’ಬ್ರಾಹ್ಮಣರ ಕಾಫಿ ಬಾರ್’ ಯಶಸ್ಸಿನ ಹಿಂದೆ ರಾಧಾಕೃಷ್ಣ ಅಡಿಗ
’ಬ್ರಾಹ್ಮಣರ ಕಾಫಿ ಬಾರ್’ ಯಶಸ್ಸಿನ ಹಿಂದೆ ರಾಧಾಕೃಷ್ಣ ಅಡಿಗ
Vishwavani News
October 19, 2022
ಗ್ರಾಹಕರೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳಬೇಕು
ಇಲ್ಲದಿದ್ದರೆ ಹೋಟೆಲ್ ನಷ್ಟ ಅನುಭವಿಸಬೇಕಾಗುತ್ತದೆ
ಬೆಂಗಳೂರು: ಆತನಿಗೇನು, ಹೋಟೆಲ್ ನಡೆಸುತ್ತಿದ್ದಾನೆ. ಒಳ್ಳೇ ಲಾಭ ಬರುತ್ತದೆ. ಹೀಗಾಗಿ ಚೆನ್ನಾಗಿ ಬದುಕುತ್ತಿದ್ದಾನೆ ಎಂದು ಹೇಳುವವರಿಗೇನೂ ಕಮ್ಮಿ ಇಲ್ಲ. ಆದರೆ, ಒಂದು ಹೋಟೆಲ್ ನಡೆಸುವುದು ಎಂದರೆ ಅದೆಷ್ಟು ಕಷ್ಟ? ಲಾಭ ಗಳಿಸುವುದು ಇನ್ನೆಷ್ಟು ಕಷ್ಟ? ಕರೋನಾ ಸಂದರ್ಭ ದಲ್ಲಿ ಹೋಟೆಲ್‌ಗಳ ಪರಿಸ್ಥಿತಿ ಹೇಗಿತ್ತು?
ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ‘ಸುಧಾರಿಸಿತೇ ಹೋಟೆಲ್ ಉದ್ಯಮ?’ ಕಾರ್ಯ ಕ್ರಮದಲ್ಲಿ ಬ್ರಾಹ್ಮಣರ ಕಾಫೀ ಬಾರ್‌ನ ಮಾಲೀಕ, ಹೋಟೆಲ್ ಉದ್ಯಮಿ ರಾಧಾಕೃಷ್ಣ ಅಡಿಗ ಈ ಎಲ್ಲಾ ವಿಚಾರಗಳ ಬಗ್ಗೆ ಮಾತನಾಡಿದರು.
ಅಲ್ಲದೆ, ಹೋಟೆಲ್ ಉದ್ಯಮದಲ್ಲಿ ತಮ್ಮ ಸಾಧನೆಯನ್ನೂ ವಿವರಿಸಿದರು. ಬ್ರಾಹ್ಮಣರ ಕಾಫಿ ಬಾರ್ ೬ ದಶಕದಿಂದ ಯಶಸ್ವಿ ಯಾಗಿ ನಡೆದುಕೊಂಡು ಬಂದಿದೆ. ಈ ಕೀರ್ತಿ ನಮ್ಮ ತಂದೆ-ತಾಯಿಗೆ ಸಲ್ಲಬೇಕು. ನಮ್ಮನ್ನು ಸಣ್ಣ ವಯಸ್ಸಿನಲ್ಲಿ ಹೋಟೆಲ್‌ಗೆ ಕರೆತಂದು, ನಮ್ಮ ವಿದ್ಯಾಭ್ಯಾಸದ ಜತೆಗೆ ಹೊಟೆಲ್ ಉದ್ಯಮವನ್ನು ನಿಭಾಯಿಸುವಂತೆ ಹೇಳು ತ್ತಿದ್ದರು. ಆಗ ಹೊರೆ ಅನ್ನಿಸಿ ದರೂ ಈಗ ಅದರ ಮಹತ್ವ ತಿಳಿದಿದೆ ಎಂದರು.
