೆ ಶರಣಾಗಿರುವ (Self Harming) ಘಟನೆ ಜಿಲ್ಲಾ ಆಡಳಿತ ಭವನದಲ್ಲಿ ನಡೆದಿದೆ. ಇವರು ಡೆತ್‌ನೋಟ್‌ ಬರೆದಿಟ್ಟಿದ್ದು, ಅದರಲ್ಲಿ ಸಾವಿಗೆ ಬಿಜೆಪಿ ಸಂಸದ ಡಾ. ಕೆ. ಸುಧಾಕರ್ (K Sudhakar) ಹಾಗೂ ಇನ್ನೂ ಹಲವರು ಕಾರಣ ಎಂದು ದೂರಿದ್ದು, ರಾಜಕೀಯ ತಿರುವು ಪಡೆದುಕೊಂಡಿದೆ. ಇದೀಗ ದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ಕೆ. ಸುಧಾಕರ್ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ.

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ʼʼಬಾಬು ಎಂಬ ವ್ಯಕ್ತಿ ನನಗೆ ಗೊತ್ತಿಲ್ಲ. ಆತನ ಮುಖವನ್ನೇ ನೋಡಿಲ್ಲ. ಈ ವ್ಯಕ್ತಿ ಯಾಕೆ ನನ್ನ ಹೆಸರು ಉಲ್ಲೇಖ ಮಾಡಿದ್ದಾರೋ ಗೊತ್ತಿಲ್ಲʼʼ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: Self Harming: ಸಂಸದ ಕೆ. ಸುಧಾಕರ್‌ ಹೆಸರು ಬರೆದಿಟ್ಟು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಸಿಇಒ ಜೀಪ್ ಚಾಲಕ ನೇಣಿಗೆ ಶರಣು

ಸುಧಾಕರ್‌ ಹೇಳಿದ್ದೇನು?

ಸುದ್ದಿಗಾರರೊಂದಿಗೆ ಮಾತನಾಡಿರುವ ಸುಧಾಕರ್, ʼʼಬಾಬು ಎಂಬ ವ್ಯಕ್ತಿ ನನಗೆ ಗೊತ್ತಿಲ್ಲ, ಆತನ ಮುಖವನ್ನೇ ನೋಡಿಲ್ಲ. ಈ ವ್ಯಕ್ತಿ ಯಾಕೆ ನನ್ನ ಹೆಸರು ಉಲ್ಲೇಖ ಮಾಡಿದ್ದಾರೋ ಗೊತ್ತಿಲ್ಲ. ಬಾಬು ಎನ್ನುವ ವ್ಯಕ್ತಿ ಚಿಕ್ಕಬಳ್ಳಾಪುರ ನಿವಾಸಿ ಅಂತ ಗೊತ್ತಾಗಿದೆ. ಆತ್ಮಹತ್ಯೆಗೆ ಶರಣಾಗಿರುವುದು ಜಿಲ್ಲಾ ಪಂಚಾಯತ್ ಆವರಣದಲ್ಲಿ ಮೊದಲು ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತೇನೆ. ಈ ಸಾವು ನನಗೂ ದುಃಖ ತಂದಿದೆ. ನಾನು ಎರಡು ಬಾರಿ ಸಚಿವ ಆಗಿದ್ದೇನೆ, ಶಾಸಕ ಆಗಿದ್ದೇನೆ. ಈ ಸಮಯದಲ್ಲಿ ಹಲವರಿಗೆ ಕೆಲಸ ಕೊಡಿಸಿದ್ದೇನೆ. ಎಲ್ಲರ ಪರಿಚಯ ನನಗಿಲ್ಲ. ಈ ವ್ಯಕ್ತಿ ಯಾರೂ ಅಂತ ಗೊತ್ತಿಲ್ಲʼʼ ಎಂದು ಹೇಳಿದ್ದಾರೆ.

ʼʼಘಟನೆಯ ಹಿಂದೆ ಶಾಸಕರು, ಉಸ್ತುವಾರಿ ಸಚಿವರ ರಾಜಕೀಯ ಇದೆ. ಯಾರೇ ತಪ್ಪಿತಸ್ಥರಾಗಿದ್ದರೂ ಉಗ್ರ ಶಿಕ್ಷೆಯಾಗಲಿ. ಕಾನೂನು ಕ್ರಮ ಏನೇ ಇರಲಿ ತನಿಖೆ ಪಾರದರ್ಶಕವಾಗಿರಲಿʼʼ ಎಂದು ಆಗ್ರಹಿಸಿದ್ದಾರೆ.

ಏನಿದು ಘಟನೆ?

ಸಂಸದ ಕೆ. ಸುಧಾಕರ್‌ ಆಪ್ತ, ಮಾಜಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೃಷ್ಣಮೂರ್ತಿ ಅವರ ಅಳಿಯ ನಾಗೇಶ್ ಎನ್ ಚಿಕ್ಕ ಕಾಡಿಗೇನಹಳ್ಳಿ ಹಾಗೂ ಮಂಜುನಾಥ್ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ 25 ಲಕ್ಷ ರೂ. ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಬಾಬು ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ. ಅಷ್ಟೇ ಅಲ್ಲದೇ ಜಿಲ್ಲಾ ಪಂಚಾಯತಿ ಲೆಕ್ಕ ಸಹಾಯಕರ ವಿರುದ್ಧವೂ ಡೆತ್‌ ನೋಟ್‌ನಲ್ಲಿ ಬಾಬು ಹಲವು ಆರೋಪ ಮಾಡಿದ್ದಾರೆ ಎನ್ನಲಾಗಿದೆ.

ಬಾಬು ಪರಿಶಿಷ್ಟ ಜನಾಂಗಕ್ಕೆ ಸೇರಿದವರಾಗಿದ್ದು, 8 ವರ್ಷಗಳಿಂದ ಅಧಿಕಾರಿಗಳಿಗೆ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬಾಪೂಜಿ ನಗರದಲ್ಲಿ ವಾಸವಾಗಿದ್ದ ಬಾಬು ಅವರಿಗೆ ಪತ್ನಿ ಇದ್ದಾರೆ. ಗುರುವಾರ ಮುಂಜಾನೆ 6 ಗಂಟೆಯ ಸಮಯದಲ್ಲಿ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್‌ ಕಚೇರಿ ಬಳಿ ಚಾಲಕರು ಕುಳಿತುಕೊಳ್ಳುತ್ತಿದ್ದ ಜಾಗದಲ್ಲಿದ್ದ ಹೊಂಗೆ ಮರಕ್ಕೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ. ಎಂದಿನಂತೆ ಜಿಲ್ಲಾಧಿಕಾರಿ ಕಚೇರಿಗೆ ಕೆಲಸಕ್ಕೆ ಬಂದ ನೌಕರರು ಹಾಗೂ ಕಾಂಪೌಂಡ್‌ ಹೊರಗಡೆ ಹೂ ತೋಟದಲ್ಲಿ ಹೂ ಕೀಳುತ್ತಿದ್ದ ರೈತರು ಇದನ್ನು ಗಮನಿಸಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.