'ಬ್ರಾಹ್ಮಣರ ಕಾಫಿ ಬಾರ್'ನ ರಾಧಾಕೃಷ್ಣ ಅಡಿಗರ ಜೀವನ ಕಥನ ಏ.19ರಂದು ಬಿಡುಗಡೆ
ಬೆಂಗಳೂರಿನಲ್ಲಿ ʼಬ್ರಾಹ್ಮಣರ ಕಾಫಿ ಬಾರ್ʼ ಎಲ್ಲಿದೆ ಎಂದು ಆಹಾರಪ್ರಿಯರಿಗೆ ಎಲ್ಲರಿಗೂ ಗೊತ್ತು. ಅಂಥ ಯಶಸ್ವಿ ಮತ್ತು ರುಚಿಕರ ಹೋಟೆಲ್ ಉದ್ಯಮವನ್ನು ಕಟ್ಟಿದ ರಾಧಾಕೃಷ್ಣ ಅಡಿಗರ ಜೀವನ ಕಥನ ಏ.19ರಂದು ಬಿಡುಗಡೆಯಾಗಲಿದೆ. ನ್ಯಾ.ದೇವದಾಸ್, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್, ಗೃಹ ಸಚಿವ ಜಿ ಪರಮೇಶ್ವರ್, ಸಂಸದ ತೇಜಸ್ವಿ ಸೂರ್ಯ ಮೊದಲಾದವರು ಭಾಗವಹಿಸಲಿದ್ದಾರೆ.
ರಾಧಾಕೃಷ್ಣ ಅಡಿಗ, ಬ್ರಾಹ್ಮಣರ ಕಾಫಿ ಬಾರ್ -
ಬೆಂಗಳೂರು, ಏ.17: ರಾಜಧಾನಿಯ ಆಹಾರೋದ್ಯಮದ ಯಶಸ್ವಿ ರೂವಾರಿಗಳಲ್ಲಿ ಒಬ್ಬರಾದ ಬ್ರಾಹ್ಮಣರ ಕಾಫಿ ಬಾರ್ (brahmara coffee bar) ಮಾಲೀಕರಾದ ರಾಧಾಕೃಷ್ಣ ಅಡಿಗರ (Radhakrishna Adiga) ಯಶಸ್ಸನ್ನು ಸಂಭ್ರಮಿಸುವ, ಅವರ ಬದುಕಿನ ಕತೆಯನ್ನು ಓದುವ ಅವಕಾಶ ಇದೀಗ ಬಂದೊದಗಿದೆ. ರಾಧಾಕೃಷ್ಣ ಅಡಿಗರ ಬದುಕಿನ ಕತೆ ಒಳಗೊಂಡಿರುವ ʼರಾಧಾಕೃಷ್ಣ ಅಡಿಗ: ಇಡ್ಲಿ ಕಾಫಿ ಪರಂಪರೆ-ಪಯಣ...ʼ ಪುಸ್ತಕ (book release) ಬೆಂಗಳೂರಿನ ಜಯನಗರದ ಆರ್ ವಿ ಟೀಚರ್ಸ್ ಕಾಲೇಜಿನ ಸಭಾಂಗಣದಲ್ಲಿ ಏಪ್ರಿಲ್ 19ರಂದು ಭಾನುವಾರ ಬೆಳಗ್ಗೆ 10.30ಕ್ಕೆ ಬಿಡುಗಡೆ ಆಗಲಿದೆ.