ಕಳೆದ ಎರಡು ವರ್ಷದಿಂದ ಹೋಟೆಲ್ ಉದ್ಯಮದವರು ಅನುಭವಿಸಿದ ವೇದನೆ ಯಾರಿಗೂ ಬರಬಾರದು. ಕೋವಿಡ್ ಬಂದ ಸಂದರ್ಭದಲ್ಲಿ ಹೋರಾಟ ನಡೆಸಲೇ ಬೇಕಾಗಿತ್ತು. ಕೋವಿಡ್ ನಮಗೆ ಮಾತ್ರವಲ್ಲ, ಸರಕಾರಕ್ಕೂ ಸವಾಲಾಗಿತ್ತು. ಲಸಿಕೆ ಬರು ವವರೆಗೆ ನಮ್ಮ ವ್ಯಾಪಾರ ಕಷ್ಟವಾಯಿತು. ನಂತರ ಸರಕಾರಕ್ಕೆ ಒತ್ತಡ ತಂದಾಗ ಮನ್ನಣೆ ಸಿಕ್ಕಿತು. ಪಾರ್ಸಲ್‌ಗೆ ಅನುಮತಿ ನೀಡಿದರು.
ಅದರಲ್ಲಿ ಅಷ್ಟಾಗಿ ಲಾಭ ಸಿಗದಿದ್ದರೂ ದಿನದ ಖರ್ಚು ಸಂಬಾಳಿಸಿಕೊಂಡು ಹೋಗುವಂತಾಗುತ್ತಿತ್ತು ಎಂದರು. ಈ ಸಂದರ್ಭ ದಲ್ಲಿ ನಮ್ಮ ಹೋಟೆಲ್ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಲೇ ಬೇಕು. ಏಕೆಂದರೆ, ನಾವು ಇದ್ದೇವೆ, ಹೋಟೆಲ್ ತೆರೆಯಿರಿ ಎನ್ನುತ್ತಿದ್ದರು. ಆರೋಗ್ಯದ ದೃಷ್ಟಿಯಿಂದ, ಸರಕಾರ ಅನುಮತಿ ನೀಡಿದರೂ ನಾನು ತೆರೆಯುವುದಿಲ್ಲ ಎಂದು ಹೇಳಿದ್ದೆ. ಲಸಿಕೆ ಬಂದ ನಂತರ ದಿನಕ್ಕೆ ೨-೩ ಗಂಟೆ ವ್ಯಾಪಾರ ಮಾಡಿದರೂ ಭಯದಲ್ಲೇ ಇರುತ್ತಿದ್ದೆವು.
ಆದರೂ ಹೋಟೆಲ್ ಸಿಬ್ಬಂದಿ ಧೈರ್ಯದಿಂದ ಇದ್ದರು. ಲಸಿಕೆ ಬಂದ ಕೂಡಲೇ ಎಲ್ಲಾ ಸಿಬ್ಬಂದಿಗೂ ಲಸಿಕೆ ಕೊಡಿಸಿದೆ. ದೇವರ ಆಶಿರ್ವಾದದಿಂದ ಎಲ್ಲವನ್ನೂ ದಾಟಿ ಹೋಟೆಲ್ ನಡೆಸಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು. ಕರೋನಾ ನಿಯಂತ್ರಣಕ್ಕೆ ಬಂದ ನಂತರ ದರ್ಶಿನಿಗಳಿಗೆ ಶೇ. ೮೫ರಷ್ಟು ವ್ಯಾಪಾರವಾಗುತ್ತಿದೆ. ಆದರೆ, ರೆಸ್ಟೊರೆಂಟ್‌ಗೆ ಇನ್ನೂ ನಿರೀಕ್ಷೆಯಷ್ಟು ಜನ ಬರುತ್ತಿಲ್ಲ. ವಾರಾಂತ್ಯದಲ್ಲೂ ವ್ಯಾಪಾರ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹೋಟೆಲ್ ನಷ್ಟವಾಗಲು ಕಾರಣ: ಒಂದು ಹೋಟೆಲ್ ನಡೆಸಲು ಇಬ್ಬರು ಸರಿಯಾದ ವ್ಯಕ್ತಿಗಳು ಬೇಕೇ ಬೇಕು. ಒಂಟಿಯಾಗಿ ನಡೆಸುವುದು ತುಂಬಾ ಕಷ್ಟ. ಕೇವಲ ಬಂಡವಾಳ ಹಾಕಿದರೆ ಸಾಲದು, ಬೆಳಗಿನಿಂದ ಹೋಟೆಲ್ ಮುಚ್ಚುವವರೆಗೆ ಅಲ್ಲಿ
ನಿಲ್ಲಬೇಕು. ಇಂದಿಗೂ ಯಾರಾದರು ಹೋಟೆಲ್ ತೆರೆಯುವ ಸಮಯ ಕೇಳಿದರೆ ೫.೫೯ ಎಂದು ಹೇಳುತ್ತೇನೆ. ೫ ನಿಮಿಷ ಮುನ್ನ ತೆಗೆಯುತ್ತೇನೆಯೇ ಹೊರತು ಎಂದಿಗೂ ೬ ಗಂಟೆ ಮೀರಿಲ್ಲ. ಅದರೊಟ್ಟಿಗೆ ಗ್ರಾಹಕರೊಂದಿಗೆ ವೈಯಕ್ತಿಕ ಸಂಬಂಧ ಹೊಂದಬೇಕು. ಅವರೊಂದಿಗೆ ಒಂದು ಬಾಂಧವ್ಯ ಬೆಳೆಸಿಕೊಳ್ಳುವುದು ತುಂಬಾ ಮುಖ್ಯ. ಇಲ್ಲದಿದ್ದರೆ ಹೋಟೆಲ್ ನಷ್ಟ ಅನುಭವಿಸಬೇಕಾಗುತ್ತದೆ ಎಂದು ರಾಧಾಕೃಷ್ಣ ಅಡಿಗ ಹೇಳಿದರು.
೩೯ ವರ್ಷದಿಂದ ಮೊದಲ ಗ್ರಾಹಕ: ಚಂದ್ರಶೇಖರ್ ಅವರಿಗೆ ಈಗ ೮೫ ವರ್ಷ ವಯಸ್ಸು. ಕಳೆದ ೩೯ ವರ್ಷದಿಂದ ನಮ್ಮ ಹೋಟೆಲ್‌ಗೆ ಅವರೇ ಮೊದಲ ಗ್ರಾಹಕ. ಮೊದಲು ಅವರಿಗೆ ಟೋಕನ್ ನೀಡಿದ ಬಳಿಕವೇ ಇತರರಿಗೆ ಟೋಕನ್ ನೀಡುತ್ತೇವೆ.
ಇಂದಿಗೂ ಬಸ್‌ನಲ್ಲಿ ಗಿರಿನಗರದಿಂದ ಬಂದು ಆರು ಗಂಟೆಗೆ ಮುಂಚೆಯೇ ಹೋಟೆಲ್ ಬಳಿ ಬರುತ್ತಾರೆ. ಗ್ರಾಹಕರೊಂದಿಗೆ ನಾವು ಇಟ್ಟುಕೊಂಡಿರುವ ಉತ್ತಮ ಬಾಂಧವ್ಯಕ್ಕೆ ಚಂದ್ರಶೇಖರ್ ಅಂಥವರು ಸಾಕ್ಷಿ ಎಂದು ರಾಧಾಕೃಷ್ಣ ಅಡಿಗ ತಿಳಿಸಿದರು.
*ವಿದ್ಯಾಭ್ಯಾಸ ಇಲ್ಲದೇ ಇದ್ದರೂ ಅನ್ನ, ನೀರು, ನೆರಳು ನೀಡುವ ಒಂದೇ ಒಂದು ಉದ್ಯಮ ಎಂದರೆ ಅದು ಹೋಟೆಲ್ ಉದ್ಯಮ.
*ಬ್ರಾಹ್ಮಣರ ಕಾಫಿಬಾರ್‌ನ ಚಟ್ನಿ ನಮ್ಮ ಅಮ್ಮ ಹೇಳಿಕೊಟ್ಟ ಬ್ರಾಂಡ್. ಅದನ್ನೇ ಇಂದಿಗೂ ಮುಂದುವರಿಸಿಕೊಂಡು ಬಂದಿ ದ್ದೇನೆ.
*ಯಾವುದೇ ಉದ್ಯಮವಾಗಲಿ ಇನ್ವಾಲ್ವ್ ಮೆಂಟ್ ಮುಖ್ಯ. ಇಲ್ಲವಾದಲ್ಲಿ ಯಾವುದೇ ಉದ್ಯಮ ತುಂಬಾ ದಿನ ಇರುವುದಿಲ್ಲ.
*ಹೋಟೆಲ್ ಉದ್ಯಮ ದುಬಾರಿಯಾಗಿದೆ. ಕೋಟಿ ರು. ಇಲ್ಲದಿದ್ದರೆ ದರ್ಶಿನಿ ಕೂಡ ಸ್ಥಾಪಿಸಲು ಸಾಧ್ಯವಾಗುವುದಿಲ್ಲ.
*ಹೋಟೆಲ್ ಆರಂಭಿಸಲು ವ್ಯಾಪಾರ, ಕಾರ್ಮಿಕ, ಪರಿಸರ ಪರವಾನಗಿ ಜತೆಗೆ ಬಾಲ ಕಾರ್ಮಿಕರ ಬಗ್ಗೆ ಎಚ್ಚರ ವಹಿಸಬೇಕು.
ಬ್ರಾಹ್ಮಣರ ಕಾಫಿ ಬಾರ್
ಬೆಂಗಳೂರಿನಲ್ಲಿ ಹೋಟೆಲ್ ಬಗ್ಗೆ ಗೊತ್ತಿರುವ ಎಲ್ಲರಿಗೂ ಈ ಹೆಸರು ಹೇಳಿದರೆ ಥಟ್ಟನೆ ನೆನಪಾಗುವುದು ಇಡ್ಲಿ, ವಡೆ ಮತ್ತು ಅದಕ್ಕೆ ನೀಡುವ ಚಟ್ನಿ ಹಾಗೂ ಚೌಚೌ ಬಾತ್. ೧೯೫೮ರಲ್ಲಿ ಶಂಕರಪುರಂನ ರಂಗರಾವ್ ರಸ್ತೆಯಲ್ಲಿ ಪ್ರಾರಂಭವಾದ ಬ್ರಾಹ್ಮಿನ್ಸ್ ಕಾಫಿ ಬಾರ್ ಸತತ ೬೦ ವರ್ಷ ಯಶಸ್ವಿಯಾಗಿ ನಡೆದು ಕೊಂಡು ಬಂದಿದೆ. ಪುಟ್ಟ ಹೋಟೆಲ್ ಆದರೂ ದೇಶ ವಿದೇಶಗಳಲ್ಲಿಯೂ ಪ್ರಸಿದ್ಧಿ ಪಡೆದಿದೆ.
*
ರಾಧಾಕೃಷ್ಣ ಅಡಿಗ ಅವರು ೫೦ ವರ್ಷದಿಂದ ಹೋಟೆಲ್ ಉದ್ಯಮದಲ್ಲಿ ಇದ್ದಾರೆ. ಪುಟ್ಟ ಹೋಟೆಲ್ ಆದರೂ ವಿದೇಶಗಳಲ್ಲೂ
ಜನಮನ್ನಣೆಗೆ ಪಾತ್ರವಾಗಿದೆ. ಇಡ್ಲಿ-ವಡೆ, ಕಾರಾಬಾತ್-ಕೇಸರಿ ಬಾತ್ ಮತ್ತು ಅಚ್ಚುಕಟ್ಟಾದ ಚಟ್ನಿ ಸಿಗುತ್ತದೆ. ನಿಂತು ಉಪಾ ಹಾರ ಸೇವಿಸುವ ಪ್ರಕ್ರಿಯೇ ಪ್ರಾರಂಭಿಸಿದ್ದು ಬ್ರಾಹ್ಮಣರ ಕಾಫಿ ಬಾರ್. ನಾಡಿನ ಜನಪ್ರಿಯ ವ್ಯಕ್ತಿಗಳು ಇಲ್ಲಿ ಬಂದು ಸೇರುತ್ತಾರೆ. ಇದೊಂದು ಸಾಂಸ್ಕೃತಿಕ ಸೌಧವಾಗಿ ಹೊರಹೊಮ್ಮಿದೆ. ರಾಧಾಕೃಷ್ಣ ಅಡಿಗ ಕಳೆದ ೩೦ ವರ್ಷದಿಂದ ಪ್ರತೀ ವಾರ ತಿರುಪತಿಗೆ ಹೋಗಿ ಬರುತ್ತಾರೆ. ಅದು ಅವರ ವೈಶಿಷ್ಟ್ಯ.
- ವಿಶ್ವೇಶ್ವರ ಭಟ್, ಪ್ರಧಾನ ಸಂಪಾದಕ, ವಿಶ್ವವಾಣಿ