ಜೀವನ ಚಕ್ರ ಮತ್ತು ಉದ್ಯೋಗ ಚಕ್ರ ಯಾವುದೇ ವ್ಯಕ್ತಿಯ ಬದುಕಿನ ರಥದ ಎರಡು ಗಾಲಿಗಳಿದ್ದಂತೆ. ಒಂದು ಏರುಪೇರಾದರೆ ಇನ್ನೊಂದು ಚಕ್ರ ಸರಾಗವಾಗಿ ಸಾಗದು. ಎರಡನ್ನೂ ಸಮತೋಲನದಿಂದ ನಿಭಾಯಿಸುವುದು ಒಂದು ಸವಾಲು. ಯಾವುದೇ ಉದ್ಯಮದಲ್ಲಿ ಇನ್ನೂ ಎತ್ತರಕ್ಕೆ ಏರಬೇಕು ಎಂದು ಕನಸು ಕಾಣುವುದು ಎಲ್ಲರ ಗುಣ. ಆದರೆ ರಾಧಾಕೃಷ್ಣ ಅಡಿಗರು, ಅವರ ಅಪ್ಪಯ್ಯ ಮತ್ತು ಅವರ ಪರಿವಾರದ ಇತರರ ಏಕರೂಪ ಸಂವಿಧಾನ ಎಂದರೆ, ಒಂದು ಹಂತಕ್ಕೆ ಏರಿದ ಮೇಲೆ ಹಣದ ಹಿಂದೆ ಬೀಳದೆ ಸಮಾಜಕ್ಕೂ ಕುಟುಂಬಕ್ಕೂ ಸಮಯ ಮತ್ತು ಹಣವನ್ನು ವಿನಿಯೋಗಿಸು, ಏನಾದರು ಮಾಡು ಎನ್ನುವುದೇ ಆಗಿದೆ.
ಮನಸ್ಸು ಮಾಡಿದ್ದರೆ ಅಡಿಗರು ಫೈವ್ ಸ್ಟಾರ್ ಹೋಟೆಲ್ ಸರಣಿಯನ್ನೂ ಮಾಡಬಹುದಿತ್ತು. ಆದರೆ ಸಾಕು ಎನ್ನುವ ಸಂತ ಮನೋಭಾವ ಉಂಟಲ್ಲ, ಅದು ಅವರ ಅಂತರಂಗದ ಅರಿವಿನ ಪ್ರತಿಬಿಂಬವಾಗಿ ಗೋಚರಿಸುತ್ತದೆ. ಬೇಕು ಬೇಕು ಎಂದು ಧಾವಿಸುತ್ತ ತುತ್ತತುದಿಗೆ ಹೋಗಿ ಮುಟ್ಟಿದರೂ ನಾವು ನಾಳೆ ತೆಗೆದುಕೊಂಡು ಹೋಗುವುದು ಏನೂ ಇಲ್ಲ ಎಂಬ ವಿರಾಗವೂ ಅವರ ಬದುಕಿನಲ್ಲಿ ಸರಾಗವಾಗಿದೆ. ನಿಜವಾದ ಯಶಸ್ಸು ಬದುಕು ಹಾಗೂ ವೃತ್ತಿಯಲ್ಲಿ ಸಮನ್ವಯ ಸಾಧಿಸುವುದರಲ್ಲಿದೆ ಎನ್ನುವುದನ್ನು ಬಿಂಬಿಸುತ್ತದೆ ಡಾ. ರಾಧಾಕೃಷ್ಣ ಅಡಿಗರು ನಡೆದು ಬಂದ ದಾರಿ.
ಪುಸ್ತಕವನ್ನು ಹೈಕೋರ್ಟ್ ನ್ಯಾಯಮೂರ್ತಿ ದೇವದಾಸ್ ಅವರು ಬಿಡುಗಡೆ ಮಾಡಲಿದ್ದಾರೆ. ವಿಶ್ವವಾಣಿ ಗ್ರೂಪ್ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರು ಪುಸ್ತಕ ಅವಲೋಕನ ನಡೆಸಲಿದ್ದಾರೆ. ಗೃಹ ಸಚಿವ ಜಿ ಪರಮೇಶ್ವರ್, ಸಂಸದ ತೇಜಸ್ವಿ ಸೂರ್ಯ, ಶಾಸಕ ಉದಯ್ ಗರುಡಾಚಾರ್, ಖ್ಯಾತ ಹೋಮಿಯೋಪಥಿ ತಜ್ಞ ಡಾ ಬಿ ಟಿ ರುದ್ರೇಶ್, ಬ್ರಾಹ್ಮಣರ ಕಾಫಿ ಬಾರ್ ಮಾಲೀಕರಾದ ರಾಧಾಕೃಷ್ಣ ಅಡಿಗ ಮತ್ತು ಗ್ರಂಥಕರ್ತ ವಿನಾಯಕ ಭಟ್ ತದ್ದಲಸೆ ಭಾಗಿಯಾಗಲಿದ್ದಾರೆ